ಕುಡಿಯುವ ನೀರಿಗಾಗಿ ಗ್ರಾಮಸ್ಥರ ಪರದಾಟ

7

ಕುಡಿಯುವ ನೀರಿಗಾಗಿ ಗ್ರಾಮಸ್ಥರ ಪರದಾಟ

Published:
Updated:

ಆನವಟ್ಟಿ: ಇಲ್ಲಿನ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಿಮ್ಮಾಪುರ ಗ್ರಾಮದಲ್ಲಿ ಮೂರು ದಿನಗಳಿಂದ ಕೊಳವೆಬಾವಿಯ ಮೋಟರ್‌ ಹಾಳಾಗಿದ್ದು, ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ.

ಗ್ರಾಮಸ್ಥರು ನೀರು ಹುಡುಕಿಕೊಂಡು ಎರಡು– ಮೂರು ಕಿ.ಮೀ ದೂರ ಹೋಗಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ತಾಲ್ಲೂಕಿನಲ್ಲಿ ಆನವಟ್ಟಿ ದೊಡ್ಡ ಗ್ರಾಮ ಪಂಚಾಯ್ತಿಯಾಗಿದೆ. ಬೇಸಿಗೆ ಬಂದರೆ ನೀರು ಪೊರೈಸಲು ಪಂಚಾಯ್ತಿ ಹರಸಾಹಸ ಪಡಬೇಕಾಗುತ್ತಿದೆ.

‘ಪಂಚಾಯ್ತಿ ವ್ಯಾಪ್ತಿಯಲ್ಲಿ 35 ಕೊಳವೆಬಾವಿಗಳಿವೆ. ಮೋಟರ್‌ ಹಾಳಾದರೆ ತಕ್ಷಣ ಬದಲಾಯಿಸಲು ಇನ್ನೊಂದು ಪರ್ಯಾಯ ಮೋಟರ್‌ ಇಲ್ಲ. ಕೊಳವೆಬಾವಿ ದುರಸ್ತಿಗಾಗಿ ದೊಡ್ಡ ಪ್ರಮಾಣದ ಖರ್ಚನ್ನು ತೋರಿಸಲಾಗುತ್ತಿದೆ. ಆದರೆ, ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ’ ಎಂದು ಗ್ರಾಮಸ್ಥರು ದೂರಿದ್ದಾರೆ.

‘ಹಾಳಾದ ಮೋಟರ್‌ ತೆಗೆದುಕೊಂಡು ಹೋಗಿದ್ದಾರೆ. ಇನ್ನೂ ದುರಸ್ತಿ ಮಾಡಿಲ್ಲ. ಕನಿಷ್ಠ ಟ್ಯಾಂಕರ್‌ ಮೂಲಕವೂ ನೀರು ಕೊಡುವ ವ್ಯವಸ್ಥೆ ಮಾಡಿಲ್ಲ’ ಎಂದು ದೇವೇಂದ್ರಪ್ಪ ಬೇಸರ ವ್ಯಕ್ತಪಡಿಸಿದರು.

‘ಮೂರು ವರ್ಷಗಳಿಂದ ತಾಲ್ಲೂಕಿನಲ್ಲಿ ವಾಡಿಕೆಯಷ್ಟು ಮಳೆಯಾಗಿಲ್ಲ. ಕೆಲವು ಕೆರೆಗಳು ಈಗಾಗಲೇ ಒಣಗಿವೆ. ಬೇಸಿಗೆ ಆರಂಭದಲ್ಲೇ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದೆ. ಸಮಸ್ಯೆ ಪರಿಹರಿಸುವಲ್ಲಿ ತಾಲ್ಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ’ ಎಂದು ಮಂಜುನಾಥ ಆರೋಪಿಸಿದರು.

‘ಪಿಡಿಒ ಕಚೇರಿಯಲ್ಲಿ ಇರುವುದೇ ಕಡಿಮೆ. ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಕರೆ ಮಾಡಿದರೆ, ಮತ್ತೊಬ್ಬ ಅಧಿಕಾರಿಗೆ ದೂರು ನೀಡುವಂತೆ ಸಬೂಬು ಹೇಳುತ್ತಾರೆ’ ಎಂದು ಹಬಿಬುಲ್ಲಾ ಹವಾಲ್ದಾರ್ ದೂರಿದರು. ‘ಸಮಸ್ಯೆ ನಿವಾರಿಸಲು ತಕ್ಷಣವೇ ಕ್ರಮ ಕೈಗೊಳ್ಳದಿದ್ದರೆ ಪಿಡಿಒ ವಿರುದ್ಧ ಪ್ರತಿಭಟನೆ ನಡೆಸಲಾಗುವುದು’ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

‘ಗ್ರಾಮ ಪಂಚಾಯ್ತಿಯಲ್ಲಿ ಹೆಚ್ಚುವರಿ ಮೋಟರ್‌ ಇಟ್ಟುಕೊಳ್ಳಲು ಅವಕಾಶವಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಯನ್ನು ಕೇಳಿ’ ಎಂದು ತಹಶೀಲ್ದಾರ್ ಚಂದ್ರಶೇಖರ್ ಪ್ರತಿಕ್ರಿಯಿಸಿದರು.

ತಾಲ್ಲೂಕು ಪಂಚಾಯ್ತಿ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ, ‘ದೊಡ್ಡ ಗ್ರಾಮ ಪಂಚಾಯ್ತಿಯಲ್ಲಿ ಹೆಚ್ಚುವರಿ ಮೋಟರ್‌ ಇಟ್ಟುಕೊಳ್ಳಬೇಕು. ಮೂರು ದಿನಗಳಾದರೂ ಏಕೆ ನೀರು ಪೂರೈಕೆ ಸಾಧ್ಯವಾಗಿಲ್ಲ ಎಂಬ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry