ಶನಿವಾರ, ಜೂಲೈ 4, 2020
21 °C

ಕೇಂದ್ರ ಸರ್ಕಾರದ ಕ್ರಮಕ್ಕೆ ವೈದ್ಯರ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಂದ್ರ ಸರ್ಕಾರದ ಕ್ರಮಕ್ಕೆ ವೈದ್ಯರ ಖಂಡನೆ

ಶಿವಮೊಗ್ಗ: ರಾಷ್ಟ್ರೀಯ ವೈದ್ಯಕೀಯ ಆಯೋಗವನ್ನು ರಚಿಸುವ ಕೇಂದ್ರ ಸರ್ಕಾರದ ಕ್ರಮ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ)ದ ನೇತೃತ್ವದಲ್ಲಿ ವೈದ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

1956ರಲ್ಲಿ ಸ್ಥಾಪನೆಯಾದ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಸಂಸ್ಥೆಯನ್ನು ಮುಚ್ಚಿ ರಾಷ್ಟ್ರೀಯ ವೈದ್ಯಕೀಯ ಆಯೋಗವನ್ನು ರಚಿಸುವ ಕಾಯ್ದೆಯನ್ನು ಸಂಸತ್ ಅಧಿವೇಶನದಲ್ಲಿ ಮಂಡಿಸಲಾಗುತ್ತಿದೆ. ಕೆಲವು ವ್ಯಕ್ತಿಗಳು ಮಾಡಿರಬಹುದಾದ ತಪ್ಪಿಗೆ ಒಂದು ಸಂಸ್ಥೆಯನ್ನೇ ಮುಚ್ಚಲು ಹೊರಟಿರುವುದು ಸರಿಯಲ್ಲ.

ಹಾಲಿ ಇರುವ ಕೌನ್ಸಿಲ್ ಕಾಯ್ದೆಗೆ ಅರ್ಹ ತಿದ್ದುಪಡಿಗಳನ್ನು ಮಾಡುವುದನ್ನು ಬಿಟ್ಟು ಒಂದು ಕಾಯ್ದೆ ಬದಲಿಗೆ ಮತ್ತೊಂದು ಕಾಯ್ದೆ ಜಾರಿಗೊಳಿಸಲು ಹೊರಟಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈಗಾಗಲೇ ಎನ್ಎಂಸಿ ಕಾಯ್ದೆಯಲ್ಲಿ ಇರುವ ಲೋಪಗಳನ್ನು ಗುರುತಿಸಲಾಗಿದೆ. ಈ ಕಾಯ್ದೆಯು ವೈದ್ಯಕೀಯ ಶಿಕ್ಷಣದ ಗುಣಮಟ್ಟ ಕೆಳಮಟ್ಟಕ್ಕೆ ಕೊಂಡೊಯ್ಯಲಿದೆ. ಜತೆಗೆ ವೈದ್ಯಕೀಯ ವಿದ್ಯಾರ್ಥಿಗಳ ಮತ್ತು ವೈದ್ಯರ ಆತ್ಮವಿಶ್ವಾಸವನ್ನು ಕಿತ್ತುಕೊಳ್ಳಲಿದೆ. ಹೀಗಾಗಿ ವೈದ್ಯಕೀಯ ಕ್ಷೇತ್ರಕ್ಕೆ ಮಾರಕವಾಗಲಿರುವ ಉದ್ದೇಶಿತ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸಬಾರದು ಎಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗೆ ವೈದ್ಯರು ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಡಾ.ಎನ್.ಎಲ್.ನಾಯಕ್, ಡಾ.ಧನಂಜಯ ಸರ್ಜಿ, ಡಾ.ರಜನಿ ಪೈ, ಡಾ.ಆರ್.ಬಿ.ಪುರುಷೋತ್ತಮ್, ಡಾ.ರವೀಶ್, ಡಾ.ಜಗದೀಶ್, ಡಾ.ದಯಾನಂದ್, ಡಾ.ನಾಗರಾಜ್, ಡಾ.ಮಂಜುನಾಥ್ ಅವರೂ ಭಾಗವಹಿಸಿದ್ದರು.

ಸರ್ಕಾರಿ ಆಸ್ಪತ್ರೆಗಳತ್ತ ರೋಗಿಗಳು

ವೈದ್ಯರ ಕೇಂದ್ರ ಸಂಘ ಕರೆ ನೀಡಿರುವ ಮುಷ್ಕರವನ್ನು ಬೆಂಬಲಿಸಿ, ನಗರದ ಬಹುತೇಕ ಖಾಸಗಿ ಆಸ್ಪತ್ರೆಗಳನ್ನು ಬಂದ್ ಮಾಡಲಾಗಿತ್ತು. ಇದರಿಂದ ರೋಗಿಗಳು ಕೆಲಕಾಲ ತೊಂದರೆ ಉಂಟಾಯಿತು. ಖಾಸಗಿ ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ದೊರಕದ ಕಾರಣ ಹಲವರು ಸರ್ಕಾರಿ ಆಸ್ಪತ್ರೆಯ ಕಡೆಗೆ ಧಾವಿಸಿದರು. ಖಾಸಗಿ ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರೋಗಿಗಳ ಚಿಕಿತ್ಸೆಯಲ್ಲಿ ವ್ಯತ್ಯಯ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.