ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾವಲಂಬಿಯಾಗಲು ಕೌಶಲ ತರಬೇತಿ ಅನಿವಾರ್ಯ

Last Updated 3 ಜನವರಿ 2018, 7:23 IST
ಅಕ್ಷರ ಗಾತ್ರ

ಯಾದಗಿರಿ: ‘ಕೌಶಲ ತರಬೇತಿ ಪಡೆಯುವುದರಿಂದ ದೇಶದ ನಿರುದ್ಯೋಗ ನಿವಾರಣೆ ಜತೆಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಆಸರೆಯಾಗುತ್ತದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ ಅಭಿಪ್ರಾಯಪಟ್ಟರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ಮಂಗಳವಾರ ನೂತನ ಜವಳಿ ನೀತಿ 2013–18ರ ಯೋಜನೆಯಡಿ ಸಾಮಾನ್ಯ ಹಾಗೂ ವಿಶೇಷ ಘಟಕ ಯೋಜನೆಯಡಿ ಜವಳಿ ಉದ್ದಿಮೆದಾರರಿಗೆ ಹಮ್ಮಿಕೊಂಡಿದ್ದ ಐದು ದಿನಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಕೈಗಾರಿಕಾ ಕ್ಷೇತ್ರದಲ್ಲಿ ನಿರುದ್ಯೋಗಿಗಳಿಗೆ ಭರಪೂರ ಅವಕಾಶಗಳಿವೆ. ಆದರೆ, ನಮ್ಮ ಯುವಜನರು ಕೌಶಲ ತರಬೇತಿ ಕೊರತೆಯಿಂದಾಗಿ ಉದ್ಯಮಕ್ಕೆ ಮುನ್ನಗ್ಗಲು ಹಿಂದೇಟು ಹಾಕುತ್ತಿದ್ದಾರೆ. ಒಂದೆಡೆ ಅನುಭವ, ತರಬೇತಿ, ಆರಂಭಿಸಬೇಕಿರುವ ಉದ್ಯಮದ ಬಗ್ಗೆ ಸಮಗ್ರ ಜ್ಞಾನ ಇಷ್ಟೆಲ್ಲಾ ಕೊರತೆಯಿಂದಾಗಿ ರಾಜ್ಯ ಮತ್ತು ದೇಶದ ಕೈಗಾರಿಕಾ ಉದ್ಯಮ ಬಡವಾಗಿದೆ. ಯಾವುದೇ ಶಿಕ್ಷಣ ಪಡೆದವರು ತಮಗಿಷ್ಟವಾದ ಕ್ಷೇತ್ರದಲ್ಲಿ ಕೌಶಲ ತರಬೇತಿ ಪಡೆದುಕೊಂಡರೆ ಉದ್ಯಮ ಆರಂಭಿಸಲು ಸುಲಭವಾಗುತ್ತದೆ’ ಎಂದು ಸಲಹೆ ನೀಡಿದರು.

‘ಕೈಗಾರಿಕಾ ವಲಯ ಬಲಿಷ್ಠವಾಗಬೇಕಾದರೆ ದೇಶದಲ್ಲಿನ ಸದೃಢ ಯುವಜನಾಂಗ ಕೌಶಲಭರಿತ ತರಬೇತಿ ಪಡೆದಿರಬೇಕು. ಸಣ್ಣ ಉದ್ದಿಮೆ ನಡೆಸಲು ಬೇಕಾಗುವಷ್ಟು ಕೌಶಲವನ್ನಾದರೂ ಗಳಿಸಿಕೊಂಡರೆ ಉದ್ಯಮ ಆರಂಭಿಸಲು ಸರ್ಕಾರ ಜಾರಿಗೊಳಿಸಿರುವ ಯಾವುದಾದರೂ ಒಂದು ಯೋಜನೆ ಆರ್ಥಿಕ ನೆರವು ನೀಡಲಿದೆ. ಆದರೆ, ಇಂಥಾ ಉಪಯುಕ್ತ ಯೋಜನೆಗಳ ಬಗ್ಗೆ ಜನರಿಗೆ ಅರಿವಿಲ್ಲ. ಕೆಲವರು ಸ್ವ ಉದ್ಯೋಗ ಆರಂಭಿಸಿದ್ದರೂ, ಸರ್ಕಾರದ ಸಹಾಯಧನ ಪಡೆದುಕೊಳ್ಳುವಷ್ಟು ಅರಿವಿನ ಕೊರತೆ ಅವರಲ್ಲಿದೆ. ಅಂತಹ ಕೊರತೆಯನ್ನು ತರಬೇತಿ ಕಾರ್ಯಾಗಾರದಿಂದ ನೀಗಿಸಿಕೊಳ್ಳಬೇಕು’ ಎಂದರು.

‘ದೇಶದಲ್ಲಿಯೇ ನೂತನ ಜವಳಿ ನೀತಿ ಆರಂಭಿಸಿದ ಮೊದಲ ರಾಜ್ಯ ನಮ್ಮದಾಗಿದ್ದು, ಜವಳಿ ನೀತಿಯ ನಿಯಮಾನುಸಾರ ಫಲಾನುಭವಿಗಳಿಗೆ ವಿವಿಧ ವಲಯ ಯೋಜನೆಗಳ ಸೌಲಭ್ಯ ಕಲ್ಪಿಸಲಾಗಿದೆ. ಬಂಡವಾಳ ಮತ್ತು ಬಡ್ಡಿ ಸಹಾಯಧನವನ್ನು ನೂತನ ಜವಳಿ ನೀತಿಯ ವೈಶಿಷ್ಟ್ಯವಾಗಿದೆ. ಅಲ್ಲದೆ, ವಿಶೇಷ ಸಾಲ ಆಧಾರಿತ ಬಂಡವಾಳ ಸಹಾಯಧನ ಸೌಲಭ್ಯ ಕೂಡ ನೀಡಲಾಗುತ್ತಿದೆ. ಈ ಸೌಲಭ್ಯಗಳನ್ನು ಪಡೆದುಕೊಂಡು ಯುವಜನಾಂಗ ಉದ್ಯೋಗದಾತರಾಗಬೇಕು’ ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ಅವಿನಾಶ ಮೆನನ್ ರಾಜೇಂದ್ರನ್‌ ಮಾತನಾಡಿ, ‘ಕೌಶಲ ತರಬೇತಿಯನ್ನು ಮುಖ್ಯವಾಗಿ ಮಹಿಳೆಯರಿಗೆ ನೀಡುವ ಉದ್ದೇಶ ಇದೆ. ಕೌಶಲ ತರಬೇತಿ ಪಡೆದ ಮಹಿಳೆಯರು ಹೆಚ್ಚಾಗಿ ಉದ್ಯ ಮಿಗಳಾಗಿದ್ದಾರೆ. ಪುರುಷರು ತರಬೇತಿ ಯನ್ನು ಸಂಪೂರ್ಣ ಪಡೆಯುವುದಿಲ್ಲ. ಹಾಗಾಗಿ, ಅವರು ಉದ್ಯಮಿಗಳಾಗುವಲ್ಲಿ ವಿಫಲರಾಗುತ್ತಿದ್ದಾರೆ. ಸರ್ಕಾರ ಯುವ ಜನರು ಸ್ವಾವಲಂಬಿಗಳಾಗಲು ಸಹಾಯ ಧನ ಯೋಜನೆಗಳನ್ನು ಜಾರಿಗೊಳಿ ಸಿದ್ದು, ಅವುಗಳನ್ನು ಸದುಪಯೋಗ ಪಡೆ ದುಕೊಳ್ಳಬೇಕು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಉಪಕಾರ್ಯ ದರ್ಶಿ ವಸಂತ ಕುಲಕರ್ಣಿ, ಜಿಲ್ಲಾ ಚೇಂಬರ್ಸ್‌ ಆಫ್‌ ಕಾಮರ್ಸ್‌ ಅಧ್ಯಕ್ಷ ಹನುಮಾನದಾಸ ಮುಂದಡಾ, ಕೈಮಗ್ಗ ಮತ್ತು ಜವಳಿ ಇಲಾಖೆ ಉತ್ತರ ವಲಯ ಜಂಟಿ ನಿರ್ದೇಶಕ ಬಿ.ಶ್ರೀಧರ ನಾಯಕ್, ಲೀಡ್‌ ಬ್ಯಾಂಕ್‌ ಅಧಿಕಾರಿ ಎಸ್‌.ಎಂ. ಮಾಲಿಪಾಟೀಲ, ಸಹಾಯಕ ನಿರ್ದೇಶಕ ಅಜೀತ್ ಜಿ.ನಾಯಕ್ ಇದ್ದರು.

ನೂತನ ಜವಳಿ ನೀತಿಯಲ್ಲಿ ಸೌಲಭ್ಯಗಳು

l₹10 ಕೋಟಿಯಿಂದ ₹99 ಕೋಟಿವರೆಗಿನ ಬಂಡವಾಳ ಹೂಡಿಕೆಯ ಘಟಕಗಳಿಗೆ ಶೇ 15ರಿಂದ ಶೇ20ರವರೆಗೆ ಗರಿಷ್ಠ ₹6 ಕೋಟಿ ಸಹಾಯಧನ ಪಡೆಯಬಹುದು.

lಪರಿಶಿಷ್ಟ ಜಾತಿ, ಪಂಗಡದ ಉದ್ದಿಮೆದಾರರಿಗೆ ಶೇ 20ರಷ್ಟು ಹಾಗೂ ಅಲ್ಪಸಂಖ್ಯಾತ, ಮಾಜಿ ಸೈನಿಕ, ಅಂಗವಿಕಲ ಮತ್ತು ಮಹಿಳಾ ಉದ್ದಿಮೆದಾರರಿಗೆ ಶೇ 5ರಷ್ಟು ಹೆಚ್ಚುವರಿ ಸಹಾಯಧನ ಲಭ್ಯವಿದೆ.

lವಿಶೇಷ ಸಾಲ ಆಧಾರಿತ ಯೋಜನೆಯಡಿ ಸಮಗ್ರ ಜವಳಿ ಘಟಕಗಳಿಗೆ ಸ್ಥಾವರ ಮತ್ತು ಯಂತ್ರೋಪಕರಣಗಳ ಮೌಲ್ಯದ ಮೇಲೆ ಶೇ 20ರಷ್ಟು ಗರಿಷ್ಠ ₹30 ಲಕ್ಷ ಸಹಾಯಧನ ಸಿಗುತ್ತದೆ.

lರೋಗಗ್ರಸ್ಥ ಸಹಕಾರಿ ನೂಲಿನ ಗಿರಣಿಗಳ ಆಧುನೀಕರಣ ಅಥವಾ ವಿಸ್ತರಣೆ ಯೋಜನೆಗಳಿಗೆ ಘಟಕಗಳಿಗೆ ಶೇ 15ರಿಂದ 20ರಷ್ಟು ಗರಿಷ್ಠ ₹2 ಕೋಟಿ ಸಹಾಯಧನ ಸಿಗಲಿದೆ.

*  * 

ಕೌಶಲ ತರಬೇತಿಯಲ್ಲಿ ಐದು ದಿನಗಳವರೆಗೆ ಭಾಗವಹಿಸಿದರೆ ಮಾತ್ರ ಆರಂಭಿಸಬೇಕಿರುವ ಉದ್ಯಮದ ಬಗ್ಗೆ ಸ್ಪಷ್ಟತೆ ಪಡೆಯಲು ಸಾಧ್ಯ.
ಡಾ.ಅವಿನಾಶ ಮೆನನ್‌ ರಾಜೇಂದ್ರನ್ ಜಿಲ್ಲಾ ಪಂಚಾಯಿತಿ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT