ಜೋಡಿ ರಸ್ತೆಯಲ್ಲಿ ಸಂಚಾರ ಸಂಕಟ

7

ಜೋಡಿ ರಸ್ತೆಯಲ್ಲಿ ಸಂಚಾರ ಸಂಕಟ

Published:
Updated:
ಜೋಡಿ ರಸ್ತೆಯಲ್ಲಿ ಸಂಚಾರ ಸಂಕಟ

ಮಲೆ ಮಹದೇಶ್ವರ ಬೆಟ್ಟ: ‘ಮಲೆ ಮಹದೇಶ್ವರ ಬೆಟ್ಟದಿಂದ ಪಾಲಾರ್‌ಗೆ ತೆರಳುವ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ಕೇವಲ ಅರ್ಧ ಕಿಲೋಮೀಟರ್ ಪ್ರಯಾಣ ಮಾಡುವಷ್ಟರಲ್ಲಿ 50 ಕಿ.ಮೀ ತೆರಳಿದಷ್ಟು ಆಯಾಸವಾಗುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಇಲ್ಲಿಗೆ ಬರುವ ಭಕ್ತರು ಪರದಾಡುವಂತಾಗಿದೆ’ ಎಂದು ಅವರು ಆರೋಪಿಸಿದ್ದಾರೆ.

ಎಸ್‌.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಮಲೆ ಮಹದೇಶ್ವರ ಬೆಟ್ಟದ ಪೆಟ್ರೋಲ್ ಬಂಕ್‌ ಬಳಿಯಿಂದ ಪಾಲಾರ್ ಗೇಟ್‌ ತನಕ ಅರ್ಧ ಕಿಲೋಮೀಟರ್ ಉದ್ದದ ಜೋಡಿ ರಸ್ತೆಯನ್ನು ಅಭಿವೃದ್ಧಿಪಡಿಸಿದ್ದರು. ಅದಕ್ಕೆ ಎಸ್‌.ಎಂ.ಕೃಷ್ಣ ಜೋಡಿ ರಸ್ತೆ ಎಂದು ಹೆಸರಿಡಲಾಗಿತ್ತು.

‘ಕಳೆದ 15 ವರ್ಷಗಳಿಂದ ಕಾವೇರಿ ಕುಡಿಯುವ ನೀರಿನ ಪೈಪ್ ಲೈನ್, ವಿದ್ಯುತ್, ದೂರವಾಣಿ ಕೇಬಲ್‌ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ರಸ್ತೆಯನ್ನು ಅಗೆದು ಹಾಳು ಮಾಡಲಾಯಿತು. ಕಾಮಗಾರಿಗಳು ಮುಗಿದ ಬಳಿಕ ಅಭಿವೃದ್ಧಿ ಪಡಿಸದೆ ಹಾಗೆಯೇ ಬಿಡಲಾಗಿದೆ. ಅಲ್ಲದೆ, ಈ ರಸ್ತೆ ಬದಿಯಲ್ಲಿರುವ ಕಂಬಗಳಲ್ಲಿ ವಿದ್ಯುತ್‌ ದೀಪಗಳು ಕೆಟ್ಟು ವರ್ಷಗಳಾಗಿವೆ’ ಎಂದು ಮಲೆ ಮಹದೇಶ್ವರ ಬೆಟ್ಟದ ಮೋಹನ್.ಎಸ್ ಹಾಗೂ ವಿಜಯ್ ಅಸಮಾಧಾನ ವ್ಯಕ್ತಪಡಿಸಿದರು.

‘ಇತ್ತೀಚೆಗೆ ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಪಾಲಾರ್ ಗೇಟ್‌ನಿಂದ ಪಾಲಾರ್ ವರೆಗೆ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ. ಆದರೆ, ಈ ಜೋಡಿರಸ್ತೆಗೆ ಮಾತ್ರ ತೇಪೆ ಹಾಕಲಾಗಿದೆ. ಅಧಿಕಾರಿಗಳ ಜನಪ್ರತಿನಿಧಿಗಳ ನಿರ್ಲಕ್ಷ್ಯ ಎದ್ದುಕಾಣುತ್ತಿದೆ’ ಎಂದು ಅವರು ಆರೋಪಿಸಿದರು.

ಶೀಘ್ರದಲ್ಲೇ ರಸ್ತೆಯನ್ನು ಅಭಿವೃದ್ಧಿಪಡಿಸಿ ಪ್ರಯಾಣಿಕರಿಗೆ ನೆರವಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry