ಬುಧವಾರ, ಆಗಸ್ಟ್ 5, 2020
21 °C

ಬೆಳಕಿಗೆ ಬಾರದ ಹಕ್ಕುಪತ್ರ ‘ಪ್ರಹಸನ’

ಈರಪ್ಪ ಹಳಕಟ್ಟಿ Updated:

ಅಕ್ಷರ ಗಾತ್ರ : | |

ಬೆಳಕಿಗೆ ಬಾರದ ಹಕ್ಕುಪತ್ರ ‘ಪ್ರಹಸನ’

ಚಿಕ್ಕಬಳ್ಳಾಪುರ: ನಗರ ಹೊರವಲಯದ ಕಂದವಾರ ಬಳಿ ತಾತ್ಕಾಲಿಕ ಶೆಡ್‌ಗಳಲ್ಲಿರುವ ವಾಸವಾಗಿರುವ ನಿರಾಶ್ರಿತರಿಗೆ ಹಕ್ಕುಪತ್ರ ವಿತರಿಸಿದ್ದು, ಶೀಘ್ರ ಮನೆ ಕಟ್ಟಿಸಿ ಕೊಡುವುದಾಗಿ ನಗರಸಭೆ ಅಧಿಕಾರಿಗಳು ಹೇಳುತ್ತಲೇ ಇದ್ದಾರೆ. ಆದರೆ, ಜೆರಾಕ್ಸ್ ಪ್ರತಿಗಳನ್ನೇ ಹಕ್ಕುಪತ್ರಗಳೆಂದು ನಂಬಿಸಿ ನಿರಾಶ್ರಿತರಿಗೆ ಮೋಸ ಮಾಡಲಾಗಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಕಳೆದ ಆಗಸ್ಟ್‌ನಲ್ಲಿ ಕಂದವಾರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಸದ ವೀರಪ್ಪ ಮೊಯಿಲಿ ಅವರು ನಿರಾಶ್ರಿತರಿಗೆ ಹಕ್ಕುಪತ್ರ ವಿತರಿಸಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಆಗ ವಿತರಿಸಿದ ಅಸಲಿ ಹಕ್ಕುಪತ್ರಗಳೆಲ್ಲ ನಗರಸಭೆ ಕಚೇರಿಯಲ್ಲಿವೆ. ನಿರಾಶ್ರಿತರಿಗೆ ಅವುಗಳನ್ನು ನೀಡಿಲ್ಲ ಎಂದು ಸಾಮಾಜಿಕ ಹೋರಾಟಗಾರರು ದೂರುತ್ತಾರೆ.

ಸಂಸದರು ಹಕ್ಕುಪತ್ರ ವಿತರಿಸಿದ್ದು ಒಂದು ‘ಪ್ರಹಸನ’ ಎಂಬುದು ಈವರೆಗೆ ಬೆಳಕಿಗೆ ಬಂದಿಲ್ಲ. ಈ ಬಗ್ಗೆ ಯಾರೇ ಕೇಳಿದರೂ ಬಾಯಿ ಬಿಡದಂತೆ ನಿರಾಶ್ರಿತರನ್ನು ಬೆದರಿಸಲಾಗಿದೆ. ಹೊರಗಿನವರೊಂದಿಗೆ ತಮ್ಮ ನೋವು ಹಂಚಿಕೊಂಡರೆ ನೆಲೆ ತಪ್ಪಿ ಹೋಗುತ್ತದೆಯೋ ಎಂಬ ಆತಂಕದಲ್ಲಿಯೇ ಶೆಡ್‌ನಲ್ಲಿ ವಾಸಿಸುತ್ತಿದ್ದಾರೆ ಎಂದು ನೊಂದ ಫಲಾನುಭವಿಯೊಬ್ಬರು ಹೇಳುವರು.

ಸದ್ಯ ತಾತ್ಕಾಲಿಕ ಟೆಂಟ್‌ನಲ್ಲಿ 65 ಕುಟುಂಬಗಳು ವಾಸಿಸುತ್ತಿವೆ. ಈ ಪೈಕಿ ಪರಿಶಿಷ್ಟ ಜಾತಿ ಮತ್ತು ಪಂಗಡದವರು (ಎಸ್‌ಸಿ, ಎಸ್‌ಟಿ), ಅಲ್ಪಸಂಖ್ಯಾತರು ಇದ್ದಾರೆ. ನಿರಾಶ್ರಿತರಿಗೆ ಕಂದವಾರದ ಸರ್ವೆನಂ 236/4ರಲ್ಲಿ ಎರಡು ಎಕರೆ ಪ್ರದೇಶದಲ್ಲಿ ಬಡಾವಣೆ ನಿರ್ಮಿಸಿ 20X30 ಅಳತೆ ನಿವೇಶನ ನೀಡಲು ನಗರಸಭೆ ಉದ್ದೇಶಿಸಿದೆ ಎನ್ನಲಾಗಿದೆ. ಹಕ್ಕುಪತ್ರ ಕೊಟ್ಟು ಐದು ತಿಂಗಳಾದರೂ ಬಡಾವಣೆ ರೂಪಿಸುವ ಕೆಲಸ ಇಂದಿಗೂ ಆರಂಭಗೊಂಡಿಲ್ಲ.

ಶಾಶ್ವತ ನೆಲೆಯ ಆಸೆಗಾಗಿ ನಗರದ ಬಿ.ಬಿ.ರಸ್ತೆಯಲ್ಲಿರುವ ಬಸಪ್ಪ ಛತ್ರದಿಂದ ಎಂಟು ವರ್ಷಗಳ ಹಿಂದೆ ಕಂದವಾರ ಕೆರೆ ಅಂಗಳಕ್ಕೆ ಬಂದವರು ಮನೆ ಸಿಗುತ್ತದೆಂಬ ಆಸೆಗಾಗಿ ಇಂದಿಗೂ ನಗರಸಭೆ ಅಧಿಕಾರಿಗಳು, ಸದಸ್ಯರು, ರಾಜಕಾರಣಿಗಳು ಹೇಳಿದಂತೆ ತಲೆಯಾಡಿಸುತ್ತ ಭಯದಲ್ಲಿ ಬದುಕು ಸಾಗಿಸುತ್ತಿದ್ದರೆ. ಕನಿಷ್ಠ ಮೂಲಸೌಕರ್ಯಕ್ಕೂ ಧ್ವನಿ ಎತ್ತದಂತಹ ಅಸಹಾಯಕ ಸ್ಥಿತಿ ಎದುರಿಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

’ಅನೇಕ ವರ್ಷಗಳಿಂದ ‘ಶೀಘ್ರದಲ್ಲಿಯೇ ಮನೆ ಕೊಡಿಸುತ್ತೇವೆ’ ಎಂಬ ಸಿದ್ಧ ಮಾದರಿಯ ಉತ್ತರ ಕೇಳಿ, ಕೇಳಿ ಮನಸ್ಸು ಜಡಗಟ್ಟಿಸಿಕೊಂಡಿರುವ ನಿರಾಶ್ರಿತರು ಆಸೆಯಲ್ಲೇ ದಿನದೂಡುತ್ತಿದ್ದಾರೆ. ಕನಿಷ್ಠ ಘನತೆಯ ಬದುಕಿಗೆ ಬೇಕಾದ ಮೂಲಸೌಕರ್ಯವನ್ನಾದರೂ ಕಲ್ಪಿಸಿ ಕೊಡಿ ಎಂದು ಕೇಳುವ ಗಟ್ಟಿ ಧ್ವನಿ ಕಳೆದುಕೊಂಡು ‘ಇದು ನಮ್ಮ ಹಣೆಬರಹ’ ಎಂಬರ್ಥದ ಮಾತುನಾಡುವರು. ನಿಟ್ಟುಸಿರಿನಲ್ಲೇ ಕಾಲ ಕಳೆಯುತ್ತಿದ್ದಾರೆ’ ಎಂದು ಸಾಮಾಜಿಕ ಹೋರಾಟಗಾರ ಯಲುವಹಳ್ಳಿ ಸೊಣ್ಣೇಗೌಡ ತಿಳಿಸಿದರು.

ಕಷ್ಟವೇ ಇಲ್ಲಿ ಹಾಸಿಗೆ, ಹೊದಿಕೆ!

ತಗಡಿನ ಶೀಟ್‌ನ ಟೆಂಟ್‌ ಬೇಸಿಗೆಯಲ್ಲಿ ಕಾಯ್ದ ಹೆಂಚಿನಂತಾಗಿ ಝಳ ತಡೆದುಕೊಳ್ಳಲು ಆಗುವುದಿಲ್ಲ. ಮಳೆಗಾಲದಲ್ಲಿ ಕೆಸರು ನೀರು, ಹುಳು ಹುಪ್ಪಡಿಗಳ ಕಾಟ. ಚಳಿಗಾಲದಲ್ಲಿ ಥಂಡಿ ತಡೆದುಕೊಳ್ಳಲು ಆಗುವುದಿಲ್ಲ. ಒಟ್ಟಿನಲ್ಲಿ ಇಲ್ಲಿರುವವರಿಗೆ 12 ತಿಂಗಳು ಕಡು ಕಷ್ಟವೇ ಹಾಸಿಗೆ, ಹೊದಿಕೆ.

ಶೆಡ್‌ನ ನಾಲ್ಕೂ ಮೂಲೆಗಳಿಂದ ನುಗ್ಗುವ ಥರಗುಟ್ಟುವ ಚಳಿಗೆ ಇಲ್ಲಿನ ಮಕ್ಕಳು, ವಯೋವೃದ್ಧರು ವಿಲಿವಿಲಿಗುಟ್ಟುವ ಆರ್ತನಾದ, ಚಳಿಯಿಂದ ಮಕ್ಕಳನ್ನು, ಪೋಷಕರನ್ನು ಕಳೆದುಕೊಂಡವರ ಆಕ್ರಂದನಕ್ಕೆ ಅಧಿಕಾರಿಗಳು, ಜಿಲ್ಲಾಡಳಿತ, ಜನಪ್ರತಿನಿಧಿಗಳ ಕಿವಿ ಕಿವುಡಾಗಿದೆ ಎನ್ನುವುದು ಪ್ರಜ್ಞಾವಂತರ ಆರೋಪ.

ನೈರ್ಮಲ್ಯದ ಕೊರತೆಯಿಂದ ವಿಪರೀತ ಸೊಳ್ಳೆ ಕಾಟ, ಶೆಡ್‌ ಹೊರಗೆ ಮಲಗಿದರೆ ಹಾವು ಚೇಳುಗಳ ಹರಿದಾಟ, ಬೇಸಿಗೆಯಲ್ಲಿ ಶೆಡ್‌ಗಳಲ್ಲಿ ಮಲಗಿದರೆ ಮೈಮೇಲೆ ಬೊಬ್ಬೆಗಳು ಮಾಮೂಲಿ. ಬಹುತೇಕರಿಗೆ ಸಮೀಪದ ಕೆರೆ ಬಯಲು ಶೌಚಾಲಯ. ಇಲ್ಲಿ ಬಹುತೇಕರು ಚಿಂದಿ ಆಯುವ, ಗಾರೆ, ಕೂಲಿ ಮಾಡಿ ಹೊಟ್ಟೆ ಹೊರೆಯುತ್ತಾರೆ.

ಅತ್ಯಂತ ಕೊಳಕು ವಾತಾವರಣದಲ್ಲಿ ನಿರಾಶ್ರಿತರು ದಿನದೂಡುತ್ತಿದ್ದಾರೆ. ಇಕ್ಕಟ್ಟಾದ ಶೆಡ್‌ನಲ್ಲಿ ಆರೇಳು ಜನರು ಇಲ್ಲಿ ಜೀವನ ನಡೆಸುತ್ತಿದ್ದಾರೆ. ಸ್ನಾನ ಮಾಡಲು ಬಚ್ಚಲು ಇಲ್ಲ. ಮಳೆಗಾಲ, ಚಳಿಗಾಲದಲ್ಲಿ ನೀರು ಕಾಯಿಸಲು ಕನಿಷ್ಠ ಉರುವಲು ಕೂಡ ಸಿಗದ ಸ್ಥಿತಿ ಇದೆ. ಹೀಗಾಗಿ ಇಲ್ಲಿ ಗರ್ಭಿಣಿ, ಬಾಣಂತಿಯರು ತೊಂದರೆ ಅನುಭವಿಸುತ್ತಿದ್ದಾರೆ.

ನಗರಸಭೆ ಆಯುಕ್ತರು ನಿರಾಶ್ರಿತರಿಗೆ ನಿವೇಶನ ಹಕ್ಕು ಪತ್ರ ನೀಡಿದ್ದೇವೆ ಎನ್ನುತ್ತಾರೆ. ಆದರೆ ‘ಪ್ರಜಾವಾಣಿ’ ಪ್ರತಿನಿಧಿ ಶೆಡ್‌ನಲ್ಲಿರುವ ನಿರಾಶ್ರಿತರನ್ನು ವಿಚಾರಿಸಿದರೆ, ಯಾರಲ್ಲೂ ಹಕ್ಕುಪತ್ರದ ಅಸಲಿ ಪ್ರತಿಗಳು ಇರಲಿಲ್ಲ. ಜೆರಾಕ್ಸ್‌ ಪತ್ರವೊಂದನ್ನು ನೀಡಲಾಗಿದೆ ಎಂದು ಹೇಳಿದರು.

ಟೆಂಟ್‌ನಲ್ಲಿ ನಿಲ್ಲದ ಮರಣ ಮೃದಂಗ

‘ಶೆಡ್‌ನಲ್ಲಿ ಯಾವತ್ತೂ ನೆಮ್ಮದಿಯಿಂದ ಮಲಗುವಂತಿಲ್ಲ. ಮಕ್ಕಳ ಕಷ್ಟವಂತೂ ನೋಡಲು ಆಗದು. ಚಳಿಗಾಲ ಬಂದರೆ ಟೆಂಟ್‌ನಲ್ಲಿರುವ ಮಕ್ಕಳಿಗೆ ನೆಗಡಿ, ಕೆಮ್ಮು, ಕಫ ಜೀವ ಹಿಂಡುತ್ತವೆ. ಐದಾರು ವರ್ಷಗಳಲ್ಲಿ ಇಲ್ಲಿ ಚಳಿ ತಡೆಯದೆ ಐದು ಮಕ್ಕಳು ಮೃತಪಟ್ಟಿವೆ. ಕಳೆದ ವರ್ಷವಷ್ಟೇ ಎರಡು ಮಕ್ಕಳು ಸತ್ತಿವೆ. ಮಕ್ಕಳು ಮಾತ್ರವಲ್ಲದೆ ಮೂರ್ನಾಲ್ಕು ಜನ ವಯಸ್ಸಾದವರು ಕೂಡ ಚಳಿಗಾಲದಲ್ಲಿ ಮೃತಪಟ್ಟಿದ್ದಾರೆ. ನಮಗೆ ಆದಷ್ಟು ಬೇಗ ಟೆಂಟ್‌ನಿಂದ ಮುಕ್ತಿ ಕೊಡಿಸಿ’ ಎಂದು ಇತ್ತೀಚೆಗಷ್ಟೇ ಮೃತಪಟ್ಟ ಹೆಣ್ಣು ಮಗುವಿನ ಸಂಬಂಧಿ ಆಯುಷ್‌ ಅಳಲು ತೋಡಿಕೊಂಡರು.

ದುಡ್ಡು ಹೊಡೆಯುವ ಸಂಚು?

‘ನಿರಾಶ್ರಿತರ ಹಕ್ಕುಪತ್ರಗಳನ್ನು ತಮ್ಮ ಬಳಿಯೇ ಇಟ್ಟುಕೊಂಡು ನಿವೇಶನ ನೀಡುವ ಸಮಯದಲ್ಲಿ ವ್ಯವಸ್ಥಿತವಾಗಿ ದುಡ್ಡು ಮಾಡುವ ಸಂಚು ನಗರಸಭೆ ಅಧಿಕಾರಿಗಳು ಮತ್ತು ಕೆಲ ಸದಸ್ಯರು ರೂಪಿಸಿದ್ದಾರೆ. ಹೀಗಾಗಿಯೇ ಸದ್ಯ ನಿರಾಶ್ರಿತರಿಗೆ ಜೆರಾಕ್ಸ್‌ ಪ್ರತಿ ನೀಡಿ ದಿನದೂಡಲಾಗುತ್ತಿದೆ. ಕಡು ಬಡವರನ್ನು ದೋಚುವ ಈ ಹುನ್ನಾರ ಬೆಳಕಿಗೆ ಬಂದಿಲ್ಲ’ ಎಂದು ಸಾಮಾಜಿಕ ಹೋರಾಟಗಾರ ಮಧುಸೂಧನ್‌ ತಿಳಿಸಿದರು.

ಜೆರಾಕ್ಸ್ ಪ್ರತಿ ಕೊಟ್ಟಿದ್ದು ನಿಜ

‘ನಿಜ, ನಾನು ಕೂಡ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ವೇದಿಕೆ ಕಾರ್ಯಕ್ರಮದಲ್ಲಿ ಕೆಲ ನಿರಾಶ್ರಿತರಿಗೆ ಅಸಲಿ ಹಕ್ಕುಪತ್ರಗಳನ್ನು ವಿತರಿಸಲಾಯಿತು. ಬಳಿಕ ಅವುಗಳನ್ನು ನಗರಸಭೆ ಅಧಿಕಾರಿಗಳು ಹಿಂಪಡೆದು ಜೆರಾಕ್ಸ್‌ ಪ್ರತಿ ನೀಡಿದರು. ಇಂದಿಗೂ ನಿರಾಶ್ರಿತರ ಬಳಿ ಅಸಲಿ ಹಕ್ಕುಪತ್ರಗಳು ಇಲ್ಲ’ ಎಂದು ಹಿರಿಯ ಹೋರಾಟಗಾರ ಲಕ್ಷ್ಮಯ್ಯ ಹೇಳಿದರು.

* *

ತಾತ್ಕಾಲಿಕ ಶೆಡ್‌ನಲ್ಲಿರುವ ಪ್ರತಿ ನಿರಾಶ್ರಿತ ಕುಟುಂಬಕ್ಕೂ ಹಕ್ಕುಪತ್ರ ಕೊಟ್ಟಿದ್ದೇವೆ. ಶೀಘ್ರದಲ್ಲಿಯೇ ಬಡಾವಣೆ ರೂಪಿಸುತ್ತೇವೆ

ಉಮಾಕಾಂತ್

ನಗರಸಭೆ ಆಯುಕ್ತ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.