ಗುರುವಾರ , ಆಗಸ್ಟ್ 13, 2020
27 °C

ಖಜಾನೆ ಖಾಲಿಯಾದರೂ ಕೋಟಿ ಕೋಟಿ ಕಾಮಗಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಖಜಾನೆ ಖಾಲಿಯಾದರೂ ಕೋಟಿ ಕೋಟಿ ಕಾಮಗಾರಿ

ತರೀಕೆರೆ: ‘ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರಧಾನಮಂತ್ರಿಗಳ ಕಾಲು ಹಿಡಿದಾದರೂ ಈ ರಾಜ್ಯದ ನೀರಾವರಿ ಯೋಜನೆಗಳ ಅಭಿವೃದ್ಧಿಗೆ ₹1ಲಕ್ಷ ಕೋಟಿಯಷ್ಟು ಕೇಂದ್ರದಿಂದ ಅನುದಾನ ತಂದು ಕಾಮಗಾರಿ ಮಾಡುತ್ತೆನೆ. ಇಲ್ಲದಿದ್ದರೆ ನನ್ನನ್ನು ನೀವು ಯಡಿಯೂರಪ್ಪ ಎಂದು ಕರೆಯಲೇಬೇಡಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಪಟ್ಟಣದ ಎಪಿಎಂಸಿ ಅವರಣದಲ್ಲಿ ಬಿಜೆಪಿಯಿಂದ ಪರಿವರ್ತನಾ ಯಾತ್ರೆಯ ಅಂಗವಾಗಿ ಮಂಗಳವಾರ ನಡೆದ ಸಾರ್ವಜನಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜ್ಯ ಸರ್ಕಾರದಲ್ಲಿ ಶಾಸಕರ ಹಾಗೂ ವಿಧಾನಪರಿಷತ್ ಸದಸ್ಯರ ಪಿಎಗಳಿಗೆ ವೇತನ ನೀಡಲು ಖಜಾನೆಯಲ್ಲಿ ಹಣವಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಚುನಾವಣೆಗೆ 4 ತಿಂಗಳು ಬಾಕಿ ಇರುವಾಗ ಹೋದ ಕಡೆಯಲ್ಲೆಲ್ಲ ₹100, ₹200 ಕೋಟಿ ಕೋಟಿ ಕಾಮಗಾರಿಗಳ ಘೋಷಣೆ ಮಾಡುವ ಮೂಲಕ ಜನರನ್ನು ವಂಚಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಕೇಂದ್ರ ಸರ್ಕಾರ ಅನ್ನಭಾಗ್ಯ ಯೋಜನೆಗಾಗಿ ನೀಡುತ್ತಿರುವ ಅಕ್ಕಿ ಹಾಗೂ ಗೋಧಿ ಕಳ್ಳ ಸಾಗಣಿಕೆದಾರರ ಪಾಲಾಗುತ್ತಿದ್ದು, ದವಸ ಧಾನ್ಯಗಳು ವಿತರಣೆ ಇಲ್ಲದೆ ಗೋದಾಮುಗಳಲ್ಲಿ ಕೊಳೆಯುತ್ತಿವೆ. ಪ್ರಧಾನಿಗಳ ಬಳಿ ಈ ಬಗ್ಗೆ ದೂರುವ ಅನಿವಾರ್ಯ ಎದುರಾಗಿದೆ’ ಎಂದರು.

‘ಪ್ರಧಾನಿ ನರೇಂದ್ರ ಮೋದಿಯವರಿಗೆ ಯುವಜನತೆಯ ಮೇಲೆ ಅದಮ್ಯ ವಿಶ್ವಾಸವಿದ್ದು, ದೇಶದ ಬದಲಾವಣೆಗೆ ನೀವೆಲ್ಲ ಕಾರಣರಾಗಬೇಕು. ಸಭೆಗೆ ಬಂದಿರುವ ಜನರಲ್ಲಿ ಒಬೊಬ್ಬರು ಐದೈದು ಮತಗಳನ್ನು ನೆರೆ ಹೊರೆಯವರಿಂದ ಕೊಡಿಸಿದರೆ 150 ಸ್ಥಾನ ಗೆಲ್ಲುವುದು ಸೂರ್ಯ ಚಂದ್ರರಿರುವಷ್ಟೆ ಸತ್ಯ’ ಎಂದರು.

‘ನನ್ನ ಅವಧಿಯಲ್ಲಿ ರೈತರ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್, ಲಾಟರಿ ನಿಷೇಧ, ಭಾಗ್ಯಲಕ್ಷ್ಮಿ ಯೋಜನೆ, 2 ಬಾರಿ ರೈತರ ಸಾಲ ಮನ್ನಾ, ಸುವರ್ಣ ಗ್ರಾಮ ಯೋಜನೆಗಳನ್ನು ಮುಂದುವರೆಸುವ ಮೂಲಕ ದಕ್ಷ, ಸ್ವಚ್ಛ ಹಾಗೂ ನಿರ್ಭೀತ ಆಡಳಿತವನ್ನು ಮುಂದಿನ ಐದು ವರ್ಷಗಳಲ್ಲಿ ನೀಡಲು ಅವಕಾಶ ಮಾಡಿಕೊಡಿ’ ಎಂದು ಮತದಾರರಲ್ಲಿ ಮನವಿ ಮಾಡಿದರು.

ಶಾಸಕ ಸಿ.ಟಿ.ರವಿ ಮಾತನಾಡಿ, ‘ಹಾಸಿಗೆ-ದಿಂಬು, ಸಣ್ಣನೀರಾವರಿ ಸೇರಿದಂತೆ ಎಲ್ಲ ಇಲಾಖೆಗಳಲ್ಲಿ ಕಳ್ಳಲೆಕ್ಕ, ಸುಳ್ಳುಬಿಲ್ಲು ತೋರಿಸಿ ಹಣ ಲೂಟಿ ಹೊಡೆದದ್ದೇ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಸರ್ಕಾರದ ಸಾಧನೆ. ಅಷ್ಟಕ್ಕೇ ಸಾಲದೆ ಈವರೆಗೆ ರಾಜ್ಯ ಆಳಿದ ಎಲ್ಲ ಮುಖ್ಯಮಂತ್ರಿಗಳೂ ಸೇರಿ ಮಾಡಿದ ಸಾಲವನ್ನೂ ಮೀರಿ ₹1.42 ಲಕ್ಷ ಕೋಟಿ ಸಾಲವನ್ನು ರಾಜ್ಯದ ಮೇಲೆ ಹೊರಿಸಿದ್ದಾರೆ. ರಾಜ್ಯ ಬಜೆಟ್ ಗಾತ್ರವೇ ರೂ 1.85ಲಕ್ಷ ಕೋಟಿ ಇದೆ, ಹಾಗಾದರೆ ಸಾಲ ಮಾಡುವ ಪ್ರಮೇಯ ಏನು? ಸಾಲ ಮಾಡಿದ ಹಣ ಎಲ್ಲಿ ಹೋಯಿತು? ಈ ಸರ್ಕಾರ ದಿವಾಳಿಯಾಗಿದೆ’ ಎಂದು ಟೀಕಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಡಿ.ಎನ್.ಜೀವರಾಜ್ ಮಾತನಾಡಿ, ‘ರಾಜ್ಯ ಕಟ್ಟುವ ಬಗ್ಗೆ ಯಡಿಯೂರಪ್ಪನವರಿಗೆ ಕನಸು ಹಾಗೂ ಬದ್ಧತೆ ಇದೆ. ತರೀಕೆರೆ ಕ್ಷೇತ್ರದ ಶಾಸಕರು ಕ್ಷೇತ್ರಕ್ಕೆ ಯಾವ ಹೊಸ ಯೋಜನೆಯನ್ನೂ ತರದೆ ಸಾವಿರಾರು ಕೋಟಿರೂ ಅಭಿವೃದ್ಧಿ ಕಾರ್ಯಕ್ರಮ ಕೈಗೊಂಡಿರುವುದಾಗಿ ಹೇಳುತ್ತಾರೆ. ಹಾಗಿದ್ದರೆ ತಾಲ್ಲೂಕಿನ ತೆಂಗು, ಅಡಿಕೆ ಬೆಳೆಗಾರರ ಸಂಕಷ್ಟಕ್ಕೆ ಯಾವ ಕ್ರಮ ಕೈಗೊಂಡಿದ್ದಾರೆ ಹೇಳಲಿ. ರಾಜ್ಯವು ಅಡಿಕೆ ಬೆಳೆಗೆ ತಾಯಿನೆಲವಾಗಿದ್ದು, ಅಡಿಕೆಗೆ ಸ್ಥಿರ ದರ ದೊರೆಯಲು ಕೇಂದ್ರ ಸರ್ಕಾರ ಆಮದು ಅಡಿಕೆ ಮೇಲೆ ಹೇರಿದ ಸುಂಕವೇ ಕಾರಣ’ ಎಂದು ಹೇಳಿದರು.

ಸಂಸದ ಜಿ.ಎಂ.ಸಿದ್ದೇಶ್ವರ, ಮಾತನಾಡಿದರು. ಪದವೀಧರ ಕ್ಷೇತ್ರ ಅಭ್ಯರ್ಥಿ ಆಯನೂರು ಮಂಜುನಾಥ, ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಚೈತ್ರಶ್ರೀ ಮಾಲತೇಶ್, ಉಪಾಧ್ಯಕ್ಷ ರಾಮಸ್ವಾಮಿ ಶೆಟ್ಟಿಗದ್ದೆ, ತರೀಕೆರೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪದ್ಮಾವತಿ ಸಂಜೀವ್, ಶಿವಮೊಗ್ಗ ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಗೌಡ, ಮಾಜಿ ಶಾಸಕ ಡಿ.ಎಸ್.ಸುರೇಶ್, ಬಿಜೆಪಿ ಮುಖಂಡ ಎಂ.ಎಚ್.ಗೋಪಿಕೃಷ್ಣ, ಚಿಕ್ಕಮಗಳೂರು ನಗರಸಭೆ ಸದಸ್ಯ ಎಚ್.ಡಿ.ತಮ್ಮಯ್ಯ, ಮಾಜಿ ಅಧ್ಯಕ್ಷ ಪ್ರೇಂಕುಮಾರ್ ಇದ್ದರು.

ಟಿಕೆಟ್‌ ಘೋಷಣೆ ಮಾಡದ ವರಿಷ್ಠರು ಫ್ಲೆಕ್ಸ್ ವಿಚಾರದಲ್ಲಿ ಉಂಟಾಗಿದ್ದ ಎರಡು ಬಣಗಳಲ್ಲಿನ ಕಾರ್ಯಕರ್ತರ ಗದ್ದಲವನ್ನು ಗಮನಿಸಿದ ರಾಜ್ಯ ಮುಖಂಡರು ಟಿಕೆಟ್ ಘೋಷಣೆ ಮಾಡುವುದರಿಂದ ದೂರ ಉಳಿದರು. ಬಿ.ಎಸ್.ಯಡಿಯೂರಪ್ಪ ಮಾತನಾಡಿ ‘ಟಿಕೆಟ್ ಬಗ್ಗೆ ಯಾರಿಗೂ ಗೊಂದಲ ಬೇಡ. ಒಬ್ಬರು ಶಾಸಕರಾದರೆ ಇನ್ನೊಬ್ಬರಿಗೆ ಪಕ್ಷ ಸೂಕ್ತ ಸ್ಥಾನಮಾನ ನೀಡಲಿದೆ’ ಎಂದು ಭರವಸೆ ನೀಡಿದರು.

ಮೆರವಣಿಗೆಯಲ್ಲಿ ರಂಗು: ಪಟ್ಟಣದ ಗಾಂಧಿ ವೃತ್ತದಿಂದ ಆರಂಭವಾದ ಪರಿವರ್ತನಾ ಯಾತ್ರೆಯ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ವೀರಗಾಸೆ, ಕೋಲಾಟ, ಕೀಲು ಕುದುರೆ ಹಾಗು ಗೊಂದೆ ಪ್ರದರ್ಶನಗಳು ನೋಡುಗರ ಮನಸೆಳೆದವು. 200 ಮಹಿಳೆಯರು ಪೂರ್ಣ ಕುಂಭ ಹೊತ್ತು ಬಿ.ಎಸ್. ಯಡಿಯೂರಪ್ಪ ಅವರನ್ನು ಸ್ವಾಗತಿಸಿದರು.

ಸಭೆ ನಡೆಯುತ್ತಿದ್ದ ವೇದಿಕೆ ಬಳಿ ಡಿ.ಎಸ್.ಸುರೇಶ್ ಹಾಗೂ ಎಚ್.ಎಂ.ಗೋಪಿಕೃಷ್ಣ ಅವರ ಕಾರ್ಯಕರ್ತರು ಆಗಾಗ ತಮ್ಮ ನಾಯಕರ ಭಾವಚಿತ್ರದ ಪ್ಲೇ ಕಾರ್ಡ್‌ಗಳನ್ನು ಹಿಡಿದು ಗದ್ದಲ ಸೃಷ್ಟಿಸುತ್ತಿದ್ದನ್ನು ಗಮನಿಸಿದ ಮುಖಂಡರು ಕೆಳಗಿಳಿಸುವಂತೆ ಎಚ್ಚರಿಕೆ ನೀಡಿದರು.

‘ನಮ್ಮಲ್ಲಿ ಯಾವುದೇ ಬಣಗಳಿಲ್ಲ’

ತರೀಕೆರೆ: ಹಿಂದುಳಿದ ವರ್ಗಗಳ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಂ.ಗೋಪಿಕೃಷ್ಣ ಮಾತನಾಡಿ, ನಮ್ಮಲ್ಲಿ ಯಾವುದೇ ಬಣಗಳಿಲ್ಲ. ನಾನು ಡಿ.ಎಸ್.ಸುರೇಶ್ ಒಂದಾಗಿದ್ದೆವೆ. ವಿಪಕ್ಷಗಳು ನಮ್ಮಲ್ಲಿ ಒಡಕನ್ನು ಸೃಷ್ಟಿಸುತ್ತಿದ್ದು, ಕಳೆದ ಚುನಾವಣೆಯಲ್ಲಿ ನಾವಿಬ್ಬರೂ ಪ್ರತ್ಯೇಕವಾಗಿ ಚುನಾವಣೆಗೆ ನಿಂತ ಫಲ ಇಲ್ಲಿ ಕಾಂಗ್ರೆಸ್ ಗೆದ್ದಿದೆ. ನಾನು 5 ವರ್ಷ ಸಮಾಜ ಸೇವೆ ಮಾಡಿದ್ದು ,ಪಕ್ಷ ತನಗೆ ಟಿಕೆಟ್‌ ನೀಡಿದರೆ ಮಡಿವಾಳ ಸಮಾಜದ ಪ್ರತಿನಿಧಿಯೊಬ್ಬನನ್ನು ವಿಧಾನಸಭೆಗೆ ಕಳುಹಿಸಿದ ಕೀರ್ತಿ ಪಕ್ಷಕ್ಕೆ ಬರುತ್ತದೆ’ ಎಂದರು.

ಮಾಜಿ ಶಾಸಕ ಡಿ.ಎಸ್.ಸುರೇಶ್ ಮಾತನಾಡಿ ‘ನಾನು ಕಳೆದ ಚುನಾವಣೆಯಲ್ಲಿ ಕೇವಲ 400 ಮತಗಳ ಅಂತರದಿಂದ ಸೋಲು ಕಂಡಿದ್ದು, ಪಕ್ಷ ಸಂಘಟನೆ ಮಾಡಿದ್ದೆನೆ. ಪಕ್ಷ ಹಾಗೂ ಮತದಾರರು ಆಶೀರ್ವದಿಸಿದರೆ ಮುಂದೆ ಶಾಸಕನಾಗಿ ರಸ್ತೆ, ಚರಂಡಿಗಳನ್ನು ಬಿಟ್ಟು ಕ್ಷೇತ್ರ ಪೂರ್ತಿ ನೀರಾವರಿ ಮಾಡಲು ಶ್ರಮಿಸುತ್ತೆನೆ’ ಎಂದರು.

‘ಕಾಂಗ್ರೆಸ್‌ನದ್ದು ಒಡೆದು ಆಳುವ ನೀತಿ’

ತರೀಕೆರೆ: ಜಾತಿ-ಧರ್ಮಗಳ ನಡುವೆ ವಿಷಬೀಜ ಬಿತ್ತಿ ಜನರನ್ನು ಒಡೆದು ಆಳುವ ನೀತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷ ಅನುಸರಿಸುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಮಂಗಳವಾರ ನಡೆದ ಬಿಜೆಪಿ ಪ್ರಾಯೋಜಿತ ಪರಿವರ್ತನಾ ರ್ಯಾಲಿಯಲ್ಲಿ ಅವರು ಮಾತನಾಡಿ ‘2008ರಲ್ಲಿ ಅಧಿಕಾರಕ್ಕೆ ಬಂದ ಯಡಿಯೂರಪ್ಪ ಎಲ್ಲ ಧರ್ಮ, ಜಾತಿಗಳ ಜನರಿಗೆ ಅನುಕೂಲವಾಗುವಂತೆ ಯೋಜನೆಗಳನ್ನು ಜಾರಿಗೆ ತಂದರು, ಯಾರೂ ಧೈರ್ಯ ಮಾಡದ ಶೂನ್ಯಬಡ್ಡಿ ದರದಲ್ಲಿ ರೈತರಿಗೆ ಸಾಲ ಮತ್ತು ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿ ತಾವು ರೈತ ಮತ್ತು ಜನಪರ ಎಂದು ನಿರೂಪಿಸಿದರು’ ಎಂದರು.

‘ರಾಜ್ಯದಲ್ಲಿ ನಾಲ್ಕೂವರೆ ವರ್ಷಗಳಲ್ಲಿ ಆಡಳಿತ ನಡೆಸಿದ ಸಿದ್ದರಾಮಯ್ಯ ಸರ್ಕಾರ ಯಡಿಯೂರಪ್ಪ ಜಾರಿಗೆ ತಂದ ಯೋಜನೆಗಳನ್ನು ಕಡೆಗಣಿಸಿ ಬರೀ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಇವರು ತಾವು ಜಾರಿಗೆ ತಂದೆವು ಎಂದು ಹೇಳಿಕೊಳ್ಳುವ ಅನ್ನಭಾಗ್ಯ ಯೋಜನೆಗೂ ಕೇಂದ್ರ ಸರ್ಕಾರವೇ ಪ್ರತಿ ತಿಂಗಳೂ 2.10ಲಕ್ಷ ಮೆಟ್ರಿಕ್ ಟನ್ ಆಹಾರಧಾನ್ಯ ವಿತರಿಸುವ ಜೊತೆಗೆ ಪ್ರತಿ ಕಿಲೋಗೆ ₹29ರೂ ಭರಿಸುತ್ತಿದೆ. ಹಾಗಿದ್ದರೆ ಕಾಂಗ್ರೆಸ್ ಸರ್ಕಾರದ ಸಾಧನೆ ಏನು’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.