ಕಲರ್‌ ಆಫ್‌ ಪ್ಯಾರಡೈಸ್‌

7

ಕಲರ್‌ ಆಫ್‌ ಪ್ಯಾರಡೈಸ್‌

Published:
Updated:
ಕಲರ್‌ ಆಫ್‌ ಪ್ಯಾರಡೈಸ್‌

ಮನುಷ್ಯನನ್ನು ಸದಾಕಾಲ ಕಾಡುವ, ಕಲಕುವ ನೋವಿನ ಮೂಲ ಯಾವುದು? ಸಣ್ಣತನಕ್ಕೆ, ಕ್ರೌರ್ಯಗಳಿಗೆ ಅವನನ್ನು ಪ್ರೇರೇಪಿಸುವ ಶಕ್ತಿ ಯಾವುದು? ನಮ್ಮ ಮನಸ್ಸಿನೊಳಗೇ ಅಮಾನವೀಯತೆಯ ಸರ್ಪ ಸರಕ್ಕನೆ ಹೆಡೆಯೆತ್ತುವ ಸಂದರ್ಭವನ್ನು ಹೇಗೆ ಅರ್ಥೈಸುವುದು? ಇಂಥ ಹಲವು ಪ್ರಶ್ನೆಗಳನ್ನು ಮನಸಲ್ಲಿ ರಿಂಗಣಿಸುವಂತೆ ಮಾಡುವ ಸಿನಿಮಾ ‘ಕಲರ್‌ ಆಫ್‌ ಪ್ಯಾರಡೈಸ್‌.’

1999ರಲ್ಲಿ ಬಿಡುಗಡೆಯಾದ ಈ ಇರಾನಿ ಚಿತ್ರದ ನಿರ್ದೇಶಕ ಮಜೀದ್‌ ಮಜೀದಿ. ಮಜೀದಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ತಂದುಕೊಟ್ಟ ಸಿನಿಮಾ ಗಳಲ್ಲಿ ಇದೂ ಒಂದು.

ಒಬ್ಬ ಅಂಧ ಹುಡುಗನ ಬದುಕಿನ ಕಥೆಯನ್ನು ಹೇಳುತ್ತಲೇ ನಮ್ಮೊಳಗಿನ ಕತ್ತಲನ್ನು ಸರಿಸುತ್ತ ಮಾನವೀಯತೆಯ ದೀಪವನ್ನು ಹಚ್ಚುತ್ತಾ ಹೋಗುವಂಥ ಅಪರೂಪದ ಸಿನಿಮಾ ಇದು. ಸ್ವಾರ್ಥ, ಕ್ರೌರ್ಯ ಮತ್ತು ನಿರ್ವಾಜ್ಯ ಪ್ರೇಮಗಳನ್ನು ಮುಖಾಮುಖಿಯಾಗುವ ಬಿಂದುವಿನಲ್ಲಿ ಆರಂಭವಾಗುವ ಕಥನ ಬದುಕಿನ ಸಂಕೀರ್ಣ ಆಯಾಮಗಳನ್ನು ತೆರೆದಿಡುತ್ತ ಹೋಗುತ್ತದೆ.

ಮಹಮ್ಮದ್‌ ಅಂಧ ಹುಡುಗ. ಅವನಿಗೆ ತಾಯಿ ಇಲ್ಲ. ಮಗನ ಈ ವಿಕಲತೆಯ ಬಗ್ಗೆ ಅಪ್ಪನಿಗೆ ತಿರಸ್ಕಾರವಿದೆ. ಈ ತಿರಸ್ಕಾರಕ್ಕೆ ಇನ್ನೊಂದು ಕಾರಣವೂ ಇದೆ. ಅವನಿಗೆ ತನ್ನದೇ ಊರಿನ ಇನ್ನೊಬ್ಬಳನ್ನು ಮದುವೆಯಾಗುವ ಆಸೆ ಇದೆ. ಆ ಕುರಿತು ಮನೆಯವರೊಂದಿಗೆ ಪ್ರಸ್ತಾಪ ಮಾಡುವ ಸಿದ್ಧತೆಯಲ್ಲಿದ್ದಾನೆ. ಆದರೆ ಈ ಅಂಧ ಮಗನನ್ನು ನೋಡಿ ಆ ಹುಡುಗಿಯ ಮನೆಯವರೆಲ್ಲಿ ಮದುವೆಗೆ ನಿರಾಕರಿಸುವರೋ ಎಂಬ ಅಂಜಿಕೆ ಅವನದು. ಇದೇ ಕಾರಣಕ್ಕೆ ಮಗನನ್ನು ಒಯ್ದು ಇನ್ನೊಬ್ಬ ಅಂಧ ಬಡಗಿಯ ಬಳಿ ಕೆಲಸಕ್ಕೆ ಬಿಟ್ಟು ಬರುತ್ತಾನೆ.

ಮಹಮ್ಮದನಿಗೆ ದೇವರನ್ನು ನೋಡ ಬೇಕು ಎಂಬ ಆಸೆ. ಅವನ ಆಸೆಯನ್ನು ಈಡೇರಿಸಿಕೊಳ್ಳುವ ದಾರಿಯನ್ನು ಆ ಅಂಧ ಬಡಗಿ ತನ್ನದೇ ಆದ ರೀತಿಯಲ್ಲಿ ಕಲಿಸುತ್ತ ಹೋಗುತ್ತಾನೆ. ಹೀಗೆ ಮನುಷ್ಯನೊಳಗೇ ಇರುವ ಮಾನವೀಯತೆ ಮತ್ತು ಸ್ವಾರ್ಥಕಾರಣದ ಕ್ರೌರ್ಯ ಎರಡರ ವರ್ತುಲದೊಳಗೇ ಕಥೆ ಸಾಗುತ್ತ ಹೋಗುತ್ತದೆ.

ಕೊನೆಗೂ ಅಪ್ಪನ ಮದುವೆಯ ಆಸೆ ಅವನ ಅಮ್ಮ ತೀರಿಕೊಳ್ಳುವುದರೊಂದಿಗೆ ಭಗ್ನವಾಗುತ್ತದೆ. ಆ ನಿರಾಸೆಯಲ್ಲಿ ತಾನು ಮಗನಿಗೆ ಮಾಡಿದ ಅನ್ಯಾಯವೂ ಕಾಡತೊಡಗುತ್ತದೆ.

ಮನುಷ್ಯನನ್ನು ಕಪ್ಪು ಬಿಳುಪು ಎಂದು ಗುರ್ತಿಸಿದಷ್ಟು ಸ್ಪಷ್ಟವಾಗಿ ಒಳ್ಳೆಯವರು ಕೆಟ್ಟವರು ಎಂದು ಗುರ್ತಿಸಲು ಸಾಧ್ಯವಾಗುವುದಿಲ್ಲ. ಶ್ರೇಷ್ಠ ಕೃತಿಗಳು ಈ ಒಳ್ಳೆಯತನ ಕೆಟ್ಟತನಗಳೆರಡೂ ಸೇರಿಕೊಂಡು ರೂಪಿತವಾಗಿರುವ ಮನಸ್ಥಿತಿಯನ್ನು ಹಿಡಿಯಲು ತವಕಿಸುತ್ತವೆ. ‘ಕಲರ್‌ ಆಫ್‌ ಪ್ಯಾರಡೈಸ್‌’ ಕೂಡ ಅಂಥದ್ದೇ ಒಂದು ಸಿನಿಮಾಕೃತಿ.

ಇಡೀ ಚಿತ್ರದ ಕಥನದ ನೆಲಕ್ಕೆ ಅಲಿರೇಜಾ ಕೊಹಾಂಡೈರಿ ಅವರ ಸಂಗೀತ ಮತ್ತು ಮಹಮ್ಮದ್‌ ದಾವೂದಿ ಅವರ ಛಾಯಾಗ್ರಹಣ ಸಮರ್ಥ ಆವರಣ ಒದಗಿಸಿದೆ. ಅಂಧ ಹುಡುಗನಾಗಿ ಹುಸೈನ್‌ ಮಜೋಬ್‌ ಅವರ ಅಭಿನಯ ಕೂಡ ಈ ಚಿತ್ರದ ಮುಖ್ಯ ಅಂಶಗಳಲ್ಲಿ ಒಂದು.

ಯೂ ಟ್ಯೂಬ್‌ನಲ್ಲಿ https://goo.gl/kckx8Q ಕೊಂಡಿ ಬಳಸಿ ಈ ಚಿತ್ರ ನೋಡಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry