ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ಸೇವೆ ವ್ಯತ್ಯಯ: ಚಿಕಿತ್ಸೆಗೆ ಅಲೆದಾಟ

Last Updated 3 ಜನವರಿ 2018, 10:14 IST
ಅಕ್ಷರ ಗಾತ್ರ

ಕೋಲಾರ: ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಸ್ಥಾಪನೆ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘವು ನೀಡಿದ್ದ ರಾಷ್ಟ್ರವ್ಯಾಪಿ ಮುಷ್ಕರದ ಕರೆ ಬೆಂಬಲಿಸಿ ಜಿಲ್ಲೆಯಾದ್ಯಂತ ಖಾಸಗಿ ಆಸ್ಪತ್ರೆಗಳನ್ನು ಮಂಗಳವಾರ ಬಂದ್ ಮಾಡಿದ್ದರಿಂದ ವೈದ್ಯಕೀಯ ಸೇವೆಯಲ್ಲಿ ವ್ಯತ್ಯಯವಾಗಿ ರೋಗಿಗಳು ನರಳಾಡಿದರು.

ಜಿಲ್ಲೆಯಲ್ಲಿ ಸುಮಾರು 273 ಖಾಸಗಿ ಆಸ್ಪತ್ರೆಗಳಿದ್ದು, ಈ ಪೈಕಿ ಬಹುತೇಕ ಆಸ್ಪತ್ರೆಗಳು ಇಡೀ ದಿನ ಮುಚ್ಚಿದ್ದವು. ಜತೆಗೆ ರಕ್ತನಿಧಿ ಕೇಂದ್ರಗಳು, ಸ್ಕ್ಯಾನಿಂಗ್‌, ಎಕ್ಸ್‌ರೇ, ಡಯಾಗ್ನಿಸ್ಟಿಕ್‌ ಕೇಂದ್ರಗಳು, ಪ್ರಯೋಗಾಲಯಗಳು ಸಹ ಬಂದ್ ಆಗಿದ್ದವು. ರೋಗಿಗಳು ಸಂಬಂಧಿಕರೊಡನೆ ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುತ್ತಿದ್ದ ದೃಶ್ಯ ಕಂಡುಬಂತು.

ಜಿಲ್ಲಾ ಕೇಂದ್ರದಲ್ಲಿ ಬೆಳಿಗ್ಗೆ ಸಭೆ ನಡೆಸಿದ ಜಿಲ್ಲಾ ಖಾಸಗಿ ಆಸ್ಪತ್ರೆಗಳ ಒಕ್ಕೂಟ, ಭಾರತೀಯ ವೈದ್ಯ ಸಂಘದ (ಐಎಂಎ) ಸದಸ್ಯರು ಹಾಗೂ ವೈದ್ಯರು, ಒಳ ರೋಗಿಗಳಿಗೆ ಮತ್ತು ತುರ್ತು ಚಿಕಿತ್ಸೆ ಅಗತ್ಯ ಇರುವವರಿಗೆ ಮಾತ್ರ ವೈದ್ಯಕೀಯ ಸೇವೆ ನೀಡುವ ನಿರ್ಧಾರ ಕೈಗೊಂಡಿದ್ದರು. ಹೀಗಾಗಿ ಆಸ್ಪತ್ರೆಗಳಲ್ಲಿ ಹೊಸದಾಗಿ ಯಾವುದೇ ರೋಗಿಗಳನ್ನು ಒಳ ರೋಗಿಗಳಾಗಿ ದಾಖಲು ಮಾಡಿಕೊಳ್ಳಲಿಲ್ಲ.

ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿ ಸದಸ್ಯರು ಹಾಗೂ ವೈದ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಅವರಿಗೆ ಮನವಿ ಸಲ್ಲಿಸಿದರು.

ಮುಷ್ಕರದ ಫಲಕ: ಹಲವು ಖಾಸಗಿ ಆಸ್ಪತ್ರೆಗಳ ಮುಂದೆ ಮುಷ್ಕರದ ಫಲಕ ನೇತು ಹಾಕಲಾಗಿತ್ತು. ರೋಗಿಗಳು ಆ ಫಲಕ ನೋಡಿ ಬೇರೆ ಆಸ್ಪತ್ರೆಗಳತ್ತ ಹೋಗುತ್ತಿದ್ದರು. ಆದರೆ, ಅಲ್ಲಿಯೂ ಚಿಕಿತ್ಸೆ ಸಿಗದೆ ರೋಗಿಗಳಿಗೆ ಹೆಚ್ಚಿನ ತೊಂದರೆಯಾಯಿತು. ಮುಷ್ಕರದ ವಿಷಯ ತಿಳಿಯದೆ ಆಸ್ಪತ್ರೆಗಳಿಗೆ ಬಂದಿದ್ದ ರೋಗಿಗಳು ಹಾಗೂ ಸಂಬಂಧಿಕರು ಆಸ್ಪತ್ರೆಯ ಬಾಗಿಲು ತೆಗೆಯಬಹುದೆಂದು ಗಂಟೆಗಟ್ಟಲೇ ಕಾದು ಕುಳಿತಿದ್ದರು. ಸಾಕಷ್ಟು ಸಮಯ ಕಾದರೂ ಬಾಗಿಲು ತೆರೆಯದಿದ್ದರಿಂದ ರೋಗಿಗಳು ಸರ್ಕಾರಿ ಆಸ್ಪತ್ರೆಗಳ ಮೊರೆ ಹೋದರು.

ಖಾಸಗಿ ಆಸ್ಪತ್ರೆಗಳಲ್ಲಿ ಒಳ ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡಲಾಯಿತು. ಜತೆಗೆ ಅಪಘಾತದ ಗಾಯಾಳುಗಳು, ಗರ್ಭಿಣಿಯರು, ತುರ್ತು ಚಿಕಿತ್ಸೆ ಅಗತ್ಯ ಇರುವವರಿಗೆ ಸೇವೆ ನೀಡಲಾಯಿತು.

24 ತಾಸೂ ಕಾರ್ಯ: ಜಿಲ್ಲಾ ಕೇಂದ್ರದಲ್ಲಿನ ಶ್ರೀ ನರಸಿಂಹರಾಜ (ಎಸ್‌ಎನ್‌ಆರ್‌) ಜಿಲ್ಲಾ ಆಸ್ಪತ್ರೆ ಸೇರಿದಂತೆ ತಾಲ್ಲೂಕು ಸರ್ಕಾರಿ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ರೋಗಿಗಳಿಂದ ತುಂಬಿ ಹೋಗಿದ್ದವು. ನೋಂದಣಿ, ಪ್ರಯೋಗಾಲಯ ಮತ್ತು ಹೊರ ರೋಗಿಗಳ ವಿಭಾಗದಲ್ಲಿ ರೋಗಿಗಳು ಸಾಲುಗಟ್ಟಿ ನಿಂತಿದ್ದರು.

ಮುಷ್ಕರದ ಹಿನ್ನೆಲೆಯಲ್ಲಿ ಎಲ್ಲಾ ಸರ್ಕಾರಿ ವೈದ್ಯರಿಗೆ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಆದೇಶ ಹೊರಡಿಸಿದ್ದರು. ಜತೆಗೆ ಕಾರ್ಯ ಸ್ಥಳದಲ್ಲಿದ್ದು, ದಿನದ 24 ತಾಸೂ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಿದ್ದರು. ರಜೆಯಲ್ಲಿದ್ದ ವೈದ್ಯರನ್ನು ವಾಪಸ್‌ ಕರೆಸಿಕೊಂಡು ಹೆಚ್ಚಿನ ಸಮಸ್ಯೆಯಾಗದಂತೆ ಪರಿಸ್ಥಿತಿ ನಿಭಾಯಿಸಲಾಯಿತು.

* * 

ರೋಗಿಗಳಿಗೆ ಸ್ವಲ್ಪ ಮಟ್ಟಿಗೆ ತೊಂದರೆಯಾಗಿದೆ. ರಜೆಯಲ್ಲಿದ್ದ ವೈದ್ಯರನ್ನು ವಾಪಸ್‌ ಕರೆಸಿಕೊಂಡು ಪರಿಸ್ಥಿತಿ ನಿಭಾಯಿಸಿದ್ದೇವೆ
ಡಾ.ವಿಜಯಕುಮಾರ್‌,
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT