ಸೋಮವಾರ, ಆಗಸ್ಟ್ 3, 2020
26 °C

ಚಂದನವನದಲ್ಲಿ ‘ಮೌನ’ ರಾಗ

ಕೆ.ಎಂ.ಸತೀಶ್‌ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

ಚಂದನವನದಲ್ಲಿ ‘ಮೌನ’ ರಾಗ

ಮುದ್ದು ಮೊಗದ ಬೆಡಗಿ ಮೌನ ಗೌಡ. ಆತ್ಮವಿಶ್ವಾಸ ತುಂಬಿದ ಆಕರ್ಷಕ ಕಂಗಳು ಮತ್ತು ನೀಳ ಕಾಯದಿಂದಲೇ ಮಾಡೆಲಿಂಗ್‌ನಲ್ಲಿ ಮಿಂಚು ಹರಿಸಿದವರು. ‘ಓದಿನಲ್ಲೂ ಟಾಪರ್‌, ರ‍್ಯಾಂಪ್‌ ಮೇಲೂ ಸೂಪರ್‌’ ಎಂಬ ಮಾತಿಗೆ ತಕ್ಕಂತೆ ಎರಡೂ ಕ್ಷೇತ್ರಗಳಲ್ಲೂ ಛಾಪು ಮೂಡಿಸಿರುವ ಮೌನ ಈಗ ಹೊಸ ಇನ್ನಿಂಗ್ಸ್‌ ಆರಂಭಿಸಿದ್ದಾರೆ. ಡಿ. 29ರಂದು ತೆರೆಕಂಡ ‘ಆವಾಹಯಾಮಿ’ ಸಿನಿಮಾದಿಂದ ಚಂದನವನದಲ್ಲಿ ಖಾತೆ ತೆರೆದಿರುವ ಮೌನ, ‘ಕವನ’ ಎಂಬ ಮತ್ತೊಂದು ಕನ್ನಡ ಸಿನಿಮಾದಲ್ಲೂ ನಾಯಕನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಮಾಡೆಲಿಂಗ್‌ ಅನ್ನೇ ಚಿಮ್ಮುಹಲಗೆಯಾಗಿಸಿಕೊಂಡು ಚಿತ್ರರಂಗ ಪ್ರವೇಶಿಸಿರುವ ಮೌನ, ಮುಂದೆ ಸಂಪೂರ್ಣವಾಗಿ ಚಿತ್ರೋದ್ಯಮದಲ್ಲೇ ತೊಡಗಿಸಿಕೊಳ್ಳಲು ತೀರ್ಮಾನಿಸಿದ್ದಾರೆ.

‘ಇಲ್ಲಿವರೆಗೆ ಫ್ಯಾಷನ್‌ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೆ. ಈಗ ನಟನೆಯನ್ನೇ ಪ್ಯಾಶನ್‌ ಆಗಿಸಿಕೊಂಡಿದ್ದೇನೆ. ಸಿನಿರಂಗದಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದ ನಂತರ ಕೆಲ ತಯಾರಿಗಳನ್ನು ಮಾಡಿಕೊಂಡೆ. ಹೆಚ್ಚು ಸಿನಿಮಾಗಳನ್ನು ನೋಡುವುದಕ್ಕೆ ಶುರು ಮಾಡಿದೆ. ಹೀರೊಯಿನ್‌ಗಳು ಅಭಿನಯ ಗಮನಿಸಿದೆ. ಪ್ರತಿಯೊಂದು ಸಂಭಾಷಣೆಗೂ ಭಾವನೆಯ ಮಣಿ ಪೋಣಿಸಿದರೆ ಪ್ರೇಕ್ಷಕರ ಮನಸ್ಸು ಗೆಲ್ಲುವುದು ಸುಲಭ ಎಂಬ ಸೂಕ್ಷ್ಮವನ್ನು ಅರಿತುಕೊಂಡೆ. ಕೊಟ್ಟ ಪಾತ್ರದ ಆಳಕ್ಕೆ ಇಳಿದು ಆ ಪಾತ್ರವೇ ನಾವಾದಾಗ ನಟನೆ ಸಹಜವಾಗಿ ಮೂಡಿಬರುತ್ತದೆ. ಆಗ ಮಾತ್ರ ಒಬ್ಬ ನಟಿ ಒಂದು ಪಾತ್ರದಿಂದ ಪ್ರೇಕ್ಷಕರೊಂದಿಗೆ ಅನುಸಂಧಾನ ನಡೆಸಲು ಸಾಧ್ಯ’ ಎನ್ನುತ್ತಾರೆ ಮೌನ ಗೌಡ.

ನಟಿಸುವುದಕ್ಕೆ ಆತ್ಮವಿಶ್ವಾಸ ಬರುವುದರ ಹಿಂದೆ ಮಾಡೆಲಿಂಗ್‌ ಕ್ಷೇತ್ರದ ಕಾಣ್ಕೆಯೂ ಇದೆ ಎನ್ನುವ ಮೌನ, 2014ರ ಮಿಸ್‌ ಸೌತ್‌ ಆಂಧ್ರಪ್ರದೇಶ ಕಿರೀಟವನ್ನು ಮುಡಿಗೇರಿಸಿಕೊಂಡವರು. ಹಾಗೆಯೇ, 2015ರಲ್ಲಿ ಲಯನ್ಸ್‌ ಕ್ಲಬ್‌ ನಡೆಸಿದ ಪ್ರಿನ್ಸೆಸ್‌ ಲಯನ್ಸ್‌ ಕ್ಲಬ್‌ನಲ್ಲಿ ಗೆದ್ದ ನಗು ಬೀರಿದವರು.

‘ಎಂಜಿನಿಯರಿಂಗ್‌ ಮುಗಿಸಿದ ತಕ್ಷಣ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಅದಕ್ಕೆ ಮಾಡೆಲಿಂಗ್‌ ಹಿನ್ನೆಲೆಯೂ ನೆರವಿಗೆ ಬಂತು. ಗಿರೀಶ್‌ ಕುಮಾರ್‌ ನಿರ್ದೇಶನದ ‘ಆವಾಹಯಾಮಿ’ ಹಾರರ್‌, ಥ್ರಿಲ್ಲರ್‌ ಚಿತ್ರ. ಈ ಸಿನಿಮಾಕ್ಕೆ ದುಡಿದವರಲ್ಲಿ ಹೆಚ್ಚಿನವರು ಎಂಜಿನಿಯರ್‌ ಓದಿದವರು. ಸಿನಿಮಾ ತಾಂತ್ರಿಕವಾಗಿ ತುಂಬ ಸ್ಟ್ರಾಂಗ್‌ ಆಗಿದೆ. ಈ ಚಿತ್ರದಲ್ಲಿ ನಾನು ಆರಿನ್‌ ಎಂಬ ಕ್ರಿಶ್ಚಿಯನ್‌ ಹುಡುಗಿ ಪಾತ್ರಕ್ಕೆ ಬಣ್ಣ ಹಚ್ಚಿದ್ದೇನೆ. ಆರಿನ್‌ ಸೀದಾಸಾದಾ ಹುಡುಗಿ, ಪಕ್ಕಾ ಪ್ರಾಕ್ಟಿಕಲ್‌ ಬೆಡಗಿ. ವಿಜಯ್‌ ಈ ಚಿತ್ರದ ನಾಯಕನಟ. ಚಿತ್ರದ ಸೆಕೆಂಡ್‌ ಹಾಫ್‌ ಪ್ರೇಕ್ಷಕರಿಗೆ ಹೆಚ್ಚು ಇಷ್ಟವಾಗಿದೆ. ಸಿನಿಮಾಕ್ಕೆ ಸಹಾಯಕರಾಗಿ ಕೆಲಸ ಮಾಡಿದ ಗಿರೀಶ್‌ ಬಿಜೈ ನನಗೆ ನಟನೆ ಕುರಿತಂತೆ ಸಾಕಷ್ಟು ಟಿಪ್ಸ್‌ ನೀಡಿದರು. ಒಂದು ಪಾತ್ರದಲ್ಲಿ ಹೇಗೆ ಬೆರೆತುಹೋಗಬೇಕು ಎಂಬುದನ್ನು ಹೇಳಿಕೊಟ್ಟರು. ಮೊದಲ ಚಿತ್ರ ಬಿಡುಗಡೆ ಆದ ತಕ್ಷಣವೇ ಮತ್ತೊಂದು ಕನ್ನಡ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ’ ಎಂದು ಖುಷಿ ವ್ಯಕ್ತಪಡಿಸುತ್ತಾರೆ ಮೌನ.

‘ಸಂಭಾಷಣೆಯನ್ನು ಉರುಹೊಡೆದು ನಟಿಸಿದರೆ ಆ ಪಾತ್ರ ಬೇಡುವ ಎಕ್ಸ್‌ಪ್ರೆಶನ್‌ ಮತ್ತು ಮ್ಯಾನರಿಸಂ ಎರಡೂ ಬರುವುದಿಲ್ಲ. ಕಲಾವಿದೆ ಒಂದು ಪಾತ್ರ ನಿರ್ವಹಿಸುವಾಗ ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಪಾತ್ರದ ಆಳಕ್ಕೆ ಇಳಿಯಬೇಕು. ಪಾತ್ರಕ್ಕೆ ತನ್ನನ್ನು ತಾನು ಸಮರ್ಪಣೆ ಮಾಡಿಕೊಳ್ಳಬೇಕು. ‘ಆವಾಹಯಾಮಿ’ ಸಿನಿಮಾದಲ್ಲಿ ಮಾರ್ನಾಲ್ಕು ದೃಶ್ಯಗಳಲ್ಲಿ ನಾನು ಅಳುವ ಸನ್ನಿವೇಶಗಳಿವೆ. ಒಂದು ಸೀನ್‌ನಲ್ಲಿ ನಾನು ಗ್ಲಿಸರಿನ್‌ ಉಪಯೋಗಿಸದೇ ಅತ್ತುಬಿಟ್ಟೆ. ಅಂದರೆ, ಆ ಪಾತ್ರವೇ ನಾನಾಗಿ ಹೋಗಿದ್ದರಿಂದ ಸಹಜವಾಗಿ ಅಭಿನಯಿಸಲು ಸಾಧ್ಯವಾಯಿತು. ಮೊದಲ ಸಿನಿಮಾದಲ್ಲಿ ಏನೇನು ತಿದ್ದುಪಡಿಗಳಿದ್ದವೋ ಅವೆಲ್ಲವನ್ನೂ ನನ್ನ ಎರಡನೇ ಚಿತ್ರದಲ್ಲಿ ಅಳವಡಿಸಿಕೊಳ್ಳುತ್ತೇನೆ’ ಎನ್ನುತ್ತಾರೆ ಅವರು.

ಸಿನಿ ಕಲಾವಿದರ ಬದುಕಿನಲ್ಲಿ ಸೋಲು–ಗೆಲುವು ಸಾಮಾನ್ಯ. ಎರಡನ್ನೂ ಸಮಚಿತ್ತದಿಂದ ಸ್ವೀಕರಿಸಬೇಕು ಎಂಬ ತತ್ವದಲ್ಲಿ ನಂಬಿಕೆ ಇಟ್ಟವರು ಮೌನ. ಇದಕ್ಕೆ ಮಾನಸಿಕವಾಗಿ ಮೊದಲೇ ಸಿದ್ಧರಾಗಿಬಿಟ್ಟರೆ ಇಂಡಸ್ಟ್ರಿಯಲ್ಲಿ ಗೆಲ್ಲುವುದು ಸುಲಭ ಎನ್ನುವುದು ಅವರ ಸಿನಿಮಂತ್ರ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.