... ಹಾಸಿ ಕೊಟ್ಟಂತೆ!

7

... ಹಾಸಿ ಕೊಟ್ಟಂತೆ!

Published:
Updated:

ಸರಿಯಾಗಿ ಪಾಠ ಮಾಡದ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಗ್ರಾಮೀಣ ಪ್ರದೇಶಗಳಿಗೆ ವರ್ಗಾವಣೆ ಮಾಡಲು ಗಂಭೀರ ಚಿಂತನೆ ಮಾಡುತ್ತಿದೆಯಂತೆ ಸರ್ಕಾರ (ಪ್ರ.ವಾ., ಜ.3).

ಕೆಲಸ ಮಾಡದವರನ್ನು ಸೇವೆಯಿಂದ ವಜಾಗೊಳಿಸುವುದು ಬಿಟ್ಟು ಗ್ರಾಮಗಳಿಗೆ ಅಟ್ಟಿದರೆ ವ್ಯವಸ್ಥೆ ಸರಿಯಾಗುತ್ತದೆಯೇ? ಸರ್ಕಾರವೇ ಪರೋಕ್ಷವಾಗಿ ‘ನೀವು ಹೋಗಿ ಹಳ್ಳಿಗಳಲ್ಲಿ ಏನು ಬೇಕಾದರೂ ಮಾಡಿಕೊಳ್ಳಿ, ನಡೆಯುತ್ತದೆ’ ಎಂದಂತಾಯಿತಲ್ಲವೇ? ನಿದ್ದೆ ಬರುವವನಿಗೆ ಹಾಸಿ ಕೊಟ್ಟಂತೆ. ಕೆಲಸ ಮಾಡದವರು ಕಣ್ಗಾವಲು ವ್ಯವಸ್ಥೆಯಿಂದ ದೂರವಿದ್ದು, ಇನ್ನೂ ಚೆನ್ನಾಗಿ ಗೊರಕೆ ಹೊಡೆಯುವರೆಂಬ ಪರಿಜ್ಞಾನ ಬೇಡವೇ?

ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಕೊಡುವುದು ಶಿಕ್ಷಕರ ಕೆಲಸ. ಪೇಟೆಯ ಮಕ್ಕಳಿಗೆ ಮಾತ್ರ ಅದು ಸರಿಯಾಗಿ ಸಿಗಬೇಕು, ಗ್ರಾಮೀಣ ಮಕ್ಕಳು ಹೇಗಿದ್ದರೂ ನಡೆಯುತ್ತದೆ ಎಂಬುದು ಸರ್ಕಾರದ ಚಿಂತನೆಯೇ? ಸರ್ಕಾರಿ ಪ್ರಾಯೋಜಿತ ಈ ತರಹದ ಅಸಮಾನತೆಯನ್ನು ಗ್ರಾಮೀಣ ಭಾಗದ ಜನರು ಪ್ರತಿಭಟಿಸಬೇಕಾಗಿದೆ. ಎಲ್ಲಾ ಸರ್ಕಾರಗಳೂ ಗ್ರಾಮೀಣ ಭಾಗದ ಜನರನ್ನು ನಿರ್ಲಕ್ಷಿಸುತ್ತಾ ಬಂದಿವೆ.

ನಗರಗಳಲ್ಲಿ ಹಲವಾರು ವರ್ಷಗಳು ಓಡಿ, ಹಾಳಾಗಿ ಗುಜರಿಗೆ ಸೇರಬೇಕಾದಂಥ ಬಸ್ಸುಗಳನ್ನು ಗ್ರಾಮೀಣ ಭಾಗಕ್ಕೆ ಕಳುಹಿಸಲಾಗುತ್ತದೆ. ಬೆಂಗಳೂರಿನ ಕಸ, ಕೊಳಕುಗಳನ್ನು ತಂದು ಪಕ್ಕದ ಹಳ್ಳಿಗಳಲ್ಲಿ ಸುರಿಯಲಾಗುತ್ತದೆ. ಇಂಥ ಹತ್ತು ಹಲವು ಉದಾಹರಣೆಗಳಿವೆ. ವ್ಯವಸ್ಥೆಯ ದ್ವಂದ್ವ ನೀತಿ ಇದೇ ಅಲ್ಲವೇ?

–ಡಾ. ಮನೋಜ ಗೋಡಬೋಲೆ, ಉಜಿರೆ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry