ಗುರುವಾರ , ಜೂಲೈ 2, 2020
27 °C

ವೀಸಾ ನಿರ್ಬಂಧ: ಟ್ರಂಪ್ ಆಡಳಿತದ ಅವಸರ ಸಲ್ಲದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೀಸಾ ನಿರ್ಬಂಧ: ಟ್ರಂಪ್ ಆಡಳಿತದ ಅವಸರ ಸಲ್ಲದು

ವಿದೇಶಿ ಪರಿಣತರಿಗೆ ನೀಡಲಾಗುವ  ಎಚ್‌-1ಬಿ ವೀಸಾ ನಿಯಮಗಳನ್ನು ಕಠಿಣಗೊಳಿಸಲು ಅಮೆರಿಕದ ಡೊನಾಲ್ಡ್‌ ಟ್ರಂಪ್‌ ನೇತೃತ್ವದ ಸರ್ಕಾರ ಮುಂದಾಗಿದೆ. ಈ ಹಿಂದೆಯೂ ಈ ವೀಸಾ ಪಡೆದುಕೊಳ್ಳಲು ಕನಿಷ್ಠ ವೇತನವನ್ನು ಗಮನಾರ್ಹವಾಗಿ ಹೆಚ್ಚಿಸಲಾಗಿತ್ತು. ‘ಗಾಯದ ಮೇಲೆ ಬರೆ’ ಎಂಬಂತೆ ಈಗ ಮತ್ತೆ ಹಲವಾರು ಕಠಿಣ ನಿರ್ಬಂಧಗಳನ್ನುವಿಧಿಸಲು ಮುಂದಾಗಿದೆ. ವರ್ಷಾರಂಭದಲ್ಲಿಯೇ ದೇಶದ ಐ.ಟಿ. ಉದ್ದಿಮೆ ಮತ್ತು ಅಮೆರಿಕದಲ್ಲಿ ದುಡಿಯುತ್ತಿರುವ ಲಕ್ಷಾಂತರ ಭಾರತೀಯರ ಪಾಲಿಗೆ ಈ ನಿರ್ಧಾರವು ಕಹಿ ಸುದ್ದಿಯಾಗಿ ಹೊರಬಿದ್ದಿದೆ. ಗ್ರೀನ್‌ ಕಾರ್ಡ್‌ ಪಡೆಯಲು ಸಲ್ಲಿಸಿರುವ ಅರ್ಜಿ ಬಾಕಿ ಇದೆ ಎಂಬ ಕಾರಣಕ್ಕಾಗಿ ಇನ್ನು ಮುಂದೆ ಐ.ಟಿ. ತಂತ್ರಜ್ಞರ ವೀಸಾ ವಿಸ್ತರಣೆಯಾಗುವುದಿಲ್ಲ. ಈ ಮೊದಲು ಎಚ್‌–1ಬಿ ವೀಸಾದ 6ನೇ ವರ್ಷದ ಅಂತ್ಯದಲ್ಲಿ ಗ್ರೀನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಿದ್ದಲ್ಲಿ, ಅದರ ಪ್ರಕ್ರಿಯೆಗಳು ಪೂರ್ಣಗೊಳ್ಳುವವರೆಗೆ ವೀಸಾ ಅವಧಿಯನ್ನು ನವೀಕರಣ ಮಾಡಲು ಅವಕಾಶವಿತ್ತು. ಈಗ ಅಂತಹ ಸಾಧ್ಯತೆ ಇಲ್ಲವಾಗಿ, ಅವರೆಲ್ಲರನ್ನೂ ತನ್ನ ನೆಲದಿಂದ ಯಾವಾಗಲಾದರೂ ಅಮೆರಿಕ ಸರ್ಕಾರ ಹೊರಹಾಕಬಹುದಾಗಿದೆ. ಹೀಗಾಗಿ ಉದ್ಯೋಗಿಗಳ ಕುಟುಂಬದ ಸದಸ್ಯರು ಸೇರಿದಂತೆ ಸುಮಾರು 15 ಲಕ್ಷ ಭಾರತೀಯರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಲಕ್ಷಾಂತರ ಭಾರತೀಯರು ಭಾರತಕ್ಕೆ ವಾಪಸಾಗುವ ಸ್ಥಿತಿ ಸೃಷ್ಟಿಯಾಗುವ ಸಾಧ್ಯತೆ ಇದೆ.

ಉದ್ಯೋಗ ನೇಮಕಾತಿಯಲ್ಲಿ ಅಮೆರಿಕನ್ನರಿಗೆ ಆದ್ಯತೆ ನೀಡುವ ಟ್ರಂಪ್‌ ಧೋರಣೆಗೆ (Buy American, Hire American) ಇದು ಪೂರಕವಾಗಿದೆ. ಆದರೆ, ಭಾರತ ಮತ್ತು ಚೀನಾದ ಹಿತಾಸಕ್ತಿಗೆ ಇದರಿಂದ ತೀವ್ರ ಧಕ್ಕೆ ಒದಗಲಿದೆ. ವಲಸೆ ವೀಸಾ ದುರ್ಬಳಕೆ ತಡೆಗೆ ಈ ಬಗೆಯ ಹೊಸ ನಿರ್ಬಂಧಗಳನ್ನು ವಿಧಿಸಲು ಹೊರಟಿರುವುದು ಸದ್ಯದ ಜಾಗತೀಕರಣದ ಸಂದರ್ಭದಲ್ಲಿ ಸುಲಭವಾಗಿ ಒಪ್ಪಿಕೊಳ್ಳಲಾಗದು. ಇದೊಂದು ಚುನಾವಣೆ ಭರವಸೆ ಈಡೇರಿಸುವ ಭಾವನಾತ್ಮಕ ಮತ್ತು ರಾಜಕೀಯ ನಿರ್ಧಾರವಾಗಿದೆಯೇ ಹೊರತು ಆರ್ಥಿಕ ಲಾಭ–ನಷ್ಟವನ್ನು ಪರಿಗಣನೆಗೆ ತೆಗೆದುಕೊಂಡಿಲ್ಲದ ವಿವೇಚನಾರಹಿತ ತೀರ್ಮಾನವಾಗಿದೆ. ಸ್ಥಳೀಯರ ಉದ್ಯೋಗ ಮತ್ತು ಅವಕಾಶಗಳನ್ನು ಹೆಚ್ಚಿಸುವ ಉದ್ದೇಶದ ಎಚ್‌1–ಬಿ ವೀಸಾ ಮಸೂದೆಯ ಸ್ವರೂಪ ಜಟಿಲವಾಗಿದ್ದು, ಭಾರತವಷ್ಟೇ ಅಲ್ಲ ಅಮೆರಿಕದ ಐ.ಟಿ. ಸಂಸ್ಥೆಗಳ ಮೇಲೂ ಇದು ಹೊರೆ ಹೆಚ್ಚಿಸಲಿದೆ. ಇದರಿಂದ ಅಮೆರಿಕದ ಆರ್ಥಿಕತೆಗೂ ಹೊಡೆತ ಬೀಳಬಹುದು ಎಂಬುದನ್ನು ತಳ್ಳಿಹಾಕಲಾಗದು. ಈ ಉದ್ದೇಶಿತ ಮಸೂದೆ,  ವೀಸಾ ಅವಲಂಬಿತ ಕಂಪನಿಗಳ ವ್ಯಾಖ್ಯಾನವನ್ನೂ ಕಠಿಣಗೊಳಿಸಲಿದೆ. ವೀಸಾ ಹೊಂದಿರುವವರನ್ನು ಬಳಸಿಕೊಂಡು ಅಮೆರಿಕದ ನೌಕರರನ್ನು ಸ್ಥಳಾಂತರಿಸುವುದಿಲ್ಲ ಎಂ‍ದು ಗ್ರಾಹಕ ಕಂಪನಿಗಳು ಪ್ರಮಾಣಪತ್ರ ನೀಡಬೇಕಾಗುತ್ತದೆ. ಇಂತಹ ನಿಬಂಧನೆಗಳಿಂದ ವೀಸಾ ಪಡೆಯುವುದು ಹೆಚ್ಚೆಚ್ಚು ಕಠಿಣವಾಗಲಿದೆ.

‘ಪ್ರತಿಭಾ ಪಲಾಯನ’ವು ಟ್ರಂಪ್‌ ನೀತಿಯ ಫಲವಾಗಿ ಈಗ ‘ಘರ್‌ ವಾಪಸಿ’ ಆಗುವುದು ಒಂದರ್ಥದಲ್ಲಿ ಒಳ್ಳೆಯದೇ ಎಂದೂ ನಾವು ಭಾವಿಸಬಹುದು. ದೇಶದಲ್ಲಿನ ಅಪಾರ ಸಂಪನ್ಮೂಲ ಬಳಸಿ ನವೋದ್ಯಮ ಸ್ಥಾಪಿಸಿ ಭಾರತವು ಅಭಿವೃದ್ಧಿ ಪಥದಲ್ಲಿ ದಾಪುಗಾಲು ಹಾಕಲು ತಂತ್ರಜ್ಞರು ಸ್ವದೇಶಕ್ಕೆ ಬಂದರೆ ಅದರಿಂದ ಗರಿಷ್ಠ ಲಾಭವೂ ಇರುವುದನ್ನು ನಿರ್ಲಕ್ಷಿಸುವಂತಿಲ್ಲ. ಈಗಾಗಲೇ ದೇಶಿ ಐ.ಟಿ. ಉದ್ದಿಮೆ ವಲಯವು ಜಾಗತಿಕ ನೆಲೆಯಲ್ಲಿ ಅನೇಕ ಸವಾಲುಗಳಿಗೆ ಮುಖಾಮುಖಿಯಾಗಿದೆ. ಸ್ವಂತ ಹಿತಾಸಕ್ತಿ ರಕ್ಷಣೆಯ ನೆಪದಲ್ಲಿ ಜಾಗತೀಕರಣ ವಿರೋಧಿ ನೀತಿ ಅನುಸರಿಸುತ್ತಿರುವ ಟ್ರಂಪ್ ಆಡಳಿತವಲ್ಲದೆ, ಬ್ರೆಕ್ಸಿಟ್ ವಿದ್ಯಮಾನ, ಆರ್ಥಿಕ ಹಿಂಜರಿತದಂತಹ ಸವಾಲುಗಳನ್ನೂ ಎದುರಿಸುವ ಸ್ಥಿತಿ ಉಂಟಾಗಿದೆ. ವೀಸಾ ಸಂಬಂಧಿ ನಿರ್ಬಂಧಗಳಿಂದ ಅಮೆರಿಕ ಮತ್ತು ಭಾರತದ ಹಿತಾಸಕ್ತಿಗೆ ಗಂಭೀರ ಸ್ವರೂಪದಲ್ಲಿ ಧಕ್ಕೆ ಒದಗಲಿರುವುದನ್ನು, ಸಾಫ್ಟ್‌ವೇರ್‌ ಮತ್ತು ಸೇವಾ ಸಂಸ್ಥೆಗಳ ರಾಷ್ಟ್ರೀಯ ಒಕ್ಕೂಟವು (ನಾಸ್ಕಾಂ)  ಅಮೆರಿಕದ ಸೆನೆಟರ್‌ಗಳು ಮತ್ತು ಟ್ರಂಪ್‌ ಆಡಳಿತದ ಗಮನಕ್ಕೆ ತರುತ್ತಿದೆ. ಆದರೆ ಇದು ಸಾಲದು. ಸರ್ಕಾರದ ಮಟ್ಟದಲ್ಲಿಯೇ ಇದಕ್ಕೆ ಪರಿಹಾರ ಕಂಡುಕೊಳ್ಳುವ ಅನಿವಾರ್ಯವೂ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.