ಹೊರಟ್ಟಿ ಆಹ್ವಾನಕ್ಕೆ ವೀರಶೈವ ಮಠಾಧೀಶರ 11 ಷರತ್ತು

7
ಗುರು–ವಿರಕ್ತ ಪರಂಪರೆಯ ಮಠಾಧೀಶರ ಸಭೆ: ಪ್ರತ್ಯೇಕ ಧರ್ಮ ವಿಚಾರಕ್ಕಾಗಿ ಬಹಿರಂಗ ಚರ್ಚೆಗೆ ಸಿದ್ಧ

ಹೊರಟ್ಟಿ ಆಹ್ವಾನಕ್ಕೆ ವೀರಶೈವ ಮಠಾಧೀಶರ 11 ಷರತ್ತು

Published:
Updated:
ಹೊರಟ್ಟಿ ಆಹ್ವಾನಕ್ಕೆ ವೀರಶೈವ ಮಠಾಧೀಶರ 11 ಷರತ್ತು

ದಾವಣಗೆರೆ: ಪ್ರತ್ಯೇಕ ಧರ್ಮ ವಿಚಾರವಾಗಿ ಬಹಿರಂಗ ಚರ್ಚೆ ನಡೆಸಲು ವೀರಶೈವ ಮಠಾಧೀಶರು ಷರತ್ತುಬದ್ಧ ಒಪ್ಪಿಗೆ ಸೂಚಿಸಿದ್ದಾರೆ ಎಂದು ಬಾಲೆಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದರು.

ನಗರದ ಅಭಿನವ ರೇಣುಕ ಮಂದಿರದಲ್ಲಿ ವಿವಿಧ ಗುರು–ವಿರಕ್ತ ಪರಂಪರೆಯ ವೀರಶೈವ ಲಿಂಗಾಯತ ಮಠಾಧೀಶರ ನೇತೃತ್ವದಲ್ಲಿ ಬುಧವಾರ ನಡೆದ ಸಭೆಯಲ್ಲಿ ಈ ಸಂಬಂಧ ಒಮ್ಮತದ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಪ್ರತ್ಯೇಕ ಧರ್ಮ ವಿಚಾರವಾಗಿ ಜನವರಿ 28, 29 ಅಥವಾ 31ರಂದು ಬೆಳಗಾವಿಯ ರುದ್ರಾಕ್ಷಿ ಮಠದಲ್ಲಿ ಬಹಿರಂಗ ಚರ್ಚೆಗೆ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ದಿನಾಂಕ ನಿಗದಿಗೊಳಿಸಿ ಆಹ್ವಾನ ನೀಡಿದ್ದರು. ಈ ದಿನಗಳಂದು ಮುಂಡರಗಿ ಜಾತ್ರೆ ಹಾಗೂ ಹುಣ್ಣಿಮೆ ಮಹೋತ್ಸವ ಇರುವುದರಿಂದ ಮಠಾಧೀಶರು ಕಡ್ಡಾಯವಾಗಿ ಪಾಲ್ಗೊಳ್ಳಬೇಕಾಗಿದೆ. ಹಾಗಾಗಿ, ಫೆ.1ರಂದು ಬೆಳಗಾವಿ ಬದಲು ಹುಬ್ಬಳ್ಳಿ ಅಥವಾ ಬೆಂಗಳೂರಿನಲ್ಲಿ ಸರ್ಕಾರಿ ಅಥವಾ ಅರೆ ಸರ್ಕಾರಿ ಜಾಗದಲ್ಲಿ ಸೂಕ್ತ ಭದ್ರತೆಯೊಂದಿಗೆ ಸಭೆ ಆಯೋಜಿಸಬೇಕು ಎಂಬ ಷರತ್ತು ಮುಂದಿಡಲಾಗಿದೆ.

ಸಭೆಯಲ್ಲಿ ಎರಡೂ ಬಣಗಳಿಂದ ತಲಾ 7 ಮಂದಿ ಭಾಗವಹಿಸಬೇಕು. ತಲಾ ಒಬ್ಬರು ಮುಖ್ಯಸ್ಥರು ಶಿಸ್ತು ಹಾಗೂ ಶಾಂತಿಯುತವಾಗಿ ಚರ್ಚೆ ನಡೆಯುವಂತೆ ಉಸ್ತುವಾರಿ ಹೊರಬೇಕು. ಸಂಪೂರ್ಣ ವಿಡಿಯೊ ಚಿತ್ರೀಕರಣ ನಡೆಸಬೇಕು. ವೀರಶೈವ ಲಿಂಗಾಯತ ಹಾಗೂ ಲಿಂಗಾಯತ ಕುರಿತಾಗಿ ಮಾತ್ರ ಚರ್ಚೆ ನಡೆಯಬೇಕು. ವ್ಯಕ್ತಿಗತ ಆರೋಪ ಹಾಗೂ ಪ್ರತ್ಯಾರೋಪಗಳಿಗೆ ಅವಕಾಶ ಇರಬಾರದು ಎಂದು ಸ್ವಾಮೀಜಿ ಹೇಳಿದರು.

ಹಿಂದೆ, ಅಖಿಲ ಭಾರತ ವೀರಶೈವ ಮಹಾಸಭಾ ಪ್ರತ್ಯೇಕ ಧರ್ಮದ ಮಾನ್ಯತೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮೂರು ಬಾರಿ ಮನವಿ ಸಲ್ಲಿಸಿತ್ತು. ವೀರಶೈವ ಪದ ಪ್ರಯೋಗದಿಂದಲೇ ಆ ಮನವಿಗಳು ತಿರಸ್ಕೃತಗೊಂಡಿದ್ದರೆ, ಸರ್ಕಾರದ ಆದೇಶ ಪ್ರತಿಗಳನ್ನು ಬಹಿರಂಗಪಡಿಸಬೇಕು. ಲಿಂಗಾಯತ ಪದಕ್ಕೆ ಮಾತ್ರ ಪ್ರತ್ಯೇಕ ಧರ್ಮ ಮಾನ್ಯತೆ ನೀಡುವುದಾಗಿ ಯಾರಾದರೂ ಅಧಿಕೃತ ಹೇಳಿಕೆ ಅಥವಾ ಒಪ್ಪಿಗೆ ನೀಡಿದ್ದರೆ ಅವುಗಳನ್ನೂ ನೀಡಬೇಕು ಎಂದು ಸ್ವಾಮೀಜಿ ಕೇಳಿದರು.

ಧರ್ಮಯುದ್ಧ:‌ ಸರ್ಕಾರವಾಗಲಿ, ರಾಜಕೀಯ ಪಕ್ಷಗಳಾಗಲಿ, ವೀರಶೈವ ಸಮುದಾಯದ ವಿಘಟನೆಗೆ ಕಾರಣವಾದರೆ, ಮುಂಬರುವ ಚುನಾ

ವಣೆಯಲ್ಲಿ ಮಠಗಳು ಧರ್ಮಯುದ್ಧ ಸಾರಬೇಕಾಗುತ್ತದೆ. ಭವಿಷ್ಯದಲ್ಲಿ ಯಾರೂ ಸಮಾಜವನ್ನು ಒಡೆಯುವ ಕೆಲಸಕ್ಕೆ ಕೈಹಾಕದಂತೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅವರು ಎಚ್ಚರಿಸಿದರು.

ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀಶೈಲ ಪೀಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ, ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಉಜ್ಜಯಿನಿ ಪೀಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಬಬಲೇಶ್ವರ ಶ್ರೀ,

ಬೆಂಗಳೂರಿನ ಸರ್ಪಭೂಷಣ ಮಠದ ಶ್ರೀ, ವಿಭೂತಿಮಠದ ಶ್ರೀ, ಕೊಟ್ಟೂರು, ಬಿಳಕಿ, ಅಮಿನಗಡ, ಮನಗೂಳಿ, ಹರಪನಹಳ್ಳಿ  ತೆಗ್ಗಿನಮಠ, ಬೀರೂರು, ಕಮತಗಿ, ದಿಂಡದಹಳ್ಳಿ, ರಟ್ಟಿಹಳ್ಳಿ, ರಾಂಪುರ, ಹೊಟ್ಯಾಪುರ ಮಠದ ಶ್ರೀಗಳು ಹಾಗೂ ಸಮಾಜದ ಮುಖಂಡರು ಸಭೆಯಲ್ಲಿ ಭಾಗ

ವಹಿಸಿದ್ದರು.

‘ಸರ್ಕಾರಕ್ಕೆ ಎಚ್ಚರಿಕೆ’

ಸರ್ಕಾರ ಸಮಾಜದ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದು, ಆತಂಕ ಸೃಷ್ಟಿಯಾಗಿದೆ. ಸಮಾಜವನ್ನು ಕೆರಳಿಸುವ, ಒಡೆಯುವ ಯತ್ನ ಸಿದ್ಧಗಂಗಾ ಶ್ರೀಗಳಿಗೆ ನೋವು ತಂದಿದೆ. ಇಂತಹ ಯತ್ನಗಳು ಮುಂದುವರಿದರೆ ಕಠಿಣ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಎಚ್ಚರಿಕೆ ನೀಡಿದರು.

ತಜ್ಞರ ಸಮಿತಿ ಕಾರ್ಯ ತಡೆಹಿಡಿದರೆ ಮಾತ್ರ ಚರ್ಚೆ

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗ ನೇಮಿಸಿರುವ ತಜ್ಞರ ಸಮಿತಿಯ ಕಾರ್ಯಗಳು ಆರಂಭವಾಗದಂತೆ ತಡೆಹಿಡಿದರೆ ಚರ್ಚೆಯಲ್ಲಿ ಭಾಗವಹಿಸುವುದಾಗಿ ಮಠಾಧೀಶರು ತಿಳಿಸಿದ್ದಾರೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಅವರು ತಿಳಿಸಿದರು.

*

‘ಹೊರಟ್ಟಿ ಸ್ವಾರ್ಥ ರಾಜಕಾರಣ’

ದಾವಣಗೆರೆ:
ಪ್ರತ್ಯೇಕ ಧರ್ಮ ವಿಚಾರವಾಗಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಸ್ವಾರ್ಥ ರಾಜಕಾರಣ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ರೇಣುಕ ಮಂದಿರದಲ್ಲಿ ಬುಧವಾರ ಮಾತನಾಡಿದ ಅವರು ‘ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವಾಗಿ ಬಿಜೆಪಿಯ ಶಾಸಕರ ಬೆಂಬಲ ಇದೆ ಎಂದು ಹೊರಟ್ಟಿ ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಪ್ರತ್ಯೇಕ ಧರ್ಮ ವಿಚಾರವಾಗಿ ಅಖಿಲ ಭಾರತ ವೀರಶೈವ ಮಹಾಸಭಾ, ಸಿದ್ಧಗಂಗಾ ಶ್ರೀಗಳು, ವೀರಶೈವ ಜಗದ್ಗುರುಗಳ ನಿಲುವಿಗೆ ಬದ್ಧವಾಗಿರುವುದಾಗಿ’ ತಿಳಿಸಿದರು.

‘ಬಿಜೆಪಿ ಶಾಸಕರು ಒಗ್ಗಟ್ಟಾಗಿದ್ದಾರೆ. ಹೊರಟ್ಟಿ ಅನಗತ್ಯವಾಗಿ ಗೊಂದಲ ಮೂಡಿಸಬಾರದು. ವೀರಶೈವ ಹಾಗೂ ಲಿಂಗಾಯತ ಒಂದೇ. ಕಾಂಗ್ರೆಸ್‌ ಪಕ್ಷ ಸಮಾಜವನ್ನು ಹಾಗೂ ಜಾತಿಯನ್ನು ಒಡೆಯುವ ಕೆಲಸ ಮಾಡುತ್ತಿದೆ’ ಎಂದು ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry