ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರೆರೆ... ಅವರೆಬೇಳೆ ಮೇಳ

Last Updated 3 ಜನವರಿ 2018, 19:30 IST
ಅಕ್ಷರ ಗಾತ್ರ

ಈಗ ನಗರದಲ್ಲಿ ಮಾಗಿಯ ಚಳಿಯದ್ದೇ ಕಾರುಬಾರು. ಕಬೋರ್ಡ್‌, ಬೀರುವಿನಲ್ಲಿ ಮೂಲೆಗೆ ಸೇರಿದ್ದ ಸ್ವೆಟರ್, ಟೋಪಿ, ಶಾಲು, ಮಫ್ಲರ್ ಎಲ್ಲವೂ ಹೊರಗೆ ಬಂದಿವೆ. ಅಂತೆಯೇ ನಾಲಗೆಯ ರುಚಿಮೊಗ್ಗುಗಳನ್ನು ಅರಳಿಸಲು ಅವರೆಬೇಳೆ ಮೇಳವೂ ಸಜ್ಜಾಗಿದೆ.

ಮಾಗಡಿ ಸೇರಿದಂತೆ ಇತರೆಡೆ ರೈತರು ಬೆಳೆದ ಅವರೆಕಾಯಿಗೆ ದೊಡ್ಡ ಮಾರುಕಟ್ಟೆ ಒದಗಿಸುವ ಅವರೆಬೇಳೆ ಮೇಳ ಜನವರಿ 4ರಿಂದ 15ರ ತನಕ ನಗರದ ವಿ.ವಿ.ಪುರದ ಆಹಾರ ಬೀದಿಯಲ್ಲಿ (ಫುಡ್ ಸ್ಟ್ರೀಟ್‌) ನಡೆಯಲಿದೆ.

ಒಟ್ಟು 12 ದಿನಗಳ ಕಾಲ ನಡೆಯಲಿರುವ ಈ ಮೇಳದಲ್ಲಿ ಅವರೆಕಾಯಿ, ಅವರೆಬೇಳೆಯದ್ದೇ ಪಾರುಪತ್ಯ. ಅವರೆಯ ಸೊಗಡಿನಲ್ಲಿ ವಿ.ವಿ.ಪುರದ ಆಹಾರ ಬೀದಿ ಮಿಂದೇಳುವ ಸಮಯವಿದು. ಅಂತೆಯೇ ಅವರೆಕಾಯಿ ಪ್ರಿಯರಿಗೆ ಈ ದಿನಗಳು ಬಗೆಬಗೆಯ ಆಹಾರ ಖಾದ್ಯಗಳನ್ನು ಒಂದೇ ಕಡೆ ಸವಿಯುವ ಸದವಕಾಶವೂ ಹೌದು.

17 ವರ್ಷಗಳಿಂದ ಅವರೆಬೇಳೆ ಮೇಳವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ ವಾಸವಿ ಕಾಂಡಿಮೆಂಟ್ಸ್‌ನ ಮಾಲೀಕರಾದ ಗೀತಾ ಶಿವಕುಮಾರ್. ‘ಅವರೇಕಾಯಿ ಬೆಳೆಗಾರರಿಗೆ ನೆರವಾಗುವ ನಿಟ್ಟಿನಲ್ಲಿ ಪ್ರತಿವರ್ಷವೂ ಅವರೆಮೇಳ ನಡೆಸುತ್ತಿದ್ದೇವೆ. ರೈತರಿಂದಲೇ ನೇರವಾಗಿ ಅವರೆ ಖರೀದಿಸುತ್ತೇವೆ. ಮಾರುಕಟ್ಟೆಗಿಂತ ಹೆಚ್ಚಿನ ಬೆಲೆ ರೈತರಿಗೆ ಸಿಗುವಂತಾಗಿದೆ’ ಎನ್ನುವುದು ಗೀತಾ ಅವರ ವಿವರಣೆ.

ಈ ಬಾರಿ ಮೇಳದಲ್ಲಿ ಅವರೆಕಾಯಿ ಸ್ಟಿಕ್ಸ್‌, ಬೀಟ್‌ರೂಟ್ ಅವರೆ ಸ್ಟೀಟ್, ಬೀನ್ಸ್ ಅವರೆ ಸ್ಟೀಟ್, ಕ್ಯಾರೆಟ್ ಅವರೆ ಸ್ಟೀಟ್, ಅವರೆಬೇಳೆ ಚೋಯಾ ಎನ್ನುವ ಐದು ಬಗೆಯ ಹೊಸ ರುಚಿಗಳನ್ನು ಪರಿಚಯಿಸುತ್ತಿದ್ದೇವೆ. ಅಷ್ಟೇ ಅಲ್ಲ ಅವರೆಕಾಯಿ ಇಡ್ಲಿ, ದೋಸೆ, ಪಾಯಸ, ಚಕ್ಕುಲಿ, ನಿಪ್ಪಟ್ಟು, ಹಿತಕಬೇಳೆ ಸಾರು, ಗೋಡಂಬಿ ಹಿತಕಬೇಳೆ, ಒತ್ತು ಶಾವಿಗೆ ಅವರೆಕಾಳು, ಹಿತಕಬೇಳೆ ಮಸಾಲೆ ವಡೆ, ಎಳ್ಳವರೆ, ಪೆಪ್ಪರ್ ಹಿತಕಬೇಳೆ, ಬೆಳ್ಳುಳ್ಳಿ ಹಿತಕಬೇಳೆ, ಹಿತಕಬೇಳೆ ಜಾಮೂನು ಸೇರಿದಂತೆ ಒಟ್ಟು 100 ಬಗೆಯ ಆಹಾರ ಭಕ್ಷ್ಯಗಳು ಅವರೆ ಪ್ರಿಯರ ನಾಲಗೆಯ ರುಚಿಮೊಗ್ಗುಗಳನ್ನು ತಣಿಸಲಿವೆ.

‘24 ವರ್ಷಗಳಿಂದ ವಾಸವಿ ಕಾಂಡಿಮೆಂಟ್ಸ್ ನಡೆಸುತ್ತಿದ್ದೇನೆ. ಮೇಳ ಆರಂಭಿಸಿ 17 ವರ್ಷಗಳಾದವು. ಆರಂಭದಲ್ಲಿ ಮನೆಯಲ್ಲಿ ಅವರೆಕಾಯಿ, ಅವರೆಬೇಳೆ ತಿನಿಸುಗಳನ್ನು ಮಾಡುತ್ತಿದ್ದೆ. ಆಗೆಲ್ಲಾ ಬರೀ 50 ಕೆಜಿಯಷ್ಟು ಮಾತ್ರ ಅವರೆಕಾಯಿ ಖರ್ಚಾಗುತ್ತಿತ್ತು. ಈಗ 10 ಟನ್ ಅವರೆಕಾಯಿ ಖರ್ಚಾಗುತ್ತದೆ. ವರ್ಷದಿಂದ ವರ್ಷಕ್ಕೆ ಅವರೆಕಾಯಿ ಅವಕ ಹೆಚ್ಚುತ್ತಿದೆ. ಅಂತೆಯೇ ಗ್ರಾಹಕರ ಸಂಖ್ಯೆಯೂ. ಅದಕ್ಕಾಗಿ ಈ ಬಾರಿ ಮಲ್ಲೇಶ್ವರ (ಜ.19ರಿಂದ 28) ಮತ್ತು ನಾಗರಬಾವಿಯಲ್ಲೂ (ಫೆ. 2ರಿಂದ 11) ಮೇಳ ಆಯೋಜಿಸಿದ್ದೇವೆ’ ಎನ್ನುತ್ತಾ ಮೇಳದ ಯಶಸ್ಸನ್ನು ಬಿಚ್ಚಿಡುತ್ತಾರೆ ಅವರು.

30 ವರ್ಷಗಳಿಂದ ಅವರೆ ಬೆಳೆಯುತ್ತಿದ್ದೇನೆ. ವಿ.ವಿ.ಪುರದಲ್ಲಿ ಪ್ರತಿವರ್ಷವೂ ನಡೆಸುವ ಅವರೆ ಮೇಳದಲ್ಲಿ ತಪ್ಪದೇ ಭಾಗವಹಿಸುತ್ತಿದ್ದೇನೆ. ಈ ಬಾರಿ ಮೇಳದಲ್ಲಿ 20 ಸಾವಿರ ಲೀಟರ್ ಅವರೆಬೇಳೆ ಮಾರಾಟವಾಗುವ ನಿರೀಕ್ಷೆ ಇದೆ. ಹಿತಕಿದಅವರೆ ಕೆಜಿಗೆ ₹ 160, ಲೀಟರ್‌ಗೆ ₹ 140, ಅವರೆಕಾಳು ಕೆಜಿಗೆ ₹ 150, ಲೀಟರ್‌ಗೆ ₹ 120 ಹಾಗೂ ಒಣಗಿದ ಅವರೆಕಾಳು ಕೆಜಿಗೆ ₹ 600, ಲೀಟರ್‌ಗೆ ₹ 400 ಧಾರಣೆ ಇದೆ ಎನ್ನುತ್ತಾರೆ ಮಾಗಡಿಯ ರೈತ ಕೆಂಪತಿಮ್ಮೇಗೌಡ.

ಅವರೆಮೇಳದಿಂದ ಚಿಕ್ಕಮಗಳೂರು, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಮುಳಬಾಗಿಲು, ಕೋಲಾರ, ಚಿಂತಾಮಣಿ, ಮಾಗಡಿ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಿಂದ ಅವರೆ ಬೆಳೆಗಾರರಿಗೆ ಲಾಭವಾಗುತ್ತಿದೆ. ಗ್ರಾಹಕರಿಗೂ ಒಂದೇ ಕಡೆ ಬಗೆಬಗೆಯ ಅವರೆಕಾಯಿ, ಬೇಳೆಗಳು ಮತ್ತು ಖಾದ್ಯಗಳು ಸಿಗುತ್ತದೆ. ರೈತ, ಗ್ರಾಹಕರ ಸಂತೃಪ್ತಿಯೇ ನಮ್ಮ ನಿಜವಾದ ಯಶಸ್ಸು. ಗ್ರಾಹಕರು 20 ರೂಪಾಯಿನೇ ಕೊಡಲಿ ಆದರೆ, ಅವರಿಗೆ ರುಚಿ ಮತ್ತು ಗುಣಮಟ್ಟದಲ್ಲಿ ಯಾವುದೇ ವ್ಯತ್ಯಯ ಆಗಬಾರದೆಂಬುದು ನನ್ನ ಕಾಳಜಿ. ಅವರೆಕಾಯಿ ಖಾದ್ಯಗಳನ್ನು ನನ್ನಿಂದ ಕಲಿತವರು ಹಳಬರೇ ನಮ್ಮಲ್ಲಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ, ನಾನು ಹೆಚ್ಚು ಶ್ರಮ ವಹಿಸಬೇಕಾಗಿಲ್ಲ. ಅವರೇ ಎಲ್ಲವನ್ನೂ ನಿಭಾಯಿಸುತ್ತಾರೆ. ಆದರೂ ಆಹಾರದ ಗುಣಮಟ್ಟ, ರುಚಿ ಆಗಾಗ್ಗೆ ಪರೀಕ್ಷಿಸುತ್ತಿರುತ್ತೇನೆ. ಮೂಲಸೌಕರ್ಯ ಕಲ್ಪಿಸಿಕೊಟ್ಟರೆ ರಾಜ್ಯದ ಇತರ ಕಡೆಗಳಲ್ಲೂ ಅವರೆಮೇಳ ನಡೆಸಲು ಸೈ’ ಎನ್ನುತ್ತಾ ಆತ್ಮವಿಶ್ವಾಸದ ನಗು ಬೀರುತ್ತಾರೆ ಗೀತಾ.

***

ಅವರೆಮೇಳ ಮತ್ತು ವಾಸವಿ ಆನ್‌ಲೈನ್ ಸ್ಟೋರ್‌ಗೆ ಚಾಲನೆ: ಉದ್ಘಾಟನೆ– ಗುರು ದ್ವಾರಕನಾಥ್, ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಆರ್.ವಿ.ದೇವರಾಜ್, ಪ್ರಿಯಕೃಷ್ಣ, ಮೇಯರ್ ಸಂಪತ್‌ರಾಜ್, ಅತಿಥಿ–ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧಾ, ಉದಯ ಗರುಡಾಚಾರ್, ಕೋಡಿಹಳ್ಳಿ ಚಂದ್ರಶೇಖರ್, ವಾಣಿ ವಿ.ರಾವ್, ಸುನೀಲ್ ಕುಮಾರ್, ಡಾ.ರಾಜಪ್ಪ, ಡಾ.ಶರಣಪ್ಪ, ತಿಮ್ಮಯ್ಯ, ಮಹಾಂತೇಶ್ ರೆಡ್ಡಿ, ಶರವಣ, ಎಸ್‌. ದೊಡ್ಡಣ್ಣ, ರಮೇಶ್ ಭಟ್, ಚಿರಂಜೀವಿ ಸರ್ಜಾ, ಮಯೂರಿ, ರೂಪಿಕಾ, ಪಟಾಕಿ ಶ್ರುತಿ, ಮಮತಾ ಆರ್‌.ವಿ. ದೇವರಾಜ್, ಪಿ.ಆರ್.ರಮೇಶ್, ಉದಯಶಂಕರ್, ಕೃಷ್ಣಾರೆಡ್ಡಿ, ಬಿ.ಪಿ.ದಿನೇಶ್‌, ವೇದವ್ಯಾಸಭಟ್, ಆಯೋಜನೆ– ಶ್ರೀವಾಸವಿ ಕಾಂಡಿಮೆಂಟ್ಸ್‌, ಸ್ಥಳ–ನಂ.2, ಫುಡ್ ಸ್ಟ್ರೀಟ್, ಸಜ್ಜನರಾವ್ ವೃತ್ತ, ವಿ.ವಿ.ಪುರಂ, ಬೆಳಿಗ್ಗೆ 11ರಿಂದ ರಾತ್ರಿ 10ರವರೆಗೆ. ಜನವರಿ 15ರವರೆಗೆ ಮೇಳ ನಡೆಯಲಿದೆ. ಆನ್‌ಲೈನ್ ಸ್ಟೋರ್: www.vasavi.store

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT