ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದಾಯಿ: ಬಿಜೆಪಿಯಿಂದ ನರಗುಂದ ಬಂದ್‌

ಕಾಂಗ್ರೆಸ್‌ ವಿರುದ್ಧ ಆಕ್ರೋಶ; 12 ತಾಸು ಹೆದ್ದಾರಿ ತಡೆ; ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ
Last Updated 3 ಜನವರಿ 2018, 19:30 IST
ಅಕ್ಷರ ಗಾತ್ರ

ನರಗುಂದ (ಗದಗ ಜಿಲ್ಲೆ): ಮಹದಾಯಿ ಸಮಸ್ಯೆ ಇತ್ಯರ್ಥಪಡಿಸಲು ಬಿಜೆಪಿ ಪ್ರಯತ್ನಿಸುತ್ತಿದ್ದರೆ, ಗೋವಾ ಕಾಂಗ್ರೆಸ್‌ ಅದಕ್ಕೆ ಅಡ್ಡಗಾಲು ಹಾಕುತ್ತಿದೆ ಎಂದು ಆರೋಪಿಸಿ, ಬುಧವಾರ ಬಿಜೆಪಿ ಕರೆ ನೀಡಿದ್ದ ನರಗುಂದ ಬಂದ್‌ ಯಶಸ್ವಿಯಾಯಿತು.

ಪಕ್ಷದ ಕಾರ್ಯಕರ್ತರು ಹುಬ್ಬಳ್ಳಿ–ವಿಜಯಪುರ ರಾಷ್ಟ್ರೀಯ ಹೆದ್ದಾರಿಗೆ ಅಡ್ಡವಾಗಿ ಪೈಪ್‌ಗಳನ್ನು ಇಟ್ಟು, ಟೈರ್‌ಗೆ ಬೆಂಕಿ ಹಚ್ಚಿದರು. ಬೆಳಿಗ್ಗೆ 6ರಿಂದ ಸಂಜೆ 6ವರೆಗೆ ಹೆದ್ದಾರಿ ತಡೆ ನಡೆಸಿದರು. ಇದರಿಂದ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಪ್ರಯಾಣಿಕರು ಪರದಾಡಿದರು.

ಸವದತ್ತಿ ಯಲ್ಲಮ್ಮ, ಬಾದಾಮಿ ಬನಶಂಕರಿ ಜಾತ್ರೆ ಮುಗಿಸಿಕೊಂಡು ನರಗುಂದ ಮಾರ್ಗವಾಗಿ ಊರಿಗೆ ಮರಳುತ್ತಿದ್ದ ನೂರಾರು ಜನರು ತೀವ್ರ ತೊಂದರೆ ಅನುಭವಿಸಿದರು. ನರಗುಂದ ಪಟ್ಟಣದಿಂದ 10 ಕಿ.ಮೀ ದೂರದಲ್ಲಿರುವ ಆಚಮಟ್ಟಿ ಕ್ರಾಸ್‌, ಯಾವಗಲ್‌, ಬೆಳವಣಕಿ ಮಾರ್ಗವಾಗಿ ಹೆಚ್ಚುವರಿಯಾಗಿ 40 ಕಿ.ಮೀ ಸುತ್ತಿಕೊಂಡು ವಾಹನಗಳು ನವಲಗುಂದ ಕಡೆ ತೆರಳಿದವು. ಸಾರಿಗೆ ಸಂಸ್ಥೆಯ ಕೆಲವು ಬಸ್‌ಗಳು ಕೊಣ್ಣೂರು ಮಾರ್ಗವಾಗಿ ಸಂಚರಿಸಿದವು. ಎತ್ತಿನ ಗಾಡಿಗಳಲ್ಲಿ ಜಾತ್ರೆಗೆ ಹೋಗಿದ್ದ ಭಕ್ತರು ದಟ್ಟಣೆಯಲ್ಲಿ ಸಿಲುಕಿಕೊಂಡು ತೊಂದರೆ ಅನುಭವಿಸಿದರು.

ಬಂದ್‌ ಪರಿಣಾಮ ದಿನವಿಡೀ ಅಂಗಡಿ ಮುಂಗಟ್ಟುಗಳು ತೆರೆಯಲಿಲ್ಲ. ಕೆಲವು ಅಂಗಡಿಗಳನ್ನು ಪ್ರತಿಭಟನಾಕಾರರೇ ಬಲವಂತವಾಗಿ ಮುಚ್ಚಿಸಿದರು. ಬಸ್‌ ನಿಲ್ದಾಣ ಬಿಕೋ ಎನ್ನುತ್ತಿತ್ತು. ಶಾಲೆ, ಕಾಲೇಜುಗಳಲ್ಲಿ ಅಘೋಷಿತ ರಜೆ ವಾತಾವರಣ ಇತ್ತು. ಮಧ್ಯಾಹ್ನ ಪುರಸಭೆ ಕಚೇರಿ ಆವರಣದಿಂದ ಹೊರಟ ಪ್ರತಿಭಟನಾ ಮೆರವಣಿಗೆ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಹದಾಯಿ ಧರಣಿ ವೇದಿಕೆಯ ಸಮೀಪ ರೈತ ವೀರಗಲ್ಲಿನ ಬಳಿ ಹಾಕಿದ್ದ ವೇದಿಕೆಯಲ್ಲಿ ಸಮಾರೋಪಗೊಂಡಿತು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಶಾಸಕ ಬಸವರಾಜ ಬೊಮ್ಮಾಯಿ, ‘ಮಹದಾಯಿ ಯೋಜನೆಗೆ ಬಿಜೆಪಿ ಎಂದೂ ವಿರೋಧಿ ಅಲ್ಲ. ಯಾರೇ ಹೋರಾಟ ಮಾಡಲಿ ಅದಕ್ಕೆ ನಮ್ಮ ಬೆಂಬಲವಿದೆ. ಕಳಸಾ ಬಂಡೂರಿ ನೀರು ಬರುವ ಜಾಗದಲ್ಲಿ ತಡೆಗೋಡೆ ಕಟ್ಟಿದ ಕಾಂಗ್ರೆಸ್‌ ಪಕ್ಷಕ್ಕೆ, ನಿಜವಾಗಲೂ ತಾಕತ್ತಿದ್ದರೆ ಕಟ್ಟಿದ ತಡೆಗೋಡೆ ಒಡೆದು, ಅದರಿಂದ ಬರುವ ನೀರನ್ನಾದರೂ ಪಡೆಯಲು ಪ್ರಯತ್ನಿಸಬೇಕು’ ಎಂದು ಲೇವಡಿ ಮಾಡಿದರು.

‘ಕಳಸಾ ಬಂಡೂರಿಗಾಗಿ ಹಗಲಿರುಳು ಶ್ರಮಿಸಿದ್ದೇನೆ. ಅದಕ್ಕಾಗಿಯೇ ನಮಗೆ ಕೇಳುವ ಹಾಗೂ ಹೇಳುವ ನೈತಿಕತೆ ಇದೆ. ಇದನ್ನು ಕೇಳುವ ನೈತಿಕತೆ ಕಾಂಗ್ರೆಸ್‌ಗೆ ಇಲ್ಲ’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಸಿ ಪಾಟೀಲ ಮಾತನಾಡಿ, ‘ಬಿ.ಎಸ್‌.ಯಡಿಯೂರಪ್ಪ ಪ್ರಾಮಾಣಿಕ ಪ್ರಯತ್ನ ಮಾಡಿ, ಗೋವಾ ಮುಖ್ಯಮಂತ್ರಿ ಪರ್ರೀಕರ್ ಅವರನ್ನು ಒಪ್ಪಿಸಿದ್ದಾರೆ. ಆದರೆ, ಮತ್ತೆ ಕಾಂಗ್ರೆಸ್‌ ತಗಾದೆ ತೆಗೆದಿದೆ. ಜೊತೆಗೆ ಮಹದಾಯಿ ಹೋರಾಟಗಾರರನ್ನು ಬಿಜೆಪಿ ವಿರುದ್ಧ ಎತ್ತಿಕಟ್ಟುತ್ತಿದೆ’ ಎಂದು ಆರೋಪಿಸಿದರು.

ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರ ಸಭೆ
‘ಮಹದಾಯಿ ಸಮಸ್ಯೆಯನ್ನು ಇತ್ಯರ್ಥಪಡಿಸಲು, ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಸರ್ವಪಕ್ಷ ಸಭೆ ಕರೆಯಬೇಕು. ಇದೇ 31ರ ಒಳಗಾಗಿ ಪ್ರಧಾನಿ ಬಳಿಗೆ ಮತ್ತೊಮ್ಮೆ ನಿಯೋಗ ಕೊಂಡೊಯ್ಯಬೇಕು. ಇದು ಸಾಧ್ಯವಾಗದಿದ್ದರೆ ಸರ್ವ ಪಕ್ಷಗಳ ಜತೆಗೆ ಮಹದಾಯಿ ಹೋರಾಟದಲ್ಲಿ ಸಿದ್ದರಾಮಯ್ಯ ಅವರೂ ಭಾಗವಹಿಸಬೇಕು’ ಎಂದು ನರಗುಂದದಲ್ಲಿ ಬುಧವಾರ ನಡೆದ ರೈತರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ರೈತ ಸೇನೆ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಪ್ರಕಟಿಸಿದರು.

9 ತಾಲ್ಲೂಕುಗಳ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ 300ಕ್ಕೂ ಹೆಚ್ಚು ರೈತರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

ಹುಬ್ಬಳ್ಳಿಯಲ್ಲಿ ಹೆದ್ದಾರಿ ತಡೆ
ಹುಬ್ಬಳ್ಳಿ:
ಮಲಪ್ರಭಾ– ಮಹದಾಯಿ ನದಿ ಜೋಡಣೆ ಯೋಜನೆ ಜಾರಿಗೆ ಆಗ್ರಹಿಸಿ, ‘ಮಲಪ್ರಭಾ, ಮಹದಾಯಿ, ಕಳಸಾ–ಬಂಡೂರಿ ರೈತ ಹೋರಾಟ ಒಕ್ಕೂಟ ಸಮಿತಿ’ ಸದಸ್ಯರು ಬುಧವಾರ ನಗರದ ಹೊರವಲಯದ ಗಬ್ಬೂರು ಬಳಿ ಮುಕ್ಕಾಲು ತಾಸು ಪುಣೆ– ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಿ ಪ್ರತಿಭಟಿಸಿದರು.

ರಾಷ್ಟ್ರೀಯ ಹೆದ್ದಾರಿ ಸೇರಿದಂತೆ, ಬೈಪಾಸ್ ಸಂಪರ್ಕಿಸುವ ನಗರದ ರಸ್ತೆಗಳಲ್ಲಿಯೂ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಸಂಚಾರ ಅಸ್ತವ್ಯಸ್ತವಾಯಿತು.

*
ನಮ್ಮ ಹೋರಾಟ ಯಾರ ವಿರುದ್ಧವೂ ಅಲ್ಲ, ನೀರಿಗಾಗಿ ಮಾತ್ರ. ಜ.31ರೊಳಗೆ ಪ್ರಧಾನಿ ಬಳಿಗೆ ನಿಯೋಗ ಕೊಂಡೊಯ್ಯದಿದ್ದರೆ ಮುಖ್ಯಮಂತ್ರಿ ನಿವಾಸದ ಎದುರು ಧರಣಿ ನಡೆಸುವುದು ನಿಶ್ಚಿತ.
–ವೀರೇಶ ಸೊಬರದಮಠ,
ರೈತ ಸೇನೆ ರಾಜ್ಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT