ಕೊಹ್ಲಿ, ದೋನಿ, ರೋಹಿತ್ ಸ್ಥಾನ ಭದ್ರ

7
ಐಪಿಎಲ್‌ 11ನೇ ಆವೃತ್ತಿಯ ಚಟುವಟಿಕೆ ಇಂದು ಆರಂಭ

ಕೊಹ್ಲಿ, ದೋನಿ, ರೋಹಿತ್ ಸ್ಥಾನ ಭದ್ರ

Published:
Updated:
ಕೊಹ್ಲಿ, ದೋನಿ, ರೋಹಿತ್ ಸ್ಥಾನ ಭದ್ರ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್‌) 11ನೇ ಆವೃತ್ತಿಯ ಚಟುವಟಿಕೆ, ಆಟಗಾರರನ್ನು ಉಳಿಸಿಕೊಳ್ಳುವ ಪ್ರಕ್ರಿಯೆಯೊಂದಿಗೆ ಗುರುವಾರ ಆರಂಭವಾಗಲಿದೆ.

ಮುಂಬೈನಲ್ಲಿ ಸಂಜೆ ಏಳು ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಆಯಾ ಫ್ರಾಂಚೈಸ್‌ಗಳು ತಂಡದಲ್ಲಿ ಉಳಿಸಿಕೊಳ್ಳುವ ಆಟಗಾರರ ವಿವರಗಳನ್ನು ಬಹಿರಂಗಗೊಳಿಸಲಿವೆ.

ಪ್ರತಿ ಫ್ರಾಂಚೈಸಿಗೂ ಈ ಹಿಂದೆ ತಂಡದಲ್ಲಿ ಆಡಿದ ಮೂವರನ್ನು ಉಳಿಸಿಕೊಳ್ಳುವ ಅವಕಾಶವಿದೆ. ಇಷ್ಟು ಮಾತ್ರವಲ್ಲದೆ ಇದೇ ತಿಂಗಳ 27 ಮತ್ತು 28ರಂದು ಬೆಂಗಳೂರಿನಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ಮತ್ತೆ ಇಬ್ಬರನ್ನು ಉಳಿಸಿಕೊಳ್ಳಲು ಅವಕಾಶ ಸಿಗಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಾಯಕ ವಿರಾಟ್ ಕೊಹ್ಲಿ ಅವರನ್ನು ಉಳಿಸಿಕೊಳ್ಳುವುದರಲ್ಲಿ ಯಾವುದೇ ಸಂದೇಹ ಇಲ್ಲ. ವರ್ಷದಿಂದ ವರ್ಷಕ್ಕೆ ದಾಖಲೆಗಳ ಸರಮಾಲೆ ಹೆಣೆಯುತ್ತಿರುವ ಕೊಹ್ಲಿ ಅವರನ್ನು ಬಿಟ್ಟುಕೊಡಲು ಯಾವುದೇ ಕಾರಣಕ್ಕೂ ಆರ್‌ಸಿಬಿ ಮುಂದಾಗಲಾರದು. ಎಬಿ ಡಿವಿಲಿಯರ್ಸ್ ಮತ್ತು ಯಜುವೇಂದ್ರ ಚಾಹಲ್ ಮೇಲೆಯೂ ಆರ್‌ಸಿಬಿ ಕಣ್ಣಿಟ್ಟಿದೆ.

ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ಕೂಡ ನಾಯಕ ರೋಹಿತ್ ಶರ್ಮಾ ಅವರನ್ನು ಬಿಟ್ಟುಕೊಡಲು ಸಿದ್ಧವಿಲ್ಲ. ಪಾಂಡ್ಯ ಸಹೋದರರಾದ ಹಾರ್ದಿಕ್ ಪಾಂಡ್ಯ ಮತ್ತು ಕೃಣಾಲ್ ಪಾಂಡ್ಯ ಅವರನ್ನು ಕೂಡ ಉಳಿಸಿಕೊಳ್ಳಲು ತಂಡ ಮುಂದಾಗಿದೆ. ಡೆಲ್ಲಿ ಡೇರ್‌ಡೆವಿಲ್ಸ್ ರಿಷಭ್ ಪಂತ್‌ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಉಳಿಸಿಕೊಳ್ಳಲು ಮುಂದಾಗಬಹುದು. ರಾಜಸ್ತಾನ ರಾಯಲ್ಸ್‌ ಸ್ಟೀವ್ ಸ್ಮಿತ್ ಅವರನ್ನು ಉಳಿಸಿಕೊಳ್ಳಬಹುದು.

ಅಮಾನತು ಶಿಕ್ಷೆ ಮುಗಿಸಿದ ಚೆನ್ನೈ ಸೂಪರ್ ಕಿಂಗ್ಸ್‌ಗೆ ನಾಯಕ ಮಹೇಂದ್ರ ಸಿಂಗ್ ದೋನಿ ಆಧಾರಸ್ತಂಭವಾಗಿದ್ದು ಅವರೊಂದಿಗೆ ಸುರೇಶ್ ರೈನಾ ಮತ್ತು ರವೀಂದ್ರ ಜಡೇಜ ಅವರ ಮೇಲೆಯೂ ವಿಶ್ವಾಸವಿರಿಸುವ ಸಾಧ್ಯತೆ ಇದೆ.

ಕಿಂಗ್ಸ್‌ಗೆ ಮ್ಯಾಕ್ಸ್‌ವೆಲ್ ಆಧಾರ

ಕಿಂಗ್ಸ್ ಇಲೆವನ್ ಪಂಜಾಬ್‌ ತಂಡವನ್ನು ಕಳೆದ ಬಾರಿ ಮುನ್ನಡೆಸಿದ ಗ್ಲೆನ್ ಮ್ಯಾಕ್ಸ್‌ವೆಲ್‌ ಈ ಬಾರಿಯೂ ಸ್ಥಾನ ಭದ್ರಗೊಳಿಸುವ ಸಾಧ್ಯತೆಗಳಿದ್ದು ಇಯಾನ್ ಮಾರ್ಗನ್‌ ಕಡೆಗೂ ತಂಡ ಗಮನ ಹರಿಸಿದೆ. ಅಕ್ಷರ್ ಪಟೇಲ್‌, ವೃದ್ಧಿಮಾನ್ ಸಹಾ ಮತ್ತು ಸಂದೀಪ್‌ ಸಿಂಗ್‌ ಅವರನ್ನು ಹರಾಜು ಸಂದರ್ಭದಲ್ಲಿ ಉಳಿಸಿಕೊಳ್ಳಲು ತಂಡ ಮುಂದಾಗುವ ಸಾಧ್ಯತೆ ಇದೆ.

ಏಳು ವರ್ಷಗಳಿಂದ ಕೋಲ್ಕತ್ತ ನೈಟ್ ರೈಡರ್ಸ್‌ ಜೊತೆ ಇರುವ ಗೌತಮ್ ಗಂಭೀರ್‌ ಕಳೆದ ಬಾರಿ ತಂಡದ ಪರ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರ ಆಗಿದ್ದರು. ಈ ಬಾರಿ ರಣಜಿ ಟೂರ್ನಿಯಲ್ಲೂ ಅಪೂರ್ವ ಸಾಧನೆ ಮಾಡಿದ್ದಾರೆ. ಆದ್ದರಿಂದ ಈ ಬಾರಿಯೂ ತಂಡದಲ್ಲಿ ಅವರ ಸ್ಥಾನ ಗಟ್ಟಿಯಾಗಲಿದೆ. ಕ್ರಿಸ್ ಲಿನ್, ಸುನಿಲ್ ನಾರಾಯಣ್‌, ಮನೀಷ್ ಪಾಂಡೆ, ಕುಲದೀಪ್ ಯಾದವ್ ಮತ್ತು ರಾಬಿನ್ ಉತ್ತಪ್ಪ ಅವರ ಭವಿಷ್ಯ ಏನೆಂದು ಗುರುವಾರ ಬಹುತೇಕ ತಿಳಿಯಲಿದೆ.

ಆಕ್ರಮಣಕಾರಿ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಶಿಖರ್ ಧವನ್ ಮತ್ತು ಡೇವಿಡ್ ವಾರ್ನರ್‌ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪ್ರಮುಖ ಆದ್ಯತೆ ಆಗಲಿದ್ದಾರೆ. ತಮಿಳುನಾಡಿನ ವಿಜಯ್ ಶಂಕರ್ ಅವರಿಗೂ ಗುರುವಾರ ಅವಕಾಶ ಸಿಗುವ ಸಾಧ್ಯತೆ ಇದೆ.

ಕಾರ್ಯಕ್ರಮ ಆರಂಭ: ಸಂಜೆ 7 ಗಂಟೆಗೆ

ನೇರ ಪ್ರಸಾರ: ಸ್ಟಾರ್ ನೆಟ್‌ವರ್ಕ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry