ಬಿಡಿಎ ಅಧಿಕಾರಿಗೆ ₹ 25 ಸಾವಿರ ದಂಡ

7
ನಿವೇಶನ ಹಂಚಿಕೆ ರದ್ದು ಪ್ರಕರಣ: ಇಲಾಖಾ ವಿಚಾರಣೆಗೆ ಹೈಕೋರ್ಟ್‌ ಆದೇಶ

ಬಿಡಿಎ ಅಧಿಕಾರಿಗೆ ₹ 25 ಸಾವಿರ ದಂಡ

Published:
Updated:
ಬಿಡಿಎ ಅಧಿಕಾರಿಗೆ ₹ 25 ಸಾವಿರ ದಂಡ

ಬೆಂಗಳೂರು: ಮಂಜೂರಾಗಿದ್ದ ನಿವೇಶನ ಹಂಚಿಕೆಯನ್ನು ರದ್ದು ಮಾಡಿದ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕ್ರಮಕ್ಕೆ ಚಾಟಿ ಬೀಸಿರುವ ಹೈಕೋರ್ಟ್‌ ಬಿಡಿಎ ಉಪ ಕಾರ್ಯದರ್ಶಿ ಎಂ. ನಾಗರಾಜ್‌ ಅವರಿಗೆ ₹ 25 ಸಾವಿರ ದಂಡ ವಿಧಿಸಿದೆ.

ಈ ಕುರಿತಂತೆ ನಗರದ ಭಾರತಿ ಲೇಔಟ್‌ ನಿವಾಸಿ ಮಂಜುನಾಥ ಶೆಟ್ಟಿ ಎಂಬುವರು ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.

ಪ್ರಕರಣವೇನು?: ವಲಗೇರಹಳ್ಳಿ ಗ್ರಾಮದ ಸರ್ವೇ ನಂ.26/2ರಲ್ಲಿ ಜಮೀನು ವಶಪಡಿಸಿಕೊಂಡಿದ್ದ ಬಿಡಿಎ ಜಮೀನು ಮಾಲೀಕ ಗಿಡದಕೋನೇನಹಳ್ಳಿಯ ಎಂ.ಮುನಿಕೃಷ್ಣಪ್ಪ ಎಂಬುವರಿಗೆ ಪರಿಹಾರ ರೂಪದಲ್ಲಿ ಎಚ್‌ಎಸ್ಆರ್ ಬಡಾವಣೆಯ ಮೂರನೇ ಹಂತದಲ್ಲಿ 222.95 ಚದರ ಅಡಿಯ ನಿವೇಶನ ನೀಡಿತ್ತು.  2013ರ ಜೂನ್‌ 7ರಂದು ಈ ನಿವೇಶನಕ್ಕೆ ಕ್ರಯಪತ್ರ ಮಂಜೂರಾಗಿತ್ತು.

ಮುನಿಕೃಷ್ಣಪ್ಪ ಈ ನಿವೇಶನವನ್ನು 2014ರ ಜನವರಿ 17ರಂದು ಮಂಜುನಾಥ ಶೆಟ್ಟಿ ಅವರಿಗೆ ₹ 1 ಕೋಟಿ 20 ಲಕ್ಷಕ್ಕೆ ಮಾರಾಟ ಮಾಡಿದ್ದರು.

‘ಏತನ್ಮಧ್ಯೆ ಮುನಿಕೃಷ್ಣಪ್ಪ ವಲಗೇರಿಹಳ್ಳಿ ಜಮೀನಿನ ಹಕ್ಕುದಾರಿಕೆ ಸಮರ್ಥಿಸಿ ನೀಡಿರುವ ದಾಖಲೆಗಳು ನಕಲಿಯಾಗಿವೆ’ ಎಂದು ಆರೋಪಿಸಿ ಜಗನ್ನಾಥ್ ಎಂಬುವರು ಬಿಡಿಎಗೆ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಬಿಡಿಎ ಮುನಿಕೃಷ್ಣಪ್ಪ ಅವರಿಗೆ ನೀಡಿದ್ದ ಬದಲಿ ನಿವೇಶನದ ಮೂಲ ಕ್ರಯಪತ್ರವನ್ನು 2015ರ ಫೆಬ್ರುವರಿ 27ರಂದು ರದ್ದುಪಡಿಸಿತ್ತು.

ಈ ಕ್ರಮವನ್ನು ಪ್ರಶ್ನಿಸಿ ಮಂಜುನಾಥ ಶೆಟ್ಟಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ‘ನೋಂದಣಿ ಕಾಯ್ದೆ ಕಲಂ 88(1)ರ ಅಡಿಯಲ್ಲಿ ಖರೀದಿದಾರ ಅಥವಾ ಮಾರಾಟಗಾರರಿಗೆ ಮುಂಚಿತವಾಗಿ ಯಾವುದೇ ನೋಟಿಸ್‌ ನೀಡದೆ ಬಿಡಿಎ ಕೈಗೊಂಡಿರುವ ಕ್ರಮ ಕಾನೂನು ಬಾಹಿರವಾಗಿದೆ’ ಎಂದು ಆಕ್ಷೇಪಿಸಿದ್ದರು.

ಇದೀಗ ಪ್ರಕರಣದ ಕುರಿತಂತೆ ತೀರ್ಪು ನೀಡಿರುವ ನ್ಯಾಯಮೂರ್ತಿ ವೀರಪ್ಪ ಅವರು, ‘ಮಂಜುನಾಥ ಶೆಟ್ಟಿ ಅವರಿಗೆ ನಿವೇಶನ ನೋಂದಣಿ ಮಾಡಿದ ಅಧಿಕಾರಿ ದಾಖಲೆಗಳ ಪೂರ್ವಾಪರ ಪರಿಶೀಲನೆಯಲ್ಲಿ ತಪ್ಪೆಸಗಿದ್ದಾರೆ. ಆದ್ದರಿಂದ ಸ್ಥಿರಾಸ್ತಿ ನೋಂದಣಿ ಮಾಡಿದ ಎಡಿಆರ್ ವಿರುದ್ಧ ಇಲಾಖಾ ವಿಚಾರಣೆ ನಡೆಸಬೇಕು’ ಎಂದು ನಿರ್ದೇಶಿಸಿದ್ದಾರೆ.

‘ಜನಸಾಮಾನ್ಯರು ಒಂದು ನಿವೇಶನ ಖರೀದಿಸಬೇಕು ಎಂದರೆ ಅದಕ್ಕೆ ಅವರ ಜೀವಮಾನದ ಆದಾಯವನ್ನೆಲ್ಲಾ ಖರ್ಚು ಮಾಡಿರುತ್ತಾರೆ. ಆದರೆ, ನೋಂದಣಾಧಿಕಾರಿಗಳು ಇದನ್ನೆಲ್ಲಾ ಯೋಚಿಸುವುದೇ ಇಲ್ಲ. ಇಂತಹ ಪ್ರಕರಣಗಳಿಂದ ಕೋರ್ಟ್‌ಗಳಲ್ಲಿ ವ್ಯಾಜ್ಯಗಳ ಸಂಖ್ಯೆಯನ್ನು ಹೆಚ್ಚು ಮಾಡುತ್ತಿದ್ದಾರೆ’ ಎಂದು ನ್ಯಾಯಮೂರ್ತಿಗಳು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

‘ಈ ಕಾರಣಕ್ಕಾಗಿಯೇ ಬಿಡಿಎ ಉಪ ಕಾರ್ಯದರ್ಶಿಗೆ ₹ 25 ಸಾವಿರ ದಂಡ ವಿಧಿಸಲಾಗಿದೆ. ಅಧಿಕಾರಿ ಈ ದಂಡದ ಮೊತ್ತವನ್ನು ವಕೀಲರ ಕಲ್ಯಾಣ ನಿಧಿಗೆ ಎರಡು ತಿಂಗಳ ಒಳಗಾಗಿ ನೀಡಬೇಕು. ತಪ್ಪಿದಲ್ಲಿ ರಾಜ್ಯ ವಕೀಲ ಪರಿಷತ್ ಈ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದೂ ನ್ಯಾಯಮೂರ್ತಿಗಳು ನಿರ್ದೇಶಿಸಿದ್ದಾರೆ.

‘ಒಮ್ಮೆ ಮಂಜೂರು ಮಾಡಿದ ನಿವೇಶನದ ಕ್ರಯಪತ್ರವನ್ನು ರದ್ದುಪಡಿಸಿರುವ ಬಿಡಿಎ ಕ್ರಮ ನಿರ್ದಿಷ್ಟ ಪರಿಹಾರ ಕಾಯ್ದೆ–1963ಕ್ಕೆ ವಿರುದ್ಧವಾಗಿದೆ’ ಎಂದು ತೀರ್ಪಿನಲ್ಲಿ ವಿವರಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry