‘ಕನ್ನಡ ವಿರೋಧಿಗಳಿಗೆ ತಕ್ಕ ಪಾಠ ಕಲಿಸಿ’

7
ಜಾಗೃತಿ ಸಮಾವೇಶದಲ್ಲಿ ಕರವೇ ರಾಜ್ಯ ಅಧ್ಯಕ್ಷ ನಾರಾಯಣಗೌಡ ಹೇಳಿಕೆ

‘ಕನ್ನಡ ವಿರೋಧಿಗಳಿಗೆ ತಕ್ಕ ಪಾಠ ಕಲಿಸಿ’

Published:
Updated:

ಇಂಡಿ: ‘ಬೆಳಗಾವಿಯಲ್ಲಿ ನಿಂತು ಮಹಾರಾಷ್ಟ್ರಕ್ಕೆ ಜೈಕಾರ ಹಾಕುವವರಿಗೆ ವಿಧಾನಸೌಧ ಪ್ರವೇಶ ಮಾಡಲು ಕನ್ನಡಿಗರು ಬಿಡಬಾರದು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಟಿ.ಎ.ನಾರಾಯಣಗೌಡ ಕರೆ ನೀಡಿದರು.

ಪಟ್ಟಣದ ಶಾಂತೇಶ್ವರ ಮಂಗಲ ಕಾರ್ಯಾಲಯ ಬಳಿಯ ಮೈದಾನದಲ್ಲಿ ಸಂಘಟನೆಯ ತಾಲ್ಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಗಡಿನಾಡು ಕನ್ನಡಿಗರ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ‘ಕನ್ನಡ ವಿರೋಧಿಗಳಿಗೆ ತಕ್ಕಪಾಠ ಕಲಿಸುವ ನಿಟ್ಟಿನಲ್ಲಿ ಬೆಳಗಾವಿ ಭಾಗದ ಆರು ವಿಧಾನಸಭಾ ಕ್ಷೇತ್ರಗಳು ಕನ್ನಡದ ಮಕ್ಕಳ ಪಾಲಾಗುವಂತೆ ನೋಡಿಕೊಳ್ಳಬೇಕು’ ಎಂದು ಹೇಳಿದರು.

‘ನಾವು ಯಾವ ಭಾಷೆಗಳ ವಿರೋಧಿ ಗಳಲ್ಲ. ಅಖಂಡ ಕರ್ನಾಟಕವನ್ನು ಸಮೃದ್ಧವಾಗಿ ಕಟ್ಟುವುದೇ ಕರ್ನಾಟಕ ರಕ್ಷಣಾ ವೇದಿಕೆ ಮುಖ್ಯ ಉದ್ದೇಶವಾಗಿದೆ. ರಾಜ್ಯದ ಪಕ್ಕದಲ್ಲಿರುವ ಪಂಚ ರಾಜ್ಯಗಳಿಂದ ನಮಗೆ ಸಾಕಷ್ಟು ತೊಂದರೆಗಳಾಗುತ್ತಿವೆ. ಅವುಗಳನ್ನು ಎದುರಿಸಲು ಸಿದ್ಧರಾಗಬೇಕು’ ಎಂದು ಕಿವಿಮಾತು ಹೇಳಿದರು.

‘ಡಾ.ಸರೋಜಿನಿ ಮಹಿಷಿ ವರದಿ ಜಾರಿ ಮಾಡಲು ಸರ್ಕಾರ ಮುಂದೆ ಬಂದರೆ, ಕನ್ನಡದ ಮಕ್ಕಳಿಗೆ ಉದ್ಯೋಗ ಸಿಗುತ್ತದೆ. ಸರ್ಕಾರದ ಸೌಲಭ್ಯಗಳು ದೊರೆಯುತ್ತವೆ. ಭಾರತಕ್ಕೆ ಬಹಳಷ್ಟು ವಿದೇಶಿ ಕಂಪನಿಗಳು ಬರುತ್ತಿವೆ. ಅವರಿಗೆ ನಮ್ಮ ನೆಲ, ಜಲ ಬೇಕು, ಆದರೆ, ನಮ್ಮವರಿಗೆ ಉದ್ಯೋಗ ನೀಡುತ್ತಿಲ್ಲ. ಅವರನ್ನು ಗಂಟು ಮೂಟೆ ಕಟ್ಟಿ ಕಳಿಸಿಬಿಡಿ’ ಎಂದು ಹೇಳಿದರು.

‘ಕಾನೂನಿನಲ್ಲಿ ಹಿಂದಿ ರಾಷ್ಟ್ರಭಾಷೆ ಎಂದು ಉಲ್ಲೇಖವಿಲ್ಲ. ಆದರೂ, ಕೇವಲ 600 ವರ್ಷಗಳ ಇತಿಹಾಸ ಹೊಂದಿರುವ ಹಿಂದಿ ಭಾಷೆಯನ್ನು ರಾಷ್ಟ್ರೀಯ ಭಾಷೆ ಎಂದು ಘೋಷಿಸಲಾಗಿದೆ. 2,300 ವರ್ಷಗಳ ಇತಿಹಾಸವಿರುವ ಕನ್ನಡವನ್ನು ರಾಷ್ಟ್ರೀಯ ಭಾಷೆಯನ್ನಾಗಿ ಏಕೆ ಮಾಡಬಾರದು’ ಎಂದರು.

ಶಿರಶ್ಯಾಡ ಹಿರೇಮಠದ ಮುರುಘೇಂದ್ರ ಶಿವಾಚಾರ್ಯ, ಪಂ. ಅನಂತಾಚಾರ್ಯ ಸಾನ್ನಿಧ್ಯ ವಹಿಸಿದ್ದರು. ಶಾಸಕರಾದ ಶಿವಾನಂದ ಪಾಟೀಲ, ಯಶವಂತರಾಯಗೌಡ ಪಾಟೀಲ, ಮಾಜಿ ಶಾಸಕ ಡಾ. ಸಾರ್ವಭೌಮ ಬಗಲಿ ಮಾತನಾಡಿದರು. ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಬಾಳು ಮುಳಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಲಾಯಿತು.

ಬಾಬುಗೌಡ ಬಿರಾದಾರ, ಶ್ರೀಶೈಲಗೌಡ ಬಿರಾದಾರ, ಶಂಕರಗೌಡ ಪಾಟೀಲ, ರೇಷ್ಮಾ ಪಡೇಕನೂರ, ದಯಾಸಾಗರ ಪಾಟೀಲ, ಶೀಲವಂತ ಉಮರಾಣಿ, ಜಿ.ಎಸ್.ಬಂಕೂರ, ಪಾಪು ಕಿತ್ತಲಿ, ಭೀಮನಗೌಡ ಪಾಟೀಲ, ರಾಮು ರಾಠೋಡ, ಬಿ.ಡಿ.ಪಾಟೀಲ, ಅನೀಲ ಜಮಾದಾರ, ಸಿದ್ದು ಡಂಗಾ, ಅನೀಲಗೌಡ ಬಿರಾದಾರ.

ಬಾಳು ಮುಳಜಿ ಸ್ವಾಗತಿಸಿದರು. ದುಂಡು ಮುಜಗೊಂಡ, ವಿನಯಾ ಜಿಗಜಿಣಗಿ ನಿರೂಪಿಸಿದರು. ರಾಜು ಪಡಗಾನೂರ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry