ಮೇಕೆದಾಟು ಯೋಜನೆ ಅನುಷ್ಠಾನಗೊಳಿಸಿ

7
ಶಾಶ್ವತ ಕುಡಿಯುವ ನೀರಿನ ಯೋಜನೆ * ವ್ಯವಸಾಯ ಮತ್ತು ವಿದ್ಯುತ್‌ಗಾಗಿ ಯೋಜನೆ ಜಾರಿ

ಮೇಕೆದಾಟು ಯೋಜನೆ ಅನುಷ್ಠಾನಗೊಳಿಸಿ

Published:
Updated:
ಮೇಕೆದಾಟು ಯೋಜನೆ ಅನುಷ್ಠಾನಗೊಳಿಸಿ

ಚನ್ನಪಟ್ಟಣ: ಮೇಕೆದಾಟು ಯೋಜನೆಯನ್ನು ಶೀಘ್ರ ಅನುಷ್ಠಾನಗೊಳಿಸಬೇಕು ಎಂದು ಮನವಿ ಮಾಡಿ ರಾಜ್ಯ ರೈತಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಲಕ್ಷ್ಮಣಸ್ವಾಮಿ ಅವರನೇತೃತ್ವದಲ್ಲಿ ಪೊಲೀಸ್ ತರಬೇತಿ ಶಾಲೆಯಲ್ಲಿನ ಹೆಲಿಪ್ಯಾಡ್ ಬಳಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ರೈತಸಂಘದ ಪದಾಧಿಕಾರಿಗಳು, ಶಾಶ್ವತ ಕುಡಿಯುವ ನೀರಿನ ಯೋಜನೆ ಹಾಗೂ ವ್ಯವಸಾಯ ಮತ್ತು ವಿದ್ಯುತ್ ಗಾಗಿ ಮೇಕೆದಾಟು ಯೋಜನೆ ಅನುಷ್ಠಾನ ಮಾಡಬೇಕು. ಮುಂದಿನ ಬಜೆಟ್‌ನಲ್ಲಿ ಈ ಯೋಜನೆಗೆ ಹಣ ಮೀಸಲಿಡಬೇಕು ಎಂದು ಮನವಿ ಮಾಡಿಕೊಂಡರು.

ಇದರ ಜತೆಗೆ ರೈತರ ಎಲ್ಲ ಸಾಲಗಳನ್ನೂ ಮನ್ನಾ ಮಾಡಬೇಕು, ಸಾಲ ನೀತಿಯನ್ನು ಸರಳೀಕರಣಗೊಳಿಸಿ ಪ್ರತಿಯೊಬ್ಬ ರೈತರಿಗೂ ಸಾಲ ಸಿಗುವಂತೆ ಮಾಡಬೇಕು. ರೈತರ ಬೆಳೆಗಳಿಗೆ ಸೂಕ್ತ ಬೆಲೆ ನಿಗಧಿ ಮಾಡಬೇಕು. ತರಕಾರಿ ಹಾಗೂ ತೋಟದ ಬೆಳೆಗಳ ಶೀಥಲೀಕರಣ ಕೇಂದ್ರಗಳನ್ನು ಸ್ಥಾಪಿಸಬೇಕು. ರೇಷ್ಮೆ ಬೆಳೆಗೆ ಸುಸಜ್ಜಿತ ಮಾರುಕಟ್ಟೆ, ರೇಷ್ಮೆ ನೂಲು ತೆಗೆಯುವ ಗಿರಣಿಗಳನ್ನು ಆರಂಭಿಸಬೇಕು ಎಂದು ಕೋರಿದರು.

ಸಚಿವರಾದ ಡಿ.ಕೆ.ಶಿವಕುಮಾರ್, ರೇವಣ್ಣ, ಸಂಸದ ಡಿ.ಕೆ.ಸುರೇಶ್, ರೈತಸಂಘದ ಬೈರೇಗೌಡ, ಸಂಪತ್‌ ಕುಮಾರ್, ಚಲುವಯ್ಯ, ರಮೇಶ್, ಗೋವಿಂದರಾಜು ಇದ್ದರು.

ಕರವೇ ಮನವಿ: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು  ಪಟ್ಟಣದಲ್ಲಿ ವೇದಿಕೆ ಬಳಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಸರೋಜಿನಿ ಮಹಿಷಿ ವರದಿ ಜಾರಿ, ತಾಲ್ಲೂಕಿನಲ್ಲಿ ಬ್ಲಡ್ ಬ್ಯಾಂಕ್ ಸ್ಥಾಪನೆ, ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ಸಲುವಾಗಿ ಪ್ರತಿ ಲೀಟರ್ ಹಾಲಿಗೆ ₹8 ಪ್ರೋತ್ಸಾಹ ಧನ ನೀಡಬೇಕು. ವಿವಿಧ ಯೋಜನೆಗಳಡಿ ನಡೆದಿರುವ ಅವ್ಯವಹಾರಗಳ ವಿರುದ್ಧ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಬೇಕು. ಗ್ರಾಮೀಣ ಭಾಗದಲ್ಲಿ ರಸ್ತೆಗಳ ಸ್ಥಿತಿ ಅಧೋಗತಿಗಿಳಿದಿದ್ದು, ಅವುಗಳನ್ನು ಸರಿಪಡಿಸಲುಅನುದಾನ ನೀಡಬೇಕು. ಕನ್ನಡ ಪರ ಹೋರಾಟಗಾರರ ಮೇಲಿನ ಮೊಕದ್ದಮೆಗಳನ್ನು ವಾಪಸ್ ಪಡೆಯಬೇಕು ಎಂದು ಮನವಿ ಮಾಡಿದರು.

ಕರವೇ ತಾಲ್ಲೂಕು ಅಧ್ಯಕ್ಷ ಸಾಗರ್, ಜಿಲ್ಲಾ ಕಾರ್ಯಾಧ್ಯಕ್ಷ ಎಂ.ಎನ್.ಸತ್ಯನಾರಾಯಣ, ಯುವ ಘಟಕದ ನಿತಿನ್, ಪದಾಧಿಕಾರಿಗಳಾದ ರಘುರಾಮ್, ಬಾಬ್ ಜಾನ್, ಆಸಿಫ್, ವಿನಯ್, ಶ್ರೀಕಾಂತ್, ಮರಿಸ್ವಾಮಿ, ಲೋಕೇಶ್, ನಾಗರಾಜು, ಸುಮಂತ್ ಇದ್ದರು.

ಯೋಜನೆಗೆ ಭರವಸೆ ನೀಡಿದ ಸಿದ್ದರಾಮಯ್ಯ

ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರೈತರ ಸಾಲ ಮನ್ನಾ ಹಾಗೂ ಮಹದಾಯಿ ಯೋಜನೆ ವಿಚಾರವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

ಹಾಗೆಯೇ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಸರ್ಕಾರ ಸಿದ್ದವಿದೆ. ಶೀಘ್ರ ಎಲ್ಲ ವಿವಾದ ಬಗೆಹರಿಸಿಕೊಂಡು ಯೋಜನೆ ಆರಂಭಿಸಲಾಗುವುದು. ಅದಕ್ಕೆ ಬೇಕಾಗುವ ಅನುದಾನಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry