ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಿತ್ರದುರ್ಗಕ್ಕೆ ತುಂಗಭದ್ರಾ ನೀರು ಬೇಡ’

ಜನಾಂದೋಲನ ಮಹಾಮೈತ್ರಿಯಿಂದ ಮುಖ್ಯಮಂತ್ರಿ ಭಾವಚಿತ್ರ ದಹನ
Last Updated 4 ಜನವರಿ 2018, 7:23 IST
ಅಕ್ಷರ ಗಾತ್ರ

ರಾಯಚೂರು: ಕುಡಿಯುವ ನೀರಿಗಾಗಿ ತುಂಗಭದ್ರಾ ಜಲಾಶಯದ ಹಿನ್ನೀರಿನಿಂದ 2.5 ಟಿಎಂಸಿ ಅಡಿ ನೀರನ್ನು ಚಿತ್ರದುರ್ಗ ಜಿಲ್ಲೆಗೆ ಬಳಕೆ ಮಾಡಿಕೊಳ್ಳಲು ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಂಡಿರುವುದನ್ನು ಖಂಡಿಸಿ ಜನಾಂದೋಲನ ಮಹಾಮೈತ್ರಿ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾವಚಿತ್ರವನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ತುಂಗಭದ್ರಾ ನೀರನ್ನು ಬೇರೆ ಭಾಗಕ್ಕೆ ಕೊಂಡೊಯ್ಯಲು ತೀರ್ಮಾನ ಕೈಗೊಂಡಿರುವುದನ್ನು ಖಂಡಿಸಿದರು.

₹2,352 ಕೋಟಿ ವೆಚ್ಚ ಮಾಡಿ ತುಂಗಭದ್ರಾ ಜಲಾಶಯದ ಹಿನ್ನೀರನ್ನು ಚಿತ್ರದುರ್ಗಕ್ಕೆ ತೆಗೆದುಕೊಂಡು ಹೋಗಲು ಯೋಜನೆ ಮಾಡಿರುವುದು ಸರಿಯಲ್ಲ. ಯಾರಿಗೋ ಒಳ್ಳೆಯದನ್ನು ಮಾಡಲು ಇನ್ಯಾರನ್ನೋ ಬಲಿಕೊಡುವುದು ಸರಿಯಲ್ಲ ಎಂದರು.

ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಿಗೆ ಹಾಗೂ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಗೆ ಕುಡಿಯುವ ನೀರು ಹಾಗೂ ನೀರಾವರಿ ಉದ್ದೇಶಕ್ಕೆ ನೀರು ಒದಗಿಸಲು 1945–53ರ ಅವಧಿಯಲ್ಲಿ 135 ಟಿಎಂಸಿ ಡಿ ಸಾಮರ್ಥ್ಯದ ತುಂಗಭದ್ರಾ ಜಲಾಶಯ ನಿರ್ಮಾಣ ಮಾಡಲಾಗಿದೆ. ಕಾಲಕ್ರಮೇಣ 33 ಟಿಎಂಸಿ ಅಡಿ ಹೂಳು ತುಂಬಿದ ಈ ಭಾಗದಲ್ಲಿ ನೀರಿನ ಕೊರತೆ ಉಂಟಾಗಿದೆ.

ನೀರಿನ ಕೊರೆತೆ ಉಂಟಾಗಿದ್ದರಿಂದ ಈ ಭಾಗದಲ್ಲಿ ನೀರಿಲ್ಲದೆ ರೈತರ ಬೆಳೆಗಳು ಒಣಗುತ್ತಿವೆ. ಆದ್ದರಿಂದ ರೈತರು ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ತಿಳಿದ ವಿಷಯವಾಗಿದೆ. ಇಂತಹ ಸಂದರ್ಭದಲ್ಲಿ ತುಂಗಭದ್ರಾ ಜಲಾಶಯದಿಂದ 2.3 ಟಿಎಂಸಿ ಅಡಿ ನೀರನ್ನು ಕೃಷ್ಣ ಕೊಳ್ಳದಿಂದ ಒಯ್ಯುವುದು ನೈಸರ್ಗಿಕವಾಗಿ ಸಾಧುವಲ್ಲ. ನಿಸರ್ಗದ ವಿರುದ್ಧವಾದ ನಡೆಯಾಗಿದೆ ಎಂದು ದೂರಿದರು.

ಕುಡಿಯುವ ನೀರನ ಬಗ್ಗೆ ಸರ್ಕಾರಕ್ಕೆ ನಿಜವಾದ ಕಾಳಜಿಯಿದ್ದರೆ ಜಿಲ್ಲೆಯಲ್ಲಿ 337 ಹಳ್ಳಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫ್ಲೋರೈಡ್‌ ಅಂಶವಿರುವ ನೀರು ಹೊಂದಿರುವ ಹಳ್ಳಿಗಳಿಗೆ ಮೊದಲು ಶಾಶ್ವತ ಕುಡಿಯುವ ನೀರು ಪೂರೈಸುವ ಯೋಜನೆ ರೂಪಿಸಬೇಕು. 43 ಹಳ್ಳಿಗಳಲ್ಲಿ ಆರ್ಸೇನಿಕ್ ಅಂಶ ಇರುವುದು 2004ರಲ್ಲಿ ಪತ್ತೆಯಾಗಿದ್ದರೂ, 2014ರಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಮೂಲಕ ಕೈತೊಳೆದುಕೊಂಡಿರುವ ಸರ್ಕಾರ ಶಾಶ್ವತ ನೀರು ಸರಬರಾಜು ಯೋಜನೆ ಏಕೆ ರೂಪಿಸಿಲ್ಲ ಎಂದು ಪ್ರಶ್ನಿಸಿದರು.

ನೀರಿನ ಲಭ್ಯತೆಯಿರುವ ಜಿಲ್ಲೆಗೆ ಯೋಜನೆ ರೂಪಿಸದ ಸರ್ಕಾರ ನೀರಿನ ಲಭ್ಯತೆಯಿಲ್ಲದ ಜಿಲ್ಲೆಗೆ ಯೋಜನೆ ರೂಪಿಸಿರುವುದು ಪ್ರಾದೇಶಿಕ ಅಸಮಾನತೆಗೆ ಹಿಡಿದ ಕನ್ನಡಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತುಂಗಭದ್ರಾ ಎಡದಂಡೆ ಕಾಲುವೆಯ ಕೊನೆಯ ಭಾಗದ ರಾಯಚೂರು ಮತ್ತು ಮಾನ್ವಿ ತಾಲ್ಲೂಕಿನ ಒಂದು ಲಕ್ಷಕ್ಕಿಂತ ಹೆಚ್ಚಿನ ಎಕರೆ ಜಮೀನು ನೀರಿನ ಸಮಸ್ಯೆ ಎದುರಿಸುತ್ತಿದ್ದು, ಯೋಜನೆಯ ವ್ಯಾಪ್ತಿಯಲ್ಲಿ ಬರುತ್ತಿದ್ದರೂ ಒಂದು ಬೆಳೆಗೂ ನೀರು ಸಿಗದೆ ಬರಗಾಲ ಎದುರಿಸುವ ಪರಿಸ್ಥಿತಿ ಈ ಭಾಗದ ರೈತರದ್ದಾಗಿದೆ. ಕೊನೆ ಭಾಗಕ್ಕೆ ನೀರು ಒದಗಿಸಲು ಯೋಜನೆ ರೂಪಿಸಬೇಕಾದ ಸರ್ಕಾರ ಕೈಕಟ್ಟಿ ಕುಳಿತಿದ್ದು, ಇದ್ದ ಅಲ್ಪ ಸ್ವಲ್ಪ ನೀರನ್ನು ಬೇರೆ ಕಡೆ ಒಯ್ಯುವುದು ಬಾಲಿಷತನದ ಕ್ರಮವಾಗಿದೆ ಎಂದರು.

ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಯ ಜನತೆಗೆ ಅನ್ಯಾಯ ಮಾಡಿ ಜಲಾಶಯದ ನೀರನ್ನು ಬೇರೆ ಕಡೆಗೆ ಒಯ್ಯುವ ಯೋಜನೆ ಕೂಡಲೇ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ರಾಘವೇಂದ್ರ ಕುಷ್ಟಗಿ, ಚಾಮರಸ ಮಾಲಿ ಪಾಟೀಲ, ಡಾ.ವಿ.ಎ. ಮಾಲಿಪಾಟೀಲ, ಜಾನ್ ವೆಸ್ಲಿ, ಲಕ್ಷ್ಮಣಗೌಡ ಕಡಗಂದೊಡ್ಡಿ, ಜಯ್ಯಪ್ಪ ಸ್ವಾಮಿ, ಎಂ.ಆರ್.ಭೇರಿ, ರಾಜುಪಟ್ಟಿ ಇದ್ದರು.

**

ಜಿಲ್ಲೆಯ ಬಗ್ಗೆ ಕಾಳಜಿಯಿಲ್ಲದ ಜನಪ್ರತಿನಿಧಿಗೆ ಉಸ್ತುವಾರಿ ಸಚಿವ ಸ್ಥಾನ ನೀಡಿ, ಅನ್ಯಾಯ ಮಾಡಲಾಗಿದೆ. ಹೈ.ಕ. ಭಾಗದ ಜನಪ್ರತಿನಿಧಿಗಳು ಈ ಭಾಗದ ಅಭಿವೃದ್ಧಿ ಇಚ್ಛಾಶಕ್ತಿ ಪ್ರದರ್ಶಿಸಬೇಕು.

– ರಾಘವೇಂದ್ರ ಕುಷ್ಟಗಿ, ಜನಾಂದೋಲನ ಮಹಾಮೈತ್ರಿ ಸಂಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT