ಪತಿಯ ವಿರುದ್ಧವೇ ಜಾತಿನಿಂದನೆ ದೂರು

7

ಪತಿಯ ವಿರುದ್ಧವೇ ಜಾತಿನಿಂದನೆ ದೂರು

Published:
Updated:

ಮಂಡ್ಯ: ತಾಲ್ಲೂಕಿನ ಕೋಣನಹಳ್ಳಿ ಗ್ರಾಮದ ಮಹಿಳೆಯೊಬ್ಬರು ಬುಧವಾರ ಪತಿಯ ವಿರುದ್ಧವೇ ಜಾತಿ ನಿಂದನೆ ದೂರು ದಾಖಲಿಸಿದ್ದಾರೆ.

ಮಾಸಿಂಗನಹಳ್ಳಿ ಗ್ರಾಮದ ಮಹಿಳೆ ಹಾಗೂ ಕೋಣನಹಳ್ಳಿಯ ವ್ಯಕ್ತಿಯ ವಿವಾಹ ಮೂರು ವರ್ಷಗಳ ಹಿಂದೆ ನಡೆದಿತ್ತು. ಇಬ್ಬರದೂ ಅಂತರ್ಜಾತಿ ವಿವಾಹ. ದಂಪತಿ ನಿತ್ಯ ಮನೆಯಲ್ಲಿ ಜಗಳವಾಡುತ್ತಿದ್ದರು. ಬುಧವಾರ ಜಗಳ ವಿಕೋಪಕ್ಕೆ ತಿರುಗಿತ್ತು. ಇದರಿಂದ ಬೇಸತ್ತ ಮಹಿಳೆ ಪತಿಯ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ.

ಪತಿ ಸರಿಯಾಗಿ ಮನೆ ನಿರ್ವಹಣೆ ಮಾಡುತ್ತಿಲ್ಲ. ನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಾರೆ. ಜಾತಿ ನಿಂದನೆ ಮಾಡುತ್ತಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಸೆಂಟ್ರಲ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ಷುಲ್ಲಕ ಗಲಾಟೆ: ವ್ಯಕ್ತಿ ಮೇಲೆ ಹಲ್ಲೆ

ಮದ್ದೂರು: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಮಂಗಳವಾರ ರಾತ್ರಿ  ಇಲ್ಲಿನ ಮಹಾವೀರ ಚಿತ್ರಮಂದಿರದ ಬಳಿ ಮೂವರು ಯುವಕರು ಹಲ್ಲೆ ಮಾಡಿದ್ದಾರೆ.

ವಿ.ಆರ್. ಸಿದ್ದಪ್ಪಾಜಿ ಅವರ ಮೇಲೆ ಹಲ್ಲೆಯಾಗಿದ್ದು ಇವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿದ್ದಪ್ಪಾಜಿ ಅವರ ಮನೆಯ ಸಮೀಪದಲ್ಲಿ ರೂಂ ಮಾಡಿಕೊಂಡು ಕೇರಂ ಆಟವಾಡುತ್ತಿದ್ದ ಯುವಕರಾದ ಕೌಸರ್ ವುಲ್ಲಾಖಾನ್, ಸಿಬಕತ್ ವುಲ್ಲಾಖಾನ್, ಸಾದಾತ್ ಪಾಷ ಗಲಾಟೆ ಮಾಡುತ್ತಿದ್ದಾಗ ಸಿದ್ದಪ್ಪಾಜಿ ಪ್ರಶ್ನಿಸಿದ್ದಾರೆ. ಆ ಸಂದರ್ಭದಲ್ಲಿ ಹಲ್ಲೆ ಮಾಡಿದ್ದಾರೆ ಎಂದು ಪೋಲೀಸರಿಗೆ ದೂರು ನೀಡಲಾಗಿದೆ.

ಸಿದ್ದಪ್ಪಾಜಿ ಅವರೂ ಹಲ್ಲೆ ನಡೆಸಿದರು ಎಂದು ಯುವಕರು ಪ್ರತಿದೂರು ನೀಡಿದ್ದಾರೆ. ಈ ಸಂಬಂಧ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry