ಹೊಳಲಿ ಪ್ರಕಾಶ ಹೇಳಿಕೆಗೆ ಹೋರಾಟಗಾರರ ಖಂಡನೆ

7
ನೀರಾವರಿ ಹೋರಾಟ ಸಮಿತಿ ಸದಸ್ಯರ ಆಕ್ರೋಶ

ಹೊಳಲಿ ಪ್ರಕಾಶ ಹೇಳಿಕೆಗೆ ಹೋರಾಟಗಾರರ ಖಂಡನೆ

Published:
Updated:

ಕೋಲಾರ: ‘ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ನೀರಾವರಿ ಹೋರಾಟಗಾರರು ತೃಪ್ತಿಕರವಾಗಿದ್ದಾರೆ ಎಂದು ಡಿಸಿಸಿ ಬ್ಯಾಂಕ್‌ ನಿರ್ದೇಶಕ ಹೊಳಲಿ ಪ್ರಕಾಶ್‌ ಹೇಳಿಕೆ ನೀಡಿರುವುದು ಖಂಡನೀಯ’ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಸಂಚಾಲಕ ವೆಂಕಟೇಶ್ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್‌ ಏಜೆಂಟರಂತೆ ವರ್ತಿಸುತ್ತಿರುವ ಪ್ರಕಾಶ್‌ ಇತ್ತೀಚೆಗೆ ಬಂಗಾರಪೇಟೆಯಲ್ಲಿ ನಡೆದ ಮುಖ್ಯಮಂತ್ರಿಯವರ ಕಾರ್ಯಕ್ರಮದಲ್ಲಿ ನೀರಾವರಿ ಯೋಜನೆಗಳ ವಿಷಯವಾಗಿ ಮನಬಂದಂತೆ ಹೇಳಿಕೆ ನೀಡಿದ್ದಾರೆ ಎಂದು ದೂರಿದರು.

ಯಾವುದೇ ನೀರಾವರಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸದ ಸರ್ಕಾರಕ್ಕೆ ಪ್ರಕಾಶ್‌ ಪ್ರಚಾರದ ತೆವಲಿಗೆ ಬಹು ಪರಾಕ್‌ ಹೇಳಿದ್ದಾರೆ. ಅವರಿಗೂ ಸಮಿತಿಗೂ ಯಾವುದೇ ಸಂಬಂಧವಿಲ್ಲ. ಆದರೂ ಸಮಿತಿಯ ಪರವಾಗಿ ಮುಖ್ಯಮಂತ್ರಿ ಬಳಿ ಹೇಳಿಕೆ ನೀಡಿರುವುದು ಸರಿಯಲ್ಲ. ಸಾವಿರಾರು ಜನರಿದ್ದ ವೇದಿಕೆಯಲ್ಲಿ ಆ ರೀತಿ ಹೇಳಿರುವುದು ಅವರಿಗೆ ಶೋಭೆ ತರುವುದಿಲ್ಲ. ಅವರಿಗೆ ಹಾಗೂ ಸರ್ಕಾರಕ್ಕೆ ಛೀಮಾರಿ ಹಾಕುತ್ತೇವೆ ಎಂದರು.

ಯರಗೋಳ್‌ ಯೋಜನೆ ದಶಕದ ಹಿಂದೆ ಆರಂಭವಾದರೂ ಈವರೆಗೂ ಡ್ಯಾಂ ನಿರ್ಮಿಸಿಲ್ಲ. ಡ್ಯಾಂ ನಿರ್ಮಾಣವಾಗಿದ್ದರೆ ಇತ್ತೀಚೆಗೆ ಸುರಿದ ಮಳೆಯಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿರುತ್ತಿತ್ತು. ಜಿಲ್ಲೆಯ ನೀರಿನ ಸಮಸ್ಯೆ ವಿಚಾರದಲ್ಲಿ ಸಂಸದ ಕೆ.ಎಚ್‌.ಮುನಿಯಪ್ಪ ಸಂಪೂರ್ಣ ಬೇಜವಾಬ್ದಾರಿ ತೋರಿದ್ದಾರೆ. ಅವರು ಸೌಜನ್ಯಕ್ಕೂ ನೀರಾವರಿ ಹೋರಾಟದ ಜಾಗಕ್ಕೆ ಬಂದಿಲ್ಲ. ಮನೆ ಮನೆಯಿಂದ ತಲಾ ₹ 10 ಸಂಗ್ರಹಿಸಿ ಯೋಜನೆ ಪೂರ್ಣಗೊಳಿಸುತ್ತೇವೆ ಎಂದು ಹೇಳಿದರು.

ನೀರಾವರಿ ಹೋರಾಟಗಾರರ ವಿರುದ್ಧದ ಪ್ರಕರಣ ವಾಪಸ್ ಪಡೆಯುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ನೀಡಿದ್ದ ಭರವಸೆ ಹುಸಿಯಾಗಿದೆ. ಸಚಿವರು ಪ್ರಕರಣದ ಸಂಗತಿಯನ್ನು ಅಧಿವೇಶನದಲ್ಲಿ ಪ್ರಸ್ತಾಪಿಸದೆ ನಿರ್ಲಕ್ಷ್ಯ ತೋರಿದ್ದಾರೆ. ಕೆಲ ದಿನಗಳ ಹಿಂದೆ ಚಿಕ್ಕಬಳ್ಳಾಪುರಕ್ಕೆ ಮುಖ್ಯಮಂತ್ರಿ ಭೇಟಿಗೂ ಮುನ್ನ ಅಲ್ಲಿನ ನೀರಾವರಿ ಹೋರಾಟಗಾರರನ್ನು ಬಂಧಿಸಿ ಹೋರಾಟ ಹತ್ತಿಕ್ಕಲಾಗಿದೆ ಎಂದು ಕಿಡಿ ಕಾರಿದರು.

ಕ್ರಮ ಕೈಗೊಂಡಿಲ್ಲ: ‘ಸರ್ಕಾರ ಕೈಗೆತ್ತಿಕೊಂಡಿರುವ ಯಾವುದೇ ನೀರಾವರಿ ಯೋಜನೆ ಪೂರ್ಣಗೊಂಡಿಲ್ಲ. ಬೆಂಗಳೂರಿನ ಕೊಳಚೆ ನೀರನ್ನು ಕೆ.ಸಿ ವ್ಯಾಲಿ ಯೋಜನೆ ಮೂಲಕ ಜಿಲ್ಲೆಯ ಕೆರೆಗಳಿಗೆ ಹರಿಸುವ ಮುನ್ನವೇ ವರುಣ ದೇವ ಕೃಪೆ ತೋರಿದ್ದರಿಂದ ಎಲ್ಲಾ ಕೆರೆಗಳು ಕೋಡಿ ಹರಿದಿವೆ. ಶಿಥಿಲ ಕೆರೆ ಕಟ್ಟೆಗಳ ದುರಸ್ತಿಗೆ ಜಿಲ್ಲಾಡಳಿತ ಕ್ರಮ ಕೈಗೊಂಡಿಲ್ಲ’ ಎಂದು ಸಮಿತಿ ಸಂಚಾಲಕ ಓಂಶಕ್ತಿ ಚಲಪತಿ ದೂರಿದರು.

‘ಯರಗೋಳ್‌ ಯೋಜನೆ ಅನುಷ್ಠಾನಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು ಆಸಕ್ತಿ ತೋರುತ್ತಿಲ್ಲ. ಕೃಷ್ಣಾ ನದಿ ಪಾತ್ರದ ರಾಜ್ಯದ ಪಾಲು 96 ಟಿಎಂಸಿ ನೀರನ್ನು ಬಯಲುಸೀಮೆಗೆ ಬಳಸಿಕೊಳ್ಳುವಲ್ಲಿ ಸಂಸದ ಮುನಿಯಪ್ಪ ವಿಫಲರಾಗಿದ್ದಾರೆ. ಯೋಜನೆ ಬಗ್ಗೆ ಅವರಿಗೆ ಕನಿಷ್ಟ ಜ್ಞಾನವೂ ಇಲ್ಲ’ ಎಂದು ಸಂಚಾಲಕ ಬಾಲಾಜಿ ಚನ್ನಯ್ಯ ಟೀಕಿಸಿದರು.

ಸಂಚಾಲಕರಾದ ಮಂಜುನಾಥ್, ಮುನಿವೆಂಕಟೇಶ್, ನಾರಾಯಣಸ್ವಾಮಿ, ಶ್ರೀನಿವಾಸ್, ರಾಮುಶಿವಣ್ಣ, ಗೋವಿಂದರಾಜು, ರಾಮುಶಿವಣ್ಣ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry