ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛಲವಿದ್ದರೆ ಸಾಮಾನ್ಯರಿಗೂ ಉನ್ನತ ಹುದ್ದೆ

ತಾಲ್ಲೂಕಿನ ಹೆಬ್ಬಗೋಡಿಯ ಎಸ್‌ಎಫ್‌ಎಸ್‌ ಸಭಾಂಗಣದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಶಿಬಿರ
Last Updated 4 ಜನವರಿ 2018, 10:15 IST
ಅಕ್ಷರ ಗಾತ್ರ

ಆನೇಕಲ್‌ : ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಬೇಕಾದರೆ ಸತತ ಅಧ್ಯಯನ, ಏಕಾಗ್ರತೆ ಹಾಗೂ ವಿಷಯದ ಬಗ್ಗೆ ಆಳವಾದ ಜ್ಞಾನವಿರಬೇಕು. ಸಾಧಿಸಬೇಕೆಂಬ ಛಲವಿದ್ದರೆ ಸಾಮಾನ್ಯ ವಿದ್ಯಾರ್ಥಿಯು ಉನ್ನತ ಹುದ್ದೆಯನ್ನು ಪಡೆಯಬಹುದು ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಸೌಮ್ಯ ರಾಮಲಿಂಗಾರೆಡ್ಡಿ ತಿಳಿಸಿದರು.

ಅವರು ತಾಲ್ಲೂಕಿನ ಹೆಬ್ಬಗೋಡಿಯ ಎಸ್‌ಎಫ್‌ಎಸ್‌ ಸಭಾಂಗಣದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಯುವಕರಿಗೆ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಯುವಕರಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಬೆಳೆಯಬೇಕು. ಮಹಿಳೆಯರು ಸಹ ಎಲ್ಲಾ ರಂಗಗಳಲ್ಲೂ ತಮ್ಮ ಹೆಜ್ಜೆ ಗುರುತನ್ನು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸರ್ಕಾರ ಶೇ 33ರಷ್ಟು ಮೀಸಲಾತಿ ನೀಡಿದ್ದರೂ ಉನ್ನತ ಹುದ್ದೆಗಳಲ್ಲಿ ಮಹಿಳೆಯರು ಬಂದಿರಲಿಲ್ಲ ಎಂದರು.

ಪ್ರಸ್ತುತ ರಾಜ್ಯ ಸರ್ಕಾರದಲ್ಲಿ ಮುಖ್ಯ ಕಾರ್ಯದರ್ಶಿ ಹಾಗೂ ಡಿಜಿಪಿ ಅವರು ಮಹಿಳೆಯಾಗಿರುವುದು ಮಹಿಳೆಯರಿಗೆ ಸಂತಸದ ವಿಚಾರವಾಗಿದೆ. ಸರ್ಕಾರಿ ಉದ್ಯೋಗದಲ್ಲಿ ಅತ್ಯಂತ ಉನ್ನತ ಹುದ್ದೆಗಳಲ್ಲಿ ಮಹಿಳೆಯರಿದ್ದಾರೆ. ಯುವತಿಯರಲ್ಲಿ ಹೆಚ್ಚಿನ ಏಕಾಗ್ರತೆಯಿರುತ್ತದೆ ಎಂದರು.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ಸೂಕ್ತ ಮಾರ್ಗದರ್ಶನವನ್ನು ಇಂತಹ ಶಿಬಿರಗಳ ಮೂಲಕ ಪಡೆಯಬೇಕು. ಮನಸ್ಸಿದ್ದರೆ ಮಾರ್ಗವಿರುತ್ತದೆ. ಮಾರ್ಗವನ್ನು ಗುರತಿಸಿಕೊಂಡು ಗುರಿ ಸಾಧನೆಯ ಶಪಥ ಮಾಡಬೇಕು ಎಂದು ಸಲಹೆ ನೀಡಿದರು.

ಗುರಿ ನಿಖರವಾಗಿರಬೇಕು ಈ ಮೂಲಕ ಸಮಾಜದ ಋಣ ತೀರಿಸುವ ಅವಕಾಶ ಯುವಕರಿಗೆ ದೊರೆಯುತ್ತದೆ. ತಂದೆ ತಾಯಿಗಳು, ಸಮಾಜಕ್ಕೆ ಕೊಡುಗೆ ನೀಡಬೇಕು. ಯುವಕರು ಸಮಾಜದಲ್ಲಿನ ತಪ್ಪುಗಳನ್ನು ತಿದ್ದಿ ಸನ್ಮಾರ್ಗದಲ್ಲಿ ತೆರಳುವ ಮನಸ್ಸು ಮಾಡಬೇಕು . ಪರಿಸರ ಸಂರಕ್ಷಣೆ, ಸೇವಾ ಮನೋಭಾವನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಅತ್ತಿಬೆಲೆ ಸರ್ಕಲ್‌ ಇನ್ಸ್‌ಸ್ಪೆಕ್ಟರ್‌ ಎಲ್.ವೈ.ರಾಜೇಶ್‌ ಮಾತನಾಡಿ ಸಮಾಜಕ್ಕೆ ಕೊಡುಗೆ ನೀಡಿ ಯುವಕರಲ್ಲಿ ಸ್ಪೂರ್ತಿ ತುಂಬುವ ಸಲುವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಶಿಬಿರವನ್ನು ಪೊಲೀಸ್ ಇಲಾಖೆ ವತಿಯಿಂದ ನಡೆಸಲಾಗುತ್ತಿದೆ ಎಂದರು.

ಗ್ರಾಮಸಭೆಗಳಲ್ಲಿ ಹಲವಾರು ಮಂದಿ ಕೆಎಎಸ್, ಐಎಎಸ್ ಪರೀಕ್ಷೆಗಳ ಬಗ್ಗೆ ಮಾಹಿತಿಯ ಕೊರತೆಯಿದೆ ಎಂದು ತಿಳಿಸಿದ ಹಿನ್ನೆಲೆಯಲ್ಲಿ ಶಾಸಕ ಬಿ.ಶಿವಣ್ಣ ಅವರ ಮಾರ್ಗದರ್ಶನದಲ್ಲಿ ಆನೇಕಲ್ ತಾಲ್ಲೂಕಿನಲ್ಲಿ ಅಲ್ಪಾವಧಿ ತರಬೇತಿ ಶಿಬಿರಗಳನ್ನು ಆಯೋಜಿಸಲಾಗಿದೆ ಎಂದರು.

ಬೆಂಗಳೂರು ನಗರಕ್ಕೆ ಆನೇಕಲ್ ಹೊಂದಿಕೊಂಡಿದ್ದರೂ ಮಾಹಿತಿಯ ಕೊರತೆಯಿಂದ ಈ ಬಗ್ಗೆ ಯುವಕರು ಪ್ರಯತ್ನ ಮಾಡಿಲ್ಲ. ಆದರೆ ಕೋಲಾರ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿದ್ದಾರೆ. ಹಾಗಾಗಿ ಇಂತಹ ಶಿಬಿರಗಳ ಮೂಲಕ ಹೆಚ್ಚು ಮಂದಿ ತೊಡಗಿಕೊಳ್ಳುವಂತೆ ಮಾಡಲು ಪ್ರಯತ್ನ ನಡೆದಿದೆ ಎಂದರು.

ಎಸ್‌ಎಫ್‌ಎಸ್‌ ಕಾಲೇಜಿನ ಫಾದರ್ ಹೆರಾಲ್ಡ್‌ ಕ್ರಿಸ್ಟೋಫರ್‌, ಹೆಬ್ಬಗೋಡಿ ಸರ್ಕಲ್‌ ಇನ್ಸ್‌ಸ್ಪೆಕ್ಟರ್‌ ಜಗದೀಶ್, ಅತ್ತಿಬೆಲೆ ಸಬ್‌ ಇನ್ಸ್‌ಸ್ಪೆಕ್ಟರ್‌ ಗಜೇಂದ್ರ, ವಾಣಿಜ್ಯ ಇಲಾಖೆಯ ಅಧಿಕಾರಿ ಅಶೋಕ್‌ ಮಿರ್ಜಿ, ಸಂಪನ್ಮೂಲ ವ್ಯಕ್ತಿ ಮಂಜುನಾಥ್ ಬಡಿಗೇರ್, ಪುರಸಭಾ ಸದಸ್ಯೆ ಮಂಜುಳ ನೀಲಕಂಠಯ್ಯ, ವಿಮೋಚನಾ ಸಂಸ್ಥೆಯ ಮಮತಾ ಹಾಜರಿದ್ದರು.

10ವರ್ಷಗಳಿಗೂ ಹೆಚ್ಚು ಕಾಲ ಸಮಾಜ ಸೇವೆ, ಸಾಮಾಜಿಕ ಜಾಗೃತಿ ಹೋರಾಟ, ಪರಿಸರ ಸಂರಕ್ಷಣೆಯಂತಹ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ಗೃಹ ಸಚಿವ ರಾಮಲಿಂಗಾರೆಡ್ಡಿ ಅವರ ಮಾರ್ಗದರ್ಶನದಲ್ಲಿ ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ನಾಗರಿಕ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಕೆಲಸ ಮಾಡಿದ್ದೇನೆ. ಪಕ್ಷ ಅವಕಾಶ ನೀಡಿದರೆ ಸ್ಪರ್ಧೆಗೆ ಸಿದ್ದ. ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಸೌಮ್ಯ ರಾಮಲಿಂಗಾರೆಡ್ಡಿ ತಿಳಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT