ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 2.5 ಲಕ್ಷ ಕೋಟಿ ಸಾಲ ಕಾಂಗ್ರೆಸ್‌ ಸರ್ಕಾರದ ಸಾಧನೆ

ಆನಗೋಡು: ಪರಿವರ್ತನಾ ಯಾತ್ರೆಯಲ್ಲಿ ಯಡಿಯೂರಪ್ಪ
Last Updated 4 ಜನವರಿ 2018, 13:48 IST
ಅಕ್ಷರ ಗಾತ್ರ

ಆನಗೋಡು, ದಾವಣಗೆರೆ ತಾ.: ‘ದೇಶದ ಇತಿಹಾಸದಲ್ಲಿ ಯಾವುದೇ ರಾಜ್ಯ ಮಾಡದಿರುವಷ್ಟು ದೊಡ್ಡ ಪ್ರಮಾಣದಲ್ಲಿ ನೀವು ಸಾಲ ಮಾಡಿದ್ದೀರಿ. ಕಾಂಗ್ರೆಸ್‌ ಅಧಿಕಾರ ಬಿಟ್ಟಾಗ ರಾಜ್ಯದ ಸಾಲದ ಮೊತ್ತ ಎರಡೂವರೆ ಲಕ್ಷ ಕೋಟಿ ದಾಟಬಹುದು. ಇದು ನಿಮ್ಮ ಕಾಂಗ್ರೆಸ್ ಸರ್ಕಾರದ ಸಾಧನೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಲೇವಡಿ ಮಾಡಿದರು.

ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆನಗೋಡಿನ ಮರುಳ ಸಿದ್ಧೇಶ್ವರ ದೇವಸ್ಥಾನ ಆವರಣದಲ್ಲಿ ಬುಧವಾರ ಪರಿವರ್ತನಾ ಯಾತ್ರೆಯ 150ನೇ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಮಾತಿನುದ್ದಕ್ಕೂ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು.

‘ನಿಮ್ಮ ಸರ್ಕಾರ ದಿವಾಳಿಯಾಗಿದೆ. ಬೆಂಗಳೂರಿನಲ್ಲಿ ಕಾರ್ನರ್‌ ಸೈಟ್‌ಗಳನ್ನು ಒತ್ತೆಯಿಟ್ಟು ₹ 975 ಕೋಟಿ ಸಾಲ ಪಡೆದಿದ್ದೀರಿ. ಮೈಸೂರು ಮಿನರಲ್ಸ್‌ ಲಿಮಿಟೆಡ್‌ನವರು ಬ್ಯಾಂಕ್‌ನಲ್ಲಿ ಠೇವಣಿಯಾಗಿಟ್ಟಿದ್ದ ₹ 1,475 ಕೋಟಿ ಮೊತ್ತವನ್ನು ರೈತರ ಸಾಲ ಮನ್ನಾ ಹೊಂದಾಣಿಕೆಗೆ ಬೇಕು ಎಂದು ಒತ್ತಾಯ
ಮಾಡಿ ಪಡೆದಿದ್ದೀರಿ. ಹಾಲು ಉತ್ಪಾದಕರಿಗೆ 3–4 ತಿಂಗಳಿಂದ ಪ್ರೋತ್ಸಾಹಧನ ಕೊಟ್ಟಿಲ್ಲ. ಎಂಎಲ್‌ಎ, ಎಂಎಲ್‌ಸಿ, ಎಂಪಿಗಳ ಪಿಎಗಳಿಗೆ ಸಂಬಳ ಕೊಟ್ಟಿಲ್ಲ’ ಎಂದು ಹೇಳಿದರು.

‘ನಾನು ಮುಖ್ಯಮಂತ್ರಿಯಾಗಿದ್ದಾಗ, ದೇಶದಲ್ಲಿ ಮೊದಲ ಬಾರಿಗೆ ಬಂಜಾರ ತಾಂಡಾಗಳ ಅಭಿವೃದ್ಧಿಯನ್ನು ದೊಡ್ಡ ಪ್ರಮಾಣದಲ್ಲಿ ಮಾಡಿದ್ದೆ. ಭೋವಿ ಸಮಾಜದ ಅಭಿವೃದ್ಧಿಗೆ ನಿಗಮ ಸ್ಥಾಪಿಸಿದ್ದೆ’ ಎಂದು ನೆನಪಿಸಿದರು.

‘ಜನ ಕೊಡುವ ತೆರಿಗೆ ಹಣವನ್ನು ರಾಜ್ಯ ಸರ್ಕಾರ ಲೂಟಿ ಮಾಡುತ್ತಿದೆ. ಒಂದೊಂದು ಕಾಮಗಾರಿಗೆ ₹ 100 ಕೋಟಿ ಇದ್ದುದು, 125 ಕೋಟಿ ಮಾಡಿ ಹೆಚ್ಚುವರಿ 25 ಕೋಟಿ ತಿನ್ನುತ್ತಿದೆ. ನೂರು ಕೋಟಿ ಮೊತ್ತದಲ್ಲೂ ಶೇ 10ರಿಂದ 15ರಷ್ಟು ಕಮಿಷನ್‌ ಹೊಡೆಯಲಾಗುತ್ತಿದೆ’ ಎಂದು ಆರೋಪಿಸಿದರು.

ಮಲಪ್ರಭಾ– ಘಟಪ್ರಭಾ ನಾಲೆ ನವೀಕರಣಕ್ಕೆ 600 ಕೋಟಿ ಅಂದಾಜು ಮಾಡಲಾಗಿತ್ತು. ಆದರೆ ಸಿದ್ದರಾಮಯ್ಯ ಅವರು ₹ 600 ಕೋಟಿ ಇದ್ದುದನ್ನು 1,100 ಕೋಟಿ ಮಾಡಿ ಡಿ.ಎನ್‌.ಉಪ್ಪಾರ್‌ ಎಂಬವರಿಗೆ ಕಾಮಗಾರಿ ಕೊಟ್ಟುಬಿಟ್ಟಿದ್ದಾರೆ. ₹ 500 ಕೋಟಿ ವ್ಯತ್ಯಾಸ ಮಾಡಲಾಗಿದೆ. ಇದನ್ನು ಮುಖ್ಯಮಂತ್ರಿ ಅಲ್ಲವೆಂದು ಹೇಳಲಿ ನೋಡೋಣ. ನಾನು ಆ ಸ್ಥಳಕ್ಕೆ ಹೋಗುತ್ತೇನೆ. ಅದರ ಸಮಗ್ರ ತನಿಖೆ ಮಾಡಿಸಲಾಗುವುದು, ಗುತ್ತಿಗೆ ಪಡೆದವರು, ನೀರಾವರಿ ಸಚಿವರು ಪಡೆದಿರುವ ಕಮಿಷನ್‌, ಹಂಚಿಕೊಂಡಿರುವ ಹಣದ ಮೊತ್ತ ಪತ್ತೆ ಮಾಡಲಾಗುವುದು’ ಎಂದು ಹೇಳಿದರು.

ಕಾಂಗ್ರೆಸ್‌ ತೊಲಗಿಸಬೇಕು: ಎಸ್‌.ಎ.ರವೀಂದ್ರನಾಥ ಮಾತನಾಡಿ, ‘ಈ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದಾಗ ಜಿಲ್ಲಾ ಸಚಿವರು ಸೇರಿದಂತೆ ಯಾರೂ ತಲೆಹಾಕಲಿಲ್ಲ. ಹಣ, ಹೆಂಡ ವ್ಯವಸ್ಥೆ ಮಾಡಿದರೆ ಜನ ಮತಹಾಕುತ್ತಾರೆ ಎಂಬ ಭಾವನೆಯನ್ನು ಈಗಿನ ಸರ್ಕಾರ ಹೊಂದಿದೆ. ಅವರಿಗೆ ಬುದ್ಧಿ ಕಲಿಸಬೇಕಾದರೆ ನೀವೆಲ್ಲ ಬಿಜೆಪಿಗೆ ಮತ ಹಾಕಬೇಕು’ ಎಂದರು.

‘ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಎಂದೂ ಬರಗಾಲ ಇರಲಿಲ್ಲ. ಆದರೆ ಕಾಂಗ್ರೆಸ್‌ ಆಡಳಿತದಲ್ಲಿದ್ದಾಗ ಬರಗಾಲ ಕಾಡುತ್ತದೆ. ಬರಗಾಲ ಓಡಿಸ
ಬೇಕೆಂದರೆ ಕಾಂಗ್ರೆಸ್‌ ತೊಲಗಿಸಬೇಕು. ಯಾರಿಗೆ ಟಿಕೆಟ್ ಕೊಟ್ಟರೂ ಕಮಲದ ಹೂ ಮಾತ್ರ ನಿಮಗೆ ಕಾಣಬೇಕು’ ಎಂದರು.

ಸಂಸದ ಜಿ.ಎಂ.ಸಿದ್ದೇಶ್ವರ, ಮುಧೋಳ ಶಾಸಕ ಗೋವಿಂದ ಕಾರಜೋಳ ಮಾತನಾಡಿದರು.

ರಾಜ್ಯ ಬಿಜೆಪಿ ಕಾರ್ಯದರ್ಶಿ ಎನ್‌.ರವಿಕುಮಾರ್‌, ಹಿರೇಕೆರೂರು ಶಾಸಕ ಯು.ಬಿ.ಬಣಕಾರ, ಪಕ್ಷದ ಜಿಲ್ಲಾ ಅಧ್ಯಕ್ಷ ಯಶವಂತರಾವ್ ಜಾಧವ್‌,
ಮುಖಂಡರಾದ ಎಂ.ಪಿ.ರೇಣುಕಾಚಾರ್ಯ, ಬಸವರಾಜ ನಾಯ್ಕ, ಬಿ.ಪಿ.ಹರೀಶ್‌, ಮಾಡಾಳ್ ವಿರೂಪಾಕ್ಷಪ್ಪ, ಡಾ.ಎ.ಎಚ್‌. ಶಿವಯೋಗಿಸ್ವಾಮಿ, ರಾಜ್ಯ ಭೋವಿ ಸಮಾಜದ ಅಧ್ಯಕ್ಷ ಎಚ್‌.ಆನಂದಪ್ಪ, ಮುಖಂಡ ಪ್ರೊ.ಲಿಂಗಣ್ಣ, ಎಸ್‌ಸಿ ಮೋರ್ಚಾ ಕಾರ್ಯದರ್ಶಿ ಬಸವರಾಜು, ಜಿ.ಪಂ.ಉಪಾಧ್ಯಕ್ಷೆ ಗೀತಾ ಗಂಗಾ ನಾಯ್ಕ,ನಟರಾಜ್, ಶೈಲಜಾ ಬಸವರಾಜ್‌, ಉಮಾ ರಮೇಶ್ ಇದ್ದರು. ಮಾಯಕೊಂಡ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಮೆಳ್ಳೆಕಟ್ಟೆ ನಾಗರಾಜ್‌ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT