ಈ ಸುಂದರಿ ಅದೃಷ್ಟವಂತೆ

7

ಈ ಸುಂದರಿ ಅದೃಷ್ಟವಂತೆ

Published:
Updated:
ಈ ಸುಂದರಿ ಅದೃಷ್ಟವಂತೆ

ಆಕಸ್ಮಿಕವಾಗಿ ಮಾಡೆಲಿಂಗ್‌ ಲೋಕಕ್ಕೆ ಪ್ರವೇಶಿಸಿದರೂ  ಮೊದಲ ಸೌಂದರ್ಯ ಸ್ಪರ್ಧೆಯಲ್ಲಿಯೇ ಕಿರೀಟ ಮುಡಿಗೇರಿಸಿಕೊಂಡ ಅದೃಷ್ಟ ರೂಪದರ್ಶಿ ಕಶೀಶ್‌ ಜೈಸ್ವಾಲ್‌ ಅವರದು.

ಮಾಡೆಲಿಂಗ್‌ಗೆ ಹೇಳಿ ಮಾಡಿಸಿದ ಮೈಕಟ್ಟು ಹೊಂದಿರುವ ವಾರಾಣಸಿಯ ಕಶೀಶ್‌ ಜೈಸ್ವಾಲ್‌ ನಗರದ ಸೆಂಚುರಿ ಲಿಂಕ್‌ ಟೆಕ್ನಾಲಜೀಸ್‌ ಕಂಪನಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌. ಫ್ಯಾಷನ್‌ ಲೋಕದ ಬಗೆಗಿನ ತನ್ನ ಕನಸುಗಳನ್ನು ಅರಳುಕಂಗಳಿಂದ ಹೇಳಿಕೊಳ್ಳುವ ಕಶೀಶ್‌ಗೆ ಮಾಡೆಲಿಂಗ್ ಪ್ರವೃತ್ತಿಯಷ್ಟೇ.

ಎಂಜಿನಿಯರಿಂಗ್‌ ಓದುತ್ತಿರುವಾಗಲೇ ಮಾಡೆಲಿಂಗ್‌ ಮಾಡಬೇಕು ಎಂಬ ಆಸೆಯಿಟ್ಟುಕೊಂಡಿದ್ದವರು ಕಶೀಶ್‌. ಆದರೆ ಕಾಲೇಜಿನಲ್ಲಾಗಲೀ, ಊರಿನಲ್ಲಾಗಲೀ ಇದಕ್ಕೆ ಪೂರಕ ವಾತಾವರಣವಿರಲಿಲ್ಲ. ಬೆಂಗಳೂರಿನ ಐಟಿ ಕಂಪೆನಿಯಲ್ಲಿ ಕೆಲಸ ಸಿಕ್ಕಿದ್ದರಿಂದ ನಗರಕ್ಕೆ ಬಂದಾಗ ಇವರ ಮನದ ಆಸೆ ರೆಕ್ಕೆ ಬಿಚ್ಚಿಕೊಂಡಿತು. 2017ರಲ್ಲಿ ನಡೆದ ‘ಮಿಸ್‌ ಅಂಡ್‌ ಮಿಸ್ಟರ್‌ ಸೌತ್‌ ಇಂಡಿಯಾ’ ಸೌಂದರ್ಯ ಸ್ಪರ್ಧೆಯಲ್ಲಿ ‘ಮಿಸ್‌ ತೆಲಂಗಾಣ’ ಆಗಿ ಆಯ್ಕೆಯಾದರು. ಮಾಡೆಲಿಂಗ್‌ ಕ್ಷೇತ್ರದಲ್ಲಿ ಹೆಸರು ಮಾಡಬೇಕು ಎಂಬ ಹಂಬಲ ಹೊಂದಿದ್ದ ಅವರು ಈಚೆಗೆ ನಗರದಲ್ಲಿ ನಡೆದ ‘ಮಿಸ್‌ ಆ್ಯಂಡ್‌ ಮಿಸ್ಟರ್‌ ಬೆಂಗಳೂರು’ ಸೌಂದರ್ಯ ಸ್ಪರ್ಧೆಯಲ್ಲಿ ‘ಮಿಸ್‌ ಬೆಂಗಳೂರು’ ಆಗಿ ಆಯ್ಕೆಯಾಗಿರುವುದು ಅವರ ಖುಷಿಯನ್ನು ಮತ್ತಷ್ಟು ಹೆಚ್ಚಿಸಿದೆ.

ಸೌಂದರ್ಯ ಸ್ಪರ್ಧೆಯ ಮೂಲಕ ಗುರುತಿಸಿಕೊಂಡ ಕಶೀಶ್‌, ಆ ಬಳಿಕ ನಗರದ ಪ್ರಖ್ಯಾತ ವಸ್ತ್ರ ವಿನ್ಯಾಸಕರ ವಸ್ತ್ರಗಳಿಗೆ ರೂಪದರ್ಶಿಯಾದರು. ಬೇರೆ ಬೇರೆ ವಿನ್ಯಾಸಕರ ವಿನ್ಯಾಸದ ದಿರಿಸುಗಳನ್ನು ತೊಟ್ಟು ವೇದಿಕೆ ಮೇಲೆ ಹೆಜ್ಜೆ ಹಾಕಿರುವ ಇವರಿಗೆ ಜಾಹೀರಾತು ಹಾಗೂ ಸಿನಿಮಾಗಳಲ್ಲೂ ನಟಿಸುವ ಆಸೆಯಿದೆ.

ಆದರೆ ಬಣ್ಣದ ಲೋಕಕ್ಕಾಗಿ ತನ್ನ ಕನಸಿನ ವೃತ್ತಿಯನ್ನು ಬಿಟ್ಟುಕೊಡಲು ಇವರಿಗೆ ಇಷ್ಟವಿಲ್ಲ.  ‘ಸಿನಿಮಾ ಅವಕಾಶಕ್ಕಾಗಿ ನಾನು ನನ್ನ ವೃತ್ತಿಯನ್ನು ಬಿಡುವುದಿಲ್ಲ. ವೃತ್ತಿಯೊಂದಿಗೆ ನನ್ನ ಪ್ರವೃತ್ತಿಗಳನ್ನೂ ಬ್ಯಾಲೆನ್ಸ್‌ ಮಾಡಿಕೊಂಡು ಹೋಗಲು ಪ್ರಯತ್ನಿಸುತ್ತೇನೆ. ಚಿಕ್ಕವಯಸ್ಸಿನಿಂದಲೂ ನನಗೆ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಬೇಕು ಎಂಬುದೇ ಕನಸು. ರೂಪ, ಮೈಕಟ್ಟು ಮಾಡೆಲಿಂಗ್‌ಗೆ ಹೇಳಿಮಾಡಿಸಿದಂಗಿದೆ ಎಂದು ಸ್ನೇಹಿತರು ಹೇಳುವಾಗ ಮಾಡೆಲಿಂಗ್‌ ಮಾಡುವ ಮನಸಾಯಿತು. ಬೆಂಗಳೂರಿನಲ್ಲಿ ಅವಕಾಶ ಸಲೀಸಾಗಿ ಸಿಕ್ಕಿತು’ ಎನ್ನುತ್ತಾರೆ ಅವರು.

‘ಬಣ್ಣದ ಲೋಕದಲ್ಲಿ ಫಿಟ್‌ನೆಸ್ ಮುಖ್ಯ’ ಎನ್ನುವ ಕಶೀಶ್ ಫಿಟ್‌ ಆಗಿ ಇರಲು ಪ್ರತಿದಿನ ವ್ಯಾಯಾಮ ಮಾಡುತ್ತಾರೆ.

‘ಜಿಮ್‌ಗೂ ಹೋಗಿ ದೇಹ ದಂಡಿಸುತ್ತೇನೆ. ಕಟ್ಟುನಿಟ್ಟಾಗಿ ಡಯೆಟ್ ಪಾಲಿಸುತ್ತೇನೆ. ಪ್ರತಿದಿನ ಸೇಬು ಹಾಗೂ ಒಂದು ಲೋಟ ಹಾಲು ಕುಡಿಯುತ್ತೇನೆ. ಚರ್ಮದ ರಕ್ಷಣೆಗೆ ವಿಶೇಷ ಮುತುವರ್ಜಿ ವಹಿಸುತ್ತೇನೆ. ಮನೆಯಿಂದ ಹೊರಗೆ ಕಾಲಿಡುವಾಗ ಸನ್‌ಸ್ಕ್ರೀನ್ ಲೋಶನ್ ಹಚ್ಚಿಯೇ ಹೊರಡುತ್ತೇನೆ. ಜಿಡ್ಡಿನ ಪದಾರ್ಥಗಳನ್ನು ಮುಟ್ಟುವುದೂ ಇಲ್ಲ. ಹಸಿವಾದಾಗ ಹಣ್ಣುಗಳ ಜ್ಯೂಸ್‌, ತರಕಾರಿ, ಹಣ್ಣುಗಳ ಮಿಶ್ರ ಸಲಾಡ್‌ ತಿನ್ನುತ್ತೇನೆ. ಇದರಿಂದ ತೂಕ ಹೆಚ್ಚು ಆಗಲ್ಲ’ ಎಂದು ಫಿಟ್‌ನೆಸ್‌ ಗುಟ್ಟನ್ನು ಬಿಚ್ಚಿಡುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry