ಗುರುವಾರ , ಆಗಸ್ಟ್ 13, 2020
27 °C

ಮನೆ ನಿರ್ವಹಣೆಗೆ ಹೊಸ ನಿರ್ಣಯಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮನೆ ನಿರ್ವಹಣೆಗೆ ಹೊಸ ನಿರ್ಣಯಗಳು

ಹೊಸ ವರ್ಷಕ್ಕೆ ಏನೆಲ್ಲಾ ನಿರ್ಣಯಗಳನ್ನು ತೆಗೆದುಕೊಂಡಿದ್ದೀರಿ? ಈ ನಿರ್ಣಯಗಳು ಕೇವಲ ನಿಮ್ಮ ವೈಯಕ್ತಿಕ ವಿಷಯಗಳಿಗಷ್ಟೇ ಸೀಮಿತವಾಗದೆಯೇ? ಮನೆಯ ಒಳಾಂಗಣಕ್ಕೂ ನಿಮ್ಮ ನಿರ್ಣಯಗಳನ್ನು ವಿಸ್ತರಿಸಿ. ಮನೆಯನ್ನು ದಿನಾ ಹೊಸತರಂತೆ ಸಿದ್ಧಗೊಳಿಸುವುದು ಹೇಗೆ ಎಂಬ ಸಲಹೆ ಇಲ್ಲಿವೆ.

ವಸ್ತುಗಳನ್ನು ಗುಡ್ಡೆ ಹಾಕದಿರಿ: ಹಬ್ಬ, ಹರಿದಿನಗಳಲ್ಲಿ ಮನೆಯನ್ನು ಶುಚಿಗೊಳಿಸುವಂತೆ ದಿನಾ ಮನೆಯನ್ನು ಸ್ವಚ್ಛಮಾಡಿ. ಅನಾವಶ್ಯಕ ವಸ್ತುಗಳನ್ನು ಮನೆಯಿಂದ ಹೊರಹಾಕಿ. ಅವು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಸ್ಥಳದ ಜೊತೆಗೆ ಶುಚಿತ್ವಕ್ಕೂ ತೊಂದರೆಯಾಗುತ್ತದೆ. ಸುಸ್ಥಿತಿಯಲ್ಲಿರುವ, ನೀವು ಬಳಸದ ಹಳೆಯ ಬಟ್ಟೆಗಳಿದ್ದರೆ ಅವುಗಳನ್ನು ಅಗತ್ಯ ಇರುವವರಿಗೆ ಕೊಟ್ಟುಬಿಡಿ.

ಮನೆ ಸ್ವಚ್ಛತೆಗೆ ದಿನ ನಿಗದಿಗೊಳಿಸಿ: ಮನೆ ಶುಚಿಗೊಳಿಸಲೆಂದೇ ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿಕೊಳ್ಳಿ. ವೇಳಾಪಟ್ಟಿಯನ್ನು ಸಿದ್ಧಪಡಿಸಿ. ಅದನ್ನು ಬಚ್ಚಲುಮನೆಯ ಬಾಗಿಲಿಗೆ ಅಂಟಿಸಿ. ಕೆಲಸಕ್ಕೆ ಹೋಗುವವರಿಗೆ ಪ್ರತಿದಿನ ಮನೆ ಸ್ವಚ್ಛ ಮಾಡುವುದು ಸಾಧ್ಯವಾಗುವುದಿಲ್ಲ. ಆದರೆ ಮನೆ ಕೆಲಸದಲ್ಲಿ ವಿಭಾಗವನ್ನು ಮಾಡಿಕೊಳ್ಳುವುದರಿಂದ ಒಂದೇ ದಿನ ಪರದಾಡುವುದು ತಪ್ಪುತ್ತದೆ. ಉದಾಹರಣೆಗೆ: ಒಂದು ದಿನ ಅಡುಗೆ ಕೋಣೆ ಸ್ವಚ್ಛ ಮಾಡಿದರೆ ಮತ್ತೊಂದು ದಿನ ಮಲಗುವ ಕೋಣೆ, ಇನ್ನೊಂದು ದಿನ ಡಬ್ಬಿಗಳನ್ನು ತೊಳೆಯುವುದು... ಹೀಗೆ ಮಾಡುವುದರಿಂದ ವಾರಂತ್ಯದಲ್ಲಿ ಒಮ್ಮೆಲೇ ಹೊರೆ ಬೀಳುವುದು ಕಡಿಮೆಯಾಗುತ್ತದೆ.

ಸುರಕ್ಷತೆ ಮುಖ್ಯವಾಗಲಿ: ಮನೆ ಸುಂದರವಾಗಿ ಕಾಣುವುದರ ಜೊತೆಗೆ ಸುರಕ್ಷಿತವಾಗಿರುವುದೂ ಮುಖ್ಯ. ಗ್ಯಾಸ್‌ ಪೈಪ್‌, ಎಲೆಕ್ಟ್ರಾನಿಕ್ ವಸ್ತುಗಳು ಸರಿಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಮನೆಗೆ ಹಚ್ಚಿರುವ ಬಣ್ಣ, ಪ್ಲಾಸ್ಟರ್‌ಗಳು ಕಿತ್ತು ಹೋಗಿದ್ದರೆ ಹೊಸತನ್ನು ಹಾಕಿಸಿ. ಮನೆಯ ಸುರಕ್ಷತೆಗಾಗಿ ಸಿ.ಸಿ. ಕ್ಯಾಮೆರಾ ಅಳವಡಿಸಿ. ಒಳ್ಳೆಯ ಗಾಳಿ, ಬೆಳಕಿಗೆ ವ್ಯವಸ್ಥೆ ಮಾಡಿ.  ಇದರಿಂದ ಮಾಲಿನ್ಯವನ್ನು ತಪ್ಪಿಸಬಹುದು. ಮನೆಯಲ್ಲಿ ಹಿರಿಯರು, ಮಕ್ಕಳಿದ್ದರೆ ಅವರಿಗೆ ಅನುಕೂಲವಾಗುವ ಹಾಗೆ ಒಳಾಂಗಣ ಪರಿಕರಗಳನ್ನು ಅಳವಡಿಸಿ.

ಹಸಿರಿಗೆ ಆದ್ಯತೆ ನೀಡಿ: ಹಸಿರು ಕಣ್ಣಿನ ಜೊತೆಗೆ ಮನಸ್ಸಿಗೂ ಮುದ ನೀಡುತ್ತದೆ. ಮನೆಯ ಮುಂದೆ ಪುಟ್ಟ ಕೈತೋಟವನ್ನು ಮಾಡಿ. ನಿಮ್ಮ ಮನೆಯಲ್ಲಿ ಮಕ್ಕಳಿದ್ದರೆ ದಿನ ಅವರಿಂದ ಅದಕ್ಕೆ ನೀರುಣಿಸಿವುದರಿಂದ ಅವರಲ್ಲಿಯೂ ಪರಿಸರ ಕಾಳಜಿ ಬೆಳೆಯುತ್ತದೆ. ಗಿಡಗಳಿಗೆ ಸಾವಯವ ಗೊಬ್ಬರವನ್ನೇ ಬಳಸಿ. ಕೆಲವರು ಪ್ರಾರಂಭದಲ್ಲಿ ಉತ್ಸಾಹದಿಂದ ಉದ್ಯಾನ ಪ್ರಾರಂಭಿಸುತ್ತಾರೆ. ಆದರೆ ಕೆಲ ಸಮಯದಲ್ಲಿಯೇ ಆಸಕ್ತಿ ಕಳೆದುಕೊಳ್ಳುತ್ತಾರೆ. ಸಮಯದ ಕೊರತೆಯಿಂದಲೂ ಗಿಡಗಳನ್ನು ನೋಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೊಸ ವರ್ಷದಲ್ಲಿ ಕೈತೋಟಕ್ಕಾಗಿಯೇ ಸಮಯವನ್ನು ನಿಗದಿಪಡಿಸಿಕೊಳ್ಳಿ. ಒಳಾಂಗಣ ಗಿಡಗಳನ್ನು ಮನೆಯಲ್ಲಿ ಇಡುವುದರಿಂದ ಮನೆಯ ಮೆರುಗು ಹೆಚ್ಚುತ್ತದೆ.

ದುಂದುವೆಚ್ಚಕ್ಕಿರಲಿ ಕಡಿವಾಣ: ಮನೆ ಅಂದವಾಗಿ ಕಾಣಬೇಕು ನಿಜ. ಹಾಗೆಂದು ಕಂಡಕಂಡ ವಸ್ತುಗಳನ್ನು ಕೊಳ್ಳುವ ಅಭ್ಯಾಸ ಕೆಲವರಿಗೆ ಇರುತ್ತದೆ. ಇದಕ್ಕೆ ಕಡಿವಾಣ ಹಾಕಿ. ಹೊಸ ವಸ್ತುಗಳನ್ನು ಕೊಳ್ಳುವಾಗ ಅದು ಅಗತ್ಯವಿದ್ದರೆ ಮಾತ್ರವೇ ತೆಗೆದುಕೊಳ್ಳಿ. ಮನೆಗೆ ಬೇಕಾದ ವಸ್ತುಗಳನ್ನು ಮೊದಲೇ ಪಟ್ಟಿ ಮಾಡಿಕೊಳ್ಳಿ. ರಿಯಾಯಿತಿ ದರದಲ್ಲಿ ದೊರಕುವಾಗಲೇ ಕೊಂಡುಕೊಳ್ಳಿ. ಕಣ್ಣಿಗೆ ಸುಂದರವಾಗಿ ಕಾಣುವ ವಸ್ತುಗಳನ್ನೆಲ್ಲ ಕೊಳ್ಳುವುದನ್ನು ನಿಲ್ಲಿಸಿ. ಮನೆಗೆ ಏನೇ ಕೊಳ್ಳುವಾಗಲೂ ಅಗತ್ಯದ ಜೊತೆಗೆ ಖರ್ಚಿನ ಬಗ್ಗೆ ನಿಗಾ ಇರಲಿ.

ಮರುಬಳಕೆಗೆ ಆದ್ಯತೆ ನೀಡಿ: ಬಳಸಿ ಬಿಟ್ಟ ವಸ್ತುಗಳನ್ನು ಮರುಬಳಕೆ ಮಾಡುವ ಮೂಲಕ ಗೃಹೋಪಯೋಗಿ ಉತ್ಪನ್ನಗಳನ್ನು ತಯಾರಿಸುವ ಟ್ರೆಂಡ್‌ ಈಚೆಗೆ ಜನಪ್ರಿಯವಾಗುತ್ತಿದೆ. ತ್ಯಾಜ್ಯವಸ್ತುಗಳಿಂದ ಪೀಠೋಪಕರಣಗಳನ್ನು ತಯಾರಿಸಲಾಗುತ್ತದೆ. ಇವು ಆಕರ್ಷಕ ರೂಪವನ್ನು ಪಡೆದಿವೆ. ಇಂಥ ವಸ್ತುಗಳನ್ನು ಬಳಸುವುದರಿಂದ ಪರಿಸರಕ್ಕೂ ಒಳ್ಳೆಯದು. ಮನೆಯ ವಸ್ತುಗಳಲ್ಲಿ ಶೇಕಡ 50ರಷ್ಟಾದರೂ ಈ ರೀತಿಯ ವಸ್ತುಗಳು ಇರಲಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.