ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾಖ್ಯಾನ ಚಾತುರ್ಯ?

Last Updated 4 ಜನವರಿ 2018, 19:30 IST
ಅಕ್ಷರ ಗಾತ್ರ

ಮೂರು ಘಟನೆಗಳಿವೆ. 1. ಪೇಶ್ವೆಗಳ ವಿರುದ್ಧ ಬ್ರಿಟಿಷರು ಯುದ್ಧ ಮಾಡಿ ಅವರ ಮೇಲೆ ಗೆಲುವು ಸಾಧಿಸಿ ಮಹಾರಾಷ್ಟ್ರದ ಕೆಲವು ಭಾಗಗಳನ್ನು ವಶಪಡಿಸಿಕೊಂಡದ್ದು. 2. ಬ್ರಿಟಿಷ್ ಸೈನ್ಯದಲ್ಲಿನ ಮಹಾರ್ ರೆಜಿಮೆಂಟ್ ಈ ಸದೆಬಡಿದ ಕಾರ್ಯದಲ್ಲಿ ಮುನ್ನೆಲೆಯಲ್ಲಿದ್ದದ್ದು, ಬ್ರಾಹ್ಮಣರಿಂದ ದಲಿತರ ಶೋಷಣೆ ಶತಮಾನಗಳಿಂದ ಬೇಕಾದಷ್ಟು ಆಗಿರುವುದು. 3. ಬ್ರಾಹ್ಮಣರಾದ ಪೇಶ್ವೆಗಳು ಮಹಾರಾಷ್ಟ್ರವನ್ನು ಕೆಲವು ಕಾಲ ಆಳಿದ್ದರೆಂಬುದು.

ಈಗ ಈ ಕೋರೆಗಾಂವ್ ಯುದ್ಧವನ್ನು ‘ದಲಿತರ ಘನತೆಗಾಗಿ, ಆತ್ಮಗೌರವಕ್ಕಾಗಿ ಅಸಮಾನತೆಯ ವಿರುದ್ಧ ನಡೆದ ಯುದ್ಧ’ ಎಂದು ವ್ಯಾಖ್ಯಾನಿಸಿದರೆ (ಸಂಗತ, ಜ. 4) ಅದನ್ನು ಅಲ್ಲವೆನ್ನುವ ಧೈರ್ಯ ಯಾರಿಗೂ ಇಲ್ಲ. ವ್ಯಾಪಾರಕ್ಕಾಗಿ ಬಂದ ಬ್ರಿಟಿಷರು ಈ ದೇಶವನ್ನು ಆಳುತ್ತಿದ್ದ ನೂರಾರು ಸಣ್ಣ ಪುಟ್ಟ ರಾಜರನ್ನು ಒಬ್ಬರ ವಿರುದ್ಧ ಮತ್ತೊಬ್ಬರನ್ನು ಎತ್ತಿಕಟ್ಟಿ ಕೊನೆಗೆ ಇಡೀ ದೇಶವನ್ನೇ ತಮ್ಮ ವಶಕ್ಕೆ ತೆಗೆದುಕೊಂಡರೆಂಬುದೇ ಸ್ವಾತಂತ್ರ್ಯಪೂರ್ವ ಭಾರತದ ಇತಿಹಾಸ ಎಂದು ನಾವು ಇತಿಹಾಸದಲ್ಲಿ ಓದುತ್ತೇವೆ. ಅಂಥ ರಾಜರುಗಳಲ್ಲಿ ಟಿಪ್ಪು ಕೂಡ ಒಬ್ಬ. ಈಗ ಅವನನ್ನು ಬ್ರಿಟಿಷರ ವಿರುದ್ಧ ಹೋರಾಡಿದ ದೇಶಭಕ್ತನೆಂದು ಕೆಲವರು ಬಿಂಬಿಸುವುದು ನಡೆದಿದೆ ಮತ್ತು ಇದನ್ನು ಒಪ್ಪಬೇಕೆಂದು ಅನಿಸುತ್ತದೆ. ಇದನ್ನೇ ಇನ್ನು ಯಾರಾದರೂ, ‘ಮತಾಂಧ ಟಿಪ್ಪುವಿನ ಕ್ರೌರ್ಯದಿಂದ ಹಿಂದೂಗಳನ್ನು ಬ್ರಿಟಿಷರು ಮುಕ್ತಗೊಳಿಸಿದ ಹಾಗೂ ಹಿಂದೂ ರಾಜರಿಗೆ ಮತ್ತೆ ರಾಜ್ಯ ಮರಳಿಸಿದ ಘಟನೆ’ ಎಂದು ವ್ಯಾಖ್ಯಾನಿಸಿದರೆ ಅದನ್ನು ಅಲ್ಲವೆನ್ನುವುದು ಅಷ್ಟು ಸುಲಭವೇ? ಟಿಪ್ಪು ಸುಲ್ತಾನನನ್ನು ಮಟ್ಟಹಾಕಲು ಮರಾಠರು ಮತ್ತು ಹೈದರಾಬಾದಿನ ನಿಜಾಮರ ನೆರವನ್ನೂ ಬ್ರಿಟಿಷರು ಪಡೆದಿದ್ದರು.

ಸಮಕಾಲೀನ ಸಂದರ್ಭಕ್ಕೆ ಬಂದರೆ, ಕಾಶ್ಮೀರದ ಒಂದು ಭಾಗ ಈಗ ಪಾಕ್ ವಶದಲ್ಲಿದೆ. ಅದನ್ನು ನಾವು ‘ಪಾಕ್ ಆಕ್ರಮಿತ ಕಾಶ್ಮೀರ’ವೆಂದು ಕರೆಯುತ್ತಿದ್ದೇವೆ. ಆದರೆ ಪಾಕಿಸ್ತಾನದವರು ಅದನ್ನೇ ‘ಆಜಾದ್ ಕಾಶ್ಮೀರ’ವೆನ್ನುತ್ತಾರೆ. ಹಾಗೆಯೇ ಉಗ್ರಗಾಮಿಗಳ ದಾಂದಲೆ ಎಂದು ಯಾವು
ದನ್ನು ನಾವು ಕರೆಯುತ್ತೇವೋ ಅದನ್ನು ಅವರು ಕಾಶ್ಮೀರಿಗಳ ಸ್ವಾತಂತ್ರ್ಯ ಹೋರಾಟ ಎನ್ನುತ್ತಾರೆ. ಇತಿಹಾಸದಲ್ಲಿ ಅದು ಹೇಗೆಂದು ದಾಖಲಾಗಬೇಕು? ಹಾಗಾದರೆ ಕೊನೆಗೂ ಇತಿಹಾಸವೆನ್ನುವುದು ಘಟನೆಗಳನ್ನು ತಮ್ಮ ಮೂಗಿನ ನೇರಕ್ಕೆ ತಕ್ಕಂತೆ ವ್ಯಾಖ್ಯಾನಿಸುವ, ವ್ಯಾಖ್ಯಾನಕಾರರ ಚಾತುರ್ಯ ಮಾತ್ರವೇ? ಬಲ್ಲವರು ಬೆಳಕು ಚೆಲ್ಲಬೇಕು.

–ಡಾ. ಆರ್.ಲಕ್ಷ್ಮೀನಾರಾಯಣ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT