ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂಬತ್ತು ಸುತ್ತು ಗುಂಡು ಹಾರಿಸಿ ಆರೋಪಿಗಳ ಬಂಧನ

Last Updated 4 ಜನವರಿ 2018, 19:30 IST
ಅಕ್ಷರ ಗಾತ್ರ

ಮಂಗಳೂರು: ಸುರತ್ಕಲ್‌ನ ಕಾಟಿಪಳ್ಳದಲ್ಲಿ ದೀಪಕ್‌ ರಾವ್‌ (30) ಕೊಲೆ ಮಾಡಿ ಪರಾರಿಯಾಗಿದ್ದ ಹಂತಕರನ್ನು ಕೆಲವೇ ಗಂಟೆಗಳೊಳಗೆ ಬಂಧಿಸುವ ಪ್ರಯತ್ನದಲ್ಲಿ ಪೊಲೀಸರು ಒಂಬತ್ತು ಸುತ್ತು ಗುಂಡು ಹಾರಿಸಿದ್ದರು. ಈ ನಡುವಿನಲ್ಲಿ ಎರಡು ಬಾರಿ ಆರೋಪಿಗಳು ಪೊಲೀಸರನ್ನು ಕೊಲ್ಲಲು ಯತ್ನಿಸಿದ್ದರು.

ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಕಮಲ್‌ ಪಂತ್‌ ಮತ್ತು ನಗರ ಪೊಲೀಸ್ ಕಮಿಷನರ್‌ ಟಿ.ಆರ್‌.ಸುರೇಶ್‌ ಈ ಮಾಹಿತಿಯನ್ನು ಬಹಿರಂಗಪಡಿಸಿದರು.

‘ಅಬ್ದುಲ್‌ ಮಜೀದ್‌ ಎಂಬುವವರ ಮನೆಯಿಂದ ಹಿಂತಿರುಗುತ್ತಿದ್ದ ದೀಪಕ್‌ ಅವರನ್ನು ಕಾರಿನಲ್ಲಿ ಬಂದು ಅಡ್ಡಗಟ್ಟಿದ್ದ ನಾಲ್ವರು ಮಾರಕಾಸ್ತ್ರಗಳಿಂದ ಹೊಡೆದು ಪರಾರಿಯಾಗಿದ್ದರು. ದೀಪಕ್‌ ಸ್ಥಳದಲ್ಲೇ ಮೃತಪಟ್ಟಿದ್ದರು. ಕೊಲೆ ಮಾಡಿದವರು ಬಿಳಿ ಬಣ್ಣದ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಪರಾರಿಯಾಗಿದ್ದರು ಎಂಬ ಮಾಹಿತಿಯಷ್ಟೇ ಸ್ಥಳೀಯರಿಂದ ಪೊಲೀಸರಿಗೆ ಲಭ್ಯವಾಗಿತ್ತು. ತಕ್ಷಣವೇ ಸುರತ್ಕಲ್‌ ಪೊಲೀಸರು ಈ ಮಾಹಿತಿಯನ್ನು ವಯರ್‌ಲೆಸ್‌ ಮೂಲಕ ಬಿತ್ತರಿಸಿದ್ದರು’ ಎಂದು ಕಮಲ್‌ ಪಂತ್‌ ತಿಳಿಸಿದರು.

ಆ ಕ್ಷಣದಿಂದಲೇ ಸುತ್ತಮುತ್ತಲ ಪ್ರದೇಶದಲ್ಲಿ ನಾಕಾಬಂದಿ ಆರಂಭಿಸಲಾಗಿತ್ತು. ಮೂರುಕಾವೇರಿ ಎಂಬಲ್ಲಿ ಕರ್ತವ್ಯದಲ್ಲಿದ್ದ ಮೂಲ್ಕಿ ಠಾಣೆಯ ಗೃಹರಕ್ಷಕ ಸಿಬ್ಬಂದಿ ಹರೀಶ್ ಮೊದಲು ಆರೋಪಿಗಳಿದ್ದ ಕಾರನ್ನು ಗುರುತಿಸಿದ್ದರು. ಅವರು ನೀಡಿದ್ದ ಮಾಹಿತಿ ಆಧರಿಸಿ ಮೂಲ್ಕಿ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಶೀತಲ್‌, ಎಎಸ್‌ಐ ಚಂದ್ರಶೇಖರ್‌ ಮತ್ತು ಸಿಬ್ಬಂದಿ ಕಾರನ್ನು ಬೆನ್ನಟ್ಟಿದ್ದರು ಎಂದರು.

ಕಾರು ಹತ್ತಿಸಲು ಯತ್ನ: ಕಿನ್ನಿಗೋಳಿ ಸಮೀಪದ ಉಲ್ಲಂಜೆ ಬಳಿ ಆರೋಪಿಗಳಿದ್ದ ಕಾರು ಬರುತ್ತಿದ್ದಂತೆ ಅದರ ಎದುರು ನಿಂತಿದ್ದ ಶೀತಲ್‌, ವಾಹನ ನಿಲ್ಲಿಸುವಂತೆ ಸೂಚನೆ ನೀಡಿದ್ದರು. ಆದರೆ, ಹಂತಕರು ಅಧಿಕಾರಿ ಮೇಲೆ ಕಾರು ಚಲಾಯಿಸಲು ಯತ್ನಿಸಿದ್ದರು. ಜಿಗಿದು ಚರಂಡಿಗೆ ಬಿದ್ದ ಶೀತಲ್‌ ಪ್ರಾಣ ಉಳಿಸಿಕೊಂಡಿದ್ದರು. ಅವರ ಬಲಕೈ ಮತ್ತು ಬೆರಳಿಗೆ ಗಾಯವಾಗಿತ್ತು ಎಂದು ತಿಳಿಸಿದರು.

ಮೇಲೆದ್ದು ಬಂದು ಸರ್ವೀಸ್ ರಿವಾಲ್ವರ್‌ನಿಂದ ಐದು ಸುತ್ತು ಗುಂಡು ಹಾರಿಸಿದ್ದರು. ಕಾರನ್ನು ಬೆನ್ನಟ್ಟಲು ಮುಂದಾದಾಗ ಪೊಲೀಸ್‌ ಜೀಪ್‌ ಕೆಟ್ಟಿತ್ತು. ತಕ್ಷಣವೇ ಸಮೀಪದಲ್ಲಿದ್ದ ಬಾಡಿಗೆ ಕಾರೊಂದನ್ನು ಬಳಸಿ ಆರೋಪಿಗಳನ್ನು ಹಿಂಬಾಲಿಸಿದ್ದರು. ಮೂಡುಬಿದಿರೆ ಸಮೀಪದ ಮಿಜಾರು ಬಳಿ ಆರೋಪಿಗಳಿದ್ದ ಕಾರನ್ನು ಪೊಲೀಸ್ ತಂಡ ಸುತ್ತುವರಿಯಲು ಸಾಧ್ಯವಾಯಿತು ಎಂದರು.

ಇಬ್ಬರು ಪರಾರಿ: ಮಿಜಾರು ಬಳಿ ಉಲ್ಲಂಜೆ ನಿವಾಸಿ ಮೊಹಮ್ಮದ್ ನೌಷಾದ್‌ (22) ಮತ್ತು ಕೃಷ್ಣಾಪುರ ನಾಲ್ಕನೇ ಬ್ಲಾಕ್‌ ನಿವಾಸಿ ಮೊಹಮ್ಮದ್ ಇರ್ಷಾನ್‌ ಅಲಿಯಾಸ್ ಇರ್ಶಾ (21) ಸೆರೆ ಸಿಕ್ಕರು. ಕೃಷ್ಣಾಪುರ ಕಾಟಿಪಳ್ಳದ ಮೊಹಮ್ಮದ್ ನವಾಝ್‌ ಅಲಿಯಾಸ್‌ ಪಿಂಕಿ ನವಾಝ್‌ (23) ಮತ್ತು ರಿಜ್ವಾನ್‌ ಅಲಿಯಾಸ್‌ ಇಜ್ಜು ಅಲಿಯಾಸ್‌ ರಿಜ್ಜು (24) ಕಾರಿನಿಂದ ಇಳಿದು ಪರಾರಿಯಾಗಿದ್ದರು ಎಂದು ಸುರೇಶ್‌ ಹೇಳಿದರು.

ತಪ್ಪಿಸಿಕೊಂಡ ಆರೋಪಿಗಳು ಬಡಗ ಎಡಪದವು ಸಮೀಪದ ದಡ್ಡಿಗುರಿ ಎಂಬಲ್ಲಿ ಇರುವ ಮಾಹಿತಿ ಲಭ್ಯವಾಗಿತ್ತು. ಅವರ ಬಂಧನಕ್ಕೆ ಸಿಸಿಬಿ ಇನ್‌ಸ್ಪೆಕ್ಟರ್ ಶಾಂತಾರಾಂ ಮತ್ತು ಪಣಂಬೂರು ಠಾಣೆ ಇನ್‌ಸ್ಪೆಕ್ಟರ್‌ ಕೆ.ಎಂ.ರಫೀಕ್‌ ನೇತೃತ್ವದ ತಂಡ ತೆರಳಿತ್ತು. ಇಬ್ಬರನ್ನೂ ಬಂಧಿಸಲು ಯತ್ನಿಸಿದಾಗ ತಲವಾರಿನಿಂದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದರು. ಶರಣಾಗುವಂತೆ ನೀಡಿದ ಸೂಚನೆಯನ್ನೂ ‍ಪಾಲಿಸಲಿಲ್ಲ. ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದರು ಎಂದರು.

‘ಇಬ್ಬರೂ ಇನ್‌ಸ್ಪೆಕ್ಟರ್‌ಗಳು ಹಾರಿಸಿದ ಗುಂಡುಗಳು ಪಿಂಕಿ ನವಾಝ್‌ ಮತ್ತು ರಿಜ್ವಾನ್‌ ಕಾಲಿಗೆ ತಗುಲಿವೆ. ಇಬ್ಬರನ್ನೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನೌಷಾದ್‌ ಮತ್ತು ಇರ್ಷಾನ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ಎರಡು ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಲಾಗಿದೆ’ ಎಂದು ತಿಳಿಸಿದರು.

ಪಿಂಕಿ ನವಾಝ್‌ ವಿರುದ್ಧ ಕೊಲೆಯತ್ನ, ಕಳ್ಳತನ ಸೇರಿದಂತೆ 12 ಪ್ರಕರಣಗಳಿವೆ. ರಿಜ್ವಾನ್‌ ವಿರುದ್ಧ ಕೊಲೆ, ಕೊಲೆಯತ್ನ ಆರೋಪದಡಿ ನಾಲ್ಕು ಪ್ರಕರಣಗಳಿವೆ. ನೌಷಾದ್‌ ವಿರುದ್ಧ ಕೊಲೆ, ಕೊಲೆಯತ್ನ ಮತ್ತು ಅತ್ಯಾಚಾರ ಆರೋಪದಡಿ ಮೂರು ಪ್ರಕರಣಗಳಿವೆ. ಇರ್ಷಾನ್‌ ವಿರುದ್ಧ ತಲಾ ಒಂದು ಕೊಲೆ ಮತ್ತು ಕೊಲೆಯತ್ನ ಪ್ರಕರಣಗಳಿವೆ ಎಂದರು.

₹ 1.20 ಲಕ್ಷ ಬಹುಮಾನ

ಹಂತಕರ ಬಂಧನ ಕಾರ್ಯಾಚರಣೆಯಲ್ಲಿ ಭಾಗಿಯಾದ ಮೂಲ್ಕಿ ಠಾಣೆ ಎಸ್‌ಐ ಶೀತಲ್‌, ಎಎಸ್‌ಐ ಚಂದ್ರಶೇಖರ್‌, ಹೆಡ್‌ ಕಾನ್‌ಸ್ಟೆಬಲ್‌ ಮಹೇಶ್, ಚಾಲಕ ಹುಸೇನ್‌, ಗೃಹರಕ್ಷಕ ಹರೀಶ್‌, ಸಿಸಿಬಿ ಇನ್‌ಸ್ಪೆಕ್ಟರ್‌ ಶಾಂತಾರಾಂ ಮತ್ತು ಪಣಂಬೂರು ಠಾಣೆ ಇನ್‌ಸ್ಪೆಕ್ಟರ್‌ ಕೆ.ಎಂ.ರಫೀಕ್‌ಗೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿ ಎನ್‌.ರಾಜು ₹ 1.20 ಲಕ್ಷ ನಗದು ಬಹುಮಾನ ಘೋಷಿಸಿದ್ದಾರೆ. ಎಡಿಜಿಪಿ ಕಮಲ್‌ ಪಂತ್‌ ಗುರುವಾರ ಬಹುಮಾನ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT