ಬಿಗಿ ಭದ್ರತೆಯ ಮಧ್ಯೆ ದೀಪಕ್ ಅಂತ್ಯಕ್ರಿಯೆ

7

ಬಿಗಿ ಭದ್ರತೆಯ ಮಧ್ಯೆ ದೀಪಕ್ ಅಂತ್ಯಕ್ರಿಯೆ

Published:
Updated:
ಬಿಗಿ ಭದ್ರತೆಯ ಮಧ್ಯೆ ದೀಪಕ್ ಅಂತ್ಯಕ್ರಿಯೆ

ಮಂಗಳೂರು: ಬುಧವಾರ ಮಧ್ಯಾಹ್ನ ದುಷ್ಕರ್ಮಿಗಳಿಂದ ಕೊಲೆಗೀಡಾದ ದೀಪಕ್ ರಾವ್ ಅಂತ್ಯಕ್ರಿಯೆ ಗುರುವಾರ ಕಾಟಿಪಳ್ಳದ ಜನತಾ ಕಾಲೋನಿ ಗಣೇಶ್‌ ಕಟ್ಟೆ ಹಿಂದೂ ಸ್ಮಶಾನದಲ್ಲಿ ಮಧ್ಯಾಹ್ನ ಪೊಲೀಸ್ ಬಿಗಿ ಭದ್ರತೆಯ ಮಧ್ಯೆ ನಡೆಯಿತು. ಗುರುವಾರ ಬೆಳಿಗ್ಗೆಯಿಂದಲೇ ಅನೇಕ ಅನಿರೀಕ್ಷಿತ ಬೆಳವಣಿಗೆಗಳು ನಡೆದರೂ, ಕೊನೆಗೆ ಅಂತ್ಯಕ್ರಿಯೆ ಶಾಂತಿಯುತವಾಗಿ ನಡೆಯಿತು.

ಮನೆ ಬಾಗಿಲಿಗೆ ಬಂದ ಶವ: ದೀಪಕ್‌ ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ನಂತರ ಎ.ಜೆ. ಆಸ್ಪತ್ರೆಯಿಂದ ಕಾಟಿಪಳ್ಳದ ಜನತಾ ಕಾಲೋನಿವರೆಗೆ ಮೆರವಣಿಗೆಯಲ್ಲಿ ತರಲು ವಿಶ್ವ ಹಿಂದೂ ಪರಿಷತ್‌, ಬಜರಂಗದಳ, ಹಿಂದೂ ಜಾಗರಣಾ ವೇದಿಕೆ, ಬಿಜೆಪಿ ಮುಖಂಡರು ಹಾಗೂ ಗ್ರಾಮಸ್ಥರು ಸಿದ್ಧತೆ ಮಾಡಿಕೊಂಡಿದ್ದರು. ಇದಕ್ಕಾಗಿ ಎ.ಜೆ. ಆಸ್ಪತ್ರೆಯಲ್ಲಿ ವಾಹನವೊಂದು ಸಿದ್ಧಪಡಿಸಲಾಗಿತ್ತು.

ಆದರೆ, ಆಸ್ಪತ್ರೆಯ ಹಿಂಬಾಗಿಲಿನಿಂದ ದೀಪಕ್ ಅವರ ಮೃತದೇಹವನ್ನು ಹೊರತಂದ ಪೊಲೀಸರು, ಆಂಬುಲೆನ್ಸ್‌ನಲ್ಲಿ ಕಾಟಿಪಳ್ಳಕ್ಕೆ ತಂದರು. ದೀಪಕ್ ಮೃತದೇಹವನ್ನು ಹೊತ್ತ ಆಂಬುಲೆನ್ಸ್ ಜನತಾ ಕಾಲೋನಿಯ ಅವರ ನಿವಾಸಕ್ಕೆ ಬರುತ್ತಿದ್ದಂತೆಯೇ ತೀವ್ರ ಕಾರ್ಯಕರ್ತರು, ಗ್ರಾಮಸ್ಥರಿಂದ ಆಕ್ರೋಶ ವ್ಯಕ್ತವಾಯಿತು.

‘ಯಾರಿಗೂ ತಿಳಿಸದೇ ಈ ರೀತಿ ಶವವನ್ನು ತಂದಿದ್ದು ಏಕೆ? ಮತ್ತೆ ಶವವನ್ನು ಎ.ಜೆ. ಆಸ್ಪತ್ರೆ ಕೊಂಡೊಯ್ಯಬೇಕು. ಅಲ್ಲಿಂದಲೇ ಮೆರವಣಿಗೆ ಮೂಲಕ ಮನೆಗೆ ತರುವುದಾಗಿ’ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಹಿಂದೂ ಜಾಗರಣಾ ವೇದಿಕೆ ಹಾಗೂ ಬಿಜೆಪಿ ಕಾರ್ಯಕರ್ತರು ಪಟ್ಟು ಹಿಡಿದರು.

‘ಗೃಹ ಸಚಿವರು ಸ್ಥಳಕ್ಕೆ ಬರಬೇಕು. ದೀಪಕ್ ಕುಟುಂಬಕ್ಕೆ ₹ 50 ಲಕ್ಷ ಪರಿಹಾರ ನೀಡಬೇಕು. ಪಿಎಫ್ಐ, ಎಸ್‌ಡಿಪಿಐ ಸಂಘಟನೆಗಳನ್ನು ನಿಷೇಧಿಸಬೇಕು. ಅಲ್ಲಿಯವರೆಗೆ ಶವವನ್ನು ಆಂಬುಲೆನ್ಸ್‌ನಿಂದ ಕೆಳಗೆ ಇಳಿಸಲು ಬಿಡುವುದಿಲ್ಲ’ ಎಂದು ತಾಕೀತು ಮಾಡಿದರು.

ನಗರ ಪೊಲೀಸ್ ಆಯುಕ್ತ ಟಿ.ಆರ್‌. ಸುರೇಶ್, ಡಿಸಿಪಿ ಹನುಮಂತ್ರಾಯ ಸೇರಿದಂತೆ ಹಲವು ಅಧಿಕಾರಿಗಳು ಮನವೊಲಿಕೆಗೆ ಯತ್ನಿಸಿದರೂ, ಯಾವುದೇ ಪ್ರಯೋಜನ ಆಗಲಿಲ್ಲ. ಸುಮಾರು 3 ಗಂಟೆ ಶವವನ್ನು ಆಂಬುಲೆನ್ಸ್‌ನಲ್ಲಿಯೆ ಇಡಬೇಕಾಯಿತು.

ಶವವನ್ನು ಇರಿಸಲು ಹವಾನಿಯಂತ್ರಿತ ಆಂಬುಲೆನ್ಸ್ ತರಿಸುವಂತೆ ಒತ್ತಾಯಿಸಲಾಯಿತು. ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದ ಪೊಲೀಸರು, ಹವಾನಿಯಂತ್ರಿತ ಆಂಬುಲೆನ್ಸ್ ಅನ್ನು ಸ್ಥಳಕ್ಕೆ ತರಿಸಿದರು.

ಫಲ ನೀಡಿದ ಡಿಸಿ ಮನವೊಲಿಕೆ: ನಂತರ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ನೇರವಾಗಿ ದೀಪಕ್ ಅವರ ತಾಯಿಯನ್ನು ಭೇಟಿ ಮಾಡಿದರು. ನಂತರ ವಿಶ್ವ ಹಿಂದೂ ಪರಿಷತ್ ಮುಖಂಡ ಗೋಪಾಲ್, ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಮಾಜಿ ಸಚಿವ ಜೆ. ಕೃಷ್ಣ ಪಾಲೇಮಾರ್, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸತ್ಯಜೀತ್‌ ಸುರತ್ಕಲ್‌ ಅವರೊಂದಿಗೆ ಚರ್ಚೆ ನಡೆಸಿದರು.

ನಂತರ ಮಾತನಾಡಿದ ಸಸಿಕಾಂತ್ ಸೆಂಥಿಲ್, ‘ಜಿಲ್ಲಾಡಳಿತ ವತಿಯಿಂದ ತಕ್ಷಣ ₹5 ಲಕ್ಷ ಪರಿಹಾರ ನೀಡುವುದಾಗಿ’ ತಿಳಿಸಿದರು.

ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಕಾರ್ಯಕರ್ತರು, ‘ದನಗಳ್ಳನಿಗೆ ₹50 ಲಕ್ಷ ಪರಿಹಾರ ನೀಡಲಾಗುತ್ತದೆ. ಹಿಂದೂ ಕಾರ್ಯಕರ್ತನಿಗೆ ₹5 ಲಕ್ಷ ಪರಿಹಾರ ನೀಡುವುದು ಯಾವ ನ್ಯಾಯ’ ಎಂದು ಪ್ರಶ್ನಿಸಿದರು.

ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಸೆಂಥಿಲ್, ‘ಮುಖ್ಯಮಂತ್ರಿ ವಿಶೇಷ ಪರಿಹಾರ ನಿಧಿಯಿಂದಲೂ ₹5 ಲಕ್ಷ ಪರಿಹಾರ ಮಂಜೂರು ಮಾಡಲಾಗಿದೆ. ಒಟ್ಟು ₹10 ಲಕ್ಷ ಪರಿಹಾರವನ್ನು ಸಂಜೆಯೊಳಗೆ ವಿತರಿಸಲಾಗುವುದು. ಆಸರೆಯನ್ನು ಕಳೆದುಕೊಂಡಿರುವ ಕುಟುಂಬಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಲು ಎಲ್ಲ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ಸತ್ಯಜೀತ್ ಸುರತ್ಕಲ್ ಮಾತನಾಡಿ, ಕನಿಷ್ಠ ₹ 25 ಲಕ್ಷ ಪರಿಹಾರ ನೀಡಬೇಕು. ತಕ್ಷಣವೇ ₹10ಲಕ್ಷ ಪರಿಹಾರ ಒದಗಿಸಬೇಕು. ಉಳಿದ ಪರಿಹಾರವನ್ನು ನೀಡದೇ ಇದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು. ಆದರೆ, ಜನರು ಮಾತ್ರ ಇದಕ್ಕೆ ಒಪ್ಪದೇ, ‘₹25ಲಕ್ಷ ಪರಿಹಾರವನ್ನು ಈಗಲೇ ಕೊಡಬೇಕು’ ಎಂದು ಆಗ್ರಹಿಸಿದರು.

ವಿಶ್ವ ಹಿಂದೂ ಪರಿಷತ್‌ ಮುಖಂಡ ಗೋಪಾಲ್ ಮಾತನಾಡಿ, ‘ನಾವು ಹಣಕ್ಕಾಗಿ ಹೆಣವಿಟ್ಟು ಹೋರಾಟ ಮಾಡುತ್ತಿಲ್ಲ. ಈಗಾಗಲೇ ಜಿಲ್ಲಾಧಿಕಾರಿ ₹10 ಲಕ್ಷ ನೀಡಿದ್ದಾರೆ. ಇಲ್ಲಿಗೆ ಮುಗಿಸೋಣ. ಅವರ ಕುಟುಂಬಕ್ಕೆ ಹೆಚ್ಚಿನ ಪರಿಹಾರ ಒದಗಿಸಲು ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

ಗೋಪಾಲ ಅವರ ಮಾತಿಗೆ ಕುಟುಂಬದ ಸದಸ್ಯರು, ಸಂಘಟನೆಗಳ ಕಾರ್ಯಕರ್ತರು ಸಮ್ಮತಿ ಸೂಚಿಸಿದರು. ನಂತರ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ, ‘ಜಿಲ್ಲಾಧಿಕಾರಿಗೆ ಗೌರವ ಕೊಟ್ಟು, ಅಂತಿಮ ಯಾತ್ರೆ ನಡೆಸೋಣ. ಆಂಬುಲೆನ್ಸ್‌ನಿಂದ ದೀಪಕ್‌ ಅವರ ಶವವನ್ನು ಅವರ ಮನೆಯ ಆವರಣಕ್ಕೆ ಕೊಂಡೊಯ್ದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು’ ಎಂದು ತಿಳಿಸಿದರು. ನಂತರ ಆಂಬುಲೆನ್ಸ್‌ನಿಂದ ಶವವನ್ನು ಕೆಳಕ್ಕೆ ಇಳಿಸಿ, ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು.

ಶವಯಾತ್ರೆಗೆ ಅನುಮತಿ: ದೀಪಕ್ ಅವರ ಮೃತದೇಹವನ್ನು ಕೆಲಕಾಲ ಅವರ ಮನೆಯ ಆವರಣದಲ್ಲಿ ಇರಿಸಲಾಗಿತ್ತು. ಜನರು ಅಂತಿಮ ದರ್ಶನ ಪಡೆಯುತ್ತಿದ್ದಂತೆಯೇ, ಮುಕ್ಕಾಲು ಕಿ.ಮೀ. ದೂರದ ಗಣೇಶ್ ಕಟ್ಟೆಯ ಹಿಂದೂ ಸ್ಮಶಾನದವರೆಗೆ ಶವಯಾತ್ರೆ ನಡೆಸಲಾಗುವುದು ಎಂದು ಸಂಘಟನೆಗಳ ಮುಖಂಡರು ಹೇಳಿದರು.

ಇದಕ್ಕೆ ಅನುಮತಿ ನೀಡಿದ ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌, ಅಗತ್ಯ ವ್ಯವಸ್ಥೆ ಮಾಡುವಂತೆ ಪೊಲೀಸ್ ಇಲಾಖೆ ಸೂಚಿಸಿದರು. ಎ.ಜೆ. ಆಸ್ಪತ್ರೆಯಿಂದ ಬಂದಿದ್ದ ಹವಾನಿಯಂತ್ರಿತ ಆಂಬುಲೆನ್ಸ್‌ನಲ್ಲಿ ದೀಪಕ್‌ ಅವರ ಮೃತದೇಹವನ್ನು ಇರಿಸಿ, ಶವಯಾತ್ರೆ ಮಾಡಲಾಯಿತು. ದಾರಿಯುದ್ದಕ್ಕೂ ಪೊಲೀಸ್‌ ಸರ್ಪಗಾವಲು ಹಾಕಲಾಗಿತ್ತು.

ಮಧ್ಯಾಹ್ನ 2.15 ರ ಸುಮಾರಿಗೆ ಅಂತಿಮಯಾತ್ರೆ ಸ್ಮಶಾನ ತಲುಪಿತು. ನಂತರ ಶಿವಾಜಿ ಕ್ಷತ್ರಿಯ ಧರ್ಮದ ಪ್ರಕಾರ, ದೀಪಕ್‌ ಅವರ ಅಂತ್ಯಸಂಸ್ಕಾರ ಮಾಡಲಾಯಿತು.

ಆರ್‌ಎಸ್ಎಸ್‌ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ್‌ ಭಟ್‌, ವಿಶ್ವ ಹಿಂದೂ ಪರಿಷತ್‌ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್‌, ಬಜರಂಗದಳದ ಶರಣ್‌ ಪಂಪ್‌ವೆಲ್‌ ಸೇರಿದಂತೆ ಸಾವಿರಾರು ಮಂದಿ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಅಣ್ಣನ ಚಿತೆಗೆ ತಮ್ಮನಿಂದ ಅಗ್ನಿಸ್ಪರ್ಶ

ಮಂಗಳೂರು:
ದೀಪಕ್ ಅವರ ಸಹೋದರ ಸತೀಶ್ ಅವರು, ಅಂತಿಮ ವಿಧಿವಿಧಾನ ನೆರವೇರಿಸಿ, ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

‘ದೀಪಕ್ ರಾವ್ ಅಮರ್ ರಹೆ’ ಎಂದು ಘೋಷಣೆ ಕೂಗುವ ಮೂಲಕ ಕಾರ್ಯಕರ್ತರು ಅಂತಿಮ ವಿದಾಯ ಹೇಳಿದರು.

ಇಂದು ರಸ್ತೆ ತಡೆ

ಮಂಗಳೂರು: ಪಿಎಫ್ಐ, ಎಸ್‌ಡಿಪಿಐ ನಿಷೇಧಿಸಲು ಆಗ್ರಹಿಸಿ, ಶುಕ್ರವಾರ ಬೆಳಿಗ್ಗೆ 11ಗಂಟೆಗೆ ರಾಜ್ಯದ ಎಲ್ಲೆಡೆ ರಸ್ತೆ ತಡೆ ನಡೆಸಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಗೋಪಾಲ್ ತಿಳಿಸಿದರು.

ಉಡುಪಿ, ದಕ್ಷಿಣ ಕನ್ನಡ, ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಶುಕ್ರವಾರ ಬೆಳಿಗ್ಗೆ ರಸ್ತೆ ತಡೆ ನಡೆಸುವ ಮೂಲಕ ಹಿಂದೂ ಕಾರ್ಯಕರ್ತರ ಹತ್ಯೆಯನ್ನು ಖಂಡಿಸಲಾಗುವುದು ಎಂದರು.

**

ಸಚಿವ ರಮಾನಾಥ ರೈ ಅವರ ಪ್ರಚೋದಿತ ಹೇಳಿಕೆಗಳಿಂದಾಗಿಯೇ ಜಿಲ್ಲೆಯಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ನಿರಂತರವಾಗಿ ನಡೆಯುತ್ತಿವೆ.

–ಡಾ. ಕಲ್ಲಡ್ಕ ಪ್ರಭಾಕರ್‌ ಭಟ್‌, ಆರ್‌ಎಸ್‌ಎಸ್‌ ಮುಖಂಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry