ಅಮೆರಿಕ ಜೊತೆ ಮಾತುಕತೆಗೆ ಸಂಸದ ರಾಜೀವ್‌ ಒತ್ತಾಯ

7

ಅಮೆರಿಕ ಜೊತೆ ಮಾತುಕತೆಗೆ ಸಂಸದ ರಾಜೀವ್‌ ಒತ್ತಾಯ

Published:
Updated:
ಅಮೆರಿಕ ಜೊತೆ ಮಾತುಕತೆಗೆ ಸಂಸದ ರಾಜೀವ್‌ ಒತ್ತಾಯ

ನವದೆಹಲಿ: ಅಮೆರಿಕದಲ್ಲಿ ಎಚ್‌1ಬಿ ವೀಸಾದ ಅವಧಿ ಮುಗಿಯುತ್ತಿರುವ ಮತ್ತು ಗ್ರೀನ್‌ ಕಾರ್ಡ್‌ಗಾಗಿ ಕಾಯುತ್ತಿರುವ ಭಾರತೀಯರಿಗೆ ಎದುರಾಗಿರುವ ಸಂಕಷ್ಟ ನಿವಾರಿಸಲು ಅಮೆರಿಕದೊಂದಿಗೆ ಮಾತುಕತೆ ನಡೆಸಬೇಕು ಎಂದು ಕಾಂಗ್ರೆಸ್‌ ಸಂಸದ ರಾಜೀವ್‌ ಗೌಡ ಕೇಂದ್ರ ಸರ್ಕಾರವನ್ನು ಗುರುವಾರ ಒತ್ತಾಯಿಸಿದರು.

ರಾಜ್ಯಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಗ್ರೀನ್‌ ಕಾರ್ಡ್‌ಗಾಗಿ ಕಾಯುತ್ತಿರುವವರ ಎಚ್‌1ಬಿ ವೀಸಾ ಅವಧಿಯ ವಿಸ್ತರಣೆ ಮೇಲೆ ನಿರ್ಬಂಧ ಹೇರಲು ಅಮೆರಿಕದ ಆಂತರಿಕ ಭ‌ದ್ರತಾ ಇಲಾಖೆ ಯೋಚಿಸುತ್ತಿದೆ ಎಂದು ಹೇಳಿದರು.

‘ಸದ್ಯ, ಗ್ರೀನ್‌ ಕಾರ್ಡ್‌ ಅರ್ಜಿ ಇತ್ಯರ್ಥವಾಗುವವರೆಗೆ ಉದ್ಯೋಗಿಗಳಿಗೆ ಎಚ್‌1ಬಿ ವೀಸಾದ ಅವಧಿ ವಿಸ್ತರಿಸಲಾಗುತ್ತಿದೆ. ಒಂದು ವೇಳೆ ಪ್ರಸ್ತಾವನೆಗೆ ಅಂಗೀಕಾರ ದೊರೆತರೆ ಎಚ್‌1ಬಿ ವೀಸಾದಾರರು ಗ್ರೀನ್‌ಕಾರ್ಡ್ ಸಿಗುವವರೆಗೆ ಅಮೆರಿಕವನ್ನು ತೊರೆಯಬೇಕಾಗುತ್ತದೆ. ಇದು ಅಲ್ಲಿರುವ ಲಕ್ಷಾಂತರ ಭಾರತೀಯ ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ. ಅವರು ಗಡಿಪಾರಾಗುವ ಸನ್ನಿವೇಶ ಬರಬಹುದು. ಇದು ಅವರ ಕುಟುಂಬ ಮತ್ತು ಕಂಪನಿಗಳ ಮೇಲೂ ಪ್ರಭಾವ ಬೀರಲಿದೆ’ ಎಂದು ರಾಜೀವ್‌ ಹೇಳಿದರು.

‘ಅಮೆರಿಕ ಪ್ರತಿ ವರ್ಷ ನೀಡುವ 85 ಸಾವಿರ ಎಚ್‌1ಬಿ ವೀಸಾಗಳಲ್ಲಿ ಶೇ 50ಕ್ಕೂ ಹೆಚ್ಚು ವೀಸಾವನ್ನು ಭಾರತೀಯರೇ ಪಡೆಯುತ್ತಿದ್ದಾರೆ. ಈಗ ಎಚ್‌1ಬಿ ವೀಸಾ ಹೊಂದಿರುವ 2 ಲಕ್ಷಕ್ಕೂ ಹೆಚ್ಚು ಭಾರತೀಯರಿಗೆ ಇದರಿಂದ ತೊಂದರೆಯಾಗಲಿದೆ. ಅಮೆರಿಕದ ಸಂ‍ಪತ್ತು ಸೃಷ್ಟಿಗೆ ಇವರೇ ದೊಡ್ಡ ಕೊಡುಗೆದಾರರು. ಹೊಸ ನಿಯಮ ಜಾರಿಗೆ ಬಂದರೆ ಅಮೆರಿಕಕ್ಕೂ ನಷ್ಟವೇ. ಆದರೂ ಹೊಸ ನಿಯಮ ಜಾರಿಗೆ ಅದು ಯೋಚಿಸುತ್ತಿದೆ. ಹೀಗಾಗಿ, ಈ ವಿಚಾರದ ಬಗ್ಗೆ ಕೇಂದ್ರ ಸರ್ಕಾರವು ಅಮೆರಿಕದ ಸರ್ಕಾರದ, ಭಾರತ ಮತ್ತು ಅಮೆರಿಕದ ಕಂಪನಿಗಳೊಂದಿಗೆ ಮಾತುಕತೆ ನಡೆಸಬೇಕು’ ಎಂದು ಅವರು ಮನವಿ ಮಾಡಿದರು.

‘ಇಲ್ಲವೇ, ಸಂಕಷ್ಟ ಎದುರಿಸುತ್ತಿರುವರು ಸ್ವದೇಶಕ್ಕೆ ವಾಪಸಾದರೆ ಅವರಿಗೆ ನೆರವಾಗಲು ಯೋಜನೆಗಳನ್ನು ರೂಪಿಸಬೇಕು’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry