ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ ಆರೋಪ: ಸಿಬಿಐ ತನಿಖೆಗೆ ಮನವಿ

Last Updated 4 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಅಪ್ರಾಪ್ತೆಯ ಮೇಲಿನ ಅತ್ಯಾಚಾರ ಆರೋಪ ಸಂಬಂಧದ ಸಿಐಡಿ ತನಿಖೆಯನ್ನು ಸಿಬಿಐಗೆ ವರ್ಗಾಯಿಸಬೇಕು’ ಎಂದು ಕೋರಿರುವ ಪ್ರಕರಣದಲ್ಲಿ ರಾಘವೇಶ್ವರ ಭಾರತೀ ಸ್ವಾಮೀಜಿಗೆ ಸುಪ್ರೀಂ ಕೋರ್ಟ್‌ ನೋಟಿಸ್ ಜಾರಿಗೊಳಿಸಿದೆ.

‘ಸ್ವಾಮೀಜಿ ನನ್ನ ಮೇಲೆ ನಡೆಸಿರುವ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದ ದೂರಿನ ತನಿಖೆಯನ್ನು ಸಿಐಡಿ ಸರಿಯಾಗಿ ನಡೆಸುತ್ತಿಲ್ಲ. ಆದ್ದರಿಂದ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ನಿರ್ದೇಶಿಸಬೇಕು’ ಎಂದು ಕೋರಿ 26 ವರ್ಷದ ಸಂತ್ರಸ್ತೆ ಸಲ್ಲಿಸಿರುವ ಕ್ರಿಮಿನಲ್‌ ರಿಟ್ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗಿರಿನಗರ ಪೊಲೀಸ್‌ ಠಾಣೆ ಅಧಿಕಾರಿ, ಸಿಐಡಿ ಮತ್ತು ಸಿಬಿಐಗೆ ನೋಟಿಸ್ ಜಾರಿ ಮಾಡುವಂತೆ ನ್ಯಾಯಪೀಠ ನಿರ್ದೇಶಿಸಿದೆ.

ಸಂತ್ರಸ್ತೆಯನ್ನು ಅಪಹರಿಸಿ ಜೀವ ಬೆದರಿಕೆ ಒಡ್ಡಿದ ಆರೋಪ ಎದುರಿಸುತ್ತಿರುವ ಪ್ರತಿವಾದಿಗಳ ಪಟ್ಟಿಯಲ್ಲಿರುವ ಬೆಂಗಳೂರಿನ ವಕೀಲ ಎಂ.ಅರುಣ ಶ್ಯಾಮ್, ಸಿದ್ದಾಪುರ ತಾಲ್ಲೂಕಿನ ಕರಗೋಡು ಅನಂತಣ್ಣ ಅಲಿಯಾಸ್ ಅನಂತ ಭಟ್‌, ಬೆಂಗಳೂರಿನ ರಮೇಶಣ್ಣ ಅಲಿಯಾಸ್ ಕೆ.ವಿ.ರಮೇಶ್, ಹೊನ್ನಾವರ ತಾಲ್ಲೂಕಿನ ಬಡಗಣಿಯ ಬಿ.ಆರ್.ಸುಬ್ರಮಣ್ಯ ಅಲಿಯಾಸ್ ಸುಧಾಕರ, ಅಂಕೋಲಾ ತಾಲ್ಲೂಕಿನ ಕುಮಟಗಣಿಯ ಮಧುಕರ ಅಲಿಯಾಸ್ ಮಧುಕರ ಶಿವಯ್ಯ ಹೆಬ್ಬಾರ್ ಮತ್ತು ಬೆಂಗಳೂರಿನ ಜಗದೀಶ್ ಶರ್ಮಾ ಅಲಿಯಾಸ್ ಸಿ.ಜಗದೀಶ್ ಅವರಿಗೂ ನೋಟಿಸ್‌ ಜಾರಿಗೆ ಆದೇಶಿಸಲಾಗಿದೆ.

ರಿಟ್‌ ಅರ್ಜಿಯಲ್ಲಿ ಸಂತ್ರಸ್ತೆ ವಿವರಿಸಿರುವ ಮುಖ್ಯಾಂಶಗಳು
* ನನ್ನ ಮೇಲೆ ಸ್ವಾಮೀಜಿ ಅತ್ಯಾಚಾರ ನಡೆಸಿದ್ದಾರೆ ಎಂದು ನಾನು 2015ರ ಆಗಸ್ಟ್‌ 29ರಂದು ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೆ. ಈ ಪ್ರಕರಣವನ್ನು ಸಿಐಡಿ ತನಿಖೆ ನಡೆಸುತ್ತಿದೆ. ಆದರೆ, ಇಲ್ಲಿವರೆಗೂ ತನಿಖೆ ಮುಕ್ತಾಯಗೊಳಿಸಿ ದೋಷಾರೋಪ ಪಟ್ಟಿ ಸಲ್ಲಿಸಿಲ್ಲ.

* ನಾನು ಅವರ ಶಾಲೆಯ ವಿದ್ಯಾರ್ಥಿಯಾಗಿದ್ದ ವೇಳೆ ಅದೊಂದು ದಿನ ಸ್ವಾಮೀಜಿ ನನ್ನನ್ನು ತಮ್ಮ ಕೋಣೆಗೆ ಕರೆಯಿಸಿಕೊಂಡು ನನ್ನ ಬಾಯಿಮುಚ್ಚಿ ಹಟಸಂಭೋಗ ನಡೆಸಿರುತ್ತಾರೆ. ಆಗ ನನಗೆ ಕೇವಲ 15 ವರ್ಷವಾಗಿತ್ತು.

* ವಿಷಯವನ್ನು ಯಾರಿಗೂ ಹೇಳದಂತೆ ನನ್ನನ್ನು ಮತ್ತು ನನ್ನ ಪೋಷಕರನ್ನು ಬೆದರಿಸಲಾಗಿತ್ತು.

* ನನ್ನ ಇಚ್ಛೆಗೆ ವಿರುದ್ಧವಾಗಿ ಸ್ವಾಮೀಜಿಯೇ 2009ರ ಮೇ 29ರಂದು ನನ್ನ ಮದುವೆ ಮಾಡಿಸಿದರು. ಮದುವೆ ನಂತರ 2012ರ ಸೆಪ್ಟೆಂಬರ್ 13ರಂದು ಪ್ರತಿವಾದಿ ಆರೋಪಿಗಳು ನನ್ನನ್ನು ಅಪಹರಿಸಿ ಮಠಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿ ನನ್ನ ಮೇಲೆ ಬಲಾತ್ಕಾರ ನಡೆಸಲಾಯಿತು.

* ತಾನು ಶ್ರೀರಾಮನ ಅಪರವಾತಾರ ಎಂದು ಮಕ್ಕಳು ಮತ್ತು ಮಹಿಳೆಯರನ್ನು ನಂಬಿಸಿ ಅವರನ್ನು ಕಾಮಕೇಳಿಗೆ ಬಳಸಿಕೊಳ್ಳುವುದು ಸ್ವಾಮೀಜಿ ಕುಕೃತ್ಯದ ವಿಧಾನವಾಗಿದೆ.

* ಮುಗ್ಧ ಮಹಿಳೆಯರು ಮತ್ತು ಮಕ್ಕಳ ಮೇಲಿನ ಹಟಸಂಭೋಗ ಇವರ ಅಭ್ಯಾಸವಾಗಿದೆ.

* ಕರ್ನಾಟಕದಲ್ಲಿ ಇವರ ವಿರುದ್ಧ ಪ್ರಶ್ನೆ ಮಾಡುವ ಧೈರ್ಯ ಯಾರಿಗೂ ಇಲ್ಲವೇನೊ ಎಂಬಂತಹ ವಾತಾವರಣ ಇದೆ.

* ಸಿಐಡಿ ಅಧಿಕಾರಿಗಳು ಇದುವರೆಗೂ ಸ್ವಾಮೀಜಿಯ ಹೇಳಿಕೆ ಪಡೆದಿಲ್ಲ. ಪ್ರಕರಣದ ತನಿಖಾಧಿಕಾರಿಗಳು ಪದೇಪದೇ ಬದಲಾಗುತ್ತಲೇ ಇದ್ದಾರೆ. ಸಿಐಡಿ ಮೇಲೆ ಅಪಾರವಾದ ರಾಜಕೀಯ ಒತ್ತಡವಿದೆ.

* ಈ ಪ್ರಕರಣದ ಆರೋಪಿಗಳು ಅಧೀನ ನ್ಯಾಯಾಲಯದಿಂದ ಈಗಾಗಲೇ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ.

* ಸ್ವಾಮೀಜಿ ವಿರುದ್ಧದ ಪ್ರಕರಣಗಳ ವಿಚಾರಣೆಯಿಂದ ಕರ್ನಾಟಕ ಹೈಕೋರ್ಟ್‌ನ ಎಂಟು ಜನ ನ್ಯಾಯಮೂರ್ತಿಗಳು ಹಿಂದೆ ಸರಿದಿದ್ದಾರೆ.

* ರಾಮಕಥಾ ಗಾಯಕಿ ಮೇಲಿನ ಅತ್ಯಾಚಾರ ಆರೋಪದ ಮತ್ತೊಂದು ಪ್ರಕರಣದಲ್ಲಿ ಬೆಂಗಳೂರು ಸೆಷನ್ಸ್ ನ್ಯಾಯಾಲಯ ಸ್ವಾಮೀಜಿಯನ್ನು ಆರೋಪದಿಂದ ಕೈಬಿಟ್ಟಿದೆ.

* ಕೇವಲ ಹವ್ಯಕರು ಮಾತ್ರವಲ್ಲದೇ ಮುಖ್ರೀ, ಹಾಲಕ್ಕಿ ಗೌಡ, ಭಂಡಾರಿ ಸೇರಿದಂತೆ 18 ನಮೂನೆ ಜಾತಿ ಸಮುದಾಯಗಳು ಸ್ವಾಮೀಜಿಯ ಅನುಯಾಯಿಗಳು. ಇದರಿಂದ ಸ್ವಾಮೀಜಿ ರಾಜ್ಯದ ಆಡಳಿತ ಯಂತ್ರದ ಮೇಲೆ ಪ್ರಭಾವ ಬೀರುವ ಶಕ್ತಿ ಹೊಂದಿದ್ದಾರೆ.

* ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಿದ್ದು ಸ್ವಾಮೀಜಿ ಎಲ್ಲಾ ರಾಜಕೀಯ ಪಕ್ಷಗಳ ನಾಯಕರ ಮೇಲೆ ಹಣ ಮತ್ತು ವಶೀಲಿಯ ಪ್ರಭಾವ ಬೀರಬಲ್ಲರು. ಹಾಗಾಗಿ ನಮ್ಮ ನೋವು ಅರಣ್ಯರೋದನವಾಗಿದೆ.

ಪ್ರಾರ್ಥನೆ: ‘ಈ ಎಲ್ಲಾ ಕಾರಣಗಳಿಂದ ಸಿಐಡಿ ತನಿಖೆಯನ್ನು ಸಿಬಿಐಗೆ ವರ್ಗಾಯಿಸಲು ನಿರ್ದೇಶಿಸಬೇಕು. ಸಿಬಿಐ ತನಿಖೆಯನ್ನು ಶೀಘ್ರವೇ ಪೂರ್ಣಗೊಳಿಸಿ ಅಂತಿಮ ವರದಿಯನ್ನು ಸಕ್ಷಮ ನ್ಯಾಯಾಲಯಕ್ಕೆ ಒಪ್ಪಿಸಬೇಕು. ಇಲ್ಲವೇ ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯಲ್ಲಿ ಸಿಐಡಿ ತನಿಖೆ ನಡೆಸಲು ನಿರ್ದೇಶಿಸಬೇಕು’ ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಅರ್ಜಿದಾರರ ಪರ ಆರ್. ಬಸಂತ್, ರಾಜೇಶ್ ಮಹಾಲೆ ಹಾಗೂ ಕೃತಿನ್ ಆರ್. ಜೋಷಿ ಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT