ಸೋಮವಾರ, ಜೂಲೈ 6, 2020
27 °C

ಹೆಚ್ಚುವರಿ ಟ್ರಿಪ್‌: ಹಿಂದಕ್ಕೆ ಸರಿದ ಮೆಟ್ರೊ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೊಸ ವರ್ಷದ ಮೊದಲ ದಿನದಿಂದಲೇ ದಟ್ಟಣೆ ಅವಧಿಯಲ್ಲಿ ರೈಲುಗಳ ಟ್ರಿಪ್‌ ಸಂಖ್ಯೆ ಹೆಚ್ಚಿಸಿದ್ದ ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ತಾಂತ್ರಿಕ ಸಮಸ್ಯೆ ಎದುರಾದ ಕಾರಣಕ್ಕೆ ಈ ನಿರ್ಧಾರದಿಂದ ಹಿಂದೆ ಸರಿದಿದೆ. ಹಂತಹಂತವಾಗಿ ಟ್ರಿಪ್‌ ಸಂಖ್ಯೆ ಹೆಚ್ಚಿಸುವ ತೀರ್ಮಾನಕ್ಕೆ ಬಂದಿದೆ.

ಪ್ರಯಾಣಿಕರ ದಟ್ಟಣೆ ಹೆಚ್ಚು ಇರುವ ಅವಧಿಯಲ್ಲಿ ನೇರಳೆ ಮಾರ್ಗದಲ್ಲಿ ಪ್ರತಿ ಎರಡು ರೈಲುಗಳ ಸಂಚಾರದ ನಡುವಿನ ಅಂತರವನ್ನು 4 ನಿಮಿಷದ ಬದಲು ಮೂರೂವರೆ ನಿಮಿಷಕ್ಕೆ ಇಳಿಸಲಾಗಿತ್ತು. ಹಸಿರು ಮಾರ್ಗದಲ್ಲಿ ಪ್ರತಿ 6 ನಿಮಿಷಕ್ಕೊಂದು ರೈಲು ಸಂಚರಿಸುವಂತೆ ವೇಳಾಪಟ್ಟಿ ಜಾರಿಗೆ ತರಲಾಗಿತ್ತು.

ಮಂಗಳವಾರ ನೇರಳೆ ಮಾರ್ಗದಲ್ಲಿ (ಬೈಯಪ್ಪನಹಳ್ಳಿ–ವೈಟ್‌ಫೀಲ್ಡ್) 10 ಹೆಚ್ಚುವರಿ ಟ್ರಿಪ್‌ ಮತ್ತು ಹಸಿರು ಮಾರ್ಗದಲ್ಲಿ (ನಾಗಸಂದ್ರ– ಯಲೇಚನಹಳ್ಳಿ) 3 ಹೆಚ್ಚುವರಿ ಟ್ರಿಪ್‌ ರೈಲುಗಳು ಸಂಚರಿಸಿದ್ದವು. ಇದರಿಂದ ವಿದ್ಯುತ್‌ ಸಮಸ್ಯೆ ಕಾಣಿಸಿ, ಕಬ್ಬನ್‌ಪಾರ್ಕ್‌ ಸಮೀಪ ಮೆಟ್ರೊ ರೈಲು ಸ್ಥಗಿತಗೊಂಡು ಪ್ರಯಾಣಿಕರು ತೊಂದರೆಗೆ ಸಿಲುಕಿದ್ದರು.

‘ಮಂಗಳವಾರ ಪ್ರಯಾಣಿಕರ ದಟ್ಟಣೆ ಅವಧಿಯಲ್ಲಿ ಮೂರುವರೆ ನಿಮಿಷದ ಅಂತರದಲ್ಲಿ ಹೆಚ್ಚುವರಿ ರೈಲುಗಳು ಸಂಚರಿಸಿದ್ದರಿಂದ ಮಾರ್ಗದಲ್ಲಿ ಕೆಲವು ಸಮಸ್ಯೆಗಳು ತಲೆದೋರಿದವು. ಮಾರ್ಗದ ಸಾಮರ್ಥ್ಯಕ್ಕೆ ಅನುಗುಣವಾಗಿ ಹಂತಹಂತವಾಗಿ ಟ್ರಿಪ್‌ ಸಂಖ್ಯೆ ಹೆಚ್ಚಿಸಲು ನಿರ್ಧರಿಸಿದ್ದೇವೆ. 15 ದಿನಗಳೊಳಗೆ ಇದು ಸಹಜ ಸ್ಥಿತಿಗೆ ಬರಲಿದೆ’ ಎಂದು ನಿಗಮದ ಸಾರ್ವಜನಿಕ ಸಂಪರ್ಕಾಧಿಕಾರಿ ಯು.ಎ.ವಸಂತ್‌ ರಾವ್‌ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.