13,578 ಆಟೊ, ಕ್ಯಾಬ್‌ಗಳಿಗೆ ಬಿತ್ತು ದಂಡ

5

13,578 ಆಟೊ, ಕ್ಯಾಬ್‌ಗಳಿಗೆ ಬಿತ್ತು ದಂಡ

Published:
Updated:
13,578 ಆಟೊ, ಕ್ಯಾಬ್‌ಗಳಿಗೆ ಬಿತ್ತು ದಂಡ

ಬೆಂಗಳೂರು: ಪ್ರಯಾಣಿಕರ ವೇಷದಲ್ಲಿ ಗುರುವಾರ ನಗರದಲ್ಲಿ ಕಾರ್ಯಾಚರಣೆ ನಡೆಸಿದ ಸಂಚಾರ ಪೊಲೀಸರು, 13,578 ಆಟೊ ಹಾಗೂ ಕ್ಯಾಬ್‌ಗಳಿಗೆ ದಂಡ ವಿಧಿಸಿದರು.

ಹೈಗ್ರೌಂಡ್ಸ್‌, ಕಬ್ಬನ್‌ ಪಾರ್ಕ್‌, ಶಿವಾಜಿನಗರ, ಆಡುಗೋಡಿ, ಹಲಸೂರು ಗೇಟ್‌, ಕೆ.ಆರ್‌.ಪುರ, ಅಶೋಕ ನಗರ, ಆರ್‌.ಟಿ.ನಗರ ಹಾಗೂ ಹಲವೆಡೆ ಕಾರ್ಯಾಚರಣೆ ನಡೆಸಲಾಯಿತು.

ಬಹುತೇಕ ಆಟೊ ಚಾಲಕರು ಹೆಚ್ಚಿನ ಪ್ರಯಾಣ ದರಕ್ಕೆ ಬೇಡಿಕೆ ಇಡುತ್ತಿದ್ದರು. ಪ್ರಯಾಣಿಕರು ಕರೆದ ಕಡೆ ಹೋಗಲು ನಿರಾಕರಿಸುತ್ತಿದ್ದರು. ಕೆಲವರು ಸಮವಸ್ತ್ರ ಧರಿಸಿರಲಿಲ್ಲ. ಇದನ್ನು ಪತ್ತೆ ಹಚ್ಚಿದ ಪೊಲೀಸರು, ಚಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡರು. ಅವುಗಳಿಗೆ ದಂಡ ವಿಧಿಸಿ, 500ಕ್ಕೂ ಹೆಚ್ಚು ಆಟೊಗಳನ್ನು ಜಪ್ತಿ ಮಾಡಿದರು. ಕ್ಯಾಬ್‌ ಚಾಲಕರು ಸಹ ಹಲವು ನಿಯಮ ಉಲ್ಲಂಘಿಸಿದ್ದು ಕಾರ್ಯಾಚರಣೆ ವೇಳೆ ಪತ್ತೆಯಾಯಿತು. ಅವರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡರು.

‘ಆಟೊ ಚಾಲಕರ ವರ್ತನೆ ಬಗ್ಗೆ ದೂರುಗಳು ಬರುತ್ತಿವೆ. ಹೀಗಾಗಿ ಪೂರ್ವ ಹಾಗೂ ಪಶ್ವಿಮ ವಿಭಾಗದ ಪೊಲೀಸರು, ವಿಶೇಷ ತಂಡ ರಚಿಸಿ ಈ ಕಾರ್ಯಾಚರಣೆ ನಡೆಸಿದರು’ ಎಂದು ಹೆಚ್ಚುವರಿ ಪೊಲೀಸ್‌ ಕಮಿಷನರ್‌ (ಸಂಚಾರ) ಆತ್‌.ಹಿತೇಂದ್ರ ತಿಳಿಸಿದರು.

‘ಬಹುತೇಕ ಆಟೊಗಳಿಗೆ ಮೀಟರ್‌ ಇದೆ. ಆದರೆ, ಯಾರೊಬ್ಬರೂ ಅದನ್ನು ಪಾಲಿಸುತ್ತಿಲ್ಲ. ಇದರಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದೆ. ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಜನದಟ್ಟಣೆ ಹೆಚ್ಚಿರುವ ಸಂದರ್ಭದಲ್ಲಿ ಚಾಲಕರು ಮೀಟರ್‌ ಬಳಕೆ ಮಾಡುತ್ತಿಲ್ಲ. ಈ ಬಗ್ಗೆ ದೂರುಗಳು ಬಂದಿದ್ದು, ನಸುಕಿನಲ್ಲೇ ಕಾರ್ಯಾಚರಣೆ ನಡೆಸುವಂತೆ ಅಧಿಕಾರಿಗಳಿಗೆ ಹೇಳಿದ್ದೇನೆ’ ಎಂದರು.

ಪ್ರಯಾಣಿಕರಾದ ಪೊಲೀಸರು: ಬೆಳಿಗ್ಗೆ 7 ಗಂಟೆ ಸುಮಾರಿಗೆ ಲಗೇಜು ಹಿಡಿದು ಆಟೊ ಬಳಿ ಹೋಗಿದ್ದ ತರಬೇತಿನಿರತ ಪಿಎಸ್‌ಐ, ನಿಗದಿತ ಸ್ಥಳಕ್ಕೆ ಬರುವಂತೆ ಚಾಲಕನಿಗೆ ಹೇಳಿದ್ದರು. ಆತ, ಹೆಚ್ಚಿನ ಬಾಡಿಗೆಗೆ ಬೇಡಿಕೆ ಇಟ್ಟಿದ್ದ. ಅದಕ್ಕೆ ಒಪ್ಪಿದ ಪಿಎಸ್‌ಐ, ನೇರವಾಗಿ ಠಾಣೆಗೆ ಕರೆದೊಯ್ದು ದಂಡ ಹಾಕಿದರು. 60 ತರಬೇತಿನಿರತ ಪಿಎಸ್‌ಐಗಳನ್ನು ಈ ಕಾರ್ಯಾಚರಣೆಗೆ ಬಳಸಿಕೊಳ್ಳಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry