ಮಂಗಳವಾರ, ಆಗಸ್ಟ್ 11, 2020
23 °C

ಲಖನೌ ಜೈಲಿನಲ್ಲಿರುವ ಶಂಕಿತ ಉಗ್ರನ ವಿಚಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ ಜೈಲಿನಲ್ಲಿರುವ ಶಂಕಿತ ಉಗ್ರನ ವಿಚಾರಣೆ

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಮೇಲೆ 2005ರಲ್ಲಿ ನಡೆದಿದ್ದ ಉಗ್ರರ ದಾಳಿ ಪ್ರಕರಣದ ನ್ಯಾಯಾಂಗ ವಿಚಾರಣೆಯು ನಗರದ ಪರಪ್ಪನ ಅಗ್ರಹಾರ ಕಾರಾಗೃಹದ ವಿಶೇಷ ನ್ಯಾಯಾಲಯದಲ್ಲಿ ಗುರುವಾರದಿಂದ ಆರಂಭವಾಗಿದೆ.

ದಾಳಿಯಲ್ಲಿ ಭಾಗಿಯಾಗಿದ್ದ ಶಂಕಿತ ಉಗ್ರ ಲಷ್ಕರ್‌–ಎ–ತಯಬಾ (ಎಲ್‌ಇಟಿ) ಸಂಘಟನೆಯ ಶಹಾಬುದ್ದೀನ್‌ ಸದ್ಯ ಲಖನೌ ಜೈಲಿನಲ್ಲಿದ್ದಾನೆ. ಆತನನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಎದುರು ಹಾಜರುಪಡಿಸಲಾಯಿತು. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಇನ್ನೊಬ್ಬ ಆರೋಪಿ ಹಬೀಬ್‌ನನ್ನೂ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಕರೆತಂದಿದ್ದರು. 

ಪಬ್ಲಿಕ್‌ ಪ್ರಾಸಿಕ್ಯೂಟರ್‌ ಬಿ.ಎಸ್‌.ಪಾಟೀಲ, ‘ದಾಳಿಯಲ್ಲಿ ಆರೋಪಿಗಳ ಪಾತ್ರವಿರುವುದು ದೃಢಪಟ್ಟಿದೆ. ಅದಕ್ಕೆ ಸಂಬಂಧಪಟ್ಟ ಸಾಕ್ಷ್ಯಗಳನ್ನು ಸಿಸಿಬಿ ಪೊಲೀಸರು ಸಂಗ್ರಹಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಅದನ್ನು ಮನ್ನಿಸಿ ವಿಚಾರಣೆ ಆರಂಭಿಸಬೇಕು’ ಎಂದು ನ್ಯಾಯಾಧೀಶರನ್ನು ಕೋರಿದರು. ವಾದ ಆಲಿಸಿದ ನ್ಯಾಯಾಧೀಶರು, ವಿಚಾರಣೆಯನ್ನು ಫೆ. 1ಕ್ಕೆ ಮುಂದೂಡಿದರು.

ವಿದ್ಯಾರ್ಥಿ ಸೋಗಿನಲ್ಲಿ ಕೃತ್ಯ: ಎಲ್‌ಇಟಿ ಸದಸ್ಯನಾಗಿದ್ದ ಬಿಹಾರದ ಶಹಾಬುದ್ದೀನ್‌, ದಾಳಿ ಮಾಡುವ ಉದ್ದೇಶದಿಂದಲೇ ವಿದ್ಯಾರ್ಥಿ ಸೋಗಿನಲ್ಲಿ 2005ರಲ್ಲಿ ನಗರಕ್ಕೆ ಬಂದಿದ್ದ. ಇಲ್ಲಿನ ಕಾಲೇಜೊಂದರಲ್ಲೇ ಓದಿಕೊಂಡು ದಾಳಿಗೆ ಬೇಕಾದ ಸಿದ್ಧತೆ ಮಾಡಿಕೊಂಡಿದ್ದ’ ಎಂಬ ಅಂಶ ದೋಷಾರೋಪ ಪಟ್ಟಿಯಲ್ಲಿದೆ.

‘2005ರ ಡಿ. 22ರಿಂದ ಇಂಡಿಯನ್‌ ಇನ್‌ಸ್ಟಿಟ್ಯೂಟ್ ಆಫ್‌ ಮ್ಯಾನೇಜ್‌ಮೆಂಟ್‌ನಲ್ಲಿ (ಐಐಎಂಬಿ) ವಿಚಾರ ಸಂಕಿರಣ ಆರಂಭವಾಗಿತ್ತು. ಕಾರ್ಯಕ್ರಮದ ಕಡೆ ದಿನವಾದ ಡಿ. 25ರಂದು ಶಹಾಬುದ್ದೀನ್‌, ಎಲ್‌ಇಟಿ ಸಂಘಟನೆಯ ಕಮಾಂಡರ್‌ ಲಖ್ವಿ, ಸಂಘಟನೆಯ ಬಾಂಗ್ಲಾದ ಕಮಾಂಡರ್‌ ಸೇರಿದಂತೆ 9 ಮಂದಿ ಜತೆ ಸೇರಿ ದಾಳಿ ಮಾಡಿದ್ದ. ಈ ದಾಳಿಯಲ್ಲಿ ಗುಜರಾತ್‌ನ ಗಣಿತ ಪ್ರಾಧ್ಯಾಪಕ ಮನೀಷ್‌ ಚಂದ್ರಪುರಿ ಮೃತಪಟ್ಟು, ಆರು ಮಂದಿ ಗಾಯಗೊಂಡಿದ್ದರು.’

‘ಐಐಎಸ್‌ಸಿ ಮಾತ್ರವಲ್ಲದೆ ಸ್ಯಾಂಕಿ ರಸ್ತೆಯ ಲೀ ಮೆರಿಡಿಯನ್ ಹೋಟೆಲ್, ಹೊಸಕೆರೆಹಳ್ಳಿಯ ಪಿಇಎಸ್ ಕಾಲೇಜು ಹಾಗೂ ಬನ್ನೇರುಘಟ್ಟ ರಸ್ತೆಯ ಐಐಎಂಬಿ ಮೇಲೂ ದಾಳಿ ನಡೆಸಲು ಅವರು ಸಂಚು ರೂಪಿಸಿದ್ದರು. ಪ್ರಕರಣದ ಸಂಬಂಧ 7 ಮಂದಿ ಶಂಕಿತ ಉಗ್ರರನ್ನು ಬಂಧಿಸಬೇಕಿದೆ’ ಎಂಬುದನ್ನು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.