‘ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ಥಾಪಿಸಿ’

7

‘ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ಥಾಪಿಸಿ’

Published:
Updated:

ಸಿಂದಗಿ: ‘ರಾಜ್ಯದಲ್ಲಿ ಬ್ರಾಹ್ಮಣರ ಬಗ್ಗೆ ಅವಹೇಳನಕಾರಿಯಾದ ಹೇಳಿಕೆಗಳು ಕೇಳಿ ಬರುತ್ತಿರುವುದು ಅತ್ಯಂತ ವಿಷಾದಕರ ಸಂಗತಿ. ಇದನ್ನು ತಡೆಗಟ್ಟಬೇಕಾದರೆ ಸಂಘಟನೆ ಅನಿವಾರ್ಯ’ ಎಂದು ಅಖಿಲ ಕರ್ನಾಟಕ ಬ್ರಾಹಣ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಕೆ.ಎನ್.ವೆಂಕಟನಾರಾಯಣ ಪ್ರತಿಪಾದಿಸಿದರು.

ನಗರದ ಅನುಗ್ರಹ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಬ್ರಾಹ್ಮಣ ಸಂಘದ ನೇತೃತ್ವದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಎರಡನೆಯ ವಿಪ್ರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಆರ್ಥಿಕವಾಗಿ ಹಿಂದುಳಿದ ಮುಂದುವರಿದ ಜನಾಂಗದವರಿಗಾಗಿ ದೇಶದ 7–8ರಾಜ್ಯಗಳಲ್ಲಿ ಅಭಿವೃದ್ಧಿ ಮಂಡಳಿಗಳು ರಚನೆಗೊಂಡಿವೆ. ಆದರೆ ಕರ್ನಾಟಕದಲ್ಲಿ ಮಾತ್ರ ಇಲ್ಲದಿರುವುದು ನಿಜಕ್ಕೂ ದುರಂತವೇ ಸರಿ. ಇನ್ನಾದರೂ ಸರ್ಕಾರ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ಥಾಪಿಸಬೇಕು’ ಎಂದು  ಒತ್ತಾಯಿಸಿದರು. ‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬ್ರಾಹ್ಮಣರು ಕಡ್ಡಾಯವಾಗಿ ಮತದಾನ ಮಾಡಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಆಗುವಂತೆ ಅಭಿಯಾನ ಕೈಗೊಳ್ಳಬೇಕು’ ಎಂದು ಕೇಳಿಕೊಂಡರು.

‘ರಾಜ್ಯದಲ್ಲಿ ಕೇವಲ 40ರಷ್ಟಿದ್ದ ವಿಪ್ರ ಸಂಘಗಳು ಈಗ 550 ಕ್ಕೆ ಹೆಚ್ಚಿವೆ. ತನ್ಮೂಲಕ ನಿರಂತರ ಚಿಂತನೆ ಮುಂದುವರಿಯಲಿ’ ಎಂದು ಮನವಿ ಮಾಡಿಕೊಂಡರು. ಬ್ರಾಹ್ಮಣ ಮಹಾಸಭಾ ರಾಜ್ಯ ಘಟಕದ ಉಪಾಧ್ಯಕ್ಷ ಆರ್.ಲಕ್ಷ್ಮೀಕಾಂತ ‘ಕೆಲವು ಸ್ವಾರ್ಥಿಗಳು ತಮ್ಮ ಚಟ ತೀರಿಸಿಕೊಳ್ಳಲು ಬ್ರಾಹ್ಮಣರ ಬಗ್ಗೆ ಅವಹೇಳನ ಮಾಡು ತ್ತಿದ್ದಾರೆ. ಈ ಅನಾಗರಿಕ ವರ್ತನೆ ನಿಲ್ಲಿಸದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ರಾಜ್ಯದಲ್ಲಿರುವ 40 ಲಕ್ಷ ಬ್ರಾಹ್ಮಣರಲ್ಲಿ ಬರೀ 35 ಸಾವಿರ ಜನರು ಮಾತ್ರ ಸಂಘದ ಸದಸ್ಯತ್ವ ಪಡೆದುಕೊಂಡಿರುವುದು ವಿಷಾದಕರ ವಿಷಯ’ ಎಂದರು. ಮಹಾಸಭಾದ ಇನ್ನೊಬ್ಬ ಉಪಾಧ್ಯಕ್ಷ ಟಿ.ಎಚ್.ಕುಲಕರ್ಣಿ ‘ತಹಶೀಲ್ದಾರರು ಹಿಂದೂ ಬ್ರಾಹ್ಮಣ ಎಂಬ ಜಾತಿ ಪ್ರಮಾಣಪತ್ರ ನೀಡುತ್ತಿಲ್’ಲ ಎಂದು ದೂರಿದರು.

ಮಹಾಸಭಾ ರಾಜ್ಯ ಪ್ರಮುಖ ಹಣಮಂತರಾವ ಕೊಟಬಾಗಿ ಮಾತನಾಡಿ, ‘ಈಚೆಗೆ ನಿಜಗುಣ ಸ್ವಾಮೀಜಿ ಬ್ರಾಹ್ಮಣರ ಜನಿವಾರ ಬಗ್ಗೆ ತೀರ ಅಸಹ್ಯ ರೀತಿಯಲ್ಲಿ ಟೀಕಿಸಿರು ವುದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಂಬಿಕಾತನಯದತ್ತ ವೇದಿಕೆ ಅಧ್ಯಕ್ಷ, ಸಾಹಿತಿ ಡಾ.ಬಿ.ಆರ್.ನಾಡಗೌಡ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಸಿಂದಗಿ ಭೀಮಾಶಂಕರಮಠ, ಮುರಗೋಡ ಶಿವಚಿದಂಬರೇಶ್ವರಮಠ, ಗೋಕಾಕ, ಬಮ್ಮನಹಳ್ಳಿ, ಯರಗಲ್ ಮಠಗಳ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.

ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಪಂಡಿತ ಕುಲಕರ್ಣಿ ವೇದಿಕೆ ಯಲ್ಲಿದ್ದರು.ಡಾ.ಜೆ.ಜಿ.ಜೋಶಿ ಸ್ವಾಗತಿಸಿದರು.

ಶೋಭಾಯಾತ್ರೆ: ಸಮಾವೇಶ ಪೂರ್ವ ದಲ್ಲಿ ಗಾಯತ್ರಿಮಾತೆ ಭಾವಚಿತ್ರದ ಶೋಭಾಯಾತ್ರೆ ನಗರದಲ್ಲಿ ಸಂಚರಿಸಿತು. ಸಾವಿರಾರು ಸಂಖ್ಯೆಯಲ್ಲಿ ವಿಪ್ರ ಸಮಾಜದ ಮಹಿಳೆಯರು, ಪುರುಷರು, ಮಕ್ಕಳು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry