ದೇಗುಲ ನವೀಕರಣ; ಶತಮಾನೋತ್ಸವ ಸಂಭ್ರಮ

7

ದೇಗುಲ ನವೀಕರಣ; ಶತಮಾನೋತ್ಸವ ಸಂಭ್ರಮ

Published:
Updated:
ದೇಗುಲ ನವೀಕರಣ; ಶತಮಾನೋತ್ಸವ ಸಂಭ್ರಮ

ವಿಜಯಪುರ: ವಿಜಯಪುರದ ಆರಾಧ್ಯದೈವ ಸಿದ್ಧೇಶ್ವರರ ಸಂಕ್ರಮಣ ಜಾತ್ರಾ ಮಹೋತ್ಸವಕ್ಕೆ ಇದೀಗ ಶತಮಾನೋತ್ಸವದ ಮೆರುಗು. 101ನೇ ಜಾತ್ರಾ ಮಹೋತ್ಸವವನ್ನು ವಿಶೇಷವಾಗಿ ಆಚರಿಸಲು ಸಿದ್ಧೇಶ್ವರ ಸಂಸ್ಥೆ ಸಜ್ಜಾಗಿದೆ.

ಜ. 11ರ ಗುರುವಾರದಿಂದ ಜಾತ್ರಾ ಮಹೋತ್ಸವ ವಿಧ್ಯುಕ್ತವಾಗಿ ಆರಂಭಗೊಳ್ಳಲಿದೆ. ಎಂಟು ದಿನ ಜಾತ್ರೆ ಜರುಗಲಿದ್ದು, ಶತಮಾನೋತ್ಸವ ಆಚರಣೆಗಾಗಿ ವಿಶೇಷ ಕಾರ್ಯಕ್ರಮಗಳ ಸರಮಾಲೆಯನ್ನೇ ಆಯೋಜಿಸಿದೆ. 2017ರಲ್ಲಿ ಜಾತ್ರೆಯ ಆಚರಣೆಗಾಗಿ ಸಿದ್ಧೇಶ್ವರ ಸಂಸ್ಥೆ ₹ 43 ಲಕ್ಷ ವ್ಯಯಿಸಿದ್ದರೆ, ಈ ಬಾರಿ ಅಂದಾಜು ₹ 1 ಕೋಟಿಯ ಬಜೆಟ್‌ ರೂಪಿಸಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

ಪ್ರಶಸ್ತಿ ಹೆಚ್ಚಳ: ‘ಸಿದ್ಧೇಶ್ವರರ ಸಂಕ್ರಮಣ ಜಾತ್ರೆಯಲ್ಲಿ ಮದ್ದು ಸುಡುವ ಕಾರ್ಯಕ್ರಮ ವಿಶೇಷ. ಅಪಾರ ಸಂಖ್ಯೆಯ ಜನರು ವಿಜಯಪುರದ ಡಾ.ಬಿ.ಆರ್‌.ಅಂಬೇಡ್ಕರ್‌ ಕ್ರೀಡಾಂಗಣ ದಲ್ಲಿ ಸಂಕ್ರಾಂತಿಯ ಮರು ದಿನ ರಾತ್ರಿ (ಜ. 15) ನಡೆಯುವ ಚಿತ್ತಾಕರ್ಷಕ ಮದ್ದು ಸುಡುವುದನ್ನು ಕಣ್ತುಂಬಿಕೊಳ್ಳಲು ಜಮಾಯಿಸುತ್ತಾರೆ.

ಪ್ರತಿ ವರ್ಷ ₹ 3 ಲಕ್ಷ ವೆಚ್ಚದ ಮದ್ದು ಸುಡಲಾಗುತ್ತಿತ್ತು. ಈ ವರ್ಷ ಶತಮಾನೋತ್ಸವದ ವಿಶೇಷತೆ ಅಂಗವಾಗಿ ದುಪ್ಪಟ್ಟು ₹ 6 ಲಕ್ಷ ಮೊ ತ್ತದ ಚಿತ್ತಾಕರ್ಷಕ ಮದ್ದು ಸುಡಲು ನಿರ್ಧರಿಸಲಾಗಿದೆ’ ಎಂದು ಸಿದ್ಧೇಶ್ವರ ಸಂಸ್ಥೆಯ ಛೇರ್‌ಮನ್‌ ಬಸಯ್ಯ ಹಿರೇಮಠ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿ ವರ್ಷ ಜೀವಮಾನದ ಸಾಧನೆಗೈದ ಏಳು ಸಾಧಕರಿಗೆ ಇದೇ ಸಮಾರಂಭದಲ್ಲಿ ಸಿದ್ಧೇಶ್ವರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿತ್ತು. ಈ ಪ್ರಶಸ್ತಿಯ ಮೊತ್ತ ₹ 25,000. ಈ ಬಾರಿ 11 ಸಾಧಕರಿಗೆ ಸಿದ್ಧೇಶ್ವರ ರತ್ನ ಪ್ರಶಸ್ತಿ ನೀಡುವ ಕುರಿತಂತೆ ಸಂಸ್ಥೆಯ ಆಡಳಿತ ಮಂಡಳಿ ಚಿಂತಿಸುತ್ತಿದೆ’ ಎಂದು ಹೇಳಿದರು.

‘ಶತಮಾನೋತ್ಸವದ ಜಾತ್ರೆ ಆಚರಣೆ ಸಂದರ್ಭ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ನೂರು ಮಂದಿ ಗುರುತಿಸಿ, ವಿಶೇಷ ಪ್ರಶಸ್ತಿ ನೀಡುವ ಜತೆಗೆ, ಮದ್ದು ಸುಡುವ ಕಾರ್ಯಕ್ರಮದಲ್ಲಿ ಸನ್ಮಾನಿಸುವ ಕುರಿತಂತೆ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರು ಆಲೋಚಿಸುತ್ತಿದ್ದಾರೆ’ ಎಂದು ಸಿದ್ಧೇಶ್ವರ ಸಂಸ್ಥೆಯ ಉಪಾಧ್ಯಕ್ಷ ಸಂ.ಗು.ಸಜ್ಜನ ತಿಳಿಸಿದರು.

‘ಜಾತ್ರೆಯ ಅವಧಿಯಲ್ಲಿ ನಿತ್ಯ ಸಂಜೆ ನಡೆಯುವ ಸಾಂಸ್ಕೃತಿಕ ಸಮಾರಂಭಕ್ಕೂ ಮೆರುಗು ನೀಡಲಾಗಿದೆ. ಗಾಯಕಿ ಎಂ.ಡಿ.ಪಲ್ಲವಿ ವಚನ ಗಾಯನ ಪ್ರಸ್ತುತ ಪಡಿಸಿದರೆ, ಗುರುರಾಜ ಹೊಸಕೋಟೆ ಜನಪದ ಗೀತೆಗಳನ್ನು ಹಾಡಲಿದ್ದಾರೆ. ಇವರಿಬ್ಬರೂ ಸೇರಿದಂತೆ ನಾಡಿನ ಖ್ಯಾತ ಕಲಾವಿದರು ಸಾಂಸ್ಕೃತಿಕ ಸಮಾರಂಭಗಳಲ್ಲಿ ಭಾಗಿಯಾಗಲಿದ್ದಾರೆ’ ಎಂದು ಅವರು ಹೇಳಿದರು.

ನವೀಕರಣ: ‘ಶತಮಾನೋತ್ಸವ ಆಚರಣೆಗಾಗಿಯೇ ಸಿದ್ಧೇಶ್ವರ ದೇಗುಲದ ನವೀಕರಣ ಕಾರ್ಯ ಭರದಿಂದ ಸಾಗಿದೆ. ಹಳೆಯದಾದ ಕಲ್ಲಿನ ಕಟ್ಟಡವನ್ನು ಸೌಂದರ್ಯೀಕರಣಗೊಳಿಸುವ ಕೆಲಸ ಈಗಾಗಲೇ ಮುಗಿದಿದೆ.

ಹುಬ್ಬಳ್ಳಿಯ 12 ಮಂದಿ ಕೆಲಸಗಾರರು 13 ದಿನ ‘ಸ್ಯಾಂಡ್‌ ಬ್ಲಾಸ್ಟ್‌’ ತಂತ್ರಜ್ಞಾನ ಬಳಸಿಕೊಂಡು, ದಶಕಗಳ ಕಾಲ ಕಲ್ಲಿನ ಕಟ್ಟಡದ ಮೇಲೆ ಸಂಗ್ರಹ ಗೊಂಡಿದ್ದ ಕೊಳೆ ಸ್ವಚ್ಛಗೊಳಿಸಿ, ಕಟ್ಟಡ ಕಂಗೊಳಿಸುವಂತೆ ಮಾಡಿದ್ದಾರೆ’ ಎಂದು ಬಸಯ್ಯ ಹಿರೇಮಠ ಮಾಹಿತಿ ನೀಡಿದರು.

‘ಗುಡಿಗೆ ಬಣ್ಣ ಬಳಿಯುವ ಕೆಲಸ ನಡೆದಿದೆ. ಗೋಪುರ, ಒಳಭಾಗಕ್ಕೂ ಬಿಳಿಯ ಬಣ್ಣ ಬಳಿಯಲಾಗಿದೆ. ವಿದ್ಯುತ್‌ ಸಂಪರ್ಕ, ಬಲ್ಬ್‌ಗಳನ್ನು ನವೀಕರಣಗೊಳಿಸಲಾಗಿದೆ. ಹಳೆಯ ಎಲ್ಲ ಬಲ್ಬ್‌ ಬದಲಿಸಿದ್ದು, ಎಲ್‌ಇಡಿ ಅಳವಡಿಸಲಾಗಿದೆ. ವಿದ್ಯುತ್‌ ನವೀಕರಣಕ್ಕೆ ₹ 1.5 ಲಕ್ಷ ವೆಚ್ಚವಾಗಿದೆ. ಗುಡಿಯ ನವೀಕರಣದ ವೆಚ್ಚ ₹ 10 ಲಕ್ಷ ದಾಟಿದೆ’ ಎಂದು

ವಿಶೇಷ ಪೂಜೆ

ಜಾತ್ರಾ ಶತಮಾನೋತ್ಸವದ ಅಂಗವಾಗಿ ಜ 12ರಿಂದ 15ರವರೆಗೆ ಸಿದ್ಧೇಶ್ವರ ಸ್ವಾಮಿಗೆ ವಿಶೇಷ ಪೂಜೆ, ಅಭಿಷೇಕ ಆಯೋಜಿಸಲಾಗಿದೆ. ನಿತ್ಯ ಬೆಳಿಗ್ಗೆ 5ರಿಂದ 8 ಗಂಟೆವರೆಗೆ ಹರಿಹರದ ಅರ್ಚಕರ ತಂಡ ಈ ಪೂಜೆ ನೆರವೇರಿಸಲಿದೆ.

* * 

ಸಿದ್ಧೇಶ್ವರ ಸಂಸ್ಥೆಗೆ ವಿಜಯಪುರದ ದಾನಿಗಳು ದೇಣಿಗೆ ನೀಡುತ್ತಾರೆ. ಈ ಹಣವನ್ನು ಜಾತ್ರಾ ಮಹೋತ್ಸವಕ್ಕಾಗಿ ಖರ್ಚು ಮಾಡುತ್ತೇವೆ

ಬಸಯ್ಯ ಹಿರೇಮಠ

ಸಿದ್ಧೇಶ್ವರ ಸಂಸ್ಥೆ ಛೇರ್‌ಮನ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry