ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನ ಇಂದು

Last Updated 5 ಜನವರಿ 2018, 6:58 IST
ಅಕ್ಷರ ಗಾತ್ರ

ಚಿತ್ತಾಪುರ: ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಶುಕ್ರವಾರ ತಾಲ್ಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನವು ಸಾಹಿತಿ ಡಾ. ನೀಲಮ್ಮ ಕತ್ನಳ್ಳಿ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿದೆ.

ಬೆಳಗ್ಗೆ 8 ಗಂಟೆಗೆ ಸಚಿವ ಪ್ರಿಯಾಂಕ್ ಎಂ. ಖರ್ಗೆ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ, ನಂತರ ಸಮ್ಮೇಳನ ಉದ್ಘಾಟಿಸುವರು. ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಭೀಮರಾಯ ಹೋತಿನಮಡಿ ಅವರು ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡುವರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಸ್ವರಣ ಸಂಚಿಕೆ ಬಿಡುಗಡೆ ಮಾಡುವರು. ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಾಬುರಾವ ಚಿಂಚನಸೂರ ಅವರು ಕವನ ಸಂಕಲನ ಬಿಡುಗಡೆ ಮಾಡುವರು. ಡಾ.ಮಲ್ಲಿನಾಥ ತಳವಾರ ರಚಿಸಿದ 'ಕಾರಂತ ಲೋಕ' ಪುಸ್ತಕವನ್ನು ಶಾಸಕ ಡಾ.ಉಮೇಶ ಜಾಧವ ಲೋಕಾರ್ಪಣೆ ಮಾಡುವರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರ ಸಿಂಪಿ ಆಶಯ ನುಡಿ ಹೇಳುವರು. ತಾಲ್ಲೂಕು ಅಧ್ಯಕ್ಷ ಕಾಶಿನಾಥ ಗುತ್ತೆದಾರ್ ಪ್ರಾಸ್ತಾವಿಕ ನುಡಿ ಹೇಳುವರು. ವಿವಿಧ ಮಠಾಧೀಶರು, ಸ್ವಾಮೀಜಿಗಳು, ಶಾಸಕರು, ಮಾಜಿ ಶಾಸಕರು, ರಾಜಕೀಯ ಗಣ್ಯರು, ತಾಲ್ಲೂಕಿನ ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳು, ಸಾಹಿತಿಗಳು, ಉಪನ್ಯಾಸಕರು, ಸಾಹಿತ್ಯಾಸಕ್ತರು, ಕವಿಗಳು ಭಾಗವಹಿಸುವರು.

ನಾಗಾವಿ ಹಿರಿಮೆ ಗೋಷ್ಠಿ: ಮಧ್ಯಾಹ್ನ 12 ರಿಂದ 1.30ರವರೆಗೆ ನಾಗಾವಿ ಹಿರಿಮೆ ಗೋಷ್ಠಿ ನಡೆಯಲಿದೆ. ಬಂಡಾಯ ಸಾಹಿತಿ ಚನ್ನಣ್ಣ ವಾಲಿಕಾರ ಗೋಷ್ಠಿ ಉದ್ಘಟಿಸಲಿದ್ದು, ಸಾಹಿತಿ ಸಂಗಣ್ಣ ಹೊಸಮನಿ ಅಧ್ಯಕ್ಷತೆ ವಹಿಸುವರು.

‘ಸಾಹಿತ್ಯ ಚಳವಳಿ ಮತ್ತು ಮಹಿಳೆಯರು’ ವಿಷಯ ಕುರಿತು ಡಾ.ನೀಲಾಂಬಿಕಾ ಶೇರಿಕಾರ ವಿಶೇಷ ಉಪನ್ಯಾಸ ನೀಡುವರು. ‘ದಲಿತ ಬಂಡಾಯ ಸಾಹಿತ್ಯ ಚಳುವಳಿ’ ಕುರಿತು ಡಾ.ಅಪ್ಪುಗೇರೆ ಸೋಮಶೇಖರ, ‘ಮೌಢ್ಯತೆ ನಿರ್ಮೂಲನೆ ಮತ್ತು ಸುಂದರ ಸಮಾಜ’ ಕುರಿತು ಶಿವರಂಜನ್ ಸತ್ಯಂಪೇಟ್, 'ನಾಗಾವಿ ನಾಡಿನ ಪ್ರವಾಸಿ ತಾಣಗಳು' ಬಗ್ಗೆ ಸಾಹಿತಿ ಮುಡುಬಿ ಗುಂಡೆರಾವ್ ವಿಶೇಷ ಉಪನ್ಯಾಸ ನೀಡುವರು.

ಕವಿಗೋಷ್ಠಿ: ಮಧ್ಯಾಹ್ನ 2 ರಿಂದ 3.30ರವರೆಗೆ ಕವಿಗೋಷ್ಠಿ ನಡೆಯಲಿದೆ. ಪ್ರಾಧ್ಯಾಪಕ ಡಾ. ಮಲ್ಲಿಕಾರ್ಜುನ ಬಾಗೋಡಿ ಆಶಯ ನುಡಿಗಳನ್ನಾಡಲಿದ್ದು, ಪ್ರಾಧ್ಯಾಪಕ ಪ್ರೊ. ಮಲ್ಲಪ್ಪ ಮಾನೇಗಾರ ಅಧ್ಯಕ್ಷತೆ ವಹಿಸುವರು.

ಮಧ್ಯಾಹ್ನ 3.30 ರಿಂದ 4.30ರವರೆಗೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾಶೀನಾಥ ಗುತ್ತೇದಾರ ಅವರ ಅಧ್ಯಕ್ಷತೆಯಲ್ಲಿ ಬಹಿರಂಗ ಅಧಿವೇಶನ ನಡೆಯಲಿದೆ. ಸಂಜೆ 4.30ಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಸನ್ಮಾನ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ.

ಊಟದ ವ್ಯವಸ್ಥೆ: ಸಮ್ಮೇಳನದಲ್ಲಿ ಊಟದ ವ್ಯವಸ್ಥೆಯನ್ನು ಕಾಲೇಜು ಮುಂಭಾಗದ ಕೆಇಬಿ ವಸತಿ ಗೃಹಗಳ ಆವರಣದಲ್ಲಿ ಮಾಡಲಾಗಿದೆ. ಸಭಿಕರಿಗೆ 2,000 ಆಸನದ ವ್ಯವಸ್ಥೆ ಮಾಡಲಾಗಿದೆ ಎಂದು ಕಸಾಪ ಗೌರವ ಕಾರ್ಯದರ್ಶಿ ಸಿದ್ಧಲಿಂಗ ಬಾಳಿ ತಿಳಿಸಿದ್ದಾರೆ.

ಡಾ.ನೀಲಮ್ಮ ಕತ್ನಳ್ಳಿ ಪರಿಚಯ

ಶಹಾಬಾದನಲ್ಲಿ 1950ರ ಜೂನ್‌ 1ರಂದು ಜನಿಸಿದ ಡಾ.ನೀಲಮ್ಮ ಕತ್ನಳ್ಳಿ ಅವರು ಅಲ್ಲಿಯೇ ಶಿಕ್ಷಣ ಪೂರೈಸಿದರು. 1970 ರಲ್ಲಿ ಶಹಾಬಾದನ ಗಂಗಮ್ಮ ಎಸ್.ಮರಗೋಳ ಕನ್ಯಾ ಪ್ರೌಢ ಶಾಲೆಯಲ್ಲಿ ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿದರು. ನಂತರ ಎಂ.ಎ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ತಾವು ಶಿಕ್ಷಣ ಕಲಿತ ಕಾಲೇಜಿನಲ್ಲೇ 1974 ರಲ್ಲಿ ಉಪನ್ಯಾಸಕಿಯಾಗಿ ನೇಮಕಗೊಂಡರು.1995ರಲ್ಲಿ ಕಾಲೇಜಿನ ಪ್ರಾಚಾರ್ಯರಾಗಿ ನಿವೃತ್ತರಾದರು.

‘ಮದುವೆ ಮತ್ತು ಮಹಿಳೆ’, ‘ಸಾಹಿತ್ಯ ಸ್ಪಂಧನ’, ‘ಬಾಳಿಗೊಂದು ಬೆಳಕು’, ‘ವಚನೋತ್ಸವ’, 'ಮಹಿಳೆಯ ಹಲವು ಮುಖಗಳು’, 'ಆಧುನಿಕ ವಚನಸಾಹಿತ್ಯ’, ‘ಚಾಮರಸ ಕಿರು ಹೊತ್ತಿಗೆ’, ‘ನೀಲಾಂಬಿಕೆ ಜೀವನ ಚರಿತ್ರೆ’, ‘ಗಂಗಾಬಿಕೆ ಜೀವನ ಚರಿತ್ರೆ’, ‘ವೀರಪ್ಪ ಇಂಗಳೇಶ್ವರ ಜೀವನ ಚರಿತ್ರೆ', ‘ಸಾಹಿತ್ಯ ಸಿರಿ’, 'ಕಾವ್ಯ ಸೌರಭ', ‘ಹೊನ್ನಕಿರಣ’ ಕೃತಿಗಳನ್ನು ಅವರು ರಚಿಸಿದ್ದಾರೆ.ಮಹಾದೇವ ಬಣಕಾರರ ಕೃತಿಗಳ ಕುರಿತು ಕೈಗೊಂಡ ಸಂಶೋಧನೆಗೆ ಗುಲ್ಬರ್ಗ ವಿಶ್ವವಿದ್ಯಾಲಯದಿಂದ 1995ರಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ.

* * 

ಸಮ್ಮೇಳನ ಅಚ್ಚುಕಟ್ಟಾಗಿ ಸಕಲ ಸಿದ್ಧತೆ ಪೂರ್ಣಗೊಂಡಿದೆ. ಅಡ್ಡಿ ಆತಂಕ ಮತ್ತು ಸಮಸ್ಯೆಗಳಿಲ್ಲದೇ ಸಮ್ಮೇಳನ ಯಶಸ್ವಿಯಾಗಿ ನಡೆಸಲಾಗುವುದು.
ಕಾಶೀನಾಥ ಗುತ್ತೇದಾರ,
ಅಧ್ಯಕ್ಷ, ತಾಲ್ಲೂಕು ಕಸಾಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT