ಉಳಿತಾಯ ಖಾತೆಗಳಲ್ಲಿ ಕನಿಷ್ಠ ಮೊತ್ತ ಪರಾಮರ್ಶೆಗೆ ಎಸ್‍ಬಿಐ ನಿರ್ಧಾರ

7

ಉಳಿತಾಯ ಖಾತೆಗಳಲ್ಲಿ ಕನಿಷ್ಠ ಮೊತ್ತ ಪರಾಮರ್ಶೆಗೆ ಎಸ್‍ಬಿಐ ನಿರ್ಧಾರ

Published:
Updated:
ಉಳಿತಾಯ ಖಾತೆಗಳಲ್ಲಿ ಕನಿಷ್ಠ ಮೊತ್ತ ಪರಾಮರ್ಶೆಗೆ ಎಸ್‍ಬಿಐ ನಿರ್ಧಾರ

ಮುಂಬೈ: ಉಳಿತಾಯ ಖಾತೆಗಳಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳಲು ವಿಫಲರಾದ ಗ್ರಾಹಕರಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಸೂಲಿ ಮಾಡಿದ ದಂಡ ರೂಪದ ಸೇವಾ ಶುಲ್ಕದ ಬಗ್ಗೆ ಟೀಕೆಗಳು ಕೇಳಿಬಂದ ಹಿನ್ನೆಲೆಯಲ್ಲಿ ಪ್ರಸ್ತುತ ಬ್ಯಾಂಕ್ ತಮ್ಮ ಉಳಿತಾಯ ಖಾತೆಗಳಲ್ಲಿ ಕನಿಷ್ಠ ಮೊತ್ತ ಪರಾಮರ್ಶೆಗೆ ಮುಂದಾಗಿದೆ. ಉಳಿತಾಯ ಖಾತೆಗಳಲ್ಲಿನ ಕನಿಷ್ಠ ಮೊತ್ತವನ್ನು ಕಡಿತಗೊಳಿಸುವ ಬಗ್ಗೆ ಎಸ್‍ಬಿಐ ಚಿಂತನೆ ನಡೆಸಿರುವುದಾಗಿ ಇಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಮಹಾನಗರಗಳಲ್ಲಿ ಖಾತೆ ಹೊಂದಿರುವ ಗ್ರಾಹಕರು ತಮ್ಮ ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ ₹3,000 ಉಳಿಸಿಕೊಳ್ಳಬೇಕಿದೆ.

ಜೂನ್ ತಿಂಗಳಲ್ಲಿ  ಖಾತೆಯಲ್ಲಿ ಕಾಯ್ದುಕೊಳ್ಳಬೇಕಾದ ತಿಂಗಳ ಸರಾಸರಿ ಮೊತ್ತ (ಎಂಎಬಿ)ಯನ್ನು ಎಸ್‌ಬಿಐ ₹5000ಕ್ಕೆ ನಿಗದಿಪಡಿಸಿತ್ತು. ಆದರೆ ಇದಕ್ಕೆ ಜನರಿಂದ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಮೆಟ್ರೊ ನಗರಗಳಲ್ಲಿ ಕನಿಷ್ಠ ಮೊತ್ತ  ₹3,000, ಉಪ ನಗರಗಳಲ್ಲಿ ₹2,000 ಮತ್ತು ಗ್ರಾಮ ಪ್ರದೇಶಗಳಲ್ಲಿ ₹1,000 ನಿಗದಿ ಪಡಿಸಿತ್ತು.

ಆದಾಗ್ಯೂ, ತಿಂಗಳ ಸರಾಸರಿ ಮೊತ್ತ (ಎಂಎಬಿ)ವನ್ನು ತ್ರೈಮಾಸಿಕ ಸರಾಸರಿ ಮೊತ್ತವನ್ನಾಗಿ ಬದಲಿಸುವ ಬಗ್ಗೆಯೂ ಎಸ್‍ಬಿಐ ಚಿಂತನೆ ನಡೆಸಿದೆ. ಉಳಿತಾಯ ಖಾತೆಗಳಲ್ಲಿ ಕನಿಷ್ಠ  ಮೊತ್ತ ಕಾಯ್ದುಕೊಳ್ಳಲು ವಿಫಲರಾದ ಖಾತೆದಾರರಿಂದ ಎಸ್‍ಬಿಐ ವಸೂಲಿ ಮಾಡಿದ ದಂಡ ₹1.771 ಕೋಟಿ ಎಂದು ಕೆಲವು ದಿನಗಳ ಹಿಂದೆಯಷ್ಟೇ ವಿತ್ತ ಸಚಿವಾಲಯ ವರದಿ ಪ್ರಕಟಿಸಿತ್ತು.  ಜುಲೈ- ಸಪ್ಟೆಂಬರ್ ತ್ರೈಮಾಸಿಕದಲ್ಲಿ ಎಸ್‍ಬಿಐಯ ಆದಾಯಕ್ಕಿಂತ ಹೆಚ್ಚಿನ ಮೊತ್ತ ದಂಡ ವಸೂಲಿಯಿಂದ ಲಭಿಸಿದೆ. ಏಪ್ರಿಲ್ - ಸಪ್ಟೆಂಬರ್ ಅವಧಿಯಲ್ಲಿ ಬ್ಯಾಂಕ್‍ನ ಲಾಭದ ಮೊತ್ತವಾದ ₹3,586 ಕೋಟಿಯ ಅರ್ಧದಷ್ಟು ಮೊತ್ತ ದಂಡ ವಸೂಲಿಯಿಂದಲೇ ಸಿಕ್ಕಿದೆ.

ಮೂಲಗಳ ಪ್ರಕಾರ ಖಾತೆಗಳಲ್ಲಿ ಕನಿಷ್ಠ ಮೊತ್ತ ₹1000 ಮಾಡುವ ಬಗ್ಗೆ ಎಸ್‍ಬಿಐ ಚಿಂತಿಸುತ್ತಿದ್ದು, ಈ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ.

[related]

ನೀವು ಎಸ್‍ಬಿಐ ಗ್ರಾಹಕರಾಗಿದ್ದರೆ ಅರಿತುಕೊಳ್ಳಬೇಕಾದ ಸಂಗತಿಗಳಿವು

*ನಿಮ್ಮ ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ ಎಷ್ಟಿರಬೇಕು?

ಮೆಟ್ರೊ ನಗರಗದಲ್ಲಾದರೆ ಕನಿಷ್ಠ ಮೊತ್ತ ₹5,000 ಇತ್ತು, ಆದರೆ ಸೆಪ್ಟೆಂಬರ್ ನಂತರ ಕನಿಷ್ಠ ಮೊತ್ತ ₹3,000ಕ್ಕೆ ಇಳಿಸಲಾಗಿದೆ. ನಗರದಲ್ಲಾದರೆ ₹3,000, ಉಪನಗರಗಳಲ್ಲಿ ₹2,000 ಮತ್ತು ಗ್ರಾಮ ಪ್ರದೇಶದಲ್ಲಿ ಖಾತೆ ಹೊಂದಿದವರು ಕನಿಷ್ಠ ಮೊತ್ತ ₹1000 ಕಾಯ್ದುಕೊಳ್ಳಬೇಕು. ಪಿಂಚಣಿದಾರರು, ಸರ್ಕಾರದಿಂದ ಸೌಲಭ್ಯ ಪಡೆಯುತ್ತಿರುವವರು, ಅಪ್ರಾಪ್ತರ ಖಾತೆಗಳಿಗೆ ಇದು ಅನ್ವಯವಾಗುವುದಿಲ್ಲ.

ಕನಿಷ್ಠ ಮೊತ್ತ ಕಾಯ್ದುಕೊಳ್ಳದೇ ಇದ್ದರೆ ಏನಾಗುತ್ತದೆ?

ಎಸ್‍ಬಿಐಯ ಪರಿಷ್ಕೃತ ಶುಲ್ಕ ಪ್ರಕಾರ, ಖಾತೆಯಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳದ ಗ್ರಾಹಕರಿಗೆ ₹100 ದಂಡ +ಸೇವಾ ಶುಲ್ಕ ವಿಧಿಸಲಾಗುವುದು. ಮೆಟ್ರೊ ನಗರಗಳಲ್ಲಿ ಗ್ರಾಹಕರ ಖಾತೆಯಲ್ಲಿರುವ ಹಣ ಮೊತ್ತ ಕನಿಷ್ಠ ಮೊತ್ತಕ್ಕಿಂತ ಶೇ. 75ಕ್ಕಿಂತ ಕಡಿಮೆಯಾಗಿದ್ದರೆ ₹100 ದಂಡ+ ಸೇವಾ ಶುಲ್ಕ ವಿಧಿಸಲಾಗುತ್ತದೆ. ಅದೇ ವೇಳೆ ಶೇ.50 ಮತ್ತು ಅದಕ್ಕಿಂತ ಕಡಿಮೆ ಇದ್ದರೆ ₹50 ದಂಡ + ಸೇವಾ ಶುಲ್ಕ ವಿಧಿಸಲಾಗುವುದು. ಗ್ರಾಮ ಪ್ರದೇಶಗಳಲ್ಲಿ ₹20ರಿಂದ ₹50 ವರೆಗೆ ದಂಡ+ಸೇವಾ ಶುಲ್ಕ ವಿಧಿಸಲಾಗುವುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry