ವಿಳಂಬಕ್ಕೆ ಇಚ್ಛಾಶಕ್ತಿ ಕೊರತೆ ಕಾರಣ

7

ವಿಳಂಬಕ್ಕೆ ಇಚ್ಛಾಶಕ್ತಿ ಕೊರತೆ ಕಾರಣ

Published:
Updated:
ವಿಳಂಬಕ್ಕೆ ಇಚ್ಛಾಶಕ್ತಿ ಕೊರತೆ ಕಾರಣ

ಕೋಲಾರ: ‘ಯರಗೋಳ್ ಯೋಜನೆ ಕಾಮಗಾರಿ ಪೂರ್ಣಗೊಂಡಿದ್ದರೆ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತಿತ್ತು. ಆದರೆ, ಸರ್ಕಾರಗಳಿಗೆ ಇಚ್ಛಾಶಕ್ತಿಯಿಲ್ಲದ ಕಾರಣ ಕಾಮಗಾರಿ ವಿಳಂಬವಾಗಿದೆ’ ಎಂದು ಜೆಡಿಎಸ್‌ ಮುಖಂಡ ಕೆ.ಶ್ರೀನಿವಾಸಗೌಡ ಬೇಸರ ವ್ಯಕ್ತಪಡಿಸಿದರು.

ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಯರಗೋಳ್‌ ಗ್ರಾಮದ ಸಮೀಪ ಪ್ರಗತಿಯಲ್ಲಿರುವ ಯರಗೋಳ್ ಯೋಜನೆ ಕಾಮಗಾರಿಯನ್ನು ಗುರುವಾರ ಪರಿಶೀಲಿಸಿ ಅವರು ಮಾತನಾಡಿದರು.

‘ಯರಗೋಳ್‌ ಪ್ರದೇಶದಿಂದ ವ್ಯರ್ಥವಾಗಿ ತಮಿಳುನಾಡಿಗೆ ಹರಿದು ಹೋಗುವ ನೀರನ್ನು ತಡೆದು ಜಿಲ್ಲೆಯ ನಗರ, ಪಟ್ಟಣ ಹಾಗೂ ಗ್ರಾಮಗಳಿಗೆ ಕುಡಿಯುವ ಉದ್ದೇಶಕ್ಕೆ ಬಳಸಿಕೊಳ್ಳಬಹುದು ಎಂದು ತಾವು ಕೃಷಿ ಸಚಿವನಾಗಿದ್ದ ಸಂದರ್ಭದಲ್ಲಿ ಯೋಚಿಸಿದ್ದೆ’ ಎಂದರು.

‘ಈ ಹಿಂದೆ ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಕೆಯುಡಬ್ಲ್ಯೂಎಸ್‌ಡಿಬಿ) ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಶ್ರೀನಿವಾಸರೆಡ್ಡಿ ಅವರ ಅಭಿಪ್ರಾಯ ಪಡೆದು ನೀರಾವರಿ ಯೋಜನೆ ಜಾರಿಗೊಳಿಸಬಹುದು ಎಂದು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿತ್ತು’ ಎಂದರು.

‘ಆಗ ಕಾಂಗ್ರೆಸ್‌ನ ಧರ್ಮಸಿಂಗ್‌ ಮುಖ್ಯಮಂತ್ರಿಯಾಗಿದ್ದರು. ನಂತರ ಮುಖ್ಯಮಂತ್ರಿಯಾದ ಎಚ್‌.ಡಿ.ಕುಮಾರಸ್ವಾಮಿ ಅವರು ಯೋಜನೆಗೆ ಹಣಕಾಸು ಅನುಮೋದನೆ ನೀಡಿ ಶಂಕುಸ್ಥಾಪನೆ ನೆರವೇರಿಸಿದ್ದರು’ ಎಂದು ವಿವರಿಸಿದರು.

‘₹ 280 ಕೋಟಿ ವೆಚ್ಚದಲ್ಲಿ ಯೋಜನೆ ಪೂರ್ಣಗೊಳಿಸಲು ಟೆಂಡರ್ ಕರೆಯಲಾಯಿತು. ಅಧಿಕಾರಿಗಳ ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಯೋಜನೆ ಸ್ಥಗಿತಗೊಂಡಿತ್ತು. ಸುಮಾರು ವರ್ಷಗಳಿಂದ ಮಳೆಯಾಗದ ಕಾರಣ 2013ರಲ್ಲಿ ಪೈಪ್‌ಲೈನ್‌ ಕಾಮಗಾರಿ ಪೂರ್ಣಗೊಳಿಸಿ ಡ್ಯಾಂ ನಿರ್ಮಾಣ ಸ್ಥಗಿತಗೊಳಿಸುವಂತೆ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ವರ್ತೂರು ಪ್ರಕಾಶ್‌ ಅವರು ಸೂಚಿಸಿದ್ದು ಎಷ್ಟು ಸರಿ’ ಎಂದು ಕಿಡಿಕಾರಿದರು.

ಒತ್ತಡ ಹೇರಬೇಕು: ಕಾಮಗಾರಿ ಆರಂಭವಾಗುತ್ತಿದ್ದಂತೆ ಅರಣ್ಯ ಇಲಾಖೆಯವರು ಅಡ್ಡಿಪಡಿಸಿ ಕಾಮಗಾರಿ ನಿಲ್ಲಿಸುವಂತೆ ನೋಟಿಸ್ ನೀಡಿದರು. ಬಳಿಕ ಕೇಂದ್ರ ಸರ್ಕಾರದ ಅನುಮತಿ ಪಡೆಯಲು 5 ವರ್ಷ ಬೇಕಾಯಿತು. ಸ್ಥಳೀಯವಾಗಿ ಕೆಲ ಸಣ್ಣಪುಟ್ಟ ಸಮಸ್ಯೆ ಇರುತ್ತವೆ. ಆ ಸಮಸ್ಯೆಗಳನ್ನು ಲೆಕ್ಕಿಸದೆ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳು ಗುತ್ತಿಗೆದಾರರ ಮೇಲೆ ಒತ್ತಡ ಹೇರಬೇಕು’ ಎಂದು ಒತ್ತಾಯಿಸಿದರು.

‘ಮಳೆಗಾಲದಲ್ಲಿ 1 ಟಿಎಂಸಿಗೂ ಹೆಚ್ಚು ನೀರು ವ್ಯರ್ಥವಾಗಿ ತಮಿಳುನಾಡಿಗೆ ಹರಿದು ಹೋಗುತ್ತಿದೆ. ಇತ್ತೀಚಿಗೆ ಸುರಿದ ಮಳೆಯಿಂದ ಸಾಕಷ್ಟು ನೀರು ಹರಿದು ಹೋಗಿದೆ. ಇಷ್ಟು ದಿನ ಮಳೆಯಾಗುವುದಿಲ್ಲ ಎಂಬ ಕಾರಣಕ್ಕೆ ಕಾಮಗಾರಿ ನಿಧಾನ ಗತಿಯಲ್ಲಿ ನಡೆಯುತ್ತಿತ್ತು. ಈಗ ಕಾಮಗಾರಿ ವೇಗ ಹೆಚ್ಚಿಸಬೇಕು. ಜಿಲ್ಲೆಯಿಂದ ನೀರು ವ್ಯರ್ಥವಾಗಿ ಹೊರ ರಾಜ್ಯಕ್ಕೆ ಹರಿದು ಹೋಗುವುದನ್ನು ತಡೆಯಲು ಬೇರೆ ಯೋಜನೆ ಜಾರಿಗೊಳಿಸಿ ಎಂದು ಕೇಳುವುದು ತಪ್ಪು. ನೀರು ಸಾಕಾಗದಿದ್ದರೆ ಬೇರೆ ಯೋಜನೆ ಕೇಳಬಹುದು’ ಎಂದರು.

ಸಹಕಾರ ನೀಡಬೇಕು:‘ಪೈಪ್‌ಲೈನ್ ಕಾಮಗಾರಿಯ ಸ್ವಲ್ಪ ಭಾಗ ಪೂರ್ಣಗೊಂಡಿದ್ದು, ಜಾಕ್ವೆಲ್‌ ಕಾಮಗಾರಿ ಆರಂಭವಾಗಿದೆ, ಮತ್ತೊಂದು ಕಡೆ ಡ್ಯಾಂ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದು ಖುಷಿ ತಂದಿದೆ. ಕಾಮಗಾರಿಗೆ ಸ್ಥಳೀಯರು ಸಹಕಾರ ನೀಡಬೇಕು. ವಿನಾಕಾರಣ ಅಡ್ಡಿಪಡಿಸಬಾರದು. ಇಲ್ಲಿ ನೀರು ಶೇಖರಣೆಯಾಗುವುದರಿಂದ ಸುತ್ತಮುತ್ತಲಿನ ಕೊಳವೆ ಬಾವಿಗಳಲ್ಲಿ ಜಲ ಮರುಪೂರ್ಣವಾಗಿ ಕೃಷಿಗೆ ಅನುಕೂಲವಾಗುತ್ತದೆ’ ಎಂದು ಕಿವಿಮಾತು ಹೇಳಿದರು.

ಕೆಯುಡಬ್ಲ್ಯೂಎಸ್‌ಡಿಬಿ ಕಾರ್ಯಪಾಲಕ ಎಂಜಿನಿಯರ್ ವೆಂಕಟೇಶ್‌ ಯೋಜನೆ ಕುರಿತು ಮಾಜಿ ಸಚಿವರಿಗೆ ಮಾಹಿತಿ ನೀಡಿದರು. ಜೆಡಿಎಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಇ.ಗೋಪಾಲಪ್ಪ, ರಾಜ್ಯ ಎಸ್ಸಿ ಎಸ್ಟಿ ಘಟಕದ ಉಪಾಧ್ಯಕ್ಷ ವೆಂಕಟೇಶ್, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಅಶ್ವತ್ಥ್‌, ಕೆಯುಡಬ್ಲ್ಯೂಎಸ್‌ಡಿಬಿ ಸಹಾಯಕ ಎಂಜಿನಿಯರ್‌ ಶಿವರಾಮ್‌ ನಾಯಕ್‌ ಇದ್ದರು.

* * 

ಮಾಲೂರು, ಕೆಜಿಎಫ್, ಬಂಗಾರಪೇಟೆ ನಗರ ಮತ್ತು ಕೆಲ ಗ್ರಾಮಗಳಿಗೆ ಕುಡಿಯುವ ನೀರು ಕೊಡುವುದು ಈ ಯರಗೋಳ್‌ ಯೋಜನೆಯ ಉದ್ದೇಶವಾಗಿದೆ

ಕೆ.ಶ್ರೀನಿವಾಸಗೌಡ, ಮುಖಂಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry