ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔರಾದ್ ಬಂದ್ ಯಶಸ್ಸಿ, ಬೃಹತ್ ರ‍್ಯಾಲಿ

Last Updated 5 ಜನವರಿ 2018, 9:09 IST
ಅಕ್ಷರ ಗಾತ್ರ

ಔರಾದ್: ಮಹಾರಾಷ್ಟ್ರದ ಭೀಮಾ–ಕೋರೆಗಾಂವ್ ಹಿಂಸಾಚಾರ ಘಟನೆ ಖಂಡಿಸಿ ಇಲ್ಲಿನ ವಿವಿಧ ದಲಿತಪರ ಸಂಘಟನೆಗಳು ಗುರುವಾರ ಕರೆ ನೀಡಿದ್ದ ಬಂದ್ ಬಹುತೇಕ ಯಶಸ್ಸಿಯಾಯಿತು.

ಬಂದ್ ಅಂಗವಾಗಿ ಸ್ಥಳೀಯ ಖಾಸಗಿ ಶಾಲಾ–ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಕೆಲ ಅಂಗಡಿಗಳು ಬೆಳಿಗ್ಗೆ ತೆರೆದಿದ್ದವು. ನಂತರ ಬಹುತೇಕ ಅಂಗಡಿಗಳ ಬಾಗಿಲು ಮುಚ್ಚಿದ್ದವು. ಸಾರಿಗೆ ಸಂಸ್ಥೆ ಸೇರಿದಂತೆ ಖಾಸಗಿ ಬಸ್ ಮತ್ತು ಇತರೆ ವಾಹನ ಓಡಾಟ ಮಧ್ಯಾಹ್ನದವರೆಗೆ ಸ್ಥಗಿತವಾಗಿತ್ತು. ಇದರಿಂದಾಗಿ ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆ ಹೋಗುವ ಪ್ರಯಾಣಿಕರು ಪರದಾಡಬೇಕಾಯಿತು.

ರ‍್ಯಾಲಿ: ಬಂದ್ ಅಂಗವಾಗಿ ತಾಲ್ಲೂಕಿನ ವಿವಿಧೆಡೆಯಿಂದ ಬಂದ ದಲಿತ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ದಲಿತ ವಿದ್ಯಾರ್ಥಿ ಒಕ್ಕೂಟದ ರಾಜ್ಯ ಸಂಚಾಲಕ ಶಿವಕುಮಾರ ಕಾಂಬಳೆ, ‘ಭೀಮಾ–ಕೋರೆಗಾಂವ್‌ನಲ್ಲಿ ವಿಜಯೋತ್ಸವ ಆಚರಣೆಗೆ ಹೊರಟ ದಲಿತರ ಮೇಲೆ ದೌರ್ಜನ್ಯ ನಡೆಸಲಾಗಿದೆ. ಈಗಲೂ ಕೆಲ ಜಾತಿವಾದಿಗಳು ದಲಿತರ ಸ್ವಾಭಿಮಾನದ ಬದುಕು ಸಹಿಸುತ್ತಿಲ್ಲ. ಈ ಕಾರಣದಿಂದ ಹಿಂಸಾಚಾರ ನಡೆದಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ‘ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ದೇಶದಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ’ ಎಂದು ಅವರು ಕಿಡಿ ಕಾರಿದರು.

ದಲಿತ ಮುಖಂಡ ದಯಾಸಾಗರ ಭೆಂಡೆ ಮಾತನಾಡಿ, ‘ಈಚೆಗೆ ವಿಜಯಪುರದಲ್ಲಿ ದಲಿತ ಯುವತಿ ಕೊಲೆ ಆಗಿದೆ. ಈ ತಾಲ್ಲೂಕಿನ ಡಿಗ್ಗಿ ಗ್ರಾಮದ ದಲಿತ ಯುವಕ ಖಂಡುಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಕೊಲೆ ಮಾಡಲಾಗಿದೆ. ದೇಶದಲ್ಲಿ ಈ ರೀತಿಯ ದಲಿತರ ಮೇಲಿನ ದೌರ್ಜನ್ಯದ ಪ್ರಕರಣಗಳು ಜಾಸ್ತಿಯಾದರೂ ಕೇಂದ್ರ ಮೌನ ವಹಿಸಿರುವುದು ನೋವಿನ ಸಂಗತಿ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಭೀಮಾ–ಕೋರೆಗಾಂವ್ ಘಟನೆ ನಿಷ್ಪಕ್ಷಪಾತ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ವಿಜಯಪುರ ದಲಿತ ಯುವತಿ ಕೊಲೆ ಪ್ರಕರಣದ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು’ ಎಂದು ಆಗ್ರಹಿಸಿ ಕೇಂದ್ರ ಗೃಹ ಸಚಿವರ ಹೆಸರಿಗೆ ಬರೆದ ಮನವಿಪತ್ರ ತಹಶೀಲ್ದಾರ್ ಎಂ. ಚಂದ್ರಶೇಖರ ಅವರಿಗೆ ಸಲ್ಲಿಸಿದರು.

ದಲಿತ ಮುಖಂಡ ಸ್ವಾಮಿದಾಸ ಮುದಾಳೆ, ಧನರಾಜ ಮುಸ್ತಾಪುರ, ಪ್ರಕಾಶ ಬಂಗಾರೆ, ಸುನೀಲ್ ಮಿತ್ರಾ, ಸ್ವಾಮಿದಾಸ ಮೇಘಾ, ಸಂಜು ಲಾಧಾ, ರಮೇಶ ಬೀಗಾಂವ್‌ಕರ್‌, ಉತ್ತಮ ಮಾಂಜ್ರೆಕರ್, ಝರೆಪ್ಪ ವರ್ಮಾ, ರಾಹುಲ್ ಖಂದಾರೆ, ರಾಮ ಗೋಡಬೋಲೆ, ಶೇಖರ ಮೇತ್ರೆ, ಥಾಮಸ್ ದರಬಾರೆ, ಬಂಟಿ ದರಬಾರೆ, ಅರಹಂತ ಸಾವಳೆ, ಸಂಜುಕುಮಾರ ಯನಗುಂದಾ ಸೇರಿದಂತೆ ವಿವಿಧ ಗ್ರಾಮಗಳಿಂದ ದಲಿತ ಕಾರ್ಯಕರ್ತರು ಪಾಲ್ಗೊಂಡರು. ಡಿವೈಎಸ್ಪಿ ಅಶೋಕಕುಮಾರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

* * 

ಕೇಂದ್ರ ಸರ್ಕಾರ ದೇಶದ ವಿವಿಧೆಡೆ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯ ತಡೆಯಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ದಲಿತರು ತಮ್ಮ ರಕ್ಷಣೆ ತಾವೇ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಲಿದೆ.
ಶಿವಕುಮಾರ ಕಾಂಬಳೆ, ದಲಿತ ವಿದ್ಯಾರ್ಥಿ ಒಕ್ಕೂಟದ ಸಂಚಾಲಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT