ಶನಿವಾರ, ಜೂಲೈ 4, 2020
21 °C

ಕಳಸ ತಾಲ್ಲೂಕು ಬೇಡಿಕೆ ಈಡೇರುವುದೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಳಸ ತಾಲ್ಲೂಕು ಬೇಡಿಕೆ ಈಡೇರುವುದೇ?

ಮೂಡಿಗೆರೆ: ತಾಲ್ಲೂಕಿನ ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ ನಡೆಸುವ ಸಲುವಾಗಿ ಇದೇ 5 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪಟ್ಟಣಕ್ಕೆ ಬರಲಿದ್ದಾರೆ.

5ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನಿಂದ ಹೆಲಿಕ್ಯಾಪ್ಟರ್ ಮೂಲಕ ಒಕ್ಕಲಿಗರ ಸಂಘದ ಶಾಲೆಯ ಆವರಣದಲ್ಲಿ ನಿರ್ಮಿಸಿರುವ ಹೆಲಿಪ್ಯಾಡ್‌ಗೆ ಬಂದಿಳಿಯುವ ಮುಖ್ಯಮಂತ್ರಿ, ಹೊಯ್ಸಳ ಕ್ರೀಡಾಂ ಗಣದಲ್ಲಿ ಕಾರ್ಯಕ್ರಮಕ್ಕಾಗಿ ಸಜ್ಜುಗೊಳಿಸಿರುವ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮೂಲಕ ಚಾಲನೆ ನೀಡಲಿದ್ದಾರೆ.

ರಾಜ್ಯ ಸರ್ಕಾರದ ವಿನೂತನ ಯೋಜನೆಯಾದ ಇಂದಿರಾ ಕ್ಯಾಂಟೀನ್‌ಗೂ ಇದೇ ವೇಳೆ ಚಾಲನೆ ನೀಡಲಿದ್ದು, ಇದುವರೆಗೂ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಸೂಕ್ತ ಸ್ಥಳ ನಿಗದಿಗೊಳಿಸಿಲ್ಲದಿರುವುದು, ಸ್ಥಳೀಯ ರಲ್ಲಿ ಬೇಸರ ಮೂಡಿಸಿದೆ.

ಕಾರ್ಯಕ್ರಮದಲ್ಲಿ ಬೆಟ್ಟದಮನೆ ಸೇತುವೆ, ಧನಕ್ಕಿಹರದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಆಂಜನೇಯ ಅವರು ಗ್ರಾಮ ವಾಸ್ತವ್ಯ ಹೂಡಿದ್ದ ವೇಳೆ ಘೋಷಿಸಿದ್ದ ವಿಶೇಷ ಅನುದಾನದ ಕಾಮಗಾರಿಗಳು, ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳು, ಮೂಲರಹಳ್ಳಿಯ ಅಡ್ಡಗುಡ್ಡೆ ಗ್ರಾಮದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ, ಕಳಸೇಶ್ವರ ದೇವಾಲಯದ ದಾಸೋಹ ಭವನ, ದಾರದಹಳ್ಳಿ – ಕೆಸವಳಲು ಸೇತುವೆ ನಿರ್ಮಾಣ, ಹಳೇಮೂಡಿಗೆರೆಯಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣ, ಕುಡಿಯುವ ನೀರಿನ ಯೋಜನೆಗಳು, 3ನೇ ಹಂತದ ನಗರೋತ್ಥಾನ ಯೋಜನೆ ಕಾಮಗಾರಿಗಳು, ದೇವರಮನೆ ಗ್ರಾಮದಲ್ಲಿ ಯಾತ್ರಿ ನಿವಾಸ ನಿರ್ಮಾಣ ಕಾಮಗಾರಿ, ಇಂದಿರಾ ಕ್ಯಾಂಟೀನ್‌ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲ್ಲದೆ, ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತುಗಳನ್ನು ಸಹ ವೇದಿಕೆಯಲ್ಲಿ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಮುಖ್ಯಮಂತ್ರಿ ಬರುವ ವೇಳೆ ಪ್ರತಿಭಟನೆ ನಡೆಸುವ ಸಂಭವ ವಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್‌ ಬಿಗಿ ಬಂದೋಬಸ್ತ್‌ ಕೂಡ ಏರ್ಪಡಿಸಲಾಗಿದ್ದು, ಪಟ್ಟಣದ ವಿವಿಧೆಡೆ ಹಾಗೂ ಹೆದ್ದಾರಿಯುದ್ದಕ್ಕೂ ಪೊಲೀಸರ ಸರ್ಪಗಾವಲನ್ನು ನಿಯೋಜಿಸಲಾಗಿದೆ.

ಮುಖ್ಯಮಂತ್ರಿಯಾದ ಬಳಿಕ 2ನೇ ಬಾರಿಗೆ ಬರುತ್ತಿರುವ ಸಿದ್ದರಾಮಯ್ಯ ಅವರನ್ನು ಸ್ವಾಗತಿಸಲು ಪಟ್ಟಣವು ಕಾಂಗ್ರೆಸ್‌ ಬಾವುಟಗಳಿಂದ ಹಾಗೂ ರಾಜಕೀಯ ಮುಖಂಡರ ಫ್ಲೆಕ್ಸ್‌ಗಳಿಂದ ಸಿಂಗಾರಗೊಂಡಿದೆ.

ಹೆದ್ದಾರಿಯಲ್ಲಿರುವ ಕಾಂಗ್ರೆಸ್‌ ಭವನವು ಹಸಿರು ಚಪ್ಪರ ದೊಂದಿಗೆ ಮದುವೆ ಮನೆಯಂತೆ ಸಿಂಗಾರಗೊಂಡಿದೆ. ‘ಕಳಸವನ್ನು ನೂತನ ತಾಲ್ಲೂಕನ್ನಾಗಿ ಘೋಷಿಸುವರೇ’ ಎಂಬ ಆಸೆಗಣ್ಣುಗ ಕೂಡ ಮುಖ್ಯಮಂತ್ರಿಯ ಬರುವಿಕೆ ಕುತೂಹಲದಿಂದ ಎದುರು ನೋಡುತ್ತಿವೆ.

ಪ್ರತಿಭಟನೆಗೆ ಸಿದ್ಧತೆ?

ಮುಖ್ಯಮಂತ್ರಿ ನಗರದಕ್ಕೆ ಬರುತ್ತಿದ್ದು, ಈ ವೇಳೆಯಲ್ಲಿ ವಿವಿಧ ಸಮಸ್ಯೆಗಳನ್ನು ಈಡೇರಿಸುವಂತೆ ಹಲವು ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿವೆ. ತಾಲ್ಲೂಕು ಕಚೇರಿಯಲ್ಲಿ ಅರ್ಜಿ 53 ರೈತರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಸಮಸ್ಯೆಯ ಜತೆಗೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ತಾಲ್ಲೂಕು ಆಡಳಿತ ವಿಫಲವಾಗಿದೆ ಎಂಬ ಕಾರಣಕ್ಕಾಗಿ ರಾಜ್ಯ ರೈತಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಲು ಮುಂದಾಗಿದ್ದರೆ, ನಿವೇಶನ ರಹಿತರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ನಿವೇಶನ ರಹಿತರ ಒಕ್ಕೂಟದ ಅಧ್ಯಕ್ಷ ಹಳೇಮೂಡಿಗೆರೆ ರುದ್ರಯ್ಯ ದೂರವಾಣಿಯಲ್ಲಿ ತಿಳಿಸಿದ್ದಾರೆ. ಬಡವನದಿಣ್ಣೆ ಗ್ರಾಮದಲ್ಲಿ ದಲಿತರ ಸ್ಮಶಾನವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ಮುಖ್ಯಮಂತ್ರಿಗೆ ಮನವಿ ಪತ್ರ ನೀಡಲು ಸ್ಥಳೀಯ ದಲಿತ ಮುಖಂಡರು ಸಿದ್ಧತೆ ನಡೆಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.