ಸೋಮವಾರ, ಜೂಲೈ 6, 2020
27 °C

ತೆರೆದ, ನಿರುಪಯುಕ್ತ ಕೊಳವೆ ಬಾವಿ ಮುಚ್ಚಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಜಿಲ್ಲೆ ವ್ಯಾಪ್ತಿಯಲ್ಲಿ ತೆರೆದ ಹಾಗೂ ವಿಫಲವಾಗಿರುವ ಕೊಳವೆ ಬಾವಿಗಳನ್ನು ಸಂಬಂಧಪಟ್ಟವರು ಕಡ್ಡಾಯವಾಗಿ ಮುಚ್ಚಬೇಕು ಎಂದು ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌ ಸೂಚಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸುಪ್ರೀಂ ಕೋರ್ಟ್‌ ಸೂಚನೆಯ ಮೇರೆಗೆ ಈಗಾಗಲೇ ಜಿಲ್ಲಾ ವ್ಯಾಪ್ತಿಯಲ್ಲಿ 288 ತೆರೆದ, ವಿಫಲ ಕೊಳವೆಬಾವಿಗಳನ್ನು ಮುಚ್ಚಲಾಗಿದೆ. ಒಂದು ವೇಳೆ ಯಾವುದಾದರೂ ಇದ್ದಲ್ಲಿ ಜನರ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು’ ಎಂದು ಮನವಿ ಮಾಡಿದರು.

ಕೃಷಿ ಜಮೀನುಗಳಲ್ಲಿ ಕೊರೆಸಿರುವ ಕೊಳವೆ ಬಾವಿಗಳು ವಿಫಲವಾಗಿದ್ದಲ್ಲಿ ಸಂಬಂಧಪಟ್ಟ ರೈತರು ಕ್ಯಾಪ್‌ ಹಾಕಿ, ಅದರ ಮೇಲೆ 2 ಅಡಿ ಮಣ್ಣು ಸುರಿಯಬೇಕು. ನಂತರ ಮುಳ್ಳು ಹಾಕಿ ಮುಚ್ಚಬೇಕು ಎಂದು ಅವರು ಸಲಹೆ ನೀಡಿದರು.

ಸೂಕ್ತ ರೀತಿಯಲ್ಲಿ ಮುಚ್ಚದಿದ್ದಲ್ಲಿ ಸಂಬಂಧಪಟ್ಟ ಜಮೀನು ಮಾಲೀಕ ಹಾಗೂ ರಿಂಗ್‌ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ತೆರೆದ ಹಾಗೂ ವಿಫಲವಾದ ಕೊಳವೆಬಾವಿಗಳಲ್ಲಿ ಸಂಭವಿಸಬಹುದಾದ ದುರಂತಗಳನ್ನು ತಪ್ಪಿಸುವ ಉದ್ದೇಶದಿಂದ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದರು.

‘ರಾಜ್ಯದಲ್ಲಿ 43 ತಾಲ್ಲೂಕುಗಳನ್ನು ಅತಿ ಹೆಚ್ಚು ಅಂತರ್ಜಲ ಬಳಕೆ ಮಾಡಿಕೊಂಡಿರುವ ತಾಲ್ಲೂಕುಗಳೆಂದು ಸರ್ಕಾರ ಗುರುತಿಸಿದೆ. ಇದರಲ್ಲಿ ಜಿಲ್ಲೆಯ ಚನ್ನಗಿರಿ, ಹರಪನಹಳ್ಳಿ ಹಾಗೂ ಜಗಳೂರು ತಾಲ್ಲೂಕುಗಳೂ ಸೇರ್ಪಡೆಯಾಗಿವೆ. ಈ ತಾಲ್ಲೂಕುಗಳಲ್ಲಿ ಅಂತರ್ಜಲವು ಸಂಪೂರ್ಣವಾಗಿ ಕುಸಿದಿದ್ದು, ಕೊಳವೆ ಬಾವಿ ಕೊರೆಸುವುದನ್ನು ನಿರ್ಬಂದಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌ ಹೇಳಿದರು.

ಒಂದು ವೇಳೆ ಈ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಸರ್ಕಾರ, ನಿಗಮ ಮಂಡಳಿ ಹಾಗೂ ಖಾಸಗಿಯಿಂದ ಕೊಳವೆ ಬಾವಿ ಕೊರೆಸಲು ಇಚ್ಛಿಸುವವರು ಕಡ್ಡಾಯವಾಗಿ ಸಂಬಂಧಪಟ್ಟ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು. ಇದನ್ನು ಉಲ್ಲಂಘಿಸಿದ್ದಲ್ಲಿ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಕೊಳವೆ ಬಾವಿ ಹೊಂದಿರುವವರು ಜಿಲ್ಲಾ ಅಂತರ್ಜಲ ಪ್ರಾಧಿಕಾರ ಸಮಿತಿಯಲ್ಲಿ 120 ದಿನದೊಳಗೆ ₹ 50 ಶುಲ್ಕ ತುಂಬಿ, ನೋಂದಾಣಿ ಮಾಡಿಸಿಕೊಳ್ಳಬೇಕು. ಇದಕ್ಕೆ ಸಂಬಂಧಿಸಿದ ಅರ್ಜಿಯನ್ನು ಚನ್ನಗಿರಿ, ಹರಪನಹಳ್ಳಿ ಮತ್ತು ಜಗಳೂರು ತಾಲ್ಲೂಕು ಕಾರ್ಯನಿರ್ವಹಕ ಅಧಿಕಾರಿಗಳ ಕಚೇರಿ ಮತ್ತು ಹಿರಿಯ ಭೂವಿಜ್ಞಾನಿಗಳ ಕಚೇರಿಯಲ್ಲಿ ಪಡೆಯಬಹುದು ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.