ಅಭಿವೃದ್ಧಿಗೆ ಕಾಂಗ್ರೆಸ್ ಅಡ್ಡಗಾಲು

7

ಅಭಿವೃದ್ಧಿಗೆ ಕಾಂಗ್ರೆಸ್ ಅಡ್ಡಗಾಲು

Published:
Updated:

ಮುಂಡರಗಿ: ‘ದೇಶದ 20 ರಾಜ್ಯಗಳಲ್ಲಿ ಸದ್ಯ ಬಿಜೆಪಿ ಅಧಿಕಾರ ನಡೆಸುತ್ತಿದ್ದು, ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಅಧಿಕಾರದ ಚುಕ್ಕಾಣಿಯನ್ನೂ ಬಿಜೆಪಿಯೇ ಹಿಡಿಯಲಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಹೇಳಿದರು. ಸ್ಥಳೀಯ ಅನ್ನದಾನೀಶ್ವರ ಕಲ್ಯಾಣಮಂಟಪದಲ್ಲಿ ಗುರುವಾರ ಏರ್ಪಡಿಸಿದ್ದ ಬಿಜೆಪಿ ಪದಾಧಿಕಾರಿಗಳ ಸಶಕ್ತಿಕರಣ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಕಾಂಗ್ರೆಸ್ ಸರ್ಕಾರ ಅಧಿಕಾರ ಹಿಡಿದಾಗಿನಿಂದ ರಾಜ್ಯದ ಹಲವಾರು ಭಾಗಗಳಲ್ಲಿ ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರ ಕೊಲೆ ನಡೆಯುತ್ತಿವೆ. ಕಾಂಗ್ರೆಸ್ ಸರ್ಕಾರ ಒಂದು ವರ್ಗದ ಜನರನ್ನು ಓಲೈಸುವ ಉದ್ದೇಶದಿಂದ ಕಣ್ಣು, ಕಿವಿ, ಬಾಯಿ ಮುಚ್ಚಿಕೊಂಡು ಕುಳಿತಿದ್ದು, ರಾಜ್ಯದಲ್ಲಿ ಶಾಂತಿ– ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಅಭಿವೃದ್ಧಿಗೆ ಕಾಂಗ್ರೆಸ್ ಅಡ್ಡಗಾಲಾಗಿದೆ’ ಎಂದು ಆರೋಪಿಸಿದರು.

‘ಬಿಜೆಪಿಯ ಜನಪ್ರಿಯತೆ ಕಂಡು ಕಾಂಗ್ರೆಸ್ ಕೈಗೊಂಡಿರುವ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮ ಅವರನ್ನು ಶಾಶ್ವತವಾಗಿ ಮನೆಗೆ ಕಳುಹಿಸಲಿದೆ’ ಎಂದು ವ್ಯಂಗ್ಯವಾಡಿದರು.

‘ಮಹದಾಯಿ ನೀರನ್ನು ರಾಜ್ಯದೊಂದಿಗೆ ಹಂಚಿಕೊಳ್ಳುವುದು ಅನಿವಾರ್ಯ.ಇದಕ್ಕೆ ಗೋವಾ ಸರ್ಕಾರ ಸಿದ್ಧವಿರುವುದಾಗಿ ಗೋವಾ ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ. ಆದರೆ, ಮಹದಾಯಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಅಡ್ಡಗಾಲು ಹಾಕುತ್ತಿದೆ. ಮಹದಾಯಿ ಸಮಸ್ಯೆಯನ್ನು ಜೀವಂತವಾಗಿಡಬೇಕು ಎನ್ನುವುದೇ ಕಾಂಗ್ರೆಸ್ ಪಕ್ಷದ ಮೂಲ ಉದ್ದೇಶವಾಗಿದೆ’ ಎಂದು ದೂರಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಸಿ.ಪಾಟೀಲ ಮಾತನಾಡಿ, ‘ಬಿಜೆಪಿಯಲ್ಲಿ ಅಭ್ಯರ್ಥಿಗಳಿಗಿಂತ ದೇಶದ ಅಭಿವೃದ್ಧಿ ಮತ್ತು ಪಕ್ಷ ಮಾತ್ರ ಮುಖ್ಯವಾಗಿದ್ದು, ಆಯಾ ಭಾಗದ ಜನಾಭಿಪ್ರಾಯ ಸಂಗ್ರಹಿಸಿ ರಾಷ್ಟ್ರೀಯ ನಾಯಕರು ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದಾರೆ. ಈ ನಿಟ್ಟಿನಲ್ಲಿ ವರಿಷ್ಠರು ಸೂಚಿಸುವ ಅಭ್ಯರ್ಥಿಗಳ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕು’ ಎಂದು ಹೇಳಿದರು.

ಕೆ.ವಿ.ಹಂಚಿನಾಳ ಮಾತನಾಡಿ, ‘ಚುನಾವಣೆಯ ಸ್ಪರ್ಧಾ ಆಕಾಂಕ್ಷಿಗಳು ವಾಟ್ಸ್‌ಆ್ಯಪ್, ಫೇಸ್‌ಬುಕ್ ಮತ್ತಿತರ ಸಾಮಾಜಿಕ ಜಾಲತಾಣಗಳ ಮೂಲಕ ಫೋಟೊ ಹಾಗೂ ಮತ್ತಿತರ ಸಂದೇಶ ಹಾಕುವ ಮೂಲಕ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಬಾರದು’ ಎಂದು ಮನವಿ ಮಾಡಿದರು.

ಮಾಜಿ ಶಾಸಕ ರಾಮಣ್ಣ ಲಮಾಣಿ, ಮುಖಂಡರಾದ ಎಂ.ಎಸ್.ಕರಿಗೌಡರ, ಹೇಮಗಿರಿಶ ಹಾವಿನಾಳ, ಕೆ.ವಿ.ಹಂಚಿನಾಳ, ರವಿ ಉಪ್ಪಿನಬೆಟಗೇರಿ, ಹೇಮಾವತಿ ಅಬ್ಬಿಗೇರಿ, ಭೀಮಸಿಂಗ್ ರಾಠೋಡ, ರಾಮಣ್ಣ ಲಮಾಣಿ (ಸಿಗ್ಲಿ), ಜಯಶ್ರೀ ಹಳ್ಳೆಪ್ಪನವರ, ವಿರೂಪಾಕ್ಷಪ್ಪ ಅಣ್ಣಿಗೇರಿ, ರಾಜಣ್ಣ ಕುರಡಗಿ, ಎಸ್.ವಿ.ಪಾಟೀಲ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry