ಮೂಡೀತೇ ಬೆಳಕು...

7

ಮೂಡೀತೇ ಬೆಳಕು...

Published:
Updated:
ಮೂಡೀತೇ ಬೆಳಕು...

ನಾವು ಮಾಡೋದೂ ಯಕ್ಷಗಾನವೇ ತಾಯಿ...’

– ಹೀಗೆ ಮಾತು ಆರಂಭಿಸಿದವರು ಮೂಡಲಪಾಯ ಯಕ್ಷಗಾನ ಪ್ರಕಾರದ ಮೇರುಕಲಾವಿದ, ನೂರಾರು ಕಲಾವಿದರಿಗೆ ತರಬೇತಿ ನೀಡಿ ರಂಗಕ್ಕೆ ಪರಿಚಯಿಸಿದ ಭಾಗವತರೂ ಆಗಿರುವ ಕಾ.ನಾ. ದಾಸಾಚಾರ್.

ಒಂದು ಕಾಲದಲ್ಲಿ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮೂಡಲಪಾಯ ಜನಪ್ರಿಯವಾಗಿತ್ತು. ರಾತ್ರಿಯಿಡೀ ನಡೆಯುತ್ತಿದ್ದ ಪ್ರಸಂಗಗಳನ್ನು ಜನರು ಕಣ್ರೆಪ್ಪೆ ಆಡಿಸದಂತೆ ನೋಡುತ್ತಿದ್ದರು. ಈಗ ಆಡುವವರ ಸಂಖ್ಯೆಯೂ ಕುಸಿದಿದೆ, ನೋಡುವವರ ಆಸಕ್ತಿಯೂ ಕುಂದಿದೆ. ಆದರೆ ದಾಸಾಚಾರ್ ಅವರಂಥ ಬೆಳಕಿಂಡಿಗಳು ಮಾತ್ರ ಇಂದಿಗೂ ಕಲೆಯ ಬೆಳಕನ್ನು ಪಸರಿಸುತ್ತಾ ಆಶಾದೀಪದಂತೆ ಕಂಗೊಳಿಸುತ್ತಿದ್ದಾರೆ. ಭಾಗವತರ ಸ್ಮೃತಿಕೋಶದಲ್ಲಿರುವ ಪ್ರಸಂಗಗಳಿಗೆ ಅಕ್ಷರರೂಪ ನೀಡಲು ದಾಸಾಚಾರ್ ಶ್ರಮಿಸುತ್ತಿದ್ದಾರೆ. ತುರುವೇಕೆರೆ ತಾಲ್ಲೂಕು ಕಲ್ಕೆರೆ ಗ್ರಾಮದ ದಾಸಾಚಾರ್‌ ಅವರಿಗೆ ಈಗ 75ರ ಹರೆಯ. ಆದರೆ ಯಕ್ಷಗಾನದ ವಿಚಾರ ಮಾತಾಡುವಾಗ ಅವರದು 25ರ ಉತ್ಸಾಹ. ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರವು ನಗರದಲ್ಲಿ ಈಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೂಡಲಪಾಯ ಯಕ್ಷಗಾನ ಪ್ರದರ್ಶಿಸಲೆಂದು ಊರಿನಿಂದ ತಂಡವನ್ನು ಕರೆತಂದಿದ್ದ ದಾಸಾಚಾರ್ ‘ಮೆಟ್ರೊ’ ಪುರವಣಿಯೊಂದಿಗೆ ಲೋಕಾಭಿರಾಮ ಮಾತನಾಡಿದರು.

ಮೂಡಲಪಾಯ ಅಂತೊಂದು ಯಕ್ಷಗಾನ ಇದೆಯೇ?

– ಇದೇ ಕಣ್ ತಾಯಿ. ಕರಾವಳಿ ಯಕ್ಷಗಾನಕ್ಕೆ ಶಿವರಾಮ ಕಾರಂತರು, ಶಂಭು ಹೆಗಡೆ ಅವರಂಥವರಿಂದ ಕಾಯಕಲ್ಪ ಸಿಕ್ಕಿತು. ಅಲ್ಲಿನ ಜನರೂ ತಮ್ಮ ನೆಲಮೂಲದ ಕಲೆಯನ್ನು, ಕಲಾವಿದರನ್ನು ಗೌರವಿಸಿ ಅಭಿಮಾನಿಸಿದರು. ಹೀಗಾಗಿ ಅದು ಜನಪ್ರಿಯವಾಯ್ತು. ಮೂಡಲಪಾಯಕ್ಕೆ ಇಂಥ ಭಾಗ್ಯ ಸಿಗಲಿಲ್ಲ. ಹೀಗಾಗಿ ಹೊಸ ತಲೆಮಾರು ಇಂಥ ಪ್ರಶ್ನೆ ಕೇಳುತ್ತೆ.

ಮೂಡಲಪಾಯಕ್ಕೂ ಪಡುವಲಪಾಯಕ್ಕೂ ಏನು ವ್ಯತ್ಯಾಸ?

ಕರಾವಳಿ ಯಕ್ಷಗಾನವನ್ನು ಪಡುವಲಪಾಯ, ದಕ್ಷಿಣ ಒಳನಾಡಿನ ಯಕ್ಷಗಾನವನ್ನು ಮೂಡಲಪಾಯ, ಉತ್ತರ ಒಳನಾಡಿನ ಯಕ್ಷಗಾನವನ್ನು ದೊಡ್ಡಾಟ ಅಂತಾರೆ. ನನ್ನ ಪ್ರಕಾರ ಮೂಡಲಪಾಯ, ಪಡುವಲಪಾಯ, ದೊಡ್ಡಾಟಗಳು ಬೇರೆಬೇರೆ ಅಲ್ಲ. ಸಾಹಿತ್ಯ, ಸಂಗೀತ, ನಾಟ್ಯಗಳ ಹದಪಾಕದಂತಿರುವ ಜಾನಪದ ಪ್ರದರ್ಶನ ಕಲೆಗಳು ಇವು. ಪಡುವಲಪಾಯ ಕಾಲಕ್ಕೆ ತಕ್ಕಂತೆ ಪರಿಷ್ಕರಣೆಗೊಂಡಿತು. ಆದರೆ ಉಳಿದೆರೆಡು ಪ್ರಕಾರಗಳಲ್ಲಿ ಇಂಥ ಪ್ರಯೋಗಗಳು ಗಮನಾರ್ಹ ಪ್ರಮಾಣದಲ್ಲಿ ನಡೆಯಲಿಲ್ಲ.

ಅಲ್ಲಿ ಆಗಿದ್ದು ಇಲ್ಲೇಕೆ ಆಗಲಿಲ್ಲ?

ಇದನ್ನೇ ನಾನೂ ಯೋಚಿಸುತ್ತಿದ್ದೇನೆ. ಪ್ರದರ್ಶನಕ್ಕೆ ಪ್ರತಿದಿನ ಅವಕಾಶಗಳು ದೊರೆತರೆ ನಾವೂ ಪ್ರಯೋಗಗಳನ್ನು ನಡೆಸಬಹುದಿತ್ತು. ಆದರೆ ಇಲ್ಲಿನ ಜನರಲ್ಲಿ ಈಗ ನೋಡುವ ಆಸಕ್ತಿಯೂ ಕಡಿಮೆಯಾಗುತ್ತಿದೆಯಲ್ಲಾ? ಪಡುವಲಪಾಯದ ಬಹುತೇಕ ಕಲಾವಿದರು ರೈತರು. ಬೇಸಾಯದ ಕೆಲಸಗಳು ಇದ್ದಾಗ ಅವರಿಗೆ ಗೆಜ್ಜೆ ಕಟ್ಟಲು ಆಗುವುದಿಲ್ಲ. ವರ್ಷಕ್ಕೊಮ್ಮೆ ಗೆಜ್ಜೆಕಟ್ಟುವವರಿಗೆ ಒಂದೆರೆಡು ಪ್ರಯೋಗಗಳನ್ನು ನಿಭಾಯಿಸುವುದೇ ಸಾಹಸ ಎನಿಸಿಕೊಳ್ಳುತ್ತೆ. ಅಂಥವರು ಕಲೆಯನ್ನು ಪರಿಷ್ಕರಿಸಲು ಸಮಯ, ಪರಿಶ್ರಮ ಹಾಕಲು ಸಾಧ್ಯವೇ?.ಕಾ.ನಾ. ದಾಸಾಚಾರ್

ನಿಮ್ಮ ಪ್ರಕಾರ ಪಡುವಲಪಾಯ ಯಕ್ಷಗಾನದ ಯಶಸ್ಸಿಗೆ ಕಾರಣವೇನು?

ಪಡುವಲಪಾಯದಲ್ಲಿ ಯಕ್ಷಗಾನವನ್ನೇ ಕಾಯಕ ಮಾಡಿಕೊಂಡ ಸಾಕಷ್ಟು ಕಲಾವಿದರಿದ್ದಾರೆ. ಅವರು ಕಲೆಗಾಗಿ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಮೂಡಲಪಾಯಕ್ಕೂ ಇಂಥದ್ದೇ ಪರಿಶ್ರಮ ಬೇಕು.

ಮೂಡಲಪಾಯ ಯಕ್ಷಗಾನದ ಪ್ರಸ್ತುತ ಸ್ಥಿತಿ ಹೇಗಿದೆ?

ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ, ಮೂಡಲಪಾಯ ಮರೆಯಾಗುತ್ತಿದೆ, ಮುಖವೀಣೆ ಮೂಕವಾಗುತ್ತಿದೆ. ಕಲೆಯು ತನ್ನ ಕೊನೆಯದಿನಗಳನ್ನು ಎಣಿಸುತ್ತಿದೆ. ಹಿರಿಯ ಕಲಾವಿದರಲ್ಲಿ ಕಲೆಯನ್ನು ಉಳಿಸುವ, ವಿಸ್ತರಿಸುವ, ಬೆಳೆಸುವ ಕಸುವಿಲ್ಲ. ಯುವಕರಲ್ಲಿ ಕಲಿಕೆಯ ಶ್ರದ್ಧೆಯಿಲ್ಲ. ರಾಜ್ಯದಲ್ಲಿ ಮೂಡಲಪಾಯದ ಒಂದೇ ಒಂದು ಮೇಳ ಇದೆ. ಅದು ನಮ್ಮೂರಿನ ‘ರಂಗನಾಥ ಯಕ್ಷಗಾನ ಮಂಡಳಿ’. ಕಲಾವಿದರೇ ಸಿಕ್ಕಲ್ಲ ಕಣಮ್ಮ, ಏನು ಮಾಡ್ಲೀ. ನಾನು ಹೇಳ್ತೀನಿ ಅಂತ ಮೊಮ್ಮಗ, ಅಳಿಯಂದಿರು ಯಕ್ಷಗಾನ ಕಲಿಯುತ್ತಿದ್ದಾರೆ. ನನ್ನ ಕುಟುಂಬದಲ್ಲಿಯೇ ಶ್ರೀಮಂತ ಪರಂಪರೆಯೊಂದು ಕ್ಷೀಣಿಸುತ್ತಿದೆ. ನನಗೆ ಏನೂ ಮಾಡೋಕೆ ಆಗ್ತಿಲ್ಲ.

ಜನರಿಗೆ ಮೂಡಲಪಾಯ ಪ್ರಸಂಗಗಳು ರುಚಿಸುತ್ತಿವೆಯೇ ?

ನಾನೂ ಈ ಪ್ರಶ್ನೆಯನ್ನು ಹಲವು ಸಲ ಕೇಳಿಕೊಂಡಿದ್ದೀನಿ. ಕಲಾವಿದರ ಅಭಿನಯದಲ್ಲಿ ಆಕರ್ಷಣೆ ಇಲ್ಲ, ಕಲೆಗೆ ಬೆಂಬಲವಾಗಿ ನಿಲ್ಲಬಲ್ಲ ಪೋಷಕರು ಇಲ್ಲ ಎನ್ನುವುದು ನಾನು ಕಂಡುಕೊಂಡ ಕಾರಣಗಳು. ಮರದ ಆಭರಣಗಳನ್ನು ಧರಿಸಿದ ಕಲಾವಿದರಿಗೆ ಆಂಗಿಕ ಅಭಿನಯಕ್ಕೆ ಪ್ರಾಮುಖ್ಯತೆ ನೀಡಲು ಆಗುತ್ತಿಲ್ಲ. ತೂಕದ ಆಭರಣಗಳನ್ನು ಹೊತ್ತು ಭಾವನೆಗಳನ್ನು ಅಭಿವ್ಯಕ್ತಿಸುವಂತೆ ನಟಿಸಲು ದೀರ್ಘಾವಧಿ ತರಬೇತಿ ಬೇಕು. ಸದಾ ಬೇಸಾಯದ ಬಿಸಿಯಲ್ಲಿ ಮೈಮರೆಯುವ ರೈತರು ಕಲೆಗಾಗಿ ಎಷ್ಟು ಗಮನಕೊಡಲು ಸಾಧ್ಯ? ಇದರ ಜೊತೆಗೆ ನಮ್ಮ ಮಾಧ್ಯಮಗಳ ಕಣ್ಣಿಗೆ ಯಕ್ಷಗಾನ ಅಂದ್ರೆ ಪಡುವಲಪಾಯ ಮಾತ್ರ ಎಂಬಂತೆ ಆಗಿದೆ. ಕಲಾಸಕ್ತರು ಯಕ್ಷಗಾನ ವೀಕ್ಷಣೆಗೆ ಬರುವಾಗ ಪಡುವಲಪಾಯದ ಮಾದರಿಯನ್ನೇ ಮನಸಿನಲ್ಲಿಟ್ಟುಕೊಂಡು ಮೂಡಲಪಾಯವನ್ನು ವೀಕ್ಷಿಸುತ್ತಾರೆ. ಅಲ್ಲಿನ ರಂಗವೈಭವ ಇಲ್ಲಿ ಇರದ ಕಾರಣ ನಿರಾಶರಾಗುತ್ತಾರೆ. ಮೂಡಲಪಾಯ ಪ್ರಸಂಗವನ್ನು ನೋಡಲೂ ಪ್ರೇಕ್ಷಕರಲ್ಲಿ ಒಂದು ಸಿದ್ಧತೆ ಬೇಕು.

ನೃತ್ಯದಲ್ಲಿನ ಏಕತಾನತೆ, ಕೃತಕ ಎನಿಸುವ ಅಭಿನಯ ಹಾಗೂ ಮಾತುಗಾರಿಕೆಯಲ್ಲಿ ಆಕರ್ಷಣೆ ಇಲ್ಲದಿರುವುದು ಜನಪ್ರಿಯತೆ ಕ್ಷೀಣಿಸಲು ಕಾರಣ ಅನಿಸುತ್ತೆ...

ನಾನು ಈ ಮಾತನ್ನು ಒಪ್ಪಲ್ಲ ಕಣಮ್ಮ. ಕುಣಿತದಲ್ಲಿನ ಏಕತಾನತೆ ಇಂದು ನಿನ್ನೆಯದಲ್ಲ. ನೂರಾರು ವರ್ಷಗಳಿಂದ ಜನರು ನಮ್ಮ ಕುಣಿತ ಒಪ್ಪಿಕೊಂಡಿದ್ದಾರೆ, ಮೆಚ್ಚಿಕೊಂಡಿದ್ದಾರೆ. ಅಟ್ಟದಾಟದಲ್ಲಿ ಕುಣಿತದ ರಭಸಕ್ಕೆ ವೇದಿಕೆ ಮುರಿದ ಉದಾಹರಣೆಗಳು ಇವೆ. ನೆಚ್ಚಿನ ಕಲಾವಿದರ ಕುಣಿತವನ್ನು ಕಣ್ತುಂಬಿಕೊಳ್ಳಲು ಕಲಾಸಕ್ತರು ಕಾತರದಿಂದ ಕಾಯುತ್ತಿದ್ದುದನ್ನು ನಾನು ಬಲ್ಲೆ. ನೋಡುಗರನ್ನೂ ಎದ್ದು ಕುಣಿಯುವಂತೆ ಪ್ರೇರೇಪಿಸುವಂತೆ ಕುಣಿಯಬಲ್ಲ ಕಲಾವಿದರು ಇಂದು ಇಲ್ಲ. ಇದು ಕಲೆಯ ಸಮಸ್ಯೆಯಲ್ಲ, ಕಲಾವಿದರ ಸಮಸ್ಯೆ.ಭಾಗವತಿಕೆಯಲ್ಲಿ ನಿರತರಾದ ಕಾ.ನಾ.ದಾಸಾಚಾರ್, ತಾಳ ಮತ್ತು ಹಿಮ್ಮೇಳದಲ್ಲಿ ಸಿ.ಡಿ.ಭ್ರಹ್ಮಾಚಾರ್, ಹಾರ್ಮೋನಿಯಂ ವಾದನದಲ್ಲಿ ಪಿ.ರಾಜಣ್ಣ, ಮುಖವೀಣೆಯಲ್ಲಿ ಪಿ.ರಾಜಣ್ಣ

ಯಕ್ಷಗಾನ ಅಕಾಡೆಮಿಯ ಸಹಕಾರ ಹೇಗಿದೆ?

ವರ್ಷಕ್ಕೆರಡು ಕಾರ್ಯಕ್ರಮ ನೀಡಿದರೆ ಕಲೆ ಉಳಿಯುವುದಿಲ್ಲ. ಅಂತಹ ಭ್ರಮೆಯಿಂದ ಅಕಾಡೆಮಿ ಹೊರ ಬರಬೇಕು. ಕೆಲವೊಮ್ಮೆ ಸಂಸ್ಥೆಗಳು ಮಾಡದ ಕೆಲಸವನ್ನು ವ್ಯಕ್ತಿಗಳು ಮಾಡುತ್ತಾರೆ. ಎಚ್‌.ಎಲ್‌. ನಾಗೇಗೌಡರು ಅಂತಹ ಒಬ್ಬ ವ್ಯಕ್ತಿ. ಮೂಡಲಪಾಯದ ಬೆಳವಣಿಗೆಗೆ ಬೇಕಾದ ಅಂಶಗಳನ್ನು ಗುರುತಿಸಿ ಕಲೆಯನ್ನು ನಿಜಾರ್ಥದಲ್ಲಿ ಮೇಲೆತ್ತಿದವರು ಅವರು. ಅಭಿನಯಕ್ಕೆ ಒತ್ತು ನೀಡುತ್ತಲೇ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಕಲೆಯನ್ನು ಉಳಿಸಲು ಶ್ರಮಿಸಿದರು.

ಮೂಡಲಪಾಯಕ್ಕೆ ಪ್ರತ್ಯೇಕ ಅಕಾಡೆಮಿ ಅಗತ್ಯವಿದೆಯೇ?

ಖಂಡಿತ ಬೇಡ. ಯಕ್ಷಗಾನ ಎಂಬ ಪವಿತ್ರ ಪದವು ಕೇವಲ ಕರಾವಳಿಯವರಿಗೆ ಮೀಸಲು ಎಂಬಂತೆ ಆಗಬಾರದು. ಅದು ಇಡೀ ಕರ್ನಾಟಕಕ್ಕೆ ಸೇರಿದ ಜನಪದ ಪ್ರಕಾರ. ಸಮಗ್ರ ಯಕ್ಷಗಾನಕ್ಕೆ ಒಂದು ಅಕಾಡೆಮಿ ಇದೆ ಅದೇ ಸಾಕು. ಬೆಳಗಾವಿ, ಕಲಬುರ್ಗಿಗಳಲ್ಲಿಯೂ ಯಕ್ಷಗಾನ ಬಯಲಾಟ ನಡೆಯುತ್ತದೆ. ಅದರೆ ಕೆಲವರು ಅದನ್ನು ಯಕ್ಷಗಾನ ಎಂದು ಒಪ್ಪಿಕೊಳ್ಳುತ್ತಿಲ್ಲ. ಅಂತಹ ಭಾವನೆಗಳು ಬದಲಾಗಿ ಸಮಗ್ರ ಯಕ್ಷಗಾನದ ಶ್ರೀಮಂತಿಕೆ ಉಳಿಸಲು ನಾವೆಲ್ಲರೂ ಶ್ರಮಿಸಬೇಕು.

***

ಮೂಡಲಪಾಯ ಉಳಿಸಲು ಏನು ಮಾಡಬಹುದು?

ಮೂಡಲಪಾಯ ಪ್ರಸಂಗಗಳನ್ನು ಪ್ರದರ್ಶಿಸಲು ಅವಕಾಶ ಕೊಡಬೇಕು. ಕಲಾಮಹೋತ್ಸವಗಳಲ್ಲಿ ಮೂಡಲಪಾಯಕ್ಕೆ ಅವಕಾಶ ಸಿಕ್ಕರೆ, ತಾನಾಗಿಯೇ ಒಂದಷ್ಟು ಮೇಳಗಳು ಶುರುವಾಗುತ್ತವೆ. ಗುರುಶಿಷ್ಯ ಪರಂಪರೆಯಲ್ಲಿ ಭಾಗವತರಿಗೆ, ಕಲಾವಿದರಿಗೆ ಉತ್ತೇಜನ ಸಿಗಬೇಕು. ಯಕ್ಷಗಾನ ಕಲಿತವರಿಗೆ, ಉತ್ತಮ ಕಲಾವಿದರಿಗೆ ಅವಕಾಶ ಸಿಗುತ್ತದೆ ಎಂಬ ವಾತಾವರಣ ನಿರ್ಮಾಣವಾದರೆ ಕಲೆಯನ್ನು ವೃತ್ತಿಯಾಗಿ ತೆಗೆದುಕೊಳ್ಳಬಲ್ಲ ಕಲಾವಿದರೂ ಹುಟ್ಟಿಕೊಳ್ಳುತ್ತಾರೆ. ಕಲೆಯೂ ಉಳಿಯುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry