ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತಕಂಠದಲ್ಲಿ ಸಂವಾದಿನಿ ನಿನಾದ

Last Updated 5 ಜನವರಿ 2018, 19:30 IST
ಅಕ್ಷರ ಗಾತ್ರ

ಹಾರ್ಮೋನಿಯಂನಲ್ಲಿ ವಿಶಿಷ್ಟ ಪ್ರಯೋಗಗಳನ್ನು ಮಾಡಿ ನಾಡಿನಾದ್ಯಂತ ಸಾವಿರಾರು ಶಿಷ್ಯಂದಿರಿಗೆ ಸಂಗೀತ ವಿದ್ಯೆಯನ್ನು ಧಾರೆಯೆರೆದವರು ಪಂಡಿತ್‌ ರಾಮಭಾವು ಬಿಜಾಪುರೆ.  ಅವರ ಜನ್ಮಶತಮಾನೋತ್ಸವ ನೆಪದಲ್ಲಿ ಹಾರ್ಮೊನಿಯಂ ನಿನಾದವನ್ನು ಸವಿಯುವ ಅಪೂರ್ವ ಅವಕಾಶವನ್ನು ಬಿಜಾಪುರೆ ಹಾರ್ಮೋನಿಯಂ ಫೌಂಡೇಶನ್‌ ಕಲ್ಪಿಸಿದೆ.

ಹಿಂದೂಸ್ತಾನಿ ಸಂಗೀತದ ಮೇರು ಕಲಾವಿದರಾಗಿದ್ದ ಉಸ್ತಾದ್‌ ಅಬ್ದುಲ್‌ ಕರೀಮ್‌ಖಾನ್‌, ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್‌, ಬಸವರಾಜ ರಾಜಗುರು, ಮಲ್ಲಿಕಾರ್ಜುನ ಮನ್ಸೂರ್ ಮುಂತಾದ ಸಂಗೀತ ದಿಗ್ಗಜರಿಗೆ ಬಿಜಾಪುರೆ ಅವರು ಹಾರ್ಮೋನಿಯಂ ಸಾಥಿ ನೀಡಿದ್ದರು.

ಬಿಜಾಪುರೆ ಅವರ ಶಿಷ್ಯರಾದ ಪಂ. ರವೀಂದ್ರ ಕಾಟೋಟಿ ಅವರು ‘ಬಿಜಾಪುರೆ ಹಾರ್ಮೋನಿಯಂ ಫೌಂಡೇಶನ್‌’ ಸ್ಥಾಪಿಸಿ ಹಲವು ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.

‘ತಮ್ಮ 93 ವರ್ಷಗಳ ಜೀವಿತಾವಧಿಯಲ್ಲಿ ಕಲಾ ಅಭಿವ್ಯಕ್ತಿ ಹಾಗೂ ಬೋಧನೆಯಿಂದ ನಾಡಿನಲ್ಲಿ ಹಾರ್ಮೋನಿಯಂ ಕುರಿತು ಹೊಸ ಅಭಿರುಚಿ ಹುಟ್ಟುಹಾಕಿದವರು ರಾಮಭಾವು. ಹಿಂದೂಸ್ತಾನಿ ಸಂಗೀತದ ಸಾಥಿ ವಾದ್ಯವಾಗಿರುವ ಹಾರ್ಮೋನಿಯಂ ಈಗ ಸೋಲೊ ವಾದ್ಯವಾಗಿಯೂ ಜನಪ್ರಿಯವಾಗಿದೆ. ಇದಕ್ಕೆ ಕಾರಣರಾದವರು ಬಿಜಾಪುರೆ’ ಎನ್ನುತ್ತಾರೆ ಕಾಟೋಟಿ.

ವಿಶ್ವ ಸಂವಾದಿನಿ ಸಂಭ್ರಮ: ಬಿಜಾಪುರೆ ಹಾರ್ಮೋನಿಯಂ ಫೌಂಡೇಷನ್ ಆಯೋಜಿಸಿರುವ ಜನ್ಮಶತಮಾನೋತ್ಸವ ಸಂಭ್ರಮದಲ್ಲಿ ಜ.6 ಮತ್ತು 7 ರಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಗರದ ಕೃಷ್ಣದೇವರಾಯ ಕಲಾಮಂದಿರ ಹಾಗೂ ಚೌಡಯ್ಯ ಸ್ಮಾರಕ ಭವನ ಸಾಕ್ಷಿಯಾಗಲಿದೆ. ಬಿಜಾಪುರೆ ಅವರ ಜೀವನ ಚರಿತ್ರೆ, ಸಾಕ್ಷ್ಯಚಿತ್ರ ನಿರ್ಮಾಣ, ಹಾರ್ಮೋನಿಯಂ ಶಿಬಿರ, ಉಪನ್ಯಾಸಗಳು ಕಾರ್ಯಕ್ರಮಕ್ಕೆ ಮೆರುಗು ನೀಡಲಿವೆ. ದೇಶ ಹಾಗೂ ವಿದೇಶಗಳ ವಿವಿಧ ಕಲಾವಿದರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬಿಜಾಪುರೆ ಅವರ ಅನನ್ಯ ಸಂಗೀತ ಸೇವೆಯನ್ನು ಸ್ಮರಿಸುವ ಕಾರ್ಯಕ್ರಮ ಇದಾಗಿದೆ.

ಜ.6 (ಶನಿವಾರ) ವೈಯಾಲಿಕಾವಲ್‌ನ ಕೃಷ್ಣದೇವರಾಯ ಕಲಾಮಂದಿರದಲ್ಲಿ ಬೆಳಿಗ್ಗೆ 9.30ರಿಂದ ರಾತ್ರಿ 9 ಗಂಟೆವರೆಗೆ ಹಾರ್ಮೋನಿಯಂ ನಿನಾದ ಮೊಳಗಲಿದೆ. ವಿಜಯ್‌ ಘಾಸ್ಕಡವಿ, ವಿಜಯ್‌ ಮಿಶ್ರಾ, ಸಿ.ರಾಮದಾಸ್‌, ದಿನಕರ್ ಶರ್ಮಾ ಹಾಗೂ ಅರವಿಂದ ತಟ್ಟೆ ಅವರಿಂದ ಅವರಿಂದ ಹಾರ್ಮೋನಿಯಂ ಸೋಲೊ ಕಛೇರಿ ನಡೆಯಲಿದೆ. ನಂತರ ವಿದ್ಯಾಧರ್ ಓಕ್ ಅವರಿಂದ 22 ಶ್ರುತಿಗಳ ಹಾರ್ಮೋನಿಯಂ ಪ್ರಾತ್ಯಕ್ಷಿಕೆ ಇರಲಿದೆ. ಖ್ಯಾತ ಹಾರ್ಮೋನಿಯಂ ವಾದಕ ಪಂಡಿತ್‌ ಗೋವಿಂದರಾವ್ ಪಟವರ್ಧನ್‌ ಅವರ ಜೀವನ ಆಧಾರಿತ ಸಾಕ್ಷ್ಯಚಿತ್ರ ಪ್ರದರ್ಶನವಾಗಲಿದೆ. ನಂತರ ದೀಪಕ್‌ ಮರಾಠೆ ಹಾಗೂ ಸರ್ಫರಾಜ್ ಖಾನ್ ಅವರ ಹಾರ್ಮೋನಿಯಂ ಮತ್ತು ಸಾರಂಗಿ ಸಾಥ್ ಆಯೋಜಿಸಲಾಗಿದೆ. ಸುಧೀರ್ ಪೋತೆ ಮತ್ತು ಶ್ರೀಧರ್ ಕುಲಕರ್ಣಿ ಅವರಿಂದ ಗುಣಿ ಗೋವಿಂದ್‌ ಗಾಯನ ನಡೆಯಲಿದೆ. ನಂತರ ತನ್ಮಯ್‌ ದೇವ್‌ಚಕ್ಕೆ, ರವೀಂದ್ರ ಮನೆ ತುಳಸಿದಾಸ್ ಬೊರ್ಕಾರ್‌ ಅವರು ಹಾರ್ಮೋನಿಯಂ ಸೋಲೊ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಜ.6 (ಭಾನುವಾರ) ವೈಯಾಲಿಕಾವಲ್‌ನ ಚೌಡಯ್ಯ ಸ್ಮಾರಕ ಭವನದಲ್ಲಿ ಮಧ್ಯಾಹ್ನ 3 ಗಂಟೆಗೆ ಶೋಭಾಯಾತ್ರ ಹಾಗೂ ಸಮಾರೋಪ ಸಮಾರಂಭ ನೆರವೇರಲಿದೆ. ನಿವೃತ್ತ ನ್ಯಾಯಮೂರ್ತಿ ಎಂ.ಎನ್‌. ವೆಂಕಟಾಚಲಯ್ಯ, ಭಾರತೀಯ ವಿದ್ಯಾಭವನದ ಉಪಾಧ್ಯಕ್ಷ ವಿ.ಪರಮೇಶ್ವರ್ ಹಾಗೂ ವಿಶ್ವ ಸಂವಾದಿನಿ ಶೃಂಗದ ಅಧ್ಯಕ್ಷ ಆರ್.ಪರಮಶಿವನ್ ಭಾಗವಹಿಸಲಿದ್ದಾರೆ. ರಾಮಭಾವು ಬಿಜಾಪುರೆಯವರ ಭಾವಚಿತ್ರ ಅನಾವರಣ , ಸ್ಮಾರಕ, ಧ್ವನಿಮುದ್ರಣ ಹಾಗೂ ಇ–ಪುಸ್ತಕಗಳ ಬಿಡುಗಡೆ ನಡೆಯಲಿದೆ.

ಅರ್ಚನಾ ಬೆಳಗುಂದಿ ಅವರ ನೃತೃತ್ವದಲ್ಲಿ ‘ಶತಕಂಠ ಗಾಯನ’ ನಡೆಯಲಿದೆ. ಇದರಲ್ಲಿ 100 ಜನ ಗಾಯಕರು, 100 ಜನ ಹಾರ್ಮೋನಿಯಂ ವಾದಕರು ಹಾಗೂ ಸಂಗೀತಗಾರರು ಭಾಗವಹಿಸಲಿದ್ದಾರೆ. ರವೀಂದ್ರ ಗುರುರಾಜ್ ಕಾಟೋಟಿ ಅವರ ನೇತೃತ್ವದಲ್ಲಿ ‘ಜರ್ನಿ ಇನ್ ಹರ್ಮೋನಿ’ ಕಾರ್ಯಕ್ರಮ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT