ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಜ್ಞೆಯ ಪ್ರಸಂಗ

Last Updated 5 ಜನವರಿ 2018, 19:30 IST
ಅಕ್ಷರ ಗಾತ್ರ

ಕೌಶಾಂಬಿಯ ರಾಜ ಉದಯನ ಹಾಗೂ ಪ್ರದ್ಯೋತದ ಮಹಾರಾಜ ಮಹಾಸೇನನ ಮಗಳು ವಾಸವದತ್ತೆಯರ ಪ್ರೇಮ, ವಿವಾಹದ ಕಥಾವಸ್ತುವವನ್ನು ‘ಪ್ರತಿಜ್ಞಾ ಯೌಗಂಧರಾಯಣ’ ನಾಟಕ ಹೊಂದಿದೆ. ಭಾಸ ಮಹಾಕವಿ ರಚಿಸಿದ ಸಂಸ್ಕೃತದ ಈ ನಾಟಕವನ್ನು ಕನ್ನಡಕ್ಕೆ ತಂದವರು ಎಲ್‌. ಗುಂಡಪ್ಪ.

ಉದಯನನ ಬಂಧನದೊಂದಿಗೆ ನಾಟಕದ ಆರಂಭ; ಅಂತ್ಯದಲ್ಲಿ ಅವನ ಬಿಡುಗಡೆಯಾಗುತ್ತದೆ. ಬಿಡುಗಡೆಯ ಹೊತ್ತಿನಲ್ಲಿ ಬೆಸೆದುಕೊಳ್ಳುವ ಹೊಸ ಬಾಂಧವ್ಯದಿಂದ ಆತನ ಜೀವನ ಒಂದು ಹೊರಳು ಪಡೆದುಕೊಳ್ಳುತ್ತದೆ. ಈ ಸನ್ನಿವೇಶಗಳನ್ನು ನಾಟಕದಲ್ಲಿ ಕಟ್ಟಿಕೊಡಲಾಗಿದೆ. ಹಾಗಿದ್ದರೂ ಇಲ್ಲಿ ಯೌಗಂಧರಾಯಣನದೇ ಪ್ರಮುಖ ಪಾತ್ರ.

ವಿಹಾರಕ್ಕೆ ತೆರಳಿದ್ದ ಉದಯನನು ಮಹಾಸೇನನ ಸೇನೆಯಿಂದ ಬಂಧನಕ್ಕೊಳಗಾಗುತ್ತಾನೆ. ರಾಜನನ್ನು ಸೆರೆಯಿಂದ ಬಿಡಿಸಿ ಕರೆತರುವುದಾಗಿ ಮಂತ್ರಿ ಯೌಗಂಧರಾಯಣ ಉಜ್ಜಯಿನಿಗೆ ತೆರಳುತ್ತಾನೆ. ರಾಜನನ್ನು ಸೆರೆಯಿಂದ ಬಿಡಿಸಲು ಹೆಣೆದ ತಂತ್ರ ಸಫಲಗೊಳ್ಳುವ ವೇಳೆ ಉಂಟಾಗುವ ಅನಿರೀಕ್ಷಿತ ಘಟನೆಯಿಂದ, ಯೌಗಂಧರಾಯಣ ಪ್ರತಿಜ್ಞೆಯೊಂದನ್ನು ಕೈಗೊಂಡು ಅದನ್ನು ಈಡೇರಿಸುತ್ತಾನೆ. ಹಾಗಾಗಿ ಇದೊಂದು ಪ್ರೇಮ, ಪ್ರತಿಜ್ಞೆಯ ಪ್ರಸಂಗವೂ ಆಗಿದೆ.

‘ತಂತ್ರ ಪ್ರತಿತಂತ್ರದ ವಿನ್ಯಾಸ ಪ್ರಮುಖವಾಗಿರುವ ಈ ನಾಟಕದಲ್ಲಿ ರಾಜಕೀಯವೇ ಪ್ರಧಾನವಾಗಿ ಕಾಣಿಸಿದರೂ ಪ್ರೇಮ ಅಂತರ್ಗತವಾಗಿದೆ. ಶೌರ್ಯ, ಸ್ವಾಮಿನಿಷ್ಠೆಯ ಅಂಶಗಳೂ ಮಿಳಿತವಾಗಿವೆ’ ಎನ್ನುತ್ತಾರೆ ನಾಟಕದ ನಿರ್ದೇಶಕಿ ದಾಕ್ಷಾಯಿಣಿ ಭಟ್.

ಉದಯನನಿಗೆ ಸಂಬಂಧಿಸಿದ ಭಾಸನದೇ ಮತ್ತೊಂದು ರಚನೆಯಾದ ‘ಸ್ವಪ್ನವಾಸವದತ್ತ’ ನಾಟಕವನ್ನು ದಾಕ್ಷಾಯಿಣಿ ಈ ಹಿಂದೆ ನಿರ್ದೇಶಿಸಿದ್ದರು. ‘ಸ್ವಪ್ನವಾಸವದತ್ತ’ದಲ್ಲಿ ಕಾಣಿಸಿಕೊಳ್ಳುವ ಉದಯನ-ವಾಸವದತ್ತೆಯ ಅಮರ ಪ್ರೇಮದ ಬುನಾದಿಯನ್ನು ‘ಪ್ರತಿಜ್ಞಾ ಯೌಗಂಧರಾಯಣ’ದಲ್ಲಿ ಗುರುತಿಸಬಹುದು. ಹಾಗಾಗಿ ಈಗ ಪ್ರದರ್ಶನಗೊಳ್ಳಲಿರುವ ‘ಪ್ರತಿಜ್ಞಾ ಯೌಗಂಧರಾಯಣ’ ನಾಟಕ ಒಂದು ರೀತಿಯಲ್ಲಿ ಉದಯನನ ಕಥೆಯ ಪೂರ್ವಾರ್ಧವನ್ನು ರಂಗದ ಮೇಲೆ ಪ್ರಸ್ತುತಗೊಳಿಸಿದಂತೆ ಆಗುತ್ತದೆ.

ನೀನಾಸಂ ಪದವೀಧರರಾಗಿರುವ ದಾಕ್ಷಾಯಿಣಿ ಭಟ್ ಅವರು, ‘ದೃಶ್ಯ’ ರಂಗತಂಡ ಕಟ್ಟಿಕೊಂಡು ಕಳೆದ 12 ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದಾರೆ. ‘ದೃಶ್ಯ’ದ ಮೂಲಕ ಇವರು ‘ಮಿಡ್‌ ಸಮ್ಮರ್ ನೈಟ್ ಡ್ರೀಮ್ಸ್’, ‘ಪೇಯಿಂಗ್ ಗೆಸ್ಟ್’, ‘ಪಂಪನಿಗೆ ಬಿದ್ದ ಕನಸುಗಳು’, ‘ಗುಣಮುಖ’, ‘ಕೊಳ್ಳಿ’ ಸೇರಿದಂತೆ ಹಲವು ನಾಟಕಗಳನ್ನು ರಂಗಕ್ಕೆ ತಂದಿದ್ದರು.
***
ಪ್ರತಿಜ್ಞಾ ಯೌಗಂಧರಾಯಣ
ರಚನೆ/ಅನುವಾದ: ಭಾಸ ಮಹಾಕವಿ/ಎಲ್.ಗುಂಡಪ್ಪ
ನಿರ್ದೇಶನ: ದಾಕ್ಷಾಯಿಣಿ ಭಟ್
ಪ್ರದರ್ಶನ: ಜನವರಿ 6
ಸಮಯ: ಸಂಜೆ 7ಕ್ಕೆ
ಸ್ಥಳ: ಕಲಾಗ್ರಾಮ ಸಮುಚ್ಚಯ, ಮಲ್ಲತ್ತಹಳ್ಳಿ
ಟಿಕೆಟ್: www.bookmyshow.com
ದರ: ₹70

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT