ಬಗೆಬಗೆಯ ಅವರೆ ಖಾದ್ಯ

7

ಬಗೆಬಗೆಯ ಅವರೆ ಖಾದ್ಯ

Published:
Updated:
ಬಗೆಬಗೆಯ ಅವರೆ ಖಾದ್ಯ

ಅವರೆಬೇಳೆ ಹಲ್ವಾ

ಬೇಕಾದ ಪದಾರ್ಥ: ಹಿತುಕಿದ ಅವರೆಬೇಳೆ 1 ಕೆಜಿ, 600 ಗ್ರಾಂ ಸಕ್ಕರೆ, 1 ಕೆ.ಜಿ. ತುಪ್ಪ, ಬಾದಾಮಿ, ಪಿಸ್ತಾ, ಏಲಕ್ಕಿ ಪೌಡರ್

ಮಾಡುವ ವಿಧಾನ: ಹಿತುಕಿದ ಅವರೆಬೇಳೆಯನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು. ಬೆಂದ ಅವರೆಬೇಳೆಯನ್ನು ನೀರಿನಿಂದ ತೆಗೆದು ಮಿಕ್ಸಿಯಲ್ಲಿ ಹಾಕಿ ಪೇಸ್ಟ್ ಹದಕ್ಕೆ ರುಬ್ಬಿಕೊಳ್ಳಬೇಕು. ಈ ಪೇಸ್ಟ್‌ ಅನ್ನು ಬಾಣಲೆಗೆ ಹಾಕಿ ಉಳಿದಿರುವ ಅಲ್ಪಸಲ್ಪ ನೀರಿನಂಶ ಹಾಗೂ ಅವರೆಯ ಹಸಿ ವಾಸನೆ ಹೋಗುವ ತನಕ ಕೈಯಾಡಿಸುತ್ತಿರಬೇಕು. ನಂತರ ಇದಕ್ಕೆ 600 ಗ್ರಾಂ ಸಕ್ಕರೆಯ್ನು ಹಾಕಿ ಚೆನ್ನಾಗಿ ತಿರುವಿಕೊಳ್ಳಬೇಕು. ಒಂದೆರೆಡು ನಿಮಿಷದ ಬಳಿಕ ಇದಕ್ಕೆ 1 ಕೆ.ಜಿ. ತುಪ್ಪ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಇದನ್ನು ಬಾಣಲೆಯಿಂದ ಅಗಲವಾದ ತಟ್ಟೆಯ ಮೇಲೆ ಹರವಿಕೊಳ್ಳಿ. ಬಿಸಿ ಇರುವಾಗಲೇ ಇದರ ಮೇಲೆ ಏಲಕ್ಕಿ ಪುಡಿ ಉದುರಿಸಿ, ತುಂಡು ಮಾಡಿದ ಬಾದಾಮಿ ಮತ್ತು ಪಿಸ್ತಾದಿಂದ ಅಲಂಕರಿಸಿಕೊಳ್ಳಿ. ಹಲ್ವಾ ಬಿಸಿ ಇರುವಾಗಲೇ ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಬಹುದು ಇಲ್ಲವೇ ಹಾಗೆಯೇ ಬಿಡಬಹುದು. ಈಗ ರುಚಿಕರ ಅವರೆಬೇಳೆ ಹಲ್ವಾ ತಿನ್ನಲು ಸಿದ್ಧ.

ಅವರೆಕಾಯಿ ಸ್ಟಿಕ್

ಬೇಕಾದ ಪದಾರ್ಥ: 1/2 ಕೆ.ಜಿ. ಹಿತುಕಿದ ಅವರೆಬೇಳೆ, ಕರಿಯಲು ಬೇಕಾದಷ್ಟು ಎಣ್ಣೆ, 800 ಗ್ರಾಂ ಸಕ್ಕರೆ, 400 ಗ್ರಾಂತುಪ್ಪ,  ಸ್ವಲ್ಪ ಲಿಕ್ವಿಡ್ ಗ್ಲುಕೋಸ್,  ಒಂದು ಸಣ್ಣ ಬಟ್ಟಲು ಗೋಡಂಬಿ

ಮಾಡುವ ವಿಧಾನ: ಹಿತುಕಿದ ಅವರೆಬೇಳೆಯನ್ನು ಕಾದ ಎಣ್ಣೆಯಲ್ಲಿ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು. ನಂತರ ಇದನ್ನು ಮಿಕ್ಸಿಯಲ್ಲಿ ಅಥವಾ ಗ್ರೈಂಡರ್‌ನಲ್ಲಿ ಹಾಕಿ ಪೇಸ್ಟ್ ಹದಕ್ಕೆ ರುಬ್ಬಿಕೊಳ್ಳಿ. ರುಬ್ಬಿದ ಪೇಸ್ಟ್ ಅನ್ನು ಬಾಣಲೆಯಲ್ಲಿ ಹಾಕಿಕೊಂಡು, ಇದಕ್ಕೆ ಸಕ್ಕರೆ ಹಾಕಿ ಕಲಸಬೇಕು. ನಂತರ ಇದಕ್ಕೆ ಏಲಕ್ಕಿ ಪೌಡರ್ ಹಾಗೂ ತುಪ್ಪ ಹಾಕಿ ಮಿಶ್ರಣ ಮಾಡಿಕೊಳ್ಳಿ, ಸ್ವಲ್ಪ ಲಿಕ್ವಿಡ್ ಗ್ಲೂಕೋಸ್ ಹಾಕಬೇಕು. ಪೇಸ್ಟ್ ಅನ್ನು ಕೈಯಲ್ಲಿ ಉದ್ದಿಕೊಂಡು ಪೆನ್ಸಿಲ್ ಥರ ಕಡ್ಡಿ ಮಾಡಿಕೊಳ್ಳಿ. ಈಗ ಅವರೆಬೇಳೆ ಸ್ಟಿಕ್ ಸಿದ್ಧ.

ಅವರೆಕಾಯಿ ಚೋಯಾ

ಬೇಕಾದ ಪದಾರ್ಥ: ಅರ್ಧ ಕೆ.ಜಿ. ಅವರೆಬೇಳೆ, ಅರ್ಧ ಕೆಜಿ ಉದ್ದಿನಬೇಳೆ, ಚಿಟಿಕೆ ಸೋಡಾ, ಅರ್ಧ ಕೆಜಿ ಅಕ್ಕಿ ಹಿಟ್ಟು, ಕರಿಯಲು ಎಣ್ಣೆ, ಪಾಕ ಮಾಡಿಕೊಳ್ಳಲು ಸಕ್ಕರೆ.

ಮಾಡುವ ವಿಧಾನ: ಉದ್ದಿನಬೇಳೆಯನ್ನು ಅರ್ಧಗಂಟೆ ನೀರಿನಲ್ಲಿ ನೆನೆಸಿ, ನಂತರ ರುಬ್ಬಿಕೊಳ್ಳಬೇಕು. ಸ್ವಲ್ಪ ಸೋಡಾ ಹಾಕಬೇಕು. ರುಬ್ಬಿಕೊಂಡ ಉದ್ದಿನಬೇಳೆಗೆ ಅಕ್ಕಿಹಿಟ್ಟು ಹಾಕಿ ಅವರೆಬೇಳೆಯ ಜತೆ ಸೇರಿಸಿ ಪೇಸ್ಟ್ ಥರಹ ಮಾಡಿಕೊಳ್ಳಬೇಕು. ನಂತರ ಇದನ್ನು ಸಣ್ಣ ಗಾತ್ರದ ಉಂಡೆ ಮಾಡಿ ಎಣ್ಣೆಯಲ್ಲಿ ಕರಿದುಕೊಳ್ಳಬೇಕು. ಕರಿದ ಉಂಡೆಗಳನ್ನು ಸಕ್ಕರೆ ಪಾಕದಲ್ಲಿ ಹಾಕಿ ಸಿಹಿ ಹೀರಿಕೊಳ್ಳವ ತನಕ ನೆನೆಸಿಡಬೇಕು. ಈಗ ಅವರೆಕಾಯಿ ಚೋಆಯ ಸಿಹಿ ರೆಡಿ. ಇದನ್ನು ಮಾಡಿದ ಮರುದಿನ ತಿಂದರೆ ರುಚಿ ಹೆಚ್ಚು.

ಅವರೆಕಾಳು ಎಳ್ಳುಮುರುಕು

ಬೇಕಾದ ಪದಾರ್ಥ: ಹುರಿಗಡಲೆ ಹಿಟ್ಟು 1 ಕೆಜಿ, ಕಡ್ಲೆಹಿಟ್ಟು 2 ಕೆಜಿ, ಅವರೆಕಾಳು ಅರ್ಧ ಕೆಜಿ, ಮೈದಾ 1ಕೆಜಿ, ಕಾಲು ಕೆಜಿ ಬಿಳಿ ಎಳ್ಳು, ಉಪ್ಪು, ಕಾರ

ಮಾಡುವ ವಿಧಾನ:  ಹುರಿಗಡಲೆ ಹಿಟ್ಟು, ಕಡ್ಲೆಹಿಟ್ಟು ಮತ್ತು ಮೈದಾ ಹಿಟ್ಟನ್ನು 1 ಲೀಟರ್ ನೀರು ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು. ಇದಕ್ಕೆ ಕಾಲು ಕೆಜಿ ಬಿಳಿ ಎಳ್ಳು, ಕಾಲು ಕೆಜಿ ಅಚ್ಚ ಕಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಇಂಗು ಹಾಕಿ ಮಿಶ್ರಣಮಾಡಿಟ್ಟುಕೊಳ್ಳಿ. ಪಾತ್ರೆಯಲ್ಲಿ ನೀರನ್ನು ಕುದಿಗೆ ಇಟ್ಟು, ನೀರು ಕುದಿ ಬಂದಾಗ ಈ ಮಿಶ್ರಣವನ್ನು ಹಾಕಿ ಮುದ್ದೆಯ ಹದಕ್ಕೆ ಕಲೆಸಿಕೊಳ್ಳಬೇಕು. ನಂತರ ಇದಕ್ಕೆ ಬಿಳಿ ಎಳ್ಳು ಹಾಕಿ ತಿರುವಿಕೊಳ್ಳಿ. ಚಕ್ಕಲಿಯ ಅಚ್ಚಿನಲ್ಲಿ ಇದನ್ನು ಹಾಕಿ ತಿರುಗಿಸಿಕೊಳ್ಳಿ. ನಂತರ ಇದನ್ನು ಎಣ್ಣೆಯಲ್ಲಿ ಹಾಕಿ ಕರೆದರೆ, ಅವರೆಕಾಳು ಎಳ್ಳುಮುರುಕು ಸಿದ್ಧ.

***
ಅವರೆ–ಈರುಳ್ಳಿ ಪಕೋಡ

ಬೇಕಾದ ಪದಾರ್ಥ: 1 ಕೆಜಿ ಈರುಳ್ಳಿ, ಅರ್ಧ ಕೆಜಿ ಹಿತುಕಿದ ಅವರೆಬೇಳೆ, ಅರ್ಧ ಕೆಜಿ ಕಡ್ಲೆಹಿಟ್ಟು, ಸಣ್ಣ ಬಟ್ಟಲು ಕೊತ್ತಂಬರಿ ಸೊಪ್ಪು, ಕರಿಬೇವು, ಬೆಳ್ಳುಳ್ಳಿ ಪೇಸ್ಟ್, ಒಂದು ಚಮಚ ದನಿಯಾ ಪುಡಿ, ನಾಲ್ಕು ಹಸಿಮೆಣಸಿನಕಾಯಿ,  ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕರಿಯಲು ಎಣ್ಣೆ

ಮಾಡುವ ವಿಧಾನ: ಸುರಳಿಯಾಗಿ ಕತ್ತರಿಸಿಕೊಂಡ ಈರುಳ್ಳಿಗೆ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಉಪ್ಪಿನ ಜತೆಗೆ ಸೇರಿದ ಈರುಳ್ಳಿ ಚೆನ್ನಾಗಿ ನೀರು ಬಿಟ್ಟುಕೊಂಡ ಮೇಲೆ ಅದಕ್ಕೆ ಹಿತುಕಿದ ಅವರೆ ಬಳೆ, ಕಡ್ಲೆಹಿಟ್ಟು, ಕೊತ್ತಂಬರಿ ಸೊಪ್ಪು ಹಾಕಿ ಕಲಸಿಕೊಳ್ಳಬೇಕು. ನೀರು ಹಾಕಿಕೊಳ್ಳಬಾರದು. ನಂತರ ಇದಕ್ಕೆ ಸಣ್ಣಗೆ ಕತ್ತರಿಸಿದ ಹಸಿಮೆಣಸಿಕಾಯಿ ಹಾಗೂ ಬೆಳ್ಳುಳ್ಳಿ ಪೇಸ್ಟ್‌, ದನಿಯಾ ಪುಡಿ ಹಾಕಿ ಕಲಸಬೇಕು. ನಂತರ ಇದನ್ನು ಕಾದ ಎಣ್ಣೆಯೊಳಗೆ ಪಕೋಡದ ರೀತಿ ಇಳಿಬಿಟ್ಟು ಕರಿದುಕೊಳ್ಳಿ. ಕರಿದ ಪಕೋಡದ ಮೇಲೆ ಎಣ್ಣೆಯಲ್ಲಿ ಗರಿಗರಿಯಾಗಿ ಕರೆದಿಟ್ಟುಕೊಂಡ ಕರಿಬೇವನ್ನು ಉದುರಿಸಿಕೊಳ್ಳಿ. ಈಗ ಅವರೆ–ಈರುಳ್ಳಿ ಪಕೋಡ ತಿನ್ನಲು ಸಿದ್ಧ. ಇದನ್ನು ಟಮೊಟೊ ಸಾಸ್‌ನೊಂದಿಗೆ ನೆಂಚಿಕೊಂಡು ತಿಂದಲ್ಲಿ ರುಚಿ ಹೆಚ್ಚು.

***
ಹಿತುಕಿದ ಅವರೆಬೇಳೆ ಸಾರು

ಬೇಕಾದ ಪದಾರ್ಥ: 1 ಕೆಜಿ ಹಿತುಕಿದ ಅವರೆಬೇಳೆ, 2 ಈರುಳ್ಳಿ, ಅರ್ಧ ಹಸಿಕೊಬ್ಬರಿ, ಅರ್ಧ ಕೊಬ್ಬರಿ ಹಸಿಕಾಯಿ, 10 ಬ್ಯಾಡಗಿ ಮೆಣಸಿನಕಾಯಿ, 10 ಗುಂಟೂರು ಮೆಣಸಿನಕಾಯಿ, ಕಾಲಿಂಚು ಅರಿಶಿಣದ ಬೋಟು, ತುಪ್ಪ, ಎಣ್ಣೆ, ಎರಡು ಚಮಚ ದನಿಯಾ, ಗಸಗಸೆ, ಉಪ್ಪು

ಮಾಡುವ ವಿಧಾನ: ಎರಡು ಈರುಳ್ಳಿಯನ್ನು ಒಲೆ ಮೇಲಿಟ್ಟು ಚೆನ್ನಾಗಿ ಸುಟ್ಟುಕೊಳ್ಳಬೇಕು. ಒಣಕೊಬ್ಬರಿ ಹಾಗೂ ಅರಿಶಿಣದ ಕೊಂಬನ್ನು ಸುಟ್ಟುಕೊಳ್ಳಿ. ನಂತರ ದನಿಯಾ ಬೀಜವನ್ನು ಹುರಿದುಕೊಳ್ಳಿ. ಕಪ್ಪಾಗಾದ ಈರುಳ್ಳಿಯ ಸಿಪ್ಪೆ ತೆಗೆದು ಇದಕ್ಕೆ ಅರಿಶಿಣ ಕೊಂಬು, ಒಣಕೊಬ್ಬರಿ, ದನಿಯಾ ಬೀಜ, ಒಣಮೆಣಸಿನಕಾಯಿ ಸೇರಿಸಿ  ಪೇಸ್ಟ್ ಮಾಡಿಕೊಳ್ಳಿ. ಹಸಿತೆಂಗಿನಕಾಯಿ ಮತ್ತು ಗಸೆಗಸೆಯನ್ನು ಪ್ರತ್ಯೇಕವಾಗಿ ರುಬ್ಬಿಕೊಳ್ಳಬೇಕು. ತುಪ್ಪ ಮತ್ತು ಎಣ್ಣೆ ಎರಡನ್ನೂ ಸಮಪ್ರಮಾಣದಲ್ಲಿ ಬೆರೆಸಿ, ಬಾಣಲೆಯಲ್ಲಿ ಬಿಸಿ ಮಾಡಿಟ್ಟುಕೊಳ್ಳಿ. ನಂತರ ಇದರಲ್ಲಿ ನೀರಿಲ್ಲದ ಹಿತುಕಿದ ಅವರೆಬೇಳೆಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಇದಕ್ಕೆ ಈರುಳ್ಳಿ, ಒಣಮೆಣಸಿನಕಾಯಿ ಇತ್ಯಾದಿ ಹಾಕಿ ರುಬ್ಬಿದ ಪೇಸ್ಟ್‌ ಅನ್ನು ಮಿಶ್ರಣ ಮಾಡಿಕೊಂಡು ಅವರೆಬೇಳೆಯ ಹಸಿವಾಸನೆ ಹೋಗುವ ತನಕ ಕುದಿಸಿ. ಅವರೆಬೇಳೆ ಒಡೆದ ಮೇಲೆ ಅದಕ್ಕೆ ಉಪ್ಪು ಹಾಕಿ, ಗಸಗಸೆ ಕಾಯಿ ಪೇಸ್ಟ್‌ ಹಾಕಿ ಕುದಿಸಿಕೊಳ್ಳಿ. ನಂತರ ಒಗ್ಗರಣೆ ಕೊಡಿ, ಸಾರು ಗುಳ್ಳೆ ಎಳುವ ಸಮಯದಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಒಂದು ಸುತ್ತು ಕುದಿಸಿಕೊಳ್ಳಿ. ಈಗ ಹಿತುಕಿದ ಅವರೆಬೇಳೆ ಸಾರು ಸಿದ್ಧ.

***
ಅವರೆಕಾಳು ಉಸುಳಿ

ಬೇಕಾದ ಪದಾರ್ಥ: ಬಿಡಿಸಿದ ಹಸಿ ಅವರೆಕಾಳು, ಈರುಳ್ಳಿ, ಹಸಿಮೆಣಸಿನಕಾಯಿ, ಹಸಿಕೊಬ್ಬರಿ, ಕರಿಬೇವು, ಕೊತ್ತಂಬರಿ

ಮಾಡುವ ವಿಧಾನ: ಬಿಡಿಸಿದ ಹಸಿ ಅವರೆಕಾಳನ್ನು ನೀರಿನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ. ಬಾಣಲೆಯಲ್ಲಿ ಕಾದ ಎಣ್ಣೆಗೆ ಸಾಸಿವೆ ಸಿಡಿಸಿ, ಅದಕ್ಕೆ ಉದ್ದಕ್ಕೆ ಸೀಳಿದ ಹಸಿಮೆಣಸಿನಕಾಯಿ, ಈರುಳ್ಳಿ, ಕರಿಬೇವು ಹಾಗೂ ಈರುಳ್ಳಿ ಹಾಕಿ ಒಗ್ಗರಣೆ ಥರ ಮಾಡಿಕೊಳ್ಳಿ. ಇದಕ್ಕೆ ಬೆಂದ ಅವರೆಕಾಳನ್ನು ಮಿಶ್ರಣ ಮಾಡಿ, ನಂತರ ಹಸಿಕೊಬ್ಬರಿ, ಕೊತ್ತಂಬರಿ ಮಿಶ್ರಣ ಮಾಡಿ ತಿನ್ನಲು ಕೊಡಿ.

 

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry