ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಾಯಣ ಎಂಬ ಕಾವ್ಯಶಾಸ್ತ್ರ!

Last Updated 12 ಏಪ್ರಿಲ್ 2019, 3:51 IST
ಅಕ್ಷರ ಗಾತ್ರ

ಧರ್ಮವೇ ಕಾವ್ಯವಸ್ತು ಏಕಾಗಬೇಕು? ಕವಿಯೂ ಕಾವ್ಯನಾಯಕನೂ ಧರ್ಮಾತ್ಮರು ಏಕಾಗಿರಬೇಕು? ಇಷ್ಟಕ್ಕೂ ಕಾವ್ಯಕ್ಕೆ ಒಂದು ಉದ್ದೇಶ ಇರಲೇಬೇಕೆ? ಇಂಥ ಪ್ರಶ್ನೆಗಳು ನಮ್ಮ ಮುಂದೆ ಎದುರಾದರೆ ಆತಂಕಪಡಬೇಕಿಲ್ಲ. ಮಾತ್ರವಲ್ಲ, ಇವು ಆಧುನಿಕತೆ ನಮ್ಮಲ್ಲಿ ಹುಟ್ಟಿಸುತ್ತಿರುವ ಪ್ರಶ್ನೆಗಳು ಎಂದು ಇಂದು ಜಾರಿಕೊಳ್ಳುವಂತೆಯೂ ಇಲ್ಲ. ರಾಮಾಯಣದ ಕಾಲದಲ್ಲಿಯೇ ಇಂಥ ಪ್ರಶ್ನೆಗಳು ಹುಟ್ಟಿಕೊಂಡಿವೆ. ಸಮಾಜದಲ್ಲಿಯೂ ಇಂಥದೊಂದು ವೈಚಾರಿಕತೆ ಇದ್ದಿತು ಎಂದು ಹೇಳಲಾದೀತು. ವೈಚಾರಿಕತೆ ಒಂದು ಸಮುದಾಯದ ಗತಿಶೀಲಸ್ವಭಾವವಾಗಿದ್ದರಷ್ಟೆ ಅದು ಕಾವ್ಯದಲ್ಲೂ ಇಣುಕಲು ಸಾಧ್ಯ. ಕವಿ ವಾಲ್ಮೀಕಿಯಲ್ಲಿ ಇಂಥ ಆತ್ಮಾವಲೋಕನ ನಡೆದಿದೆ. ಆದುದರಿಂದಲೇ ಅವನು ಕಾವ್ಯದ ವಸ್ತುವನ್ನೂ ಉದ್ದೇಶವನ್ನೂ ಕವಿಯ ಅರ್ಹತೆಯನ್ನೂ ಆದರ್ಶವನ್ನೂ ಬಾಯಿಬಿಟ್ಟು ಹೇಳಿರುವುದು. ರಾಮಾಯಣದಲ್ಲಿ ಬೀಜರೂಪದಲ್ಲಿ ಕಾಣಿಸಿರುವ ಕಾವ್ಯಮೀಮಾಂಸೆಯ ವಿವರಗಳೇ ಮುಂದೆ ಕಾವ್ಯಶಾಸ್ತ್ರದ ಸಿದ್ಧಾಂತಗಳಾಗಿ ಚಿಗುರೊಡೆದು, ಹೆಮ್ಮರವಾಗಿ ಬೆಳೆಯಲು ಕಾರಣವಾಗಿದ್ದಿರಬಹುದು.

ಯಾವುದೇ ಗ್ರಂಥಕ್ಕೂ ನಾಲ್ಕು ಮೂಲಭೂತ ಆಯಾಮಗಳು ಇರಬೇಕು – ಎನ್ನುವುದು ಭಾರತೀಯ ಶಾಸ್ತ್ರಪರಂಪರೆ. ಅಧಿಕಾರಿ, ವಿಷಯ, ಸಂಬಂಧ ಮತ್ತು ಪ್ರಯೋಜನ – ಇವೇ ಆ ವಿವರಗಳು. ಇವೇ ‘ಅನುಬಂಧಚತುಷ್ಟಯ’. ಈ ಗ್ರಂಥ ಯಾರಿಗೆ – ಎನ್ನುವುದು ಮುಖ್ಯ (= ಅಧಿಕಾರಿ); ಗ್ರಂಥವು ಏನನ್ನು ಒಳಗೊಂಡಿದೆ (= ವಿಷಯ); ಗ್ರಂಥದಲ್ಲಿ ಒಳಗೊಂಡಿರುವ ವಿವರಗಳನ್ನೂ ಅಧಿಕಾರಿಯನ್ನೂ ಗ್ರಂಥಕಾರನನ್ನೂ ಬೆಸೆಯಬಲ್ಲ ಸಾಮಾನ್ಯವಾದ ಸೂತ್ರವೊಂದಿರಬೇಕು (= ಸಂಬಂಧ); ಎಲ್ಲಕ್ಕಿಂತಲೂ ಮುಖ್ಯವಾಗಿ ಗ್ರಂಥವನ್ನು ಓದಿದ ಮೇಲೆ ಅದರಿಂದ ಏನು ಲಾಭವಾಗುತ್ತದೆ ಎಂಬುದರ ಸ್ಪಷ್ಟತೆಯಿರಬೇಕು (= ಪ್ರಯೋಜನ). ಇಂಥದೊಂದು ವ್ಯವಸ್ಥೆಯಲ್ಲಿಯೇ ಭಾರತೀಯ ಪ್ರಾಚೀನವಾಙ್ಮಯದ ಬಹುಪಾಲು ಗ್ರಂಥಗಳು ಮೈದೋರಿರುವಂಥವು. ಈ ಶಾಸ್ತ್ರಸಂವಿಧಾನದ ಎಳೆಯನ್ನು ಕೂಡ ರಾಮಾಯಣದ ಆರಂಭದಲ್ಲಿಯೇ ಕಾಣಬಹುದು.

ರಾಮಾಯಣಕ್ಕೆ ಅಧಿಕಾರಿ ಯಾರು? ಈಗ, ಇಂಥ ಕಾಲದಲ್ಲೂ ಧರ್ಮಾತ್ಮನಾದವನು ಯಾರಾದರೂ ಇದ್ದಾರೆಯೆ? – ಈ ಪ್ರಶ್ನೆ ಯಾರೆಲ್ಲರಿಗೂ ಬರುವುದೋ ಅವರೆಲ್ಲರೂ ಕೂಡ ರಾಮಾಯಣದ ಅನುಸಂಧಾನಕ್ಕೆ ಅಧಿಕಾರಿಗಳೇ ಹೌದು. ರಾಮನ ಕಥೆ ಅದರ ವಿಷಯ. ಧರ್ಮ – ಎಂದರೆ ನಮ್ಮ ಜೀವನವನ್ನು ರೂಪಿಸಿರುವಂಥವೂ ರೂಪಿಸಬಲ್ಲಂಥವೂ ಆದ ನಿಯಮ – ಇದೇ ರಾಮಾಯಣಕ್ಕೂ ವಾಲ್ಮೀಕಿಗೂ ನಮಗೂ ಇರುವ ಸಂಬಂಧ. ಇನ್ನು ಪ್ರಯೋಜನ; ಇದರ ಬಗ್ಗೆ ವಾಲ್ಮೀಕಿ ಕೃತಿಯ ಉದ್ದಕ್ಕೂ ಪ್ರತಿಪಾದಿಸಿರುವಂಥದ್ದೇ ಆಗಿದೆ: ಕಾಮ ಮತ್ತು ಅರ್ಥಗಳು ಏನು ಮಾಡುತ್ತವೆ? (ಕಾಮಾರ್ಥಗುಣಸಂಯುಕ್ತಂ); ಧರ್ಮಸ್ವರೂಪದ ವಿಸ್ತಾರ ಎಷ್ಟು? (ಧರ್ಮಾರ್ಥಗುಣವಿಸ್ತರಮ್‌). ಇವನ್ನೇ ಒಟ್ಟಾಗಿ ‘ಪುರುಷಾರ್ಥಗಳು’ ಎಂದು ಒಕ್ಕಣಿಸುವುದು. ರಾಮಾಯಣದಿಂದ ನಮಗೆ ಒದಗುವ ಪ್ರಯೋಜನ ಎಂದರೆ ಧರ್ಮ–ಅರ್ಥ–ಕಾಮ–ಮೋಕ್ಷ ಎನ್ನುವ ಪುರುಷಾರ್ಥಗಳ ಅರಿವೇ ಸರಿ. ಮನುಷ್ಯರು ಏನೆಲ್ಲ ಬಯಸುತ್ತಾರೆಯೋ ಅವೆಲ್ಲವೂ ‘ಪುರುಷಾರ್ಥ’ದ ವ್ಯಾಪ್ತಿಗೆ ಸೇರುತ್ತವೆ; ಮಾತ್ರವಲ್ಲ, ಅವನು ಏನೆಲ್ಲ ಆಗಿದ್ದಾನೋ ಅವೆಲ್ಲಕ್ಕೂ ಈ ‘ಪುರುಷಾರ್ಥ’ವೇ ಕಾರಣವಾಗಿರುವಂಥದ್ದು. ಇಲ್ಲಿ ‘ಪುರುಷ’ ಎನ್ನುವುದಕ್ಕೆ ‘ಗಂಡಸು’ ಎಂಬ ಸಂಕುಚಿತಾರ್ಥ ಇಲ್ಲ; ಗಂಡು–ಹೆಣ್ಣು ಸೇರಿದ ಒಟ್ಟು ಮನುಷ್ಯಕುಲ ಎನ್ನುವುದರ ಒಕ್ಕಣೆ. ಹೀಗಾಗಿ ರಾಮಾಯಣದಿಂದ ಒದಗುವ ಪ್ರಯೋಜನ ಎಂದರೆ ಅದು ಮನುಷ್ಯಕುಲದ ಆಶೆ–ನಿರಾಶೆಗಳೂ ಸೋಲು–ಗೆಲುವುಗಳೂ ಬಯಕೆ–ಭಯಗಳೂ ಒಳಿತು–ಕೆಡಕುಗಳೂ ಏನು ಎಂಬುದರ ‘ಧರ್ಮಮೀಮಾಂಸೆ’. ಈ ಮಹಾಕಾವ್ಯದಿಂದ ಇನ್ನೂ ಏನೇನೋ ಸಿಗಬಹುದು; ಆದರೆ ‘ರಾಮಕಥೆಯ ಮೂಲಕ ಧರ್ಮಾಧರ್ಮಗಳ ಮೀಮಾಂಸೆ’ – ಇದೇ ಮಹಾಕಾವ್ಯ ತನ್ನ ಬಗ್ಗೆ ತಾನು ಘೋಷಿಸಿಕೊಂಡಿರುವುದು; ಇದನ್ನು ಮರೆಯುವಂತೆಯೇ ಇಲ್ಲ. ಆದರೆ ಇದು ಪ್ರವಚನವಲ್ಲ; ಸಮತಾ, ಮಾಧುರ್ಯ, ಅರ್ಥವ್ಯಕ್ತಿ – ಮುಂತಾದ ಕಾವ್ಯಗುಣಗಳಿಂದಲೂ ರಸಾಭಿವ್ಯಕ್ತಿಯಿಂದಲೂ ಕೂಡಿದ ಕಾವ್ಯ; ಇದನ್ನೂ ಮರೆಯುವಂತಿಲ್ಲ. ಜೀವನಶ್ರದ್ಧೆ, ವೈಚಾರಿಕತೆ ಮತ್ತು ರಸಾನುಭವ – ಇವುಗಳ ತ್ರಿವೇಣೀಸಂಗಮವೇ ಪ್ರಾಚೀನ ವಾಙ್ಮಯದ, ಅಷ್ಟೇಕೆ, ಒಟ್ಟು ಕಲಾಪ್ರಪಂಚದ ಮೂಲಲಕ್ಷಣ. ಕೀರ್ತಿನಾಥ ಕುರ್ತಕೋಟಿ ಅವರ ಈ ಮಾತುಗಳು ಇಲ್ಲಿ ಮನನೀಯ:

‘ಸಾಹಿತ್ಯದಲ್ಲಿ ವೈಚಾರಿಕತೆಯ ಸಮಸ್ಯೆ ತೀರ ಆಧುನಿಕವಾದ ಸಮಸ್ಯೆಯಾಗಿದೆ. ಪ್ರಾಚೀನ ಕಾಲದ ಜಾನಪದ ಮತ್ತು ನಾಗರಕಾವ್ಯಗಳಲ್ಲಿ ವೈಚಾರಿಕತೆ ಒಂದು ತೊಡಕಾಗಿರಲಿಲ್ಲ. ಅಂದರೆ ಪ್ರಾಚೀನ ಕಾವ್ಯಗಳಲ್ಲಿ ವೈಚಾರಿಕತೆ ಇರಲೇ ಇಲ್ಲವೆಂದು ಇದರರ್ಥವಲ್ಲ. ಭಾವನೆ ಹಾಗೂ ವಿಚಾರ ಇವೆರಡೂ ಮಟ್ಟಗಳಲ್ಲಿ ಅನುಭವ ಪ್ರಕಟವಾಗುವಂತೆ ಅಭಿವ್ಯಕ್ತಿಯ ವಿಧಾನ ಅನುಕೂಲವಾಗಿತ್ತು. ಕಾವ್ಯದ ಸ್ವರೂಪ ಹಾಗೂ ಕಾವ್ಯದ ಪ್ರಯೋಜನ ಇವುಗಳಿಂದಲೇ ಈ ಅನುಕೂಲ ಸಾಧ್ಯವಾಗುತ್ತಿತ್ತು. ಆಗ ಕಾವ್ಯದ ಸ್ವರೂಪ ಜನಾಂಗದ ಸಂಸ್ಕೃತಿಯ ಅವಶ್ಯಕತೆಯಿಂದ ನಿರ್ಧಾರಿತವಾಗುತ್ತಿತ್ತು. ಇದರಿಂದ ಕಾವ್ಯ ಆ ಭಾಷೆಯನ್ನಾಡುವ ಜನಾಂಗದ ಸಜೀವವಾದ ಅವಶ್ಯಕತೆಯಾಗಿತ್ತು. ಹಿಂದಿನ ಕಾಲಕ್ಕೆ ಕವಿ, ಸಂಗೀತಗಾರನಂತೆ, ಬಡಿಗ ಕಮ್ಮಾರರಂತೆ, ರಾಜಾಸ್ಥಾನದಲ್ಲಿಯಾಗಲಿ, ಹಳ್ಳಿಯ ಸಮಾಜದಲ್ಲಿಯಾಗಲಿ ಅವಶ್ಯಕವಾದ ಕಸುಬುದಾರನಾಗಿದ್ದ. ಪ್ರಾಚೀನ ಕಾಲದ ಜೀವನಪದ್ಧತಿಯಲ್ಲಿ ಯಾವದೇ ಕಸುಬಿನಲ್ಲಿ ಭೌತಿಕ ಮತ್ತು ಆಂತರಿಕ ಪ್ರಯೋಜನಗಳನ್ನು ಕೂಡಿಯೇ ಪಡೆಯಬಹುದಾಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಕಾವ್ಯದ ಉಪಯುಕ್ತತೆಯಿಂದಾಗಿ ಕಾವ್ಯ ಜನಾಂಗದ ವೈಚಾರಿಕ ಆವಶ್ಯಕತೆಯನ್ನು ಕೂಡ ಪೂರೈಸುವ ಒಂದು ಸಾಧನವಾಗಿತ್ತು. ಕಾವ್ಯಸ್ವರೂಪದ ವೈವಿಧ್ಯಕ್ಕೆ ತಕ್ಕ ಹಾಗೆ ಇದು ಬೇರೆ ಬೇರೆ ಮಟ್ಟಗಳಲ್ಲಿ ನಡೆಯಬೇಕಾಗುತ್ತಿತ್ತು ಎಂಬ ಮಾತು ಬೇರೆ...

‘ಪ್ರಾಚೀನ ಅಭಿಜಾತ ಕಾವ್ಯಗಳಲ್ಲಿ ಇದಕ್ಕಿಂತಲೂ ಭಿನ್ನವಾದ ಪ್ರಕ್ರಿಯೆ ನಡೆದಿರುವದು ಕಾಣುತ್ತದೆ. ಇಲ್ಲಿ ಕೂಡ ನೈತಿಕ ಅಥವಾ ಧಾರ್ಮಿಕ ವಿಚಾರಗಳು ಜಾನಪದಕಾವ್ಯದಲ್ಲಿಯಂತೆ ಸಾಮುದಾಯಿಕ ಸಂವೇದನೆಗಳಿಂದಲೇ ತೆಗೆದುಕೊಂಡವುಗಳಾಗಿರುತ್ತವೆ. ಆದರೆ ಇದು ಕಾವ್ಯದ ಪ್ರಾಥಮಿಕ ಹಂತದಲ್ಲಿ ಮಾತ್ರ. ಇದನ್ನು ಬಿಟ್ಟರೆ ಕಾವ್ಯದಲ್ಲಿ ಒಂದು ಭಾವಸನ್ನಿವೇಶದ ಪ್ರಭಾವದಿಂದ ರಸಸ್ಥಿತಿಗೆ ಮುಟ್ಟಬೇಕಾದಾಗ ಇನ್ನೊಂದು ವಿಶೇಷ ರೀತಿಯ ಪ್ರಕ್ರಿಯೆ ನಡೆಯಬೇಕಾಗುತ್ತದೆ. ಅಂದರೆ ಭಾವ ರಸದಲ್ಲಿ ಪರಿಣತಗೊಳ್ಳುವ ಯೋಗ್ಯತೆಯನ್ನು ಪಡೆಯುತ್ತಲೇ ವೈಚಾರಿಕತೆಯನ್ನು ಪ್ರಕಟಿಸಬಲ್ಲದು. ಅನುಭವ ಮತ್ತು ತಿಳುವಳಿಕೆ ಈ ಎರಡು ರೂಪಗಳಲ್ಲಿ ಸಹೃದಯನಿಗೆ ರಸ ಪ್ರಾಪ್ತವಾಗುತ್ತದೆ. ಆದರೆ ಅನುಭವ ಮತ್ತು ವಿಚಾರಗಳು ಬೇರೆಬೇರೆಯಾಗಿರದೆ ಅಭಿನ್ನಸ್ಥಿತಿಯಲ್ಲಿ ಕಾಣಿಸಿಕೊಳ್ಳುತ್ತವೆ...

‘ಆದರೆ ಈ ಸಂಗತಿಯನ್ನು ಆಧುನಿಕ ಸಾಹಿತ್ಯಕ್ಕೆ ಅನ್ವಯಿಸಿ ಹೇಳಲು ಸಾಧ್ಯವಿಲ್ಲವೆಂಬ ಮಾತು ಸ್ವಯಂಸ್ಪಷ್ಟವಾಗಿದೆ. ಇದಕ್ಕೆ ಕಾರಣಗಳೇನೆಂಬುದನ್ನು ಅರಿಯುವದು ಕಠಿಣವಾಗಿಲ್ಲ. ಈ ಸಮಸ್ಯೆಗೆ ಮುಖ್ಯ ಕಾರಣವೆಂದರೆ ನಮ್ಮ ವೈಚಾರಿಕಭಾಷೆ ನಮ್ಮ ಭಾವನಾತ್ಮಕವಾದ ಭಾಷೆಗಿಂತ ಭಿನ್ನವಾಗಿರುವದೇ ಆಗಿದೆ...’

ಮೇಲಣ ಮಾತುಗಳ ನೆಲೆಯಿಂದ ನೋಡಿದಾಗ ರಾಮಾಯಣವು ಮಹಾಕಾವ್ಯವೂ ಹೌದು, ಧರ್ಮಸಂಹಿತೆಯೂ ಹೌದು ಎನ್ನುವುದು ಸಿದ್ಧವಾಗುತ್ತದೆ. ಭಾರತದಲ್ಲಿ ವಿಗ್ರಹರಾಧನೆಯನ್ನೂ ಕಲಾರಾಧನೆಯನ್ನೂ ಪ್ರತ್ಯೇಕವಾಗಿ ನೋಡಲು ಸಾಧ್ಯವಾಗದು – ಎಂಬ ಆನಂದ ಕುಮಾರಸ್ವಾಮಿ ಅವರ ಸೂತ್ರದ ವಿವರಣೆಯಂತಿವೆ ಕುರ್ತಕೋಟಿ ಮಾತುಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT