ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶನಿವಾರ, 6–1–1968

Last Updated 5 ಜನವರಿ 2018, 19:30 IST
ಅಕ್ಷರ ಗಾತ್ರ

ಭಾರತದ ಕಾಶ್ಮೀರ ನೀತಿ ಬದಲಾಗದು: ಇಂದಿರಾ

ನವದೆಹಲಿ, ಜ. 5– ಷೇಖ್‌ ಅಬ್ದುಲ್ಲಾ ಬಿಡುಗಡೆ ‘ಪ್ರಯತ್ನಾರ್ಹ ಪ್ರಯೋಗ’ ಎಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ಇಂದು ಇಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿ, ಕಾಶ್ಮೀರ ಭಾರತದ ಸಮಗ್ರ ಭಾಗವೆಂಬ ಸರಕಾರದ ಮೂಲ ಧೋರಣೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು.

1968ರಲ್ಲಿ ಆರ‍್ಥಿಕ ಸ್ಥಿತಿ ಉತ್ತಮ

ನವದೆಹಲಿ, ಜ. 5– 1968ರಲ್ಲಿ ಆರ‍್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ ಎಂದು ಪ್ರಧಾನಿ ಇಂದಿರಾಗಾಂಧಿ ತಿಳಿಸಿದರು.

ಕೃಷಿ ಉತ್ಪಾದನೆಯ ಕೊರತೆಯಿಂದ ಕಳೆದವರ್ಷ ಆರ‍್ಥಿಕ ಜಡತ್ವ ತಲೆದೋರಿತ್ತು. ಈಗ ಕೃಷಿ ಉತ್ಪಾದನೆ ಹೆಚ್ಚಿದೆ. ನಾವು ಸುಧಾರಿಸಿಕೊಳ್ಳುತ್ತಿದ್ದೇವೆ. ಆರ‍್ಥಿಕ ತೊಂದರೆಯಿಂದ ಪಾರಾಗಿಲ್ಲವಾದರೂ ಉತ್ತಮ ಸ್ಥಿತಿಯ ಆಶಾಕಿರಣವಿದೆ ಎಂದು ಹೇಳಿದರು.

ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಬಗ್ಗೆ ತುರ್ಕಿ ಮಂತ್ರಿಗೆ ಇಂದಿರಾ ಕಳವಳ

ನವದೆಹಲಿ, ಜ. 5– ಟರ್ಕಿಯು ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಮತ್ತು ಮಿಲಿಟರಿ ಸಲಕರಣೆಗಳನ್ನು ಸರಬರಾಜು ಮಾಡುತ್ತಿರುವುದಕ್ಕೆ ಇಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ಟರ್ಕಿಯ ವಿದೇಶಾಂಗ ಸಚಿವ ಕಗ್ಣಯನ್‌ ಗಿಲ್‌ರವರಿಗೆ ಕಳವಳ ವ್ಯಕ್ತಪಡಿಸಿದರು.

‘ಬದಲಿ ಹೃದಯಿ’ ಸ್ಥಿತಿಯಲ್ಲಿ ಪ್ರಗತಿ

ಕೇಪ್‌ಟೌನ್‌, ಜ. 5– ಬೇರೊಬ್ಬರ ಹೃದಯವನ್ನು ಅಳವಡಿಸಿರುವ ಬ್ಲೈಬರ್ಗ್‌ ಅವರ ಆರೋಗ್ಯ ಪರಿಸ್ಥಿತಿ ಈಗ ಅತ್ಯುತ್ತಮವಾಗಿರುವುದೆಂದು, ಮೂರು ವಾರಗಳ ನಂತರ ಅವರುಮನೆಗೆ ಹೋಗುವ ಸಾಧ್ಯತೆ ಇರುವುದಾಗಿಯೂ ಶಸ್ತ್ರ ಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೃದಯ ಜೋಡಿಸಿದ ಡಾ. ಕ್ರಿಶ್ಚಿಯನ್‌ ಬರ್ನಾರ್ಡರು ಇಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ತಮ್ಮತನವುಳ್ಳ ನಿಜಲಿಂಗಪ್ಪ

ನವದೆಹಲಿ, ಜ. 5– ನೂತನ ಕಾಂಗ್ರೆಸ್‌ ಅಧ್ಯಕ್ಷ ಶ್ರೀ ಎಸ್‌. ನಿಜಲಿಂಗಪ್ಪನವರು ಶ್ರೀ ಕಾಮರಾಜರ ಅಭ್ಯರ್ಥಿಯೆ ಅಥವಾ ಶ್ರೀಮತಿ ಇಂದಿರಾ ಗಾಂಧಿಯವರ ಅಭ್ಯರ್ಥಿಯೆ?

ಇಂದು ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರು ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರಿಗೆ ಈ ಪ್ರಶ್ನೆ ಕೇಳಿದರು. ಆ ಸುದ್ದಿಗಾರರು ಇದನ್ನು ಪರಿಹಾಸ್ಯವೆಂದು ಭಾವಿಸಬಹುದಾದ ಸಂದರ್ಭವುಂಟೆಂದೂ ಪೀಠಿಕೆ ಹಾಕಿದ್ದರು.

ಪ್ರಧಾನಿ ಉತ್ತರ: ನೂತನ ಕಾಂಗ್ರೆಸ್‌ ಅಧ್ಯಕ್ಷರು ತಮ್ಮದೇ ಆದ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ. ಪತ್ರಿಕಾಗೋಷ್ಠಿಯಲ್ಲಿ ಅಪರೂಪವಾಗಿ, ಇಂತಹ ವಿನೋದಕ್ಕೆ ತಮ್ಮ ಆಕ್ಷೇಪಣೆ ಇಲ್ಲವೆಂದು ನುಡಿದ ಶ್ರೀಮತಿ ಇಂದಿರಾ ಗಾಂಧಿಯವರು, ಈ ಪ್ರಶ್ನೆ ಗಮನಾರ್ಹವಾದುದಲ್ಲ ಮತ್ತು ಈ ಸಂಬಂಧದಲ್ಲಿ ವಿರೋಧಾಭಿಪ್ರಾಯವಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT