ಭುವನೇಶ್ವರ್ ದಾಳಿಗೆ ಬೆದರಿದ ಆತಿಥೇಯರು

7

ಭುವನೇಶ್ವರ್ ದಾಳಿಗೆ ಬೆದರಿದ ಆತಿಥೇಯರು

Published:
Updated:
ಭುವನೇಶ್ವರ್ ದಾಳಿಗೆ ಬೆದರಿದ ಆತಿಥೇಯರು

ಕೇಪ್‌ಟೌನ್: ಹೊಸ ವರ್ಷದ ಮೊದಲ ಟೆಸ್ಟ್‌ ಭಾರತದ ಮಧ್ಯಮವೇಗಿ ಭುವನೇಶ್ವರ್ ಕುಮಾರ್ ಸ್ವಿಂಗ್ ಕೈಚಳದ ಮೋಡಿ ಮೆರೆದರು.

ನ್ಯೂಲ್ಯಾಂಡ್‌ ಕ್ರೀಡಾಂಗಣದಲ್ಲಿ ಆರಂಭವಾದ ಫ್ರೀಡಂ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ‘ಮೀರಠ್ ಎಕ್ಸ್‌ಪ್ರೆಸ್’ ಭುವನೇಶ್ವರ್ ( 87ಕ್ಕೆ4) ಬೌಲಿಂಗ್ ಎದುರು ಆತಿಥೇಯ ದಕ್ಷಿಣ ಆಫ್ರಿಕಾ ತಂಡವು ಮೊದಲ ಇನಿಂಗ್ಸ್‌ನಲ್ಲಿ 286 ರನ್‌ಗಳ  ಮೊತ್ತ ಗಳಿಸಿತು. ನಂತರ ಬ್ಯಾಟಿಂಗ್ ಆರಂಭಿಸಿರುವ ಭಾರತ ತಂಡವು ಆರಂಭಿಕ ಆಘಾತ ಅನುಭವಿಸಿದೆ. ಹಸಿರು ಗರಿಕೆಗಳು ನಳನಳಿಸುತ್ತಿರುವ ಪಿಚ್‌ನಲ್ಲಿ ದಕ್ಷಿಣ ಆಫ್ರಿಕಾದ ವೇಗಿಗಳೂ ಮೇಲುಗೈ ಸಾಧಿಸಿದ್ದಾರೆ. ಇದರಿಂದಾಗಿ ದಿನದಾಟದ ಅಂತ್ಯಕ್ಕೆ ಭಾರತ ತಂಡವು 11 ಓವರ್‌ಗಳಲ್ಲಿ  3 ವಿಕೆಟ್‌ಗಳಿಗೆ 28 ರನ್‌ ಗಳಿಸಿದೆ.

ಚೇತೇಶ್ವರ್ ಪೂಜಾರ (ಬ್ಯಾಟಿಂಗ್ 5) ಮತ್ತು ರೋಹಿತ್ ಶರ್ಮಾ (ಬ್ಯಾಟಿಂಗ್ 00) ಕ್ರೀಸ್‌ನಲ್ಲಿದ್ದಾರೆ. ಆರಂಭಿಕ ಜೋಡಿ ಶಿಖರ್ ಧವನ್ (16: 13ಎ, 3ಬೌಂಡರಿ), ಮುರಳಿ ವಿಜಯ್ (1 ರನ್) ಮತ್ತು ನಾಯಕ ವಿರಾಟ್ ಕೊಹ್ಲಿ (5 ರನ್) ಪೆವಿಲಿಯನ್ ಸೇರಿದ್ದಾರೆ.

ಡೇಲ್ ಸ್ಟೇಯ್ನ್, ವೆರ್ನಾನ್ ಫಿಲಾಂಡರ್ ಮತ್ತು ಮಾರ್ನ್ ಮಾರ್ಕೆಲ್ ತಲಾ ಒಂದು ವಿಕೆಟ್ ಪಡೆದಿದ್ದಾರೆ.

ಭುವಿ ಮಿಂಚು

ಬೆಳಿಗ್ಗೆ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆತಿಥೇಯ ತಂಡಕ್ಕೆ ಭುವನೇಶ್ವರ್ ಕುಮಾರ್ ಆರಂಭದಲ್ಲಿಯೇ ಆಘಾತ ನೀಡಿದರು.

ಕೆಂಪಗೆ ಹೊಳೆಯುವ ಕುಕಬರ್ರಾ ಚೆಂಡಿನಲ್ಲಿ ದಾಳಿ  ಆರಂಭಿಸಿದ ಭುವನೇಶ್ವರ್ ಬ್ಯಾಟ್ಸ್‌ಮನ್‌ಗಳಿಗೆ ದುಃಸ್ವಪ್ನವಾದರು.

ಮೊದಲ ಓವರ್‌ನ ಮೂರನೇ ಎಸೆತದಲ್ಲಿ ಆಡುವ ಡೀನ್ ಎಲ್ಗರ್ ಯತ್ನವು ಫಲಕಾರಿಯಾಗಲಿಲ್ಲ.

ಬೆಳಗಿನ ತಂಗಾಳಿಯಲ್ಲಿ ಲಾಸ್ಯವಾಡಿದ ಚೆಂಡು ಬ್ಯಾಟ್ ಅಂಚು ಸವರಿ ಹಿಂದೆ ಚಿಮ್ಮಿತು. ವಿಕೆಟ್‌ ಕೀಪರ್ ವೃದ್ಧಿಮಾನ್ ಸಹಾ ಯಾವುದೇ ತಪ್ಪು ಮಾಡಲಿಲ್ಲ. ಮೊದಲ ವಿಕೆಟ್ ಪಡೆದ ತಂಡ ಸಂಭ್ರಮಿಸಿತು.

ತಮ್ಮ ನಂತರದ ಓವರ್‌ನಲ್ಲಿಯೂ ಲೆಗ್‌ ಕಟರ್‌ಗಳು, ಇನ್‌ ಸ್ವಿಂಗ್ ಮತ್ತು ಸ್ಟ್ರೇಟ್‌ ಡೆಲಿವರಿಗಳ ಪ್ರಯೋಗವನ್ನು ಭುವಿ ಮುಂದುವರಿಸಿದರು. ಅದರ ಫಲವಾಗಿ ಮತ್ತೊಂದು ವಿಕೆಟ್ ಒಲಿಯಿತು.

ಮಾರ್ಕರ್ಮ್ ಪಾದಚಲನೆಯಲ್ಲಿ ತಪ್ಪೆಸಗಿದರು. ಪ್ಯಾಡ್‌ಗೆ ಚೆಂಡು ಮುತ್ತಿಕ್ಕಿತು. ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.

ಟೆಸ್ಟ್ ಪರಿಣತ ಬ್ಯಾಟ್ಸ್‌ಮನ್ ಹಾಶೀಂ ಆಮ್ಲಾ ಅವರು ಇನಿಂಗ್ಸ್‌ ಕಟ್ಟುವ ನಿರೀಕ್ಷೆಯೂ ಹುಸಿಯಾಯಿತು. 5ನೇ ಓವರ್‌ನಲ್ಲಿ ಭುವಿಯ ಎಸೆತವನ್ನು ಸ್ಟ್ರೇಟ್ ಡ್ರೈವ್ ಮಾಡಲು ಯತ್ನಿಸಿದ ಆಮ್ಲಾ ಬ್ಯಾಟ್‌ ಅಂಚು ಸವರಿ ಹೊರಗೆ ಸಾಗಿದ ಚೆಂಡು ಸಹಾ ಕೈಗವಸುಗಳಲ್ಲಿ ಬಂಧಿಯಾಯಿತು. ಆಗ ತಂಡದ ಮೊತ್ತವು 12 ರನ್ ಆಗಿತ್ತು.

ಎಬಿಡಿ–ಡುಪ್ಲೆಸಿ ಜೊತೆಯಾಟ

ಕುಸಿತದ ಹಾದಿಯಲ್ಲಿದ್ದ ತಂಡಕ್ಕೆ ಎ.ಬಿ. ಡಿವಿಲಿಯರ್ಸ್ (65 ರನ್) ಮತ್ತು ನಾಯಕ ಫಾಫ್ ಡು ಪ್ಲೆಸಿ (62 ರನ್) ಆಸರೆಯಾದರು. ಭುವಿ, ಮೊಹಮ್ಮದ ಶಮಿ, ಪದಾರ್ಪಣೆ ಪಂದ್ಯವಾಡಿದ ಜಸ್‌ಪ‍್ರೀತ್ ಬೂಮ್ರಾ ಅವರ ದಾಳಿಯನ್ನು ತಾಳ್ಮೆ ಮತ್ತು ದಿಟ್ಟತನದಿಂದ ಎದುರಿಸಿದರು. ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ 116 ರನ್‌ ಸೇರಿಸಿದರು.

ಈ ಜೊತೆಯಾಟವನ್ನು ಬೂಮ್ರಾ ಮುರಿದರು. ಬೂಮ್ರಾ ಹಾಕಿದ ನೇರ ಎಸೆತಕ್ಕೆ ಅನುಭವಿ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್‌ ಕ್ಲೀನ್‌ ಬೌಲ್ಡ್ ಆದರು.

ನಂತರ ಕ್ವಿಂಟನ್ ಡಿ ಕಾಕ್ (43 ರನ್) ಜೊತೆಗೂಡಿದ ನಾಯಕ ಡುಪ್ಲೆಸಿ ತಂಡಕ್ಕೆ ಮತ್ತಷ್ಟು ರನ್‌ಗಳ ಕಾಣಿಕೆ ನೀಡಿದರು.

ರವಿಂದ್ರ ಜಡೇಜ ಬದಲು ಸ್ಥಾನ ಪಡೆದಿದ್ದ ಹಾರ್ದಿಕ್ ಪಾಂಡ್ಯ 36ನೇ ಓವರ್‌ನಲ್ಲಿ ಡುಪ್ಲೆಸಿಗೆ ಪೆವಿಲಿಯನ್ ದಾರಿ ತೋರಿಸಿದರು.

ಆದರೆ ಈ ಹಂತದಲ್ಲಿ  ಇನಿಂಗ್ಸ್‌ ಮೇಲೆ ಸಂಪೂರ್ಣ ಹಿಡಿತ ಸಾಧಿಸುವಲ್ಲಿ ಕೊಹ್ಲಿ ಬಳಗ ಸಫಲವಾಗಲಿಲ್ಲ. ಅದರಿಂದಾಗಿ ಈ ಪಿಚ್‌ನಲ್ಲಿ ಸವಾಲಾಗಬಲ್ಲ ಮೊತ್ತವನ್ನು ಗಳಿಸಿತು. ಭುವನೇಶ್ವರ್ ಅವರು ಕ್ವಿಂಟನ್ ವಿಕೆಟ್ ಪಡೆದರು.

ಶಮಿ, ಅಶ್ವಿನ್ ತಲಾ  ಒಂದು ವಿಕೆಟ್ ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry