ಎಸ್‌ಬಿಐ: ಕನಿಷ್ಠ ಮೊತ್ತ ನಿರ್ಬಂಧ ಸಡಿಲಿಕೆ?

7

ಎಸ್‌ಬಿಐ: ಕನಿಷ್ಠ ಮೊತ್ತ ನಿರ್ಬಂಧ ಸಡಿಲಿಕೆ?

Published:
Updated:
ಎಸ್‌ಬಿಐ: ಕನಿಷ್ಠ ಮೊತ್ತ ನಿರ್ಬಂಧ ಸಡಿಲಿಕೆ?

ಮುಂಬೈ: ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ (ಎಂಬಿಎ) ಉಳಿಸಿಕೊಳ್ಳುವುದರ ಮೇಲೆ ವಿಧಿಸಲಾಗಿದ್ದ ಗರಿಷ್ಠ ಮಿತಿ ಪರಾಮರ್ಶಿಸುವುದಾಗಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ತಿಳಿಸಿದೆ.

ಉಳಿತಾಯ ಖಾತೆಗಳಲ್ಲಿ ಗ್ರಾಹಕರು ಈ ಕನಿಷ್ಠ ಮೊತ್ತ ಉಳಿಸಿಕೊಳ್ಳುವುದನ್ನು ಪಾಲನೆ ಮಾಡದ ಕಾರಣಕ್ಕೆ ವಿಧಿಸಿದ ದಂಡದ ಹಣದಿಂದ ಏಪ್ರಿಲ್‌ನಿಂದ ನವೆಂಬರ್‌ ಅವಧಿಯಲ್ಲಿ ಬ್ಯಾಂಕ್‌  ₹ 1,771 ಕೋಟಿ ಲಾಭ ಗಳಿಸಿದೆ. ಇದು ಬ್ಯಾಂಕ್‌ನ ದ್ವಿತೀಯ ತ್ರೈಮಾಸಿಕದ ಲಾಭಕ್ಕಿಂತ ಹೆಚ್ಚಿಗೆ ಇದೆ. ಇದರ ಬಗ್ಗೆ ಎಲ್ಲೆಡೆಗಳಿಂದ ವ್ಯಾಪಕ ಟೀಕೆ ಕೇಳಿ ಬಂದಿರುವುದರಿಂದ ‘ಎಂಬಿಎ’ ಪರಾಮರ್ಶಿಸುವ ನಿರ್ಧಾರಕ್ಕೆ ಬ್ಯಾಂಕ್‌  ಬಂದಿದೆ.

ದೇಶದಾದ್ಯಂತ 40 ಕೋಟಿಗೂ ಹೆಚ್ಚು ಉಳಿತಾಯ ಖಾತೆಗಳನ್ನು ಹೊಂದಿರುವ ಬ್ಯಾಂಕ್‌, 2017ರ ಏಪ್ರಿಲ್‌ನಿಂದ ಜಾರಿಗೆ ಬರುವಂತೆ ಪ್ರತಿ ತಿಂಗಳೂ ಖಾತೆಯಲ್ಲಿ ಕನಿಷ್ಠ ಮೊತ್ತ ಇರಬೇಕೆಂಬ ನಿಬಂಧನೆ ಜಾರಿಗೆ ತಂದಿತ್ತು. ಐದು ವರ್ಷಗಳ ನಂತರ ಈ ನಿರ್ಣಯಕ್ಕೆ ಬರಲಾಗಿತ್ತು. ನಗರಗಳಲ್ಲಿ ₹ 5,000 ಮತ್ತು ಗ್ರಾಮೀಣ ಭಾಗದಲ್ಲಿ ₹ 1,000 ಮೊತ್ತ ಇರುವುದನ್ನು ಕಡ್ಡಾಯ ಮಾಡಿತ್ತು. ಈ ನಿರ್ಬಂಧ ಉಲ್ಲಂಘಿಸಿದರೆ ದಂಡ ವಸೂಲಿ ಮಾಡಲು ಮುಂದಾಗಿತ್ತು.

ನಂತರದ ದಿನಗಳಲ್ಲಿ ಈ ನಿಬಂಧನೆಯನ್ನು ಕೆಲಮಟ್ಟಿಗೆ ಸಡಿಲಿಸಲಾಗಿತ್ತು. ಮಹಾನಗರ, ಪಟ್ಟಣಗಳಲ್ಲಿ ಕನಿಷ್ಠ ಮೊತ್ತವನ್ನು ₹ 3,000ಕ್ಕೆ  ನಿಗದಿಪಡಿಸಿದ್ದು, ದಂಡವನ್ನೂ ₹ 30ರಿಂದ ₹ 50ಕ್ಕೆ ಇಳಿಸಿದೆ. ತೆರಿಗೆ ಹೊರೆ ಪ್ರತ್ಯೇಕವಾಗಿರುತ್ತದೆ.

ಅರೆಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕ್ರಮವಾಗಿ ‘ಎಂಬಿಎ’ ₹ 2,000 ಮತ್ತು ₹ 1,000ಕ್ಕೆ ಇಳಿಸಲಾಗಿದೆ. ದಂಡದ ಮೊತ್ತ ₹ 20 ರಿಂದ ₹ 40 ಇರಲಿದ್ದು, ತೆರಿಗೆ ಪ್ರತ್ಯೇಕವಾಗಿರಲಿದೆ.

‘ಇನ್ನು ಮುಂದೆ ಈ ಮಿತಿಯನ್ನೂ ಇನ್ನಷ್ಟು ಪರಿಷ್ಕರಿಸುವುದನ್ನು ಪರಿಗಣಿಸಲಾಗುವುದು’ ಎಂದು ರಿಟೇಲ್‌ ಮತ್ತು ಡಿಜಿಟಲ್‌ ಬ್ಯಾಂಕಿಂಗ್‌ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಪಿ. ಕೆ. ಗುಪ್ತಾ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry